ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಬಿಎಸ್ ಯಡಿಯೂರಪ್ಪ ಅವರ ಸರ್ಕಾರ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಬೆಂಗಳೂರು, (ಸೆ.23): ಎಪಿಎಂಸಿ ಕಾಯ್ದೆ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಎಪಿಎಂಸಿ ಕಾಯ್ದೆ ತರುವಾಗ ರೈತರ ಜತೆ ಚರ್ಚಿಸಿದ್ದಾರಾ? ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭವಿದು. ಈ ಸಮಯದಲ್ಲಿ ಸುಗ್ರೀವಾಜ್ಞೆಯ ಮೂಲಕ ಜಾರಿ ಏಕೆ? ತರಾತುರಿಯಲ್ಲಿ ಕಾಯ್ದೆ ಜಾರಿ ಮಾಡುವ ಅಗತ್ಯವೇನಿದೆ? ಮೇ ನಲ್ಲಿ ಸುಗ್ರೀವಾಜ್ಞೆ ತಂದಿದ್ದಾರೆ. ಇದಾದ ಬಳಿಕ ಸಾಕಷ್ಟು ಸಮಯಾವಕಾಶ ಇತ್ತು. ಯಾವ ವಿರೋಧ ಪಕ್ಷದವರನ್ನ ಕರೆದು ಇವರು ಮಾತನಾಡಿದ್ದಾರೆ? ಸಾವಿರಾರು ರೈತರು ಬೆಂಗಳೂರಲ್ಲಿ ಧರಣಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸುಗ್ರಿವಾಜ್ಞೆ ಹಿಂಪಡೆಯಿರಿ, ಇಲ್ಲ ಉಗ್ರ ಹೋರಾಟ ಎದುರಿಸಿ: ಸರ್ಕಾರಕ್ಕೆ ರೈತರ ವಾರ್ನಿಂಗ್
ಪ್ರತಿಭಟನಾ ಸ್ಥಳದಲ್ಲಿ ದೈಹಿಕ ಅಂತರ ಪಾಲನೆಯಾಗುತ್ತಿಲ್ಲ. ಈ ಪರಿಸ್ಥಿತಿಗೆ ರೈತರನ್ನ ತಳ್ಳಿದವರು ಯಾರು? ಈ ವಿಚಾರದಲ್ಲಿ ಸಚಿವರು ಲಘುವಾಗಿ ಮಾತನಾಡ್ತಿದ್ದಾರೆ. ಮುಂದಾಗುವ ದುಷ್ಪರಿಣಾಮಗಳಿಗೆ ಸರ್ಕಾರವೇ ಹೊಣೆ ಎಂದು ಕುಮಾರಸ್ವಾಮಿ ಎಚ್ಚರಿಕೆ ಕೊಟ್ಟರು.
ಬಿಹಾರದಲ್ಲಿ ಈ ಕಾಯ್ದೆ ವಾಪಸ್ ಪಡೆಯಲಾಗಿದೆ. ಕೊರೋನಾ ಸಂದರ್ಭದಲ್ಲಿ ತರಾತುರಿಯಲ್ಲಿ ತರಬೇಕಿತ್ತಾ? 6 ತಿಂಗಳು ಮುಂದೂಡಿದ್ರೆ ಏನಾಗ್ತಿತ್ತು ಎಂದು ಸರ್ಕಾರವನ್ನು ಪ್ರಶ್ನಿಸಿದರು.