
ಬೆಂಗಳೂರು (ಮೇ.19): ಸತತ ಆರು ದಿನಗಳ ಹರಸಾಹಸ ಹಾಗೂ ಅಂತಿಮವಾಗಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರ ಮಧ್ಯಸ್ಥಿಕೆ ಪರಿಣಾಮ ಕರ್ನಾಟಕ ಮುಖ್ಯಮಂತ್ರಿ ಹುದ್ದೆ ದಂಗಲ್ ಸುಖಾಂತ್ಯಗೊಂಡಿದ್ದು, ಕರುನಾಡಿನ 31ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಆಯ್ಕೆಯಾಗಿದ್ದಾರೆ. ಶನಿವಾರ ಮಧ್ಯಾಹ್ನ 12.30ಕ್ಕೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಬೃಹತ್ ಸಮಾರಂಭದಲ್ಲಿ ಉಭಯ ನಾಯಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಹಿಮಾಚಲ ಪ್ರದೇಶದ ಶಿಮ್ಲಾದಿಂದ ಬುಧವಾರ ತಡರಾತ್ರಿ ಸೋನಿಯಾ ಗಾಂಧಿ ಅವರು ಮಾಡಿದ ವಿಡಿಯೋ ಕಾಲ್ ಹಾಗೂ ಉಭಯ ನಾಯಕರೊಂದಿಗೆ ನಡೆಸಿದ ಮಾತುಕತೆ ಈ ದಂಗಲ್ ತಾರ್ಕಿಕ ಅಂತ್ಯ ಕಾಣುವಂತೆ ಮಾಡಿದೆ. ಐದು ದಿನ ದೆಹಲಿಯಲ್ಲೇ ಇದ್ದರೂ ಪರಸ್ಪರ ಭೇಟಿಯಾಗದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಗುರುವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಸ್ವ ಗೃಹದಲ್ಲಿ ಉಪಾಹಾರ ಸಭೆಯಲ್ಲಿ ಜತೆಗೂಡಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ನೀಡುವಂತೆ ಮಾಡಲಾಯಿತು.
ಗ್ಯಾಸ್ ದರ ಹೆಚ್ಚಳದಿಂದ ಹಲವು ನಾಯಕರ ಸೋಲು: ಶಾಸಕ ಶಿವರಾಮ ಹೆಬ್ಬಾರ್
ಇದಾದ ನಂತರ ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಕಿಕ್ಕಿರಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹಾಗೂ ಡಿ.ಕೆ.ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಲಿರುವುದನ್ನು ಅಧಿಕೃತವಾಗಿ ಪ್ರಕಟಿಸಿದರು. ಇದೇ ವೇಳೆ ಶಿವಕುಮಾರ್ ಅವರು ಏಕೈಕ ಡಿಸಿಎಂ ಆಗಿ ನೂತನ ಸಂಪುಟ ಸೇರ್ಪಡೆಯಾಗಲಿದ್ದಾರೆ ಮತ್ತು ಲೋಕಸಭಾ ಚುನಾವಣೆ ವೇಳೆವರೆಗೂ ಅವರೇ ಕೆಪಿಸಿಸಿ ಅಧ್ಯಕ್ಷರಾಗಿರುತ್ತಾರೆ ಎಂದೂ ಘೋಷಿಸಿದರು.
ಸಿಎಂ ಹುದ್ದೆ 2.5 ವರ್ಷ: ಸಂಧಾನ ಸೂತ್ರದಿಂದ ವಿಮುಖರಾಗಿದ್ದ ಉಭಯ ನಾಯಕರನ್ನು ಒಗ್ಗೂಡಿಸಿದ್ದರೂ ಅಧಿಕಾರ ಹಂಚಿಕೆಯ ವಿವರವೇನು ಎಂಬ ಗುಟ್ಟನ್ನು ಈ ವೇಳೆ ಹೈಕಮಾಂಡ್ ಬಿಟ್ಟುಕೊಡಲಿಲ್ಲ. ಆದರೆ, ಕಾಂಗ್ರೆಸ್‌ನ ಉನ್ನತ ಮೂಲಗಳ ಪ್ರಕಾರ ಷರತ್ತುಗಳನ್ನು ಒಳಗೊಂಡ ಸೂತ್ರದ ಮೂಲಕ ಈ ದಂಗಲ್ ಸುಖಾಂತ್ಯ ಕಂಡಿದೆ. ಅದರಲ್ಲಿ ಮುಖ್ಯವಾಗಿ ಮುಖ್ಯಮಂತ್ರಿ ಹುದ್ದೆಯ ಅಧಿಕಾರಾವಧಿಯು ಉಭಯ ನಾಯಕರ ನಡುವೆ ತಲಾ ಎರಡೂವರೆ ವರ್ಷದಂತೆ ಹಂಚಿಕೆಯಾಗಿದೆ. ಮೊದಲ ಅವಧಿಗೆ ಸಿದ್ದರಾಮಯ್ಯ ಹಾಗೂ ನಂತರದ ಅವಧಿಗೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವರು.
