ಪ್ರಜ್ವಲ್ ರೇವಣ್ಣ ಕೇಸಿನ ವಿಡಿಯೋ ಬಿಡುಗಡೆ ಆರೋಪಿ, ಡಿಕೆಶಿ ಮನೆಗೆ ಭೇಟಿ; ಕುಮಾರಸ್ವಾಮಿ ಸಿಡಿಆರ್ ರಿಲೀಸ್

Sathish Kumar KH   | Kannada Prabha
Published : Nov 03, 2026, 07:08 AM IST
HD Kumaraswamy

ಸಾರಾಂಶ

ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಹಂಚಿದ ಆರೋಪಿ ಕಾರ್ತಿಕ್ ಮತ್ತು ಸಿಎಂ ಡಿ.ಕೆ.ಶಿವಕುಮಾರ್ ನಡುವೆ ನೇರ ಸಂಪರ್ಕವಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಬಳಿ ಸಿಡಿಆರ್ ದಾಖಲೆಗಳಿದ್ದು, ದೇವೇಗೌಡರ ಕುಟುಂಬವನ್ನು ಮುಗಿಸಲು ಕಾಂಗ್ರೆಸ್ ನಾಯಕರು ಈ ಷಡ್ಯಂತ್ರ ನಡೆಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು (ನ.03): ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕ ಹಾಗೂ ಅಶ್ಲೀಲ ವಿಡಿಯೋಗಳನ್ನು ಹಂಚಿದ ಆರೋಪ ಎದುರಿಸುತ್ತಿರುವ ಕಾರ್ತಿಕ್ ಮತ್ತು ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ನೇರ ನಂಟಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಸೋಮವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ತಿಕ್‌ ಮತ್ತು ಡಿ.ಕೆ.ಶಿವಕುಮಾರ್‌ ನಂಟಿದೆ ಎಂಬುದನ್ನು ನಿರೂಪಿಸಲು ಕೆಲ ದಾಖಲೆಗಳನ್ನು ಪ್ರದರ್ಶಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ವಿಡಿಯೋ ಹರಡಿದ ವ್ಯಕ್ತಿ ಜತೆ ನನಗೆ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಪೆನ್‌ ಡ್ರೈವ್‌ ಹಂಚಿದ ಆರೋಪದ ಪ್ರಕರಣದ 2ನೇ ಆರೋಪಿ ಕಾರ್ತಿಕ್‌ ಜತೆಗೆ ಹಾಲಿ ಮುಖ್ಯಮಂತ್ರಿ ಸಂಬಂಧ ಹೊಂದಿದ್ದಾರೆ. ಶಿವಕುಮಾರ್‌ ಮನೆಗೆ ಕಾರ್ತಿಕ್‌ ಬಂದಿರುವ ಕುರಿತು ನನ್ನ ಬಳಿ ಸಿಡಿಆರ್‌ ದಾಖಲೆ ಇದೆ. ಅಶ್ಲೀಲ ವಿಡಿಯೋ ಹಂಚಿದ ಪ್ರಕರಣದಲ್ಲಿ ಈ ಇಬ್ಬರೂ ಶಾಮೀಲಾಗಿದ್ದಾರೆ ಎಂದು ಆಪಾದಿಸಿದರು.

ನನ್ನ ವಿರುದ್ಧ ಆರೋಪ ಮಾಡುವ ಮುಖ್ಯಮಂತ್ರಿಗಳು ತಾವು ಎಸಗಿರುವ ಅಕ್ರಮದ ಬಗ್ಗೆ ಏನು ಹೇಳುತ್ತಾರೆ? ಅದರ ಬಗ್ಗೆ ನಾನು ನೇರವಾಗಿ ಜನರಿಗೆ ಹೇಳಿದ್ದೇನೆ. ಈ ವ್ಯಕ್ತಿ ಬಗ್ಗೆ ಜನರೇ ತೀರ್ಮಾನ ಮಾಡಲಿ ಎಂದು ಸಚಿವ ಕುಮಾರಸ್ವಾಮಿ ಹೇಳಿದರು.

ಕಾರ್ತಿಕ್‌ ಜತೆಗಿನ ಸಂಬಂಧ ಬಗ್ಗೆ ಉತ್ತರಕ್ಕೆ ಆಗ್ರಹ:

ಅಶ್ಲೀಲ ವಿಡಿಯೋಗಳು ಹೊರಕ್ಕೆ ಬರುವ ಮುನ್ನ ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ 2023 ಆಗಸ್ಟ್ 5 ಮತ್ತು 6ರಂದು ಅಂದಿನ ಉಪಮುಖ್ಯಮಂತ್ರಿ ಆಗಿದ್ದ ಡಿ.ಕೆ.ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿದ್ದರು. ಇದರ ದಾಖಲೆಗಳು ನನ್ನ ಬಳಿ ಇವೆ ನೋಡಿ ಎಂದು ಸಿಡಿಆರ್‌ ದಾಖಲೆಗಳನ್ನು ಪ್ರದರ್ಶಿಸಿದರು.

ಈ ದಾಖಲೆಗಳನ್ನು ನ್ಯಾಯಾಲಯಕ್ಕೂ ನೀಡಿದ್ದೇವೆ. ಈ ಕಾರ್ತಿಕ್‌ ಜತೆಗೆ ಶಿವಕುಮಾರ್‌ ಹೊಂದಿದ್ದ ಸಂಬಂಧದ ಬಗ್ಗೆ ಅವರೇ ಉತ್ತರ ಕೊಡಬೇಕು. ಬಹಿರಂಗವಾಗಿ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.

