'ಶಿವಮೊಗ್ಗ, ದಕ್ಷಿಣ ಕನ್ನಡಕ್ಕೆ ಬೆಂಗಳೂರು ಎಂದು ಹೆಸರಿಡಬಲ್ಲರೇ’?

Published : Jan 05, 2020, 07:57 PM IST
'ಶಿವಮೊಗ್ಗ, ದಕ್ಷಿಣ ಕನ್ನಡಕ್ಕೆ ಬೆಂಗಳೂರು ಎಂದು ಹೆಸರಿಡಬಲ್ಲರೇ’?

ಸಾರಾಂಶ

ರಾಮನಗರ ಜಿಲ್ಲೆಗೆ ನವ ಬೆಂಗಳೂರು ಎಂದು ಮರುನಾಮಕರಣಕ್ಕೆ ಚಿಂತನೆ ನಡೆದಿದೆಯಂತೆ. ಇಂಥದ್ದೊಂದು ಸುದ್ದಿ ದೊಡ್ಡ ಮಟ್ಟದಲ್ಲೇ ಹರಿದಾಡುತ್ತಿದೆ.  ಸರ್ಕಾರ ಅಧಿಕೃತವಾಗಿ ಹೇಳಿಕೆ ನೀಡದಿದ್ದರೂ, ಹೂಡಿಕೆದಾರರ ಸೆಳೆಯಲು ಇಂಥದ್ದೊಂದು ಯೋಚನೆ ಮಾಡಿದೆ ಅನ್ನೋ ಸುದ್ದಿ ಬಲವಾಗಿ ಕೇಳಿ ಬಂದಿದೆ.  ಯಾವಾಗ ಇಂಥದ್ದೊಂದು ಸುದ್ದಿ ಹೊರ ಬಿತ್ತೋ ಈ ಬಗ್ಗೆ ಪರ-ವಿರೋಧ ಚರ್ಚೆಗಳು ಸಹ ತಾರಕಕ್ಕೇರಿವೆ. ಅದರಲ್ಲೂ  ಬಿಜೆಪಿ ಈ ನಡೆ ಖಂಡಿಸಿ ಮಾಜಿ ಸಿಎಂ ಕುಮಾರಸ್ವಾಮಿ ಫೇಸ್ ಬುಕ್ ನಲ್ಲಿ ರಾಮನಗರದ ಇತಿಹಾಸದ ಬಗ್ಗೆ ಸುದೀರ್ಘವಾಗಿ ಬರೆದುಕೊಳ್ಳುವ ಮೂಲ ಯಡಿಯೂರಪ್ಪ ವಿರುದ್ಧ ಚಾಟಿ ಬೀಸಿದ್ದಾರೆ.  ಅದು ಈ ಕೆಳಗಿನಂತಿದೆ.

ಬೆಂಗಳೂರು/ರಾಮನಗರ, [ಜ.05]: ರಾಮನಗರದ ಹೆಸರು ಬದಲಾವಣೆ ವಿಚಾರ ಸರ್ಕಾರ ಮತ್ತು ವಿಪಕ್ಷಗಳ ನಡುವೆ ರಾಜಕೀಯ ತಿಕ್ಕಾಟ ಬಿರುಸುಗೊಂಡಿದೆ. ಅದರಲ್ಲೂ ಮಾಜಿ ಸಿಎಂ ಕುಮಾರಸ್ವಾಮಿ ಸಿಡಿದೆದ್ದು, ಫೇಸ್ ಬುಕ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. 

ರಾಮನಗರವನ್ನು ನವ ಬೆಂಗಳೂರು ಬದಲಾವಣೆ ವಿವಾದಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಸಿಎಂ

ಕುಮಾರಸ್ವಾಮಿ ಬರೆದುಕೊಂಡಿದ್ದು ಹೀಗೆ....!
"ಪಕ್ಕದಲ್ಲೇ ಕಾವೇರಿ ನದಿ ಇದೆ, ಇಗ್ಗಲೂರಿನಲ್ಲಿ 'ದೇವೇಗೌಡ ಬ್ಯಾರೇಜ್' ಇದೆ. ಮಾಗಡಿಗೆ ಹೇಮೆ ಹರಿಯಲಿದ್ದಾಳೆ, ಚಿನ್ನದಂಥ ಭೂಮಿ ಇದೆ, ಮುಗ್ಧ ಜನರಿದ್ದಾರೆ ಬೆಂಗಳೂರಿಗೆ ಪಕ್ಕದಲ್ಲೇ ಇರುವ ಈ ಸಂಪದ್ಭರಿತ ಭೂಮಿಯನ್ನು ಕಿತ್ತುಕೊಂಡು ಬಂಡವಾಳಶಾಹಿಗಳಿಗೆ ಹಂಚಲು ಹೆಸರೊಂದು ಅಡ್ಡಿ ಇದೆ. ನನ್ನ ಮೇಲಿನ ರಾಜಕೀಯ ವೈಷಮ್ಯವೂ ಇದೆ.

