ದೇವೇಗೌಡರ 91ನೇ ಹುಟ್ಟುಹಬ್ಬ ಸರಳ ಆಚರಣೆ: ರಾಷ್ಟ್ರಪತಿ, ಪ್ರಧಾನಿ ಸೇರಿ ಹಲವು ಗಣ್ಯರಿಂದ ಶುಭಾಶಯ

By Kannadaprabha NewsFirst Published May 19, 2023, 2:20 AM IST
Highlights

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು 91ನೇ ವರ್ಷದ ಹುಟ್ಟುಹಬ್ಬವನ್ನು ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಸರಳವಾಗಿ ಆಚರಿಸಿಕೊಂಡರು. 

ಬೆಂಗಳೂರು (ಮೇ.19): ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು 91ನೇ ವರ್ಷದ ಹುಟ್ಟುಹಬ್ಬವನ್ನು ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಸರಳವಾಗಿ ಆಚರಿಸಿಕೊಂಡರು. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್‌ ಕುಮಾರಸ್ವಾಮಿ ಮತ್ತು ದೇವೇಗೌಡ ಅವರ ಪುತ್ರಿಯರು ಸೇರಿದಂತೆ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕೇಕ್‌ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ದೇವೇಗೌಡರು ಜೆ.ಪಿ.ನಗರದಲ್ಲಿನ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಈ ನಡುವೆ, ದೇವೇಗೌಡ ಅವರ ಜನ್ಮದಿನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮತ್ತವರ ಕುಟುಂಬ ಸದಸ್ಯರು, ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದರು. ಈ ವೇಳೆ ಮಾತನಾಡಿದ ದೇವೇಗೌಡ, ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲಾಗಿದೆ. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ಮತ್ತು ರಾಜ್ಯ ಸುಭಿಕ್ಷವಾಗಿರಲಿ ಎಂದು ಆಶಿಸಿದರು.

Latest Videos

ಕಳಂಕ ತರುವವರ ಮೇಲೆ ಹದ್ದಿನ ಕಣ್ಣು: ಬಾಲಚಂದ್ರ ಜಾರಕಿಹೊಳಿ ಎಚ್ಚರಿಕೆ

ಹಂಗಾಮಿ ಸಿಎಂ ಬೊಮ್ಮಾಯಿ ಶುಭಾಶಯ: ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಚಿವರಾದ ಗೋವಿಂದ ಕಾರಜೋಳ, ಆರ್‌.ಅಶೋಕ್‌ ಮತ್ತಿತರರ ಜತೆ ದೇವೇಗೌಡ ನಿವಾಸಕ್ಕೆ ತೆರಳಿ ಹೂಗುಚ್ಛ ನೀಡಿ ಶುಭಾಶಯ ತಿಳಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ನಮ್ಮ ಹಿರಿಯರು ಮತ್ತು ನಾಡಿಗೆ ಅವರು ಹಿರಿಯರು. ಅವರ ಮಾರ್ಗದರ್ಶನ ಎಲ್ಲರಿಗೂ ಇತ್ತು. ನಮಗೂ ಸಹ ನೀಡಿದ್ದರು. ಎಲ್ಲರೂ ಶುಭಾಶಯ ಕೋರಿದ್ದೇವೆ ಎಂದರು.

ಪ್ರಧಾನಿ ಮೋದಿ ಟ್ವೀಟ್‌: ನಮ್ಮ ದೇಶಕ್ಕೆ ದೇವೇಗೌಡರ ಕೊಡುಗೆ ಗಮನಾರ್ಹವಾಗಿದೆ. ಅವರು ಆರೋಗ್ಯವಂತರಾಗಿ ದೀರ್ಘಕಾಲ ಜೀವಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ. ಇದರ ಜತೆಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್‌.ಯಡಿಯೂರಪ್ಪ, ಲೋಕಸಭೆ ಸಭಾಧ್ಯಕ್ಷ ಓಂ ಬಿರ್ಲಾ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಸೇರಿದಂತೆ ಹಲವು ನಾಯಕರು ಶುಭ ಕೋರಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸುವೆ: ಆನಂದ್ ಆಸ್ನೋಟಿಕರ್

ಮನೆ ಮುಂದೆ ಹುಟ್ಟುಹಬ್ಬ ಆಚರಣೆ: ಪದ್ಮನಾಭನಗರ ನಿವಾಸದ ಎದುರು ಜೆಡಿಎಸ್‌ ಮುಖಂಡರು ತಂದಿದ್ದ ಕೇಕ್‌ ಕತ್ತರಿಸಿ ದೇವೇಗೌಡರು ಕಾರ್ಯಕರ್ತರು ಮತ್ತು ನಾಯಕರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ರಾಜ್ಯಸಭಾ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ, ಬೆಂಗಳೂರು ಜೆಡಿಎಸ್‌ ಅಧ್ಯಕ್ಷ ರಮೇಶ್‌ಗೌಡ ಶುಭಾಶಯ ಕೋರಿದರು. ಪಕ್ಷದ ನೂತನ ಶಾಸಕ ಕರೆಮ್ಮ ಅವರು ಸಹ ಪದ್ಮನಾಭನಗರಕ್ಕೆ ಬಂದು ದೇವೇಗೌಡ ಅವರಿಗೆ ಶುಭಾಶಯ ತಿಳಿಸಿದರು. ಇದೇ ವೇಳೆ ಕೇರಳ ರಾಜ್ಯದ ಜೆಡಿಎಸ್‌ ಪಕ್ಷದ ಮುಖಂಡ ಕೃಷ್ಣಕುಟ್ಟಿಅವರು ಸಹ ಆಗಮಿಸಿ ಶುಭಾಶಯ ತಿಳಿಸಿದರು. ಇದೇ ವೇಳೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಆಸ್ಪತ್ರೆಯಲ್ಲಿ ಹಣ್ಣುಹಂಪಲು ಹಂಚಿದರು. ದೇವಸ್ಥಾನದಲ್ಲಿ ಪೂಜೆ, ಅನ್ನದಾನ ನೆರವೇರಿಸಿದರು.

click me!