ಗೌಡರ ಕುಟುಂಬ ಮುಗಿಸಲು ವಿಡಿಯೋ ಬಳಕೆ:

ಪ್ರಜ್ವಲ್ ರೇವಣ್ಣ ಅವರ ವಿಷಯ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ನಮ್ಮ ಕುಟುಂಬ ಮುಗಿಸಲು ಹೊರಟ್ಟಿದ್ದಾರೆ. ಅಂದು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ತಪ್ಪಿಸಲು ಇವರು ಅಶ್ಲೀಲ ವಿಡಿಯೋಗಳನ್ನು ಬಳಸಿಕೊಂಡರು. ಆ ಮಹಿಳೆಯರ ಮುಖಗಳನ್ನು ಮರೆಮಾಚದೆ ವಿಡಿಯೋಗಳನ್ನು ಹೊರ ಬಿಟ್ಟರು. ಇಂತಹ ವಿಡಿಯೋಗಳನ್ನು ಹರಡಿದ ಕಾರ್ತಿಕ್‌ನನ್ನು ಡಿ.ಕೆ.ಶಿವಕುಮಾರ್‌ ಭೇಟಿ ಮಾಡಿದ್ದಾರೆ ಎಂದರೆ ಏನರ್ಥ? ಆ ಕಾರ್ತಿಕ್‌ನನ್ನು ಮನೆಗೆ ಕರೆಸಿಕೊಂಡಿರಲಿಲ್ಲ ಎಂದು ಈ ಮುಖ್ಯಮಂತ್ರಿ ಎದೆ ಮುಟ್ಟಿಕೊಂಡು ಹೇಳಲಿ ಎಂದು ಸವಾಲು ಹಾಕಿದರು.

ಸಿದ್ದು-ಡಿಕೆಶಿ ನಮ್ಮ ವಿರುದ್ಧ ಹಗೆ:

ಸಚಿವ ಕಾಶಪ್ಪನವರ್ ನೀಡಿರುವ ಹೇಳಿಕೆ ಗಮನಿಸಿದ್ದೇನೆ. ಕುಮಾರಸ್ವಾಮಿ ಪ್ರಜ್ವಲ್ ಪೆನ್ ಡ್ರೈವ್ ಹಂಚಿಕೆ ಮಾಡಿದ್ದರು ಎಂದು ಹೇಳಿದ್ದಾರೆ. ಮಂಡ್ಯದವನೊಬ್ಬ ದೇವೇಗೌಡರ ಕುಟುಂಬ ಮುಗಿಸುತ್ತೇವೆ ಎನ್ನುತ್ತಾನೆ. ಇವರಿಗೆ ಮಾನವೀಯತೆ ಎನ್ನುವುದು ಇದೆಯಾ? ಹಾಸನ ಪ್ರಕರಣದಲ್ಲಿ ಎಷ್ಟು ಮಹಿಳೆಯರು ದೂರು ನೀಡಿದ್ದಾರೆ? ಎಷ್ಟು ಜನಕ್ಕೆ ಈ ಸರ್ಕಾರ ನ್ಯಾಯ ಕೊಡಿಸಿದೆ. ಅಂದಿನ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಇಬ್ಬರೂ ಸೇರಿಕೊಂಡು ನಮ್ಮ ವಿರುದ್ಧ ಹಗೆ ಸಾಧಿಸಿದರು ಎಂದು ವಾಗ್ದಾಳಿ ನಡೆಸಿದರು.

ಕಾಲವೇ ನಿರ್ಣಯಿಸಲಿದೆ:

ನಮ್ಮ ಕುಟುಂಬದ ವಿರುದ್ಧ ಸುರ್ಜೇವಾಲ, ರಾಹುಲ್ ಗಾಂಧಿ ಎಲ್ಲರೂ ಸೇರಿ ಕುತಂತ್ರ ನಡೆಸಿದರು. ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎಂಬ ಕಾರಣಕ್ಕೆ, ದೇವೇಗೌಡರು ಮೋದಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಹೀಗಾಗಿ ಅವರ ಕುಟುಂಬವನ್ನು ನಿರ್ನಾಮ ಮಾಡಲೇಬೇಕು ಎಂದು ಷಡ್ಯಂತ್ರ್ಯ ನಡೆಸಿದರು. ಹಾಲಿ ಮುಖ್ಯಮಂತ್ರಿ ಮಾತಿನಲ್ಲೇ ಹೇಳುವುದಾದರೆ ಕಾಲವೇ ಎಲ್ಲವನ್ನೂ ನಿರ್ಣಯ ಮಾಡುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಅಶ್ಲೀಲ ವಿಡಿಯೋ ಹಂಚಿದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಜತೆಗೆ ಸಂಬಂಧ ಹೊಂದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನನ್ನ ವಿರುದ್ಧ ಆರೋಪ ಹೊರಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅವರ ದುರುದ್ದೇಶ ಸಫಲ ಆಗುವುದಿಲ್ಲ.

- ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಕೇಸ್: ಕೃಪಾ ಆಳ್ವಾ ಸೇರಿ 3 ಆರೋಪಿಗಳಿಗೆ ನಿರೀಕ್ಷಣಾ ಜಾಮೀನು!
ಹಮಾರೇ ಪಾಸ್‌ ಪೂರಾ ಪಿಚ್ಚರ್‌ ಹೈ: ತಾರಕಕ್ಕೇರಿದ ಪ್ರಿಯಾಂಕ್-ಹೆಚ್‌ಡಿಕೆ ವಾರ್, ಖರ್ಗೆ ಹೇಳಿಕೆಗೆ ಕುಮಾರಸ್ವಾಮಿ ಕೆಂಡ!