ರಾಮನಗರವನ್ನು ಅಭಿವೃದ್ಧಿ ಮಾಡುವ ಇಚ್ಛೆ ನಿಮಗಿದೆಯೇ ಬಿಎಸ್ವೈ ಅವರೇ? ಹಾಗಿದ್ದರೆ ಜಿಲ್ಲೆಗೆ ನಾನು ನನ್ನ ಬಜೆಟ್ ನಲ್ಲಿ ಮೀಸಲಿಟ್ಟ ಹಣವನ್ನು ಪ್ರಾಮಾಣಿಕವಾಗಿ ಬಿಡುಗಡೆ ಮಾಡಿ ಸಾಕು. ಅದನ್ನೂ ಮೀರಿದ ಅಭಿವೃದ್ಧಿ ಮಾಡುವ ಮನಸ್ಸಿದ್ದರೆ ನಿಮಗೆ ನನ್ನ, ನನ್ನ ಜನ ಸಹಕಾರ ಸದಾ ಇರಲಿದೆ. ಆದರೆ ಹೆಸರು ಬದಲಿಸಿ ಜಿಲ್ಲೆ ಸಂಸ್ಕೃತಿ, ಅಸ್ಮಿತೆಗೆ ಬೆಂಕಿ ಇಡಬೇಡಿ.

ಬಪ್ಪರೇ..! ಬಿಜೆಪಿ ನಾಯಕರಿಗೆ ಸಿದ್ಧಾಂತದ ಅಸ್ತ್ರ ಬೀಸಿದ HDK

ಕೆಂಪೇಗೌಡರು ಬೆಂಗಳೂರು ಕಟ್ಟಿದಾಗ ಊರು ಇನ್ನು ಮುಂದೆ ಹೋಗಬಾರದು ಎಂದು ನಾಲ್ಕು ದಿಕ್ಕುಗಳಿಗೆ ಗಡಿ ಗೋಪುರ ಕಟ್ಟಿದ್ದರು. ಆದರೆ ನಾವು ಅದನ್ನೆಲ್ಲ ಎಂದೋ ದಾಟಿದೆವು. ಕೆಂಪೇಗೌಡರ ಇಚ್ಛೆ ಮೀರಿದೆವು. ಕೆರೆ ಕಾಲುವೆ ಮುಚ್ಚಿದೆವು ಪರಿಣಾಮ ಬೆಂಗಳೂರು ಇಂದು ಸಮಸ್ಯೆಗಳ ಕೂಪ.

ಅಭಿವೃದ್ಧಿಯ ಹೆಸರಲ್ಲಿ ಇದೇ ಸಮಸ್ಯೆಗಳನ್ನು ರಾಮನಗರಕ್ಕೆ ವಿಸ್ತರಿಸುವುದು ಬೇಡ. ಇಲ್ಲಿಗೆ ಕೋಟಿ ಕುಳಗಳು ಬರದಿದ್ದರೂ ಬೇಡ. ಭೂಮಿ ಲೂಟಿಯಾಗದೇ ಇರಲಿ. ಕೆರೆಗಳು ಮುಚ್ಚದೇ ಇರಲಿ. ಸಮೃದ್ಧ ಜನಪದ ಸಂಸ್ಕೃತಿ ಅಳಿಯದಿರಲಿ. ಜನರ ಮುಗ್ಧತೆ ಬಲಿಯಾಗದೇ ಇರಲಿ.

