
ಬೆಂಗಳೂರು (ಅ.24): ಅಧಿಕಾರಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದಿದ್ದು ಇದೇ ಕಾಂಗ್ರೆಸ್ಸಿಗರು. ಅದಕ್ಕೂ ಮೊದಲು ನಾನು ಬಿಜೆಪಿ ಜತೆ ಸೇರಿ ಸರ್ಕಾರ ರಚನೆ ಮಾಡಿದ್ದು ಅವರಿಗೆ ಗೊತ್ತಿರಲಿಲ್ಲವೇ? ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರಕ್ಕಾಗಿ ಜೆಡಿಎಸ್ ಕೇಸರಿಕರಣವಾಗಿದೆ ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದರು.
ಅಧಿಕಾರಕ್ಕಾಗಿ 2018ರಲ್ಲಿ ನಮ್ಮ ಮನೆ ಬಾಗಿಲಿಗೆ ಬಂದಿದ್ದು ಇದೇ ಕಾಂಗ್ರೆಸ್. ಅವತ್ತು ಏನೇನು ನಡೆಯಿತು ಎನ್ನುವುದನ್ನು ಅವರು ತಮ್ಮ ತಂದೆಯನ್ನು (ಮಲ್ಲಿಕಾರ್ಜುನ ಖರ್ಗೆ) ಕೇಳಿ ತಿಳಿದುಕೊಳ್ಳಲಿ. ಬೆಂಗಳೂರಿನಲ್ಲಿ ರಾಜಕೀಯ ಮಾಡುವ ಬದಲು ತಮ್ಮ ಜಿಲ್ಲೆಯಲ್ಲಿ ಏನಾಗಿದೆ ಎಂಬ ಬಗ್ಗೆ ಗಮನ ಹರಿಸಲಿ ಎಂದು ತೀಕ್ಷ್ಣವಾಗಿ ಹೇಳಿದರು. ಕಾಂಗ್ರೆಸ್ಸಿಗರು ಮಾತೆತ್ತಿದರೆ ತಾಜ್ ಹೋಟೆಲ್‌ನಲ್ಲಿದ್ದೆ ಎನ್ನುತ್ತಾರೆ. ನಾನು ತಾಜ್ ಹೊಟೇಲ್‌ನಲ್ಲಿ ಮಲಗಿದ್ದರೆ ರೈತರ 25 ಸಾವಿರ ಕೋಟಿ ರು. ಸಾಲ ಮನ್ನಾ ಮಾಡೋಕೆ ಆಗುತ್ತಿತ್ತಾ ಎಂದು ಇದೇ ವೇಳೆ ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ಶಾಸಕರಿಗೆ ನಾನು ಮುಖ್ಯಮಂತ್ರಿ ಅಗಿದ್ದಾಗ ಅಭಿವೃದ್ಧಿಗಾಗಿ 19 ಸಾವಿರ ಕೋಟಿ ರು. ಅನುದಾನವನ್ನು ಒಂದೇ ವರ್ಷದಲ್ಲಿ ಕೊಟ್ಟಿದ್ದೆ. ಇವತ್ತು ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಇದ್ದಾಗ ಏನು ಕೊಟ್ಟರು ಅಂತ ಚರ್ಚೆ ಮಾಡುತ್ತಾರೆ. ದಾಖಲೆ, ಅಂಕಿ-ಅಂಶಗಳು ಅವರ ಬಳಿಯೇ ಇವೆ. ಮೊದಲು ಅವುಗಳನ್ನು ನೋಡಲಿ ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ಹಿಂದೆ ನಾನು ಆರ್‌ಎಸ್‌ಎಸ್ ಅನ್ನು ಟೀಕಿಸಿದ್ದೇನೆ. ಇಲ್ಲ ಅಂತ ಹೇಳಲ್ಲ. ಕಾಂಗ್ರೆಸ್ಸಿಗರು ಏನು ಮಾಡಿದ್ದೀರಿ?
ರಾಜ್ಯದಲ್ಲಿ 136 ಸೀಟು ಕೊಟ್ಟಿದ್ದಾರೆ. ಜನರ ಸಮಸ್ಯೆ ಕೇಳುತ್ತಿಲ್ಲ. ಕಲಬುರಗಿಯಲ್ಲಿ ಜನ ಬೀದಿಯಲ್ಲಿದ್ದಾರೆ. ರೈತರು ಸಂಕಷ್ಟದಲ್ಲಿದ್ದಾರೆ. ಇವರೇನು ಮಾಡಿದ್ದಾರೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ಅಪ್ಪ ಏನು ಹೇಳಿದ್ದರು? ನಮ್ಮ ಹೊಲದಲ್ಲಿ 40 ಎಕರೆ ಬೆಳೆ ನಷ್ಟ ಆಗಿದೆ ಅಂತ ರೈತರು ಕೇಳಿದರೆ, ನಾನು ಎಲ್ಲಿ ಹೋಗಲಿ ಅಂತ ಹೇಳಿದ್ದರು. ಹೀಗಾಗಿ ನಿಮ್ಮಿಂದ ನಾನು ಯಾವ ರೀತಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಬೇಕು ಅಂತ ಕಲಿಯಬೇಕಾ? ನೀವು ಮಾತನಾಡಬೇಕಾದರೆ ಹದ್ದುಬಸ್ತಿನಲ್ಲಿ ಮಾತಾಡಿ. ನೀವು ನನ್ನ ಬಗ್ಗೆ, ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.