ಸಿದ್ದರಾಮಯ್ಯ ಸ್ಟಿಂಗ್ ಕೇಸ್: ಜೆಡಿಎಸ್ ಕಾರ್ಯಕರ್ತನ ವಶಕ್ಕೆ ಪಡೆದಿದ್ದಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ!

Published : Oct 14, 2026, 08:07 PM IST
Siddaramaiah HD Kumaraswamy

ಸಾರಾಂಶ

ಸಿದ್ದರಾಮಯ್ಯ ವರ್ಚಸ್ಸಿಗೆ ಮಸಿ ಬಳಿಯಲು ಯತ್ನಿಸಿದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಸಿಸಿಬಿ ವಶಕ್ಕೆ ಪಡೆದಿದೆ. ಇದನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ನೈಜ ಅಪರಾಧಿಗಳನ್ನು ಬಿಟ್ಟು ಅಮಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಅ.14): ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ (Sting Operation) ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳಂಕ ತರಲು ಯತ್ನಿಸಲಾಗಿದೆ ಎನ್ನಲಾದ ಈ ಪ್ರಕರಣದಲ್ಲಿ ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯಕರ್ತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವುದಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡುವ ಮೂಲಕ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ಟ್ವೀಟ್‌ನಲ್ಲಿ ಏನಿದೆ?:

'ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಯ ವರ್ಚಸ್ಸಿಗೆ ಹನಿಟ್ರ್ಯಾಪ್ ಹೆಸರಿನಲ್ಲಿ ಮಸಿ ಬಳಿಯಲು ರೂಪಿಸಿದ ವ್ಯವಸ್ಥಿತ ಷಡ್ಯಂತ್ರವನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನು ಹಾಗೂ ನನ್ನ ಜೊತೆಗಿರುವ ಹುಡುಗರನ್ನು ಟಾರ್ಗೆಟ್ ಮಾಡುತ್ತಿರುವುದು ಲಜ್ಜೆಗೇಡಿತನ' ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಯಾವುದೇ ಅಧಿಕೃತ ಪ್ರಕರಣ ದಾಖಲಿಸದೆ ಇಂದು ಬೆಳಗ್ಗೆ ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಶಂಕರ್ ಎಂಬ ಯುವಕನನ್ನು ಪೊಲೀಸರು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ. ನಂತರ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪಕ್ಷದ ಕಾನೂನು ವಿಭಾಗದಿಂದ ದೂರು ದಾಖಲಿಸಿದ ಮೇಲಷ್ಟೇ, ಆ ಯುವಕನಿಂದ ಆತನ ಪತ್ನಿಗೆ ಕರೆ ಮಾಡಿಸಿ "ಸಿಸಿಬಿ ಪೊಲೀಸರು ನನ್ನನ್ನು ಕರೆದುಕೊಂಡು ಹೋಗಿದ್ದಾರೆ" ಎಂದು ಹೇಳಿಸಿ ಕರೆ ಕಟ್ ಮಾಡಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. "ಸಾಕು ಮಾಡಿ ನಿಮ್ಮ ಕಪಟ ನಾಟಕ, ಯಾವ ಆಧಾರದ ಮೇಲೆ ಆತನನ್ನು ಕರೆದುಕೊಂಡು ಹೋಗಿದ್ದೀರಿ?" ಎಂದು ಪ್ರಶ್ನಿಸಿದ್ದಾರೆ.

