ಮಂಡ್ಯದಿಂದ ಎಂಪಿಗೆ ಸ್ಪರ್ಧಿಸಲು ಎಚ್‌ಡಿಕೆ, ನಿಖಿಲ್‌ಗೆ ಆಹ್ವಾನ: ಸಿ.ಎಸ್.ಪುಟ್ಟರಾಜು

By Kannadaprabha NewsFirst Published Nov 24, 2023, 11:01 PM IST
Highlights

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಥವಾ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವಂತೆ ಆಹ್ವಾನಿಸಿದ್ದೇವೆ.

ಮಂಡ್ಯ (ನ.24): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಥವಾ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವಂತೆ ಆಹ್ವಾನಿಸಿದ್ದೇವೆ. ಪಕ್ಷ ಅಂತಿಮವಾಗಿ ಏನು ನಿರ್ಧಾರ ಮಾಡುತ್ತದೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರೆಂಬುದು ಇನ್ನೂ ತೀರ್ಮಾನ ಆಗಿಲ್ಲ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ನಿರ್ಧಾರವಾಗಿದೆಯೇ ವಿನಃ ಅದರ ರೂಪು-ರೇಷೆಗಳು, ಕ್ಷೇತ್ರ ಹಂಚಿಕೆ ವಿಚಾರಗಳು ಅಂತಿಮವಾಗಿಲ್ಲ. 

ಈ ವಿಚಾರವಾಗಿ ಪಕ್ಷದ ವರಿಷ್ಠರು ಮಾಡುವ ತೀರ್ಮಾನವೇ ಅಂತಿಮ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿದ್ದರು. ಮತ್ತೊಮ್ಮೆ ಅವರನ್ನು ಮಂಡ್ಯದಿಂದ ಕಣಕ್ಕಿಳಿಸುವಂತೆ ಕೋರಿದ್ದೇವೆ. ಅಂದಿನ ರಾಜಕೀಯ ಪರಿಸ್ಥಿತಿಯೇ ಬೇರೆ. ಪ್ರಸ್ತುತ ಜಿಲ್ಲೆಯಲ್ಲಿರುವ ರಾಜಕೀಯ ಸನ್ನಿವೇಶವೇ ಬೇರೆ. ಒಮ್ಮೆ ನಿಖಿಲ್ ಸ್ಪರ್ಧೆ ಬೇಡ ಎಂದಾದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದೇವೆ. ವರಿಷ್ಠರು ಏನು ನಿರ್ಧಾರ ಮಾಡುವರೋ ನೋಡಬೇಕು ಎಂದರು.

ಸಮಾಜ ಒಡೆಯುವುದು ಕಾಂಗ್ರೆಸ್ ಸರ್ಕಾರದ ಉದ್ದೇಶ: ಎಚ್.ಡಿ.ಕುಮಾರಸ್ವಾಮಿ

ಬರಪರಿಹಾರ ಕೊಡದೆ ಸರ್ಕಾರದ ನಾಟಕ: ರಾಜ್ಯದಲ್ಲಿ ಎದುರಾಗಿರುವ ಬರಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ತುರ್ತಾಗಿ ಪರಿಹಾರ ನೀಡಿ ಸ್ಪಂದಿಸದ ಕಾಂಗ್ರೆಸ್ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದೆ ಎಂದು ಜೆಡಿಎಸ್ ನಾಯಕರು ಆರೋಪಿಸಿದರು. ತಾಲೂಕಿನ ಬಸರಾಳು ಹೋಬಳಿಯ ಹನಗನಹಳ್ಳಿ, ದುದ್ದ ಹೋಬಳಿಯ ಬೆಟ್ಟಹಳ್ಳಿ, ಪುರದ ಕೊಪ್ಪಲು ಸೇರಿ ವಿವಿಧೆಡೆ ಬರ ಅಧ್ಯಯನ ನಡೆಸಿದ ದಳಪತಿಗಳ ತಂಡ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಸ್ಥಿತಿ, ರೈತರ ಸಂಕಷ್ಟಗಳ ಕುರಿತಂತೆ ಮಾಹಿತಿ ಸಂಗ್ರಹಿಸಿದರು.

ಬರ ನಿರ್ವಹಣೆಯಲ್ಲಿ ರಾಜ್ಯಸರ್ಕಾರ ಸಂಪೂರ್ಣ ವಿಫಲವಾಗಿದೆ. ಜವಾಬ್ದಾರಿಯನ್ನು ನಿರ್ವಹಿಸದೆ ಕೈಕಟ್ಟಿ ಕುಳಿತಿದೆ. ಬೆಳೆ ಇಲ್ಲದೆ ಕಂಗೆಟ್ಟಿರುವ ರೈತರ ನೋವಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ್ದು, ತುರ್ತು ಬರಪರಿಹಾರ ಹಣ ಬಿಡುಗಡೆ ಮಾಡದೆ ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಿದೆ. ಆ ಮೂಲಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ, ಬೇಜವಾಬ್ದಾರಿತನ ಪ್ರದರ್ಶಿಸುತ್ತಿದೆ ಎಂದು ಮೂದಲಿಸಿದರು.

ವಸ್ತುಸ್ಥಿತಿಯನ್ನು ಅವಲೋಕಿಸಿಲ್ಲ: ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿರುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಮಂತ್ರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಅವಲೋಕನ ಮಾಡಬೇಕಿತ್ತು. ಅದರ ಆಧಾರದ ಮೇಲೆ ನೈಜ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಬೇಕಿತ್ತು. ಹವಾನಿಯಂತ್ರಿಕ ಕೊಠಡಿಯಲ್ಲಿ ಸಿದ್ಧಪಡಿಸಿದ ವರದಿಯನ್ನು ತರಿಸಿಕೊಂಡು ಕೇಂದ್ರಕ್ಕೆ ಕಳುಹಿಸಿದೆ. ಆದರೆ, ವಾಸ್ತವದಲ್ಲಿ ಬರಪರಿಸ್ಥಿತಿಯ ಚಿತ್ರಣವೇ ಬೇರೆ ಇದೆ. 

ಒಂದು ವರ್ಗದಿಂದ ನಟ ದರ್ಶನ್ ಟಾರ್ಗೆಟ್: ಸಂಸದೆ ಸುಮಲತಾ ಹೇಳಿದ್ದೇನು?

ರೈತರನ್ನು ಭೇಟಿಯಾದಾಗ ವಿದ್ಯುತ್ ಸಮಸ್ಯೆ, ಕೆರೆ-ಕಟ್ಟೆಗಳು ತುಂಬಿಲ್ಲದಿರುವುದು, ನೀರಿಲ್ಲದೆ ಬೆಳೆಗಳು ಒಣಗಿರುವುದು, ಕೆಆರ್‌ಎಸ್, ಹೇಮಾವತಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಹಾಕದಿರುವುದು ಕಂಡುಬಂದಿದೆ. ಕೇಂದ್ರ ಸರ್ಕಾರ ಪರಿಹಾರ ಕೊಟ್ಟಿಲ್ಲ ಎಂದು ಬೊಬ್ಬೆ ಹಾಕುತ್ತಿರುವ ರಾಜ್ಯ ಸರ್ಕಾರಕ್ಕೆ ಜವಾಬ್ದಾರಿ ಇದ್ದರೆ ಇಷ್ಟೊತ್ತಿಗೆ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿತ್ತು. ವರ್ಗಾವಣೆ ದಂಧೆಯಲ್ಲಿ ತೊಡಗಿರುವ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯೇ ಇಲ್ಲ ಎಂದು ಆರೋಪಿಸಿದರು.

click me!