ಕಲಬುರಗಿ ಜಿಲ್ಲೆಯ ಸೇಡಂ ಬಳಿ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನಿವೃತ್ತಿ ಮಾತುಗಳಾನ್ನಾಡಿದ್ದಾರೆ.
ಕಲಬುರಗಿ, (ಫೆ.25): ಮತ್ತೊಮ್ಮೆ ಸಿಎಂ ಆಗಬೇಕು ಅನ್ನೋದು ಇಲ್ಲ. ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಡಿ. ಜನರ ಪರ, ಬಡವರಿಗಾಗಿ ಯೋಜನೆಗಳನ್ನ ಜಾರಿಗೆ ತರುತ್ತೇನೆ. ಜಾರಿಗೆ ತರದಿದ್ದರೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು (ಗುರುವಾರ) ಕಲಬುರಗಿ ಜಿಲ್ಲೆಯ ಸೇಡಂ ಬಳಿ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಎಚ್‌ಡಿಕೆ, ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಡಿ. ಜನರ ಪರ, ಬಡವರಿಗಾಗಿ ಯೋಜನೆಗಳನ್ನ ಜಾರಿಗೆ ತರುತ್ತೇನೆ. ಎಲ್ಲಾ ಪಕ್ಷಗಳನ್ನ ನೋಡಿದ್ದೀರಿ. ಬೇರೆಯವರ ಹಂಗಿನಲ್ಲಿ ನಾನು ಅಧಿಕಾರ ನಡೆಸಿದ್ದೇನೆ. ಐದು ವರ್ಷ ಜನತಾದಳ ಸರ್ಕಾರ ಕೊಡುವ ಬಗ್ಗೆ ಯೋಚನೆ ಮಾಡಿ. ಒಂದು ಬಾರಿ ಸಂಪೂರ್ಣ ಅಧಿಕಾರ ಕೊಡಿ. ಜನರು ನೆಮ್ಮದಿಯಿಂದ ಉಸಿರಾಡುವಂಥ ವಾತಾವರಣ ನಿರ್ಮಾಣ ಮಾಡದೇ ಇದ್ರೆ ಮತ್ತೆ ನಿಮ್ಮ ಮುಂದೆ ಬರೋದಿಲ್ಲ. ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದು ಸ್ಪಷ್ಟಪಡಿಸಿದರು.
undefined
ನಾನು ಹೇಳಿದಂತೆ ಯಶಸ್ವಿ ಆಗದಿದ್ರೆ ಜೆಡಿಎಸ್ ಪಕ್ಷ ವಿಸರ್ಜನೆ: ಕುಮಾರಸ್ವಾಮಿ ಶಪಥ..
ಜೆಡಿಎಸ್ ಪಕ್ಷ ಎಲ್ಲಿದೆ ಅಂತಾ ಕೆಲವರು ಲಘುವಾಗಿ ಮಾತಾಡಿದ್ದಾರೆ..ಅವರಿಗೆ ಸಮಾವೇಶದಲ್ಲಿ ಸೇರಿರೋ ನೀವೇ ಉತ್ತರ ಕೊಟ್ಟಿದ್ದೀರಿ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ರೈತರ ಸಾಲಮನ್ನಾಗಷ್ಟೇ ನಾನು ಸೀಮಿತವಾಗಿಲ್ಲ.. ಉತ್ತರ ಕರ್ನಾಟಕದಲ್ಲಿಯೇ ಯುವಕರಿಗೆ ಉದ್ಯೋಗ ಒದಗಿಸುವ ಚಿಂತನೆ ಹೊಂದಿದ್ದೇನೆ. ರೈತರ ಸಾಲ ಮನ್ನಾಗೆ ಹಣ ಮೀಸಲಿಟ್ಟಿದ್ದೆ, ಅದನ್ನ ಬಿಜೆಪಿ ಸರ್ಕಾರ ರೈತರಿಗೆ ಕೊಡಲು ಆಗಿಲ್ಲ ಎಂದು ಕಿಡಿಕಾರಿದರು.
1,600 ಕೋಟಿ ಹಣ ರಾಷ್ಟ್ರೀಕೃತ ಬ್ಯಾಂಕ್ನಲ್ಲಿನ ರೈತರ ಸಾಲಮನ್ನಾಗೆ ಇಟ್ಟಿದ್ದ ಹಣವನ್ನ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ನೆರೆ ಪರಿಹಾರದಲ್ಲೂ ಸರ್ಕಾರ ಸಂತ್ರಸ್ತರಿಗೆ ಸಂಪೂರ್ಣ ಹಣ ಕೊಟ್ಟಿಲ್ಲ. ಬಿಜೆಪಿ ಕೇವಲ ಭರವಸೆಯ ಸರ್ಕಾರ ಆಗಿದೆ. ಕಲ್ಯಾಣ ಕರ್ನಾಟಕ ಭಾಗದ ಬಗ್ಗೆ ಜೆಡಿಎಸ್ ಪಕ್ಷಕ್ಕೆ ಕಾಳಜಿ ಇದೆ. ಈ ಭಾಗದ ಯುವಕರಿಗೆ ಉದ್ಯೋಗ ಕೊಡಲು ಯೋಜನೆಗಳನ್ನ ತಂದಿದ್ದೇನೆ. ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಪಕ್ಷ ಶಾಸಕ ಬಸನಗೌಡ ಯತ್ನಾಳ್ ಅವರೇ ಹೈಕಮಾಂಡ್ಗೆ ಪುಟಗಟ್ಟಲೇ ದೂರು ನೀಡಿದ್ದಾರೆ. ಇದನ್ನ ನೋಡಿ ನೀವೇ ಅರ್ಥಮಾಡಿಕೊಳ್ಳಬೇಕು ಎಂದರು.