ಅಷ್ಟಕ್ಕೂ ಹೆಸರಲ್ಲಿ ಏನಿದೆ. ಬೆಂಗಳೂರು ಎಂದ ಮಾತ್ರಕ್ಕೆ ಅಭಿವೃದ್ಧಿ ಸಾಧ್ಯವೇ? ಹಾಗಿದ್ದರೆ ರಾಜ್ಯದ ಬೇರೆ ಜಿಲ್ಲೆಗಳಿಗೆ ಇದೇ ಹೆಸರಿಡಬಹುದಲ್ಲವೇ? ಅದು ನಿಮಗೆ ಸಾಧ್ಯವೇ? ರಾಮನಗರದ ಹೆಸರು ಬದಲಾಯಿಸಲು ಬರುವ ಬಿಎಸ್ವೈ ಅವರು ಶಿವಮೊಗ್ಗಕ್ಕೆ ಬೆಂಗಳೂರು ಎಂದು ಹೆಸರಿಡಬಲ್ಲರೇ? ದಕ್ಷಿಣ ಕನ್ನಡಕ್ಕೆ?

ಬೆಂಗಳೂರಿನಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಜಮೀನು ಹೊಂದಬೇಕು ಎಂಬುದು ಇಂದಿನ ಹಣವಂತರ ಬಯಕೆ. ಇದರಲ್ಲಿ ಉತ್ತರಭಾರತೀಯರೇ ಹೆಚ್ಚು. ಹಾಗಾಗಿಯೇ ಸಾಕಷ್ಟು ಭೂಮಿ ಫಾರಂ ಹೌಸ್ಗಳಿಗೆ ಬಲಿಯಾಗಿವೆ. ಕೃಷಿಯಿಂದ ಹಿಮ್ಮುಖವಾಗಿವೆ. ರಾಮನಗರದ ಹೆಸರು ಬದಲಾವಣೆ ಇಂಥವರಿಗಾಗಿಯೇ ಹೊರತು ರೈತರಿಗೆ ಅಲ್ಲ.

ರಾಮನಗರ ತಾಲೂಕು ಮೊದಲು 'ಕ್ಲೋಸ್ ಪೇಟೆ' ಎಂದು ಇತ್ತು. ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರು ರಾಮನಗರ ತಾಲೂಕು ಮಾಡಿದರು. ಅದೇ ಹೆಸರನ್ನು ನಾನು ಇಡೀ ಜಿಲ್ಲೆಗೆ ಇಟ್ಟಿದ್ದೇನೆ. ಅದನ್ನು ಬದಲಾಯಿಸುವುದು ಅವರಿಗೆ ಮಾಡುವ ಅಪಮಾನ.

ಈ ಜಿಲ್ಲೆ ಗಂಗರು ಆಳಿದ ನಾಡು. ಬಾಲಗಂಗಾಧರನಾಥರ, ಶಿವಕುಮಾರ ಶ್ರೀಗಳ ಜನ್ಮಭೂಮಿ. ರಾಜ್ಯಕ್ಕೆ ನಾಲ್ಕು ಮುಖ್ಯಮಂತ್ರಿಗಳನ್ನು ಕೊಟ್ಟ ಶಕ್ತಿಸ್ಥಳ. ಇದೆ ಹೆಸರನ್ನು ಬೆಂಗಳೂರು ಎಂದು ಬದಲಿಸಿದರೆ ಜಿಲ್ಲೆಯ ಐತಿಹ್ಯ ಅಳಿಯಲಿದೆ.

ರಾಮನಗರ ಜಿಲ್ಲೆಯ ಸುತ್ತ ಸಪ್ತ ಬೆಟ್ಟಗಳಿವೆ. ಏಳು ಬೆಟ್ಟಗಳ ನಡುವೆ ಇರುವುದೇ ರಾಮದೇವರ ಬೆಟ್ಟ. ಅದಕ್ಕಾಗಿಯೇ ರಾಮನಗರ ತಾಲೂಕು ಆಗಿದೆ. ರಾಮನ ಹೆಸರನ್ನೇ ಜಿಲ್ಲೆಗೂ ಇಟ್ಟಿದ್ದೇನೆ‌. ಇದನ್ನು ಮೀರಿ ಹೆಸರು ಬದಲಿಸಿದರೆ ಅದು ಬಿಜೆಪಿಯೇ ಪ್ರತಿಪಾದಿಸುವ ಸಿದ್ಧಾಂತಗಳಿಗೆ ಮಾಡಿದ ಅಪಚಾರ. ರಾಮನ ಹೆಸರಿಗೆ ಆಗುವ ಅಪಮಾನ.

ಹೆಸರು ಬದಲಿಸುವ ನಿರ್ಧಾರದಿಂದ ಸರ್ಕಾರ ಕೂಡಲೇ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ".
#SaveRamanagara

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?