ಕುಮಾರಸ್ವಾಮಿಯಿಂದ ಜೆಡಿಎಸ್ ವಿಸರ್ಜನೆಯ ಸವಾಲು..!

By Suvarna News  |  First Published Apr 16, 2022, 8:10 PM IST

• ಕುಮಾರಸ್ವಾಮಿ ಜೆಡಿಎಸ್ ವಿಸರ್ಜನೆಯ ಸವಾಲು..!
• ಅಧಿಕಾರ ಕೊಡಿ ಭರವಸೆ ಈಡೇರಿಸದಿದ್ದರೇ ಜೆಡಿಎಸ್ ವಿಸರ್ಜನೆ ಎಂದ ಹೆಚ್ಡಿಕೆ..!
• ಹೆಚ್ಡಿಕೆ ಸವಾಲು ಕಂಡು ಜೆಡಿಎಸ್ ಮುಖಂಡರೇ ಶಾಕ್..!


ವರದಿ: ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಏ.16):
ನನಗೆ 5 ವರ್ಷ ಅಧಿಕಾರ ಕೊಡಿ, ನಾನು ನೀಡಿದ ಭರವಸೆ ಈಡೇರಿಸದಿದ್ದರೆ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡಿ, ರಾಜಕೀಯದಿಂದಲೇ ದೂರ ಉಳಿಯುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. 

ನಿಮ್ಮ ಭರವಸೆ ಈಡೇರಿಸದಿದ್ದರೇ ಜೆಡಿಎಸ್ ವಿಸರ್ಜನೆ..!
ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವೇದಿಕೆಯಲ್ಲಿ ಮಾತನಾಡಿದ ಕುಮಾರಸ್ವಾಮಿ ಸ್ವತಃ ಜೆಡಿಎಸ್ ಮುಖಂಡರೇ ಬೆಕ್ಕಸಬೆರಗಾಗುವ ಮಾತು ಆಡಿದ್ದಾರೆ. ನನಗೆ 5 ವರ್ಷಗಳ ಕಾಲ ಅಧಿಕಾರ‌ ಕೊಡಿ, ನಿಮ್ಮ ಬೇಡಿಕೆಗಳನ್ನ ಈಡೇರಿಸುವೆ.. ಈಡೇರಿಸದಿದ್ದರೇ ಜೆಡಿಎಸ್ ಪಕ್ಷವನ್ನ ವಿಸರ್ಜನೆ ಮಾಡುತ್ತೇನೆ.. ಇದು ನನ್ನ ಸವಾಲ್ ಎಂದಿದ್ದಾರೆ.. ಕುಮಾರಸ್ವಾಮಿಯವರ ಭಾಷಣ ಕೇಳಿ ಒಂದು ಕ್ಷಣ ವಿಜಯಪುರ-ಬಾಗಲಕೋಟೆ ಜಿಲ್ಲೆ ಜೆಡಿಎಸ್ ನಾಯಕರು ಶಾಕ್ ಆಗಿದ್ದಾರೆ.

Latest Videos

undefined

Hanuman Jayanti: ಯಲಗೂರು ಆಂಜನೇಯ ದರ್ಶನ ಪಡೆದ ಮಾಜಿ ಸಿಎಂ: HDK ಸಾಫ್ಟ್ ಹಿಂದೂತ್ವ ಪ್ರದರ್ಶನ..!

ಅಲ್ಲದೆ ನನಗೆ ಅಧಿಕಾರದ ಆಶೆ ಇಲ್ಲ, ಈ ರಾಜ್ಯದ ಜನರ ಕಣ್ಣೀರು ಒರೆಸಬೇಕೆಂಬ ದೃಷ್ಟಿಯಿಂದ ಎರಡು ಬಾರಿ ಬೇರೆ ಬೇರೆ ಪಕ್ಷಗಳ ಜೊತೆಗೆ ಸೇರಿ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ಹೇಳಿದರು. ರಾಜ್ಯದ ಜನರು ನೆಮ್ಮದಿಯಿಂದ ಜೀವನ ನಡೆಸಬೇಕು ಎನ್ನುವ ದೃಷ್ಟಿಯಿಂದ ಕೆಲವು ವಿಷಯಗಳನ್ನು ಪ್ರಸ್ತಾಪಿಸುತ್ತೇನೆ. ಈ ಭಾಗದ ಜನರ ಬಡತನ ಹೋಗಲಾಡಿಸಲು ಸಾಧ್ಯವಿಲ್ಲವಾ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿಗೆ ಜನರ ಕಣ್ಣೀರು ಒರೆಸುವುದು ಬೇಕಾಗಿಲ್ಲ, ಎರಡು ಪಕ್ಷಗಳು ಕೇವಲ ದುಡ್ಡು ಹೊಡೆಯುವದರಲ್ಲಿ ನಿರತವಾಗಿವೆ ಎಂದು ಹರಿಹಾಯ್ದರು.

