
ಬೆಂಗಳೂರು(ಏ.02): ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ಯಶವಂತಪುರ ಹಾಗೂ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ಕೈಗೊಂಡು ಮತಯಾಚಿಸಿದರು. ಕಳೆದ ಮಂಗಳವಾರವಷ್ಟೇ ಯಶವಂತಪುರ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಸಿದ್ದ ಕುಮಾರಸ್ವಾಮಿ ಅವರು ಶನಿವಾರ ಮತ್ತೆ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಅವರ ಪರವಾಗಿ ಕ್ಷೇತ್ರದ ಮುದ್ದಯ್ಯನಪಾಳ್ಯ, ಮುನೇಶ್ವರ ದೇವಸ್ತಾನ ಸರ್ಕಲ್, ಉಳ್ಳಾಲ ಉಪನಗರ, ದೊಡ್ಡಬಸ್ತಿ ಸೇರಿದಂತೆ ಕ್ಷೇತ್ರದ 18ಕ್ಕೂ ಹೆಚ್ಚು ಪ್ರದೇಶಗಳಲ್ಲಿ ರಥಯಾತ್ರೆ ಕೈಗೊಂಡು ಬೆಂಬಲಿಸುವಂತೆ ಕೋರಿದರು.
ಮುದ್ದಯ್ಯನ ಪಾಳ್ಯದಲ್ಲಿ ವಿಶೇಷ ಪಂಚರತ್ನ ಹಾರ, ಮಾರುತಿ ನಗರದಲ್ಲಿ ಬೃಹತ್ ಬಾಳೆಕಾಯಿ ಹಾರ ಸೇರಿದಂತೆ ಅನೇಕ ಹಾರಗಳ ಮೂಲಕ ಕುಮಾರಸ್ವಾಮಿ ಅವರನ್ನು ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು, ಮುಖಂಡರು ಬರಮಾಡಿಕೊಂಡರು.
ಹಾಲಿ, ಮಾಜಿ ಶಾಸಕರಿಗೆ ಆತಂಕ ಎದುರಾಗಿದೆ : ಜೆಡಿಎಸ್ ಮುಖಂಡ
ಗೋವಿಂದರಾಜ ನಗರ ಕ್ಷೇತ್ರದಲ್ಲಿ ಬಿರುಸಿನ ಸಂಚಾರ:
ಪಕ್ಷದ ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಅವರು ಅಭ್ಯರ್ಥಿ ಆಗಿರುವ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸಂಜೆ ಪಂಚರತ್ನ ರಥಯಾತ್ರೆ ನಡೆಸಿದ ಕುಮಾರಸ್ವಾಮಿ ಅವರು ಸುಮಾರು ಹತ್ತಕ್ಕೂ ಹೆಚ್ಚು ಪ್ರದೇಶಗಳಲ್ಲಿ ಮತ ಯಾಚನೆ ನಡೆಸಿದರು.
ರಾಜಾಜಿನಗರ 6ನೇ ಬ್ಲಾಕ್‌ನಿಂದ ಗೋವಿಂದರಾಜ ನಗರ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಆರಂಭ ಮಾಡಿದ ಕುಮಾರಸ್ವಾಮಿ ಅವರು ಪ್ರಸನ್ನ ಚಿತ್ರಮಂದಿರ, ಟೋಲ… ಗೇಟ್, ಅಗ್ರಹಾರ ದಾಸರಹಳ್ಳಿ, ಗೋವಿಂದರಾಜ ಸ್ವಾಮಿ ದೇವಾಲಯದ ವೃತ್ತ, ಶೋಭಾ ಆಸ್ಪತ್ರೆ ವೃತ್ತ, ಪಟ್ಟಗಾರ ಪಾಳ್ಯ ಸರ್ಕಲ್, ಮೂಡಲಪಾಳ್ಯ, ನಾಗರಬಾವಿ, ನಾಯಂಡಹಳ್ಳಿ ಮುಂತಾದ ಪ್ರದೇಶಗಳಲ್ಲಿ ಸಂಚಾರ ಮಾಡಿದರು.
ಜೆಡಿಎಸ್ ತೊರೆದು ಬಿಜೆಪಿ ಸೇರಿದ ರಾಮಸ್ವಾಮಿ
ಈ ಕ್ಷೇತ್ರದಲ್ಲಿ ಬೃಹತ್ ಸೇಬಿನ ಹಾರ, ಬೃಹತ್ ಮಲ್ಲಿಗೆ ಹಾರ ಹಾಕಿ ಮಾಜಿ ಮುಖ್ಯಮಂತ್ರಿಗಳನ್ನು ಕಾರ್ಯಕರ್ತರು, ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ರಾಜ್ಯ ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಸೇರಿದಂತೆ ಪಕ್ಷದ ಹಿರಿಯ, ಕಿರಿಯ ಮುಖಂಡರು ಈ ವೇಳೆ ಹಾಜರಿದ್ದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.