
ಬೆಂಗಳೂರು(ಅ.03): ಅಭಿವೃದ್ಧಿ ಕೆಲಸ ಎಂದರೇನು? ವಾಮಮಾರ್ಗ ಎಂದರೆ ಯಾವುದು? ಇವೆರಡರಲ್ಲೂ ತಮಗೆ ಒಳ್ಳೆ ಅನುಭವವೇ ಇದೆ ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಭಾನುವಾರ ಸರಣಿ ಟ್ವಿಟ್ ಮಾಡಿರುವ ಎಚ್.ಡಿ.ಕುಮಾರಸ್ವಾಮಿ, ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಕಳ್ಳಮಾರ್ಗದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲು ಹೊರಟಿದ್ದು, ಕ್ಷೇತ್ರದ ಶಾಸಕರನ್ನೇ ಕತ್ತಲೆಯಲ್ಲಿ ಇಟ್ಟಿದ್ದನ್ನು ಏನೆಂದು ಕರೆಯಬೇಕು? ಇದೇನಾ ನೀವು ಹೇಳುವ ರಾಜಮಾರ್ಗ? ಅಧಿಕಾರವೂ ತಪ್ಪಬಾರದು, ಅಭಿವೃದ್ಧಿಯೂ ಆಗಬಾರದು ಎಂದು ನಾನು ಭಾವಿಸಿದ್ದಿದ್ದರೆ, ನೀವು ಮಲ್ಲೇಶ್ವರದಲ್ಲಿ ಶಾಸಕರೇ ಆಗುತ್ತಿರಲಿಲ್ಲ. ಆ ದಿನಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ಗೂಂಡಾಗಳಿಂದ ಗಲಭೆ ಎಬ್ಬಿಸಿದ ಕುಮಾರಸ್ವಾಮಿ: ಯೋಗೇಶ್ವರ್
ಅಭಿವೃದ್ಧಿ ಬಗ್ಗೆ ಉಪದೇಶ ಮಾಡಿದ್ದೀರಿ, ನಿಮ್ಮ ಮಾದರಿಯಲ್ಲಿ ಅಭಿವೃದ್ಧಿ ಮಾಡಿಕೊಳ್ಳುವುದು ನನಗೆ ಗೊತ್ತಿಲ್ಲ, ನನ್ನಿಂದ ಆಗುವುದೂ ಇಲ್ಲ. ಅಶ್ವತ್ಥನಾರಾಯಣ ಅವರೇ ಅಧಿಕಾರ ಬರುತ್ತದೆ, ಹೋಗುತ್ತದೆ ಎಂದು ವೇದಾಂತ ಹೇಳಿದ್ದೀರಿ. ಹೌದು, ಇಂಥ ಉದಾತ್ತ, ಆದರ್ಶ ಚಿಂತನೆಯ, ವಿಶಾಲ ಹೃದಯ ವೈಶಾಲ್ಯವುಳ್ಳ ನಿಮ್ಮಂಥ ಪ್ರಾಜ್ಞರೇ ಆಪರೇಶನ್ ಕಮಲ ಎಂಬ ಪಾಪ ಎಸಗಿದ್ದೇಕೆ? ನಮ್ಮ ಶಾಸಕರ ಮನೆಯಲ್ಲಿ ಹಣ ಇಟ್ಟು ಬಂದ್ದಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಅಧಿಕಾರ ಬೇಕಿದ್ದರೆ ನೀವು ಚುನಾವಣೆಯಲ್ಲಿ ಪೂರ್ಣ ಬಹುಮತ ಸಿಗುವವರೆಗೂ ಕಾಯಬಹುದಿತ್ತಲ್ಲವೇ? ಆದರೆ, ಹಪಾಹಪಿಯಿಂದ ಅಡ್ಡಮಾರ್ಗ ಹಿಡಿದಿದ್ದು ಏಕೆ? ಅಕ್ಕಪಕ್ಕದ ಪಕ್ಷಗಳ ಶಾಸಕರನ್ನು ಅಪಹರಿಸಿ ಆಪರೇಷನ್ ಕಮಲದ ಸರ್ಕಾರದ ಮಾಡಿದ್ದು ಯಾಕೆ? ಇದು ವಾಮಮಾರ್ಗವೋ? ಸನ್ಮಾರ್ಗವೋ? ಸ್ಪಲ್ಪ ಹೇಳಿ ಅಶ್ವತ್ಥನಾರಾಯಣ ಅವರೇ ಎಂದು ಎಚ್.ಡಿ.ಕುಮಾರಸ್ವಾಮಿ ಟ್ವಿಟರ್‌ನಲ್ಲಿ ಒತ್ತಾಯಿಸಿದ್ದಾರೆ.
ಬಿಜೆಪಿ ಸರ್ಕಾರ ಬಂದ ಮೇಲೆ ರಾಮನಗರ ಜಿಲ್ಲೆಯಲ್ಲಿ ಎಷ್ಟುಅಭಿವೃದ್ಧಿ ಆಗಿದೆ ಎಂಬುದನ್ನು ಬಹಿರಂಗ ಚರ್ಚೆ ಮಾಡೋಣ ಬನ್ನಿ. ಆಗ ಯಾರ ಆತ್ಮಸಾಕ್ಷಿ ಏನು ಎಂಬುದು ಜನರಿಗೂ ತಿಳಿಯುತ್ತದೆ. ಎಂಎಲ್‌ಸಿ ಕೋರಿಕೆ ಮೇರೆಗೆ ಎಂದು ಬಿಡುಗಡೆ ಮಾಡಿದ 50 ಕೋಟಿ ರು. ಒಳಗುಟ್ಟಿನ ಬಗ್ಗೆಯೂ ಚರ್ಚಿಸೋಣ ಬನ್ನಿ. ನಾನು ತಯಾರಿದ್ದೇನೆ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಸವಾಲು ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.