ಈ ಯಾತ್ರೆ ಅಧಿಕಾರ ಹಿಡಿಯಲು ಅಲ್ಲ!
ಈ ಜನತಾ ಜಲಧಾರೆ ಯಾತ್ರೆ ಜನರ ನೆಮ್ಮದಿಗಾಗಿ, ರಾಜ್ಯದ ಅಭಿವೃದ್ಧಿಗಾಗಿ. ಹೀಗಾಗಿ ಯಾವುದೇ ಅಧಿಕಾರದ ಆಸೆಯಿಂದ ಯಾತ್ರೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಹಿಂದೆ ದೇವೇಗೌಡರು ಪ್ರಧಾನಿಯಾಗಿದ್ದಾಗ ಹಾಗೂ ಮುಖ್ಯಮಂತ್ರಿ ಆಗಿದ್ದಾಗ ಈ ಭಾಗಕ್ಕೆ ನೀಡಿದ ಕೊಡುಗೆ ಏನು ಎಂಬುದು ಈಗಿನ ಯುವಕರಿಗೆ ಗೊತ್ತಿಲ್ಲ. ಹಿರಿಯರು ಯುವಕರಿಗೆ ಮಾರ್ಗದರ್ಶಮ ಮಾಡಬೇಕು ಎಂದು ಕರೆ ನೀಡಿದರು.  

ಇನ್ನು 70 ವರ್ಷ ಆದ್ರೂ ನೀರು ಬರೋಲ್ಲ..!
ಕಾಂಗ್ರೇಸ್ ಹಾಗೂ ಬಿಜೆಪಿ ಇಲ್ಲಿಯವರೆಗೆ ನೀರಾವರಿಯ ವಿಚಾರ ಕುರಿತು ಏನು ಮಾಡಿಲ್ಲ, ಇವರಿಗೆ ಮತ ನೀಡಿದರೆ ಇನ್ನೂ 70 ವರ್ಷವಾದರೂ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲ್ಲ. ನಾನು ರಾಜ್ಯದ ನೀರಾವರಿಗಾಗಿ ಯೋಜನೆ ರೂಪಿಸಿದ್ದು, ಇದಕ್ಕೆ 5 ರಿಂದ 6 ಲಕ್ಷ ಕೋಟಿ ಯೋಜನೆ ಹಾಕಿಕೊಂಡಿದ್ದೇನೆ. ಇದಕ್ಕಾಗಿ ಈ ಬಾರಿ ಜೆಡಿಎಸ್ ಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.

ಜಾತಿ ಆಧಾರದ ಮೇಲೆ ಮತ ಕೊಡುವುದನ್ನು ನಿಲ್ಲಿಸಿ..!
ಚುನಾವಣೆಯಲ್ಲಿ ಜಾತಿ ಆಧಾರದ ಮೇಲೆ ಮತ ಕೊಡುವುದನ್ನು ನಿಲ್ಲಿಸಬೇಕು, ಯಾರು ಕೆಲಸ ಮಾಡುತ್ತಾರೆ, ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಮತ ಹಾಕಿ. ಜೆಡಿಎಸ್ ಗೆ ನೀಡಿದ ಮತ ಯಾವತ್ತಿಗೂ ವೇಸ್ಟ್ ಆಗಲು ಬಿಡುವುದಿಲ್ಲ ಎಂದು ಹೇಳಿದರು. 

