ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಪಕ್ಷದಿಂದ ದೂರ ಉಳಿದಿರುವ ಶಾಸಕರೊಬ್ಬರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಪಕ್ಷದಿಂದ ಗೇಟ್ ಪಾಸ್ ಕೊಡುವ ಬಗ್ಗೆ ಮಾತನಾಡಿದ್ದಾರೆ.
ಮೈಸೂರು, (ಫೆ.03): ನಾನು ರಾಜಕೀಯದಲ್ಲಿ ಇರೋವರೆಗು ಶಾಸಕರೊಬ್ಬರನ್ನು ವಾಪಸ್ ಜೆಡಿಎಸ್‌ಗೆ ಸ್ವೀಕರಿಸೋದಿಲ್ಲ ಎಂದು ಎಚ್‌ಡಿ ಕುಮಾರಸ್ವಾಮಿ ಅವರು ಖಂಡತುಂಡವಾಗಿ ಹೇಳಿದ್ದಾರೆ.
ಹೌದು....ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ,ದೇವೇಗೌಡ ಅವರು ಜೆಡಿಎಸ್‌ನಿಂದ ದೂರ ಉಳಿದಿದ್ದಾರೆ. ಅಲ್ಲದೇ ಪಕ್ಷದಿಂದ ಒಂದು ಕಾಲು ಆಚೆ ಇಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಬಗ್ಗೆ ಮೈಸೂರಿನಲ್ಲಿ ಇಂದು (ಬುಧವಾರ) ಮತನಾಡಿದ ಕುಮಾರಸ್ವಾಮಿ, ಬೆಳಗ್ಗೆ ಕಾಂಗ್ರೆಸ್, ಮಧ್ಯಾಹ್ನ ಜೆಡಿಎಸ್, ರಾತ್ರಿ ಬಿಜೆಪಿಯವರ ಮನೆಗಳಿಗೆ ಹೋಗುತ್ತಾರೆ. ಎಲ್ಲರ ವಿಶ್ವಾಸಗಳಿಸೋಕೆ ಓಡಾಡ್ತಿದ್ದಾರೆ. ಎಲ್ಲೂ ಗಿಟ್ಟಲ್ಲ ಅಂದ್ರೆ ಕೊನೆಗೆ ನಮ್ಮತ್ರನೆ ಬರ್ತಾರೆ ಅಂತಾನೂ ಗೊತ್ತು. ಎಲ್ಲ ಸುತ್ತಿಕೊಂಡು ವಾಪಸ್ ಬಂದಾಗ ಜೆಡಿಎಸ್ ಸ್ವೀಕರಿಸೋದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು.
ಮತ್ತೆ ಶುರುವಾಯ್ತು ಕುಮಾರಸ್ವಾಮಿ-ಜೆಡಿಎಸ್ ಶಾಸಕ ನಡುವಿನ ಮುಸುಕಿನ ಗುದ್ದಾಟ
ನಾನು ಇರೋವರೆಗೂ ಅವರನ್ನ ಮತ್ತೆ ಜೆಡಿಎಸ್‌ಗೆ ಸೇರಿಸಿಕೊಳ್ಳಲ್ಲ. ನನ್ನ ಕೆಲವು ನಾಯಕರು ಕೇಳಿದ್ರು ಅವರಿಗೆ ಸ್ವಲ್ಪ ಸಮಯ ಕೊಡಿ ಅಂತ. ಅದಕ್ಕೆ ಸಮಯ ಕೊಟ್ಟಾಗಿದೆ. ಆದ್ರೆ ಇನ್ನು ಸಮಯ ಕೊಡೋಕೆ ಆಗೋಲ್ಲ. ಇನ್ನು ಇವರ ಆಟ ನಡೆಯೋಲ್ಲ ಎಂದು ಪರೋಕ್ಷವಾಗಿ ಪಕ್ಷದಿಮದ ಉಚ್ಛಾಟಿಸುವ ಮಾತುಗಳನ್ನಾಡಿದರು.
ಮೈಸೂರಿನ ಜಲದರ್ಶಿನಿಯಲ್ಲಿ ಸಾ.ರಾ.ಮಹೇಶ್ ಭೇಟಿ ಮಾಡಿದ್ದಾಗಲು ಇದೆ ಹೇಳಿದ್ರು. ಸಾ.ರಾ.ಮಹೇಶ್ ಸಹ ಅವರನ್ನ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ರು. ಆದ್ರೆ ಇವರು ಒಳಗೊಂದು ಮಾತನಾಡಿ ಹೊರಗೆ ಪಕ್ಷಕ್ಕೆ ಡ್ಯಾಮೇಜ್ ಮಾಡ್ತಿದ್ದಾರೆ. ಈಗ ಆಗಿರುವ ಡ್ಯಾಮೇಜ್ ಸಾಕು ಮತ್ತೆ ಇವರಿಗೆ ಟೈಂ ಕೊಡೋಕೆ ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದರು.
ಜೆಡಿಎಸ್‌ನಿಂದ ದೊಡ್ಡ ನಾಯಕನಿಗೆ ಗೇಟ್‌ಪಾಸ್?.. ದಳದಲ್ಲೂ ತಳಮಳ!