ನೈಜ ಅಪರಾಧಿಯನ್ನು ಬಿಟ್ಟು ನಮ್ಮವರನ್ನು ಟಾರ್ಗೆಟ್ ಮಾಡುತ್ತಿದ್ದೀರಿ:

'ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಮಾಡಿ, ದೃಶ್ಯಗಳನ್ನು ಚಿತ್ರೀಕರಿಸಿ ಅವರ ಚಾರಿತ್ರ್ಯಹರಣಕ್ಕೆ ಕಾರಣನಾದ ನೀಚನನ್ನು ಬಿಟ್ಟು, ಆ ನೀಚತನವನ್ನು ಪ್ರಶ್ನಿಸಿದ ನನ್ನನ್ನು ನೇರವಾಗಿ ಎದುರಿಸಲಾಗದೆ ನನ್ನ ಹುಡುಗರ ಬೆನ್ನತ್ತಿದ್ದೀರಿ. ಎಲ್ಲವನ್ನೂ ರೆಕಾರ್ಡ್ ಮಾಡಿದ 'ಮಾಧ್ಯಮದ ಮುಸುಕು' ಹಾಕಿಕೊಂಡಿರುವ ಆ 'ಸಂಚುಕೋರ' ರಾಜಾರೋಷವಾಗಿ ತಿರುಗಾಡುತ್ತಿದ್ದರೆ, ಆ ನೈಜ ಅಪರಾಧಿಯನ್ನು ಬಿಟ್ಟು ನಮ್ಮ ಸೋಶಿಯಲ್ ಮೀಡಿಯಾ ಹುಡುಗರ ಮೇಲೆ ಬಿದ್ದಿದ್ದೀರಿ" ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಪ್ರಶ್ನೆ ಮಾಡಿದ್ದು ನಾನು, ಸಿಬಿಐ ತನಿಖೆಗೆ ಒತ್ತಾಯಿಸಿದ್ದು ನಾನು. ಧೈರ್ಯವಿದ್ದರೆ ನನ್ನ ಬಳಿಗೇ ನಿಮ್ಮ ಪೊಲೀಸರನ್ನು ಕಳಿಸಬೇಕಿತ್ತು, ಅಮಾಯಕರ ಮೇಲೇನು ನಿಮ್ಮ ಪ್ರತಾಪ?' ಎಂದು ಸವಾಲು ಹಾಕಿದ್ದಾರೆ.

ಮೋಹನ್ ಮನೆಗೂ ಪೊಲೀಸರ ಭೇಟಿ - ಕಿರುಕುಳ ಆರೋಪ:

ಅಷ್ಟೇ ಅಲ್ಲದೆ, ಈಗ ನಮ್ಮ ಸೋಶಿಯಲ್ ಮೀಡಿಯಾ ತಂಡದ ಮೋಹನ್ ಎಂಬ ಇನ್ನೊಬ್ಬ ಹುಡುಗನ ಮನೆ ಮುಂದೆ ಹೋಗಿ ಪೊಲೀಸರು ಗಲಾಟೆ ಮಾಡುತ್ತಿದ್ದಾರೆ, ಅವರ ಕುಟುಂಬದವರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ. ಇದೆಲ್ಲವನ್ನೂ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿರುವ ಕುಮಾರಸ್ವಾಮಿ, "ನಮ್ಮವರಿಗೆ ಹೀಗೆ ಸುಖಾಸುಮ್ಮನೆ ಕಿರುಕುಳ ಕೊಟ್ಟರೆ ಕೈಕಟ್ಟಿ ಕೂರುವುದಿಲ್ಲ. ನಾವು ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಎದುರಿಸಲು ಸಂಪೂರ್ಣ ಸಿದ್ಧರಿದ್ದೇವೆ" ಎಂದು ಗುಡುಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಾಜಿ ಸಿಎಂ ಸಿದ್ದರಾಮಯ್ಯಗೆ ಕಳಂಕ ತರಲು ಯತ್ನ: ಜೆಡಿಎಸ್ ಕಾರ್ಯಕರ್ತ ಶಂಕರ್ ಸೇರಿ ಮೂವರು ಸಿಸಿಬಿ ವಶಕ್ಕೆ!
Bangla Sahib Gurudwara Row: ಪಂಜಾಬ್ ಚುನಾವಣೆಗೆ ಮುನ್ನವೇ ಬಾಂಗ್ಲಾ ಸಾಹಿಬ್ ಗುರುದ್ವಾರ ರಣರಂಗ!