5 ಅಂಶದ ಆಧಾರದ ಮೇಲೆ ಮತ ಕೇಳುತ್ತೇವೆ.!
ಈಗಿರುವ ಎರಡೂ ರಾಷ್ಟ್ರೀಯ ಪಕ್ಷಗಳು ಗುತ್ತಿಗೆದಾರರಿಂದ ಕಮಿಷನ್ ಪಡೆಯುವಲ್ಲಿ ನಿರತವಾಗಿವೆ. ಆದರೆ ಜೆಡಿಎಸ್ ಪಕ್ಷ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಐದು ಅಂಶಗಳ ಆಧಾರದ ಮೇಲೆ ಮತ ಕೇಳುತ್ತೇವೆ. ರಾಜ್ಯದ ಸಮಗ್ರ ನೀರಾವರಿಗೆ 5 ಲಕ್ಷ ಕೋಟಿ ರೂಪಾಯಿ ಮಿಸಲಿಡುತ್ತೇವೆ. 6 ಸಾವಿರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ಪಬ್ಳಿಕ್ ಶಾಲೆ ಮಾದರಿಯಲ್ಲಿ  1 ರಿಂದ 12ನೆ ತರಗತಿ ವರೆಗೆ ಉಚಿತ ಶಿಕ್ಷಣ.ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 30 ಆಕ್ಸಿಜನ್ ಬೆಡ್ ಗಳ ಆಸ್ಪತ್ರೆ ನಿರ್ಮಾಣ. ರಾಜ್ಯದ ಬಡ ಜನರಿಗೆ ಉಚಿತ ಅಂಗಾಂಗಗಳ ಜೋಡಣೆಗೆ ವ್ಯವಸ್ಥೆ. ಅಪೌಷ್ಟಿಕತೆ ನಿವಾರಣೆಗಾಗಿ ರಾಜ್ಯದ ಗರ್ಭಿಣಿಯರಿಗೆ6 ತಿಂಗಿನಿಂದ 1 ವರ್ಷದವರೆಗೆ ಪೌಷ್ಟಿಕ ಆಹಾರ ನೀಡುವ ಯೋಜನೆ ಹಾಕಿಕೊಂಡಿದ್ದೇನೆ ಎಂದು ವಿವರಿಸಿದರು. ಜೊತೆಗೆ ಇನ್ನೆರಡು ತಿಂಗಳಲ್ಲಿ ಎಲ್ಲ ಯೋಜನೆಗೆಳ ಸಮಗ್ರ ವಿವರವನ್ನು ಜನರ, ರೈತರ, ಹೆಣ್ಣುಮಕ್ಕಳ ಮುಂದೆ ಇಡುವುದಾಗಿ ತಿಳಿಸಿದರು.

ಜೆಡಿಎಸ್ ಗೆ ಅವಕಾಶ ಕೊಟ್ಟು ನೋಡಿ..!
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಒಂದು ಅವಕಾಶ ಕೊಟ್ಟು ನೋಡಿ, ಮುಂದಿನ ದಿನಗಳಲ್ಲಿ ಇದೆ ಕೃಷ್ಣೆಯ ನೆಲದಲ್ಲಿ ಇನ್ನೊಂದು ಬೃಹತ್ ಕಾರ್ಯಕ್ರಮ ಮಾಡೋಣ ಎಂದು ಹೇಳಿದರು. 

ವೇದಿಕೆ ಮೇಲೆ ನಾಗಠಾಣ‌ ಜೆಡಿಎಸ್ ಶಾಸಕ ಭಾಷಣ..!
ಇದೆ ವೇಳೆ ಮಾತನಾಡಿದ ಕಾರ್ಯಕ್ರಮದ ರೂವಾರಿ ನಾಗಠಾಣ ಶಾಸಕ ಕುಮಾರಸ್ವಾಮಿಯವರನ್ನು ಗೆಲ್ಲಿಸುವ ಮೂಲಕ ಅವರ ಕೈ ಬಲಪಡಿಸಬೇಕು  ಎಂದು ಮನವಿ ಮಾಡಿದರು.

ಚಂದ್ರಗಿರಿ ಬಳಿ ಹೆಚ್ಡಿಕೆ ಗಂಗಾಪೂಜೆ..!
ಇದಕ್ಕೂ ಮೊದಲು ಜನತಾ ಜಲಧಾರೆ ನಿಮಿತ್ತ ಕೃಷ್ಣೆಯ ತಟದಲ್ಲಿರುವ ಚಂದ್ರಗಿರಿ ಬಳಿ ವಿಶೇಷ ಗಂಗಾಪೂಜೆ ನೆರವೇರಿಸಿದರು. ಅನಂತರ ಕುಮಾರಸ್ವಾಮಿಯವರನ್ನು ಕುಂಭಮೇಳದೊಂದಿಗೆ ಕಾರ್ಯಕ್ರಮ ಸ್ಥಳದವರೆಗೂ  ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ದೇವಾನಂದ ಚವ್ಹಾಣ, ಜೆಡಿಎಸ್ ನಾಯಕಿ ಶ್ರೀಮತಿ ಸುನಿತಾ ಚವ್ಹಾಣ, ಅವಳಿ ಜಿಲ್ಲೆಗಳ ಜೆಡಿಎಸ್ ಜಿಲ್ಲಾಧ್ಯಕ್ಷರು. ಅವಳಿ ಜಿಲ್ಲೆಗಳ 2018ರ ಜೆಡಿಎಸ್ ಅಭ್ಯರ್ಥಿಗಳು ಭಾಗವಹಿಸಿದ್ದರು.

click me!