ಉಚ್ಛಾಟನೆ ಬಗ್ಗೆ ಎಚ್‌ಡಿಕೆ ಮಾತು
ಜೆಡಿಎಸ್‌ನಿಂದ ಜಿಟಿಡಿರನ್ನ ಉಚ್ಚಾಟನೆ ಮಾಡುವ ವಿಚಾರವಾಗಿ ಮತನಾಡಿದ ಕುಮಾರಸ್ವಾಮಿ ಅವರು, ಉಚ್ಚಾಟಿಸಿದ್ರೆ ಅನುಕಂಪ ಗಿಟ್ಟಿಸಿಕೊಳ್ಳುವ ವಾತಾವರಣ ಸೃಷ್ಠಿ ಮಾಡ್ತಾರೆ. ಉಚ್ಚಾಟನೆ ಮಾಡ್ತೀನಿ ಅಂತ ನಾನು ಎಲ್ಲೂ ಹೇಳಿಲ್ಲ. ಆದ್ರೆ ಮೈಸೂರು ಭಾಗದ ಬೆಳಗವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಕಾರ್ಯಕರ್ತರೇ ಈ ಬಗ್ಗೆ ತೀರ್ಮಾನ ಮಾಡ್ತಾರೆ. ನಾನು ಉಚ್ಚಾಟನೆ ಮಾಡುದ್ರೆ ಜನರ ಅನುಕಂಪದ ಲಾಭ ಗಿಟ್ಟಿಸಬಹುದೆಂದು ಕಾಯುತ್ತಿದ್ದಾರೆ. ಯಾವಾಗ ಕ್ರಮ ತೆಗೆದುಕೊಳ್ಳಬೇಕು ಅವಾಗ ತಗೊಳ್ತೀನಿ ಎಂದು ಸ್ಪಷ್ಟಪಡಿಸಿದರು.
'ವೋಟು ಹಾಕಿದ್ದಕ್ಕೆ ಮಂತ್ರಿ ಮಾಡಿದ್ದೇನೆ'
ಜಿ.ಟಿ.ದೇವೇಗೌಡ ವಿರುದ್ಧ ವಾಗ್ದಾಳಿ ಮುಂದುವರೆಸಿದ ಕುಮಾರಸ್ವಾಮಿ, ನಾನು ಸಿಎಂ ಆಗಲು ಜಿಟಿಡಿ ಒಂದು ವೋಟು ಹಾಕಿದ್ದರು. ಅದಕ್ಕಾಗಿ ಅವರಿಗೆ ನಾನು ಮಂತ್ರಿ ಮಾಡಿದ್ದೇನೆ. ನಾನೇನು ಒಬ್ಬನೆ ಮಂತ್ರಿ ಆಗಿ ಅನುಭವಿಸಿಲ್ಲ ಅಲ್ಲವೇ. ಕುಮಾರಪರ್ವ ಪಕ್ಷದ ಕಾರ್ಯಕ್ರಮ. ಅದಕ್ಕೆ ಯಾರ್ಯರು ದೇಣಿಗೆ ಕೊಟ್ಟಿದ್ದಾರೆ ಅಂತ ಆತ್ಮ ಮುಟ್ಟುಕೊಳ್ಳಲಿ. ನನ್ನನ್ನ ಸಿಎಂ ಮಾಡಲು ಇವರೇನು ರಾಜ್ಯ ಪ್ರವಾಸ ಮಾಡಿದ್ದರೇ? ಸುಮ್ಮನೆ ಮಾತನಾಡೋದು ಬೇಡ ಎಂದು ಕಿಡಿಕಾರಿದರು.
ಜಿಟಿ.ದೇವೇಗೌಡ್ರಿಗೆ ಎಚ್ಚರಿಕೆ
ಜೆಡಿಎಸ್ ದೇವೆಗೌಡರ ಹಿಡಿತದಲ್ಲಿಲ್ಲ ಎಂಬ ಜಿಟಿಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ನನ್ನ ತಂದೆಗೆ ಗೌರವ ಕೊಡೋದನ್ನ ಇವರಿಂದ ಕಲಿಯಬೇಕಿಲ್ಲ. ನಾಲಿಗೆ ಮೇಲೆ ಹಿಡಿತ ಇಟ್ಕೊಂಡು ನಮ್ಮ ಕುಟುಂಬದ ಬಗ್ಗೆ ಮಾತನಾಡಲಿ ಎಂದು ಜಿಟಿ.ದೇವೇಗೌಡರಿಗೆ ನೇರವಾಗಿ ಎಚ್ಚರಿಕೆ ನೀಡಿದರು.
ನಮ್ಮಕುಟುಂಬದ ಬಗ್ಗೆ ಇವರು ಚರ್ಚೆ ಮಾಡೋದು ಬೇಡ. ನಮ್ಮ ತಂದೆಗೆ ಗೌರವ ಕೊಡೋದನ್ನ ಇವರಿಂದ ಕಲಿಯಬೇಕಿಲ್ಲ.
ನಿಮ್ಮಂತವರನ್ನ ನಂಬೀಯೆ ಪಕ್ಷ ಹೀಗೆ ಆಗಿದೆ. ನಿಮ್ಮಂತವರನ್ನ ಬೆಳೆಸಿದ್ದಕ್ಕೆ ಈ ಪಕ್ಷ ಹೀಗೆ ಆಗಿದೆ ಎಂದು ಎಚ್‌ಡಿಕೆ ಜಿಟಿಡಿ ವಿರುದ್ದ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದದರು.