ಕಾಂಗ್ರೆಸ್‌, ಬಿಜೆಪಿಗೆ ಎಚ್‌.ಡಿ.ಕುಮಾರಸ್ವಾಮಿ 10 ಪ್ರಶ್ನೆ

By Kannadaprabha NewsFirst Published Aug 22, 2020, 11:02 AM IST
Highlights

ಕಾಂಗ್ರೆಸ್ ಹಾಗೂ ಬಿಜೆಪಿ ಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ 10 ಪ್ರಶ್ನೆಗಳನ್ನು ಕೇಳಿದ್ದಾರೆ. ಅದ್ಯಾವ ಪ್ರಶ್ನೆ ಇಲ್ಲಿದೆ..

 ಬೆಂಗಳೂರು (ಆ.22):  ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ಗೆ ಬಹಿರಂಗ ಪತ್ರ ಬರೆದಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಎರಡು ಪಕ್ಷಗಳಿಗೂ ತಲಾ ಐದು ಪ್ರಶ್ನೆಗಳನ್ನು ಕೇಳಿದ್ದಾರೆ.

ಈ ಘಟನೆಯನ್ನೇ ನೆಪ ಮಾಡಿಕೊಂಡು ರಾಷ್ಟ್ರೀಯ ಪಕ್ಷಗಳೆರಡು ಕೆಸರೆರಚಾಟದಲ್ಲಿ ತೊಡಗಿವೆ. ಈ ಮೂಲಕ ಜನರ ಮನಸ್ಸಿನಲ್ಲಿರಬಹುದಾದ ತಮ್ಮ ವಿಶ್ವಾಸಾರ್ಹತೆ, ಉತ್ತರದಾಯಿತ್ವವನ್ನು ಬಿಜೆಪಿ-ಕಾಂಗ್ರೆಸ್‌ ಪಕ್ಷಗಳೆರಡೂ ಕಳೆದುಕೊಂಡು ನಿರ್ವಾಣಗೊಂಡಿವೆ. ಪ್ರತಿ ಘಟನೆಯಲ್ಲೂ ರಾಜಕೀಯ ಧ್ರುವೀಕರಣಕ್ಕೆ ಬೇಕಾಗುವ ಅಂಶಗಳನ್ನು ಹುಡುಕಬೇಕಿದೆ ಎಂದು ಟ್ವೀಟ್‌ ಮೂಲಕ ಕಿಡಿಕಾರಿದ್ದಾರೆ.

ಕಾಂಗ್ರೆಸ್‌ಗೆ ಪ್ರಶ್ನೆಗಳು

* ಅನ್ಯಕೋಮಿನ ಜನರ ಅಪರಾಧ ಪ್ರಕರಣಗಳ ಸಂದರ್ಭದಲ್ಲಿ ಎದ್ದು ನಿಲ್ಲುವ ಕಾಂಗ್ರೆಸ್‌, ಪೌರತ್ವ ತಿದ್ದುಪಡಿ ಕಾಯ್ದೆಯಂತಹ ದುರಿತ ಕಾಲದಲ್ಲಿ ಅಲ್ಪಸಂಖ್ಯಾತರ ರಕ್ಷಣೆಗೆ ಏಕೆ ನಿಲ್ಲಲಿಲ್ಲ? ಮಂಗಳೂರಿನ ಗೋಲಿಬಾರ್‌ ಆಗಿ ಅಲ್ಪಸಂಖ್ಯಾತ ಯುವಕರು ಮೃತಪಟ್ಟಾಗ ಎಲ್ಲಿ ಹೋಗಿತ್ತು ಈ ಕಾಳಜಿ?

* ಗಲಭೆಯಲ್ಲಿ ನಷ್ಟವನ್ನು ಗಲಭೆಕೋರರಿಂದ ಸಂಗ್ರಹಿಸಲು ಹೊರಟ ಸರ್ಕಾರಕ್ಕೆ ಕಾಂಗ್ರೆಸ್‌ ಸಲಹೆಯೊಂದನ್ನು ನೀಡಿದೆ. ಇನ್ನೊಂದು ಕಡೆಯವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಹೇಳಿದೆ. ಹಾಗಾದರೆ ಆ ಇನ್ನೊಂದು ಕಡೆಯವರು ಯಾರು ಎಂದು ಕಾಂಗ್ರೆಸ್‌ ಧೈರ್ಯದಿಂದ ಹೇಳಬಹುದೇ?

* ಎಸ್‌ಡಿಪಿಐ ನಿಷೇಧಿಸುವ ವಿಚಾರ ಬಂದಾಗ ಕಾಂಗ್ರೆಸ್‌ ಸಿಡಿದೆದ್ದು ನಿಲ್ಲುತ್ತದೆ. ತಾಕತ್ತಿದ್ದರೆ ಅದನ್ನು ನಿಷೇಧಿಸಿ ಎಂದು ಆಡಳಿತದಲ್ಲಿರುವವರಿಗೆ ಸವಾಲೆಸೆಯುತ್ತದೆ. ಅದರ ನಿಷೇಧವಾಗುವುದು, ಆಗದೇ ಇರುವುದರಲ್ಲಿ ಕಾಂಗ್ರೆಸ್‌ಗೆ ಏನು ಲಾಭವಿದೆ?

