
ಬೆಂಗಳೂರು (ನ.09): ಕಬ್ಬು ಬೆಳೆಗಾರರಿಗೆ ಕಿವಿಯಲ್ಲಿ ಹೂವು ಇಟ್ಟು ರಾಜ್ಯ ಸರ್ಕಾರ ದೊಡ್ಡ ದೋಖಾ ಮಾಡಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರಿಗೆ 100 ರು. ಹೆಚ್ಚಳ ಮಾಡಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ರೈತರನ್ನು ನಂಬಿಸಿ ಸರ್ಕಾರ ಮೋಸ ಮಾಡಿದೆ ಎಂದು ದೂರಿದರು. ಸಿಎಂ ಸಿದ್ದರಾಮಯ್ಯ ಅವರು, ಮೋದಿಗೆ ಅವರಿಗೆ ಪತ್ರ ಬರೆದು ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದರು. ಹಿಂದೆ ಒಮ್ಮೆ ವಿಧಾನಸಭೆಯಲ್ಲಿ ಇದೇ ಸಿಎಂ, ಡಿಸಿಎಂ ಸೇವಂತಿಗೆ ಹೂವನ್ನು ಕಿವಿ ಮೇಲೆ ಇಟ್ಟುಕೊಂಡು ಬಂದಿದ್ದರು. ಇವರು ಇಂದು ಎರಡೂವರೆ ವರ್ಷದಲ್ಲಿ ನಿತ್ಯವೂ ಜನರಿಗೆ ಕಿವಿಗೆ ಹೂ ಮುಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಅವರು ಕಬ್ಬಿಗೆ ಎಫ್ಆರ್‌ಪಿ ದರ ಎಂದು ಕ್ವಿಂಟಲ್ ಗೆ 3,550 ರು. ನಿಗದಿ ಮಾಡಿದ್ದಾರೆ. ಆದರೆ ಶುಕ್ರವಾರದ ದಿನ ಮ್ಯಾರಥಾನ್ ಸಭೆ ಮಾಡಿದ್ದಾರೆ. ಕೇಂದ್ರ ಸರ್ಕಾರ 3550 ರು. ಎಫ್ಆರ್‌ಪಿ ನಿಗದಿ ಮಾಡಿದೆ. ರೈತರು ಕೇಳಿದ್ದು 3500 ರು. ಬೆಲೆಯನ್ನು. ಸರ್ಕಾರ ಮ್ಯಾರಥಾನ್ ಸಭೆ ಮಾಡಿ ಕೊಟ್ಟಿದ್ದು 3,300 ರು.ಮಾತ್ರ. ಹಾಗಾದರೆ ಇವರು ರೈತರಿಗೆ ಕೊಟ್ಟಿದ್ದೇನು? ಸರ್ಕಾರ ಮಾಡಿರುವ ಮೋಸವನ್ನು ಪ್ರಶ್ನೆ ಮಾಡದೇ ರೈತರು ಸಂತೋಷಪಟ್ಟರೆ ನನ್ನದೇನು ಅಭ್ಯಂತರ ಇಲ್ಲ. ಆದರೆ, ಸರ್ಕಾರ ರೈತ ಕುಟುಂಬಗಳಿಗೆ ಧೋಖಾ ಮಾಡಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ರಾಜ್ಯ ಸರ್ಕಾರದಲ್ಲಿ ಸಿಎಂ ಕುರ್ಚಿಗಾಗಿ ಬಡಿದಾಡಿಕೊಳ್ಳುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಯಾರೂ ಕೂಡ ಗಮನಹರಿಸುತ್ತಿಲ್ಲ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಗುಬ್ಬಿ ತಾಲೂಕಿನ ಬೆಲವತ್ತ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿಯ ನೂತನ ವಿಮಾನ ಗೋಪುರ ಕಳಸ ಸ್ಥಾಪನೆ ಮಹೋತ್ಸವದಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರದ ರಾಜ್ಯ ಸರ್ಕಾರದಲ್ಲಿ ಹಣವಿಲ್ಲದೆ ಒಂದೇ ಒಂದು ಅಭಿವೃದ್ಧಿಯನ್ನು ಕೂಡ ಈ ಸರ್ಕಾರ ಮಾಡಿಲ್ಲ. ಕ್ಷೇತ್ರದ ಶಾಸಕರು ಅನುದಾನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯತಿ ತಾಲೂಕು ಪಂಚಾಯತ್ ಚುನಾವಣೆ ಬಗ್ಗೆಯೂ ಕೂಡ ಗಮನ ಹರಿಸಲಿಲ್ಲ ಎಂದರು. ಗುಬ್ಬಿ ಜೆಡಿಎಸ್ ಭದ್ರಕೋಟೆ ಎಂಬುದನ್ನು ಈಗಾಗಲೇ ಕಾರ್ಯಕರ್ತರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎಸ್. ನಾಗರಾಜ್ ಅವರು ಮುಂಚೂಣಿಯಾಗಿ ಕೆಲಸ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.