* ಗಲಭೆಯಲ್ಲಿ ಏನೋ ರಾಜಕೀಯ ಷಡ್ಯಂತ್ರವಿದೆ ಎಂಬುದು ಕಾಂಗ್ರೆಸ್‌ ಆರೋಪ. ಆ ಷಡ್ಯಂತ್ರ ಕಾಂಗ್ರೆಸ್‌ ಒಳಗಿನದ್ದೋ, ಹೊರಗಿನದ್ದೋ? ಟಿಕೆಟ್‌ ಆಕಾಂಕ್ಷಿಗಳದ್ದೋ? ಗುಟ್ಟಾಗಿರುವ ಈ ವಿಷಯ ಬಹಿರಂಗಗೊಳಿಸಲು ಕಾಂಗ್ರೆಸ್‌ಗೆ ತಾಕತ್ತು ಇದೆಯೇ?

* ಆಂತರಿಕ ಸಮಸ್ಯೆಯನ್ನು ಗಲಭೆಯಾಗಿ ಪರಿವರ್ತಿಸಿ, ಎರಡು ಕೋಮುಗಳ ನಡುವೆ ಮನಸ್ತಾಪ ತಂದಿಟ್ಟು, ಸಾಮಾಜಿಕ ಸಾಮರಸ್ಯ ಹಾಳು ಮಾಡಿದ ಬಗ್ಗೆ ಕಾಂಗ್ರೆಸ್‌ಗೆ ಸ್ವಲ್ಪವಾದರೂ ಅಳುಕಿದೆಯೇ?

ಬಿಜೆಪಿಗೆ ಪ್ರಶ್ನೆಗಳು

* ಡಿ.ಜೆ.ಹಳ್ಳಿ ಪ್ರಕರಣ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಗೃಹ ಇಲಾಖೆ, ಗುಪ್ತಚರ ಇಲಾಖೆ ಮತ್ತು ಸರ್ಕಾರದ ಅತಿ ದೊಡ್ಡ ವೈಫಲ್ಯ. ಘಟನೆಗೆ ಸಂಬಂಧಿಸಿದಂತೆ ಗೃಹ ಇಲಾಖೆಯ ಯಾವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ?

* ಘಟನೆಯಲ್ಲಿ ಕಾಂಗ್ರೆಸ್ಸಿಗರೇ ದುಷ್ಕೃತ್ಯ ನಡೆಸಿದ್ದಾರೆ. ಕಾಂಗ್ರೆಸ್‌ನ ಕೈವಾಡವಿದೆ ಎಂದು ಬೀದಿಯಲ್ಲಿ ಹೇಳುತ್ತಿರುವ ಬಿಜೆಪಿ ಮುಖಂಡರು ತಮ್ಮ ಬಳಿಯಿರುವ ಕಾಂಗ್ರೆಸ್‌ ವಿರುದ್ಧದ ಸಾಕ್ಷಿಯನ್ನು ತನಿಖಾಧಿಕಾರಿಗಳಿಗೆ ಏಕೆ ಕೊಡಬಾರದು?

* ಗಲಭೆ ಸೃಷ್ಟಿಸಲೆಂದೇ ಅನ್ಯ ರಾಜ್ಯಗಳಿಂದ ಗೂಂಡಾಗಳನ್ನು ಕರೆತರಲಾಗಿತ್ತು ಎಂದು ಬಿಜೆಪಿ ಆರಂಭದಲ್ಲಿ ಹುಯಿಲೆಬ್ಬಿಸಿತು. ಹಾಗಾದರೆ, ಘಟನೆಗೆ ಸಂಬಂಧಿಸಿದಂತೆ ಈವರೆಗೆ ಬಂಧನಕ್ಕೊಳಗಾಗಿರುವ ಅನ್ಯ ರಾಜ್ಯದ ಗೂಂಡಾಗಳು ಎಷ್ಟುಜನ? ಬಂದಿದ್ದೇ ಆದರೆ, ವೈಫಲ್ಯ ಯಾರದ್ದು?

* ದೊಡ್ಡ ಅಂತರದ ಮತಗಳಿಂದ ಗೆದ್ದ ಶಾಸಕನೊಬ್ಬನ ಮನೆಗೆ ರಕ್ಷಣೆ ಮತ್ತು ಪೊಲೀಸ್‌ ಠಾಣೆಗೆ ರಕ್ಷಣೆ ನೀಡಲಾರದಷ್ಟುದುರ್ಬಲವಾಗಿರುವ, ಶಕ್ತಿಹೀನ ಸರ್ಕಾರ ಸಾಮಾನ್ಯರ ಹಿತ ಕಾಯಲು ಶಕ್ತವಾಗಿದೆಯೇ? ಇಲ್ಲವೇ, ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಇಂತಹದ್ದೊಂದು ಗಲಭೆ ಬೇಕಾಗಿತ್ತೇ?

* ಕೋಮು ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನೂಕು ನುಗ್ಗಲಿನಲ್ಲೂ ಮುಂದೆ ಬರುವ ಬಿಜೆಪಿಗೆ ನೈತಿಕ ರಾಜಕಾರಣದ ಅರ್ಥವೇನಾದರೂ ಗೊತ್ತಿದೆಯೇ?

click me!