ಮೊದಲ ಅವಧಿ ಪೂರ್ಣಗೊಂಡ ನಂತರ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟುಕೊಡುವಂತೆ ಮಾಡುವ ಹೊಣೆಯು ಹೈಕಮಾಂಡ್‌ಗೆ ಅದರಲ್ಲೂ ಮುಖ್ಯವಾಗಿ ಸೋನಿಯಾ ಗಾಂಧಿ ಅವರ ಹೆಗಲೇರಿದೆ. ಇದರ ಜತೆಗೆ ಡಿ.ಕೆ. ಶಿವಕುಮಾರ್ ಅವರಿಗೆ ಎರಡು ಪ್ರಮುಖ ಖಾತೆಗಳನ್ನು ನೀಡುವ ಮತ್ತು ಸಚಿವ ಸಂಪುಟಕ್ಕೆ ಯಾರು ಸೇರಬೇಕು ಎಂಬುದನ್ನು ಉಭಯ ನಾಯಕರು ಹೈಕಮಾಂಡ್‌ನೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನಿಸುವ ನಿರ್ಣಯಕ್ಕೆ ಬರಲಾಗಿದೆ. ತನ್ಮೂಲಕ ಸಂಧಾನಕ್ಕೆ ಸೋನಿಯಾ ಮಧ್ಯಪ್ರವೇಶವಾಗಬೇಕು ಎಂಬ ಡಿ.ಕೆ. ಶಿವಕುಮಾರ್ ಬೇಡಿಕೆ ಈಡೇರಿದೆ. ಆದರೆ, ಅಧಿಕಾರ ಹಸ್ತಾಂತರ ಸೂತ್ರದ ಬಹಿರಂಗ ಘೋಷಣೆಯಾಗಬೇಕು ಎಂಬ ಷರತ್ತು ಈಡೇರಿಲ್ಲ.
ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಇಡೀ ಪ್ರಹಸನ ಇತ್ಯರ್ಥಕ್ಕಾಗಿ ವೀಕ್ಷಕರಾದ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರು, ತಾವು ಪಕ್ಷದ ಅಧ್ಯಕ್ಷನಾಗಿ ಚುನಾವಣೆಯಲ್ಲಿ ಗೆದ್ದ ನಂತರ ಮುಖ್ಯಮಂತ್ರಿಯಾಗದ ಘಟನೆ ನೆನೆದು ‘ಆಗಿನ ಸಂದರ್ಭದಲ್ಲಿ ನಾನು ತ್ಯಾಗ ಮಾಡಿದೆ. ನಂತರ ನನಗೂ ಸಿಎಂ ಆಗುವ ಯೋಗ ದೊರಕಿತು. ಅದೇ ರೀತಿ ಈಗ ಕರ್ನಾಟಕದಲ್ಲಿ ಶಿವಕುಮಾರ್ ತ್ಯಾಗ ಮಾಡಿದ್ದಾರೆ. ಅವರಿಗೂ ಮುಂದೆ ದೊಡ್ಡ ಹುದ್ದೆ ಸಿಗಲಿದೆ’ ಎನ್ನುವ ಮೂಲಕ ಭವಿಷ್ಯದಲ್ಲಿ ಉನ್ನತ ಹುದ್ದೆಯ ಯೋಗ ಶಿವಕುಮಾರ್‌ಗೂ ಇದೇ ಎಂದು ಪರೋಕ್ಷವಾಗಿ ಹೇಳಿದರು.
ಇನ್ನು ಹೈಕಮಾಂಡ್‌ನೊಂದಿಗಿನ ಸಂಧಾನ, ಸಮಾಲೋಚನೆ ವೇಳೆ ಡಿಸಿಎಂ ಹುದ್ದೆಯನ್ನು ಒಕ್ಕಲಿಗ ಮಾತ್ರವಲ್ಲದೆ, ಲಿಂಗಾಯತ, ಪರಿಶಿಷ್ಟಹಾಗೂ ಮುಸ್ಲಿಂ ಸಮುದಾಯಗಳಿಗೂ ನೀಡಬೇಕು ಎಂಬ ಸಿದ್ದರಾಮಯ್ಯ ಅವರ ಒತ್ತಡಕ್ಕೆ ಹೈಕಮಾಂಡ್ ಮಣೆ ಹಾಕಿಲ್ಲ ಎನ್ನಲಾಗಿದೆ. ಉಭಯ ನಾಯಕರು ಈ ಸಂಧಾನ ಸೂತ್ರಕ್ಕೆ ಒಪ್ಪಿದ ನಂತರ ಉಳಿದ ಪ್ರಕ್ರಿಯೆ ಆರಂಭಗೊಂಡಿದ್ದು, ಗುರುವಾರ ಸಂಜೆ ನಗರದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಸಮಾವೇಶಗೊಂಡು ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಒಮ್ಮತದ ಮೂಲಕ ಆಯ್ಕೆ ಮಾಡಲಾಯಿತು.
ನಂತರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಬಹುಮತದ ಪ್ರಸ್ತಾವನೆ ಮಂಡಿಸಿ, ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ಕೋರಿತು. ಶನಿವಾರ ಮಧ್ಯಾಹ್ನ 12.30ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮಕ್ಕೆ ದೇಶದಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಕಾಂಗ್ರೆಸ್ ಪಕ್ಷದೊಂದಿಗೆ ಹೊಂದಾಣಿಕೆ ಹೊಂದಿರುವ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ಆಹ್ವಾನವನ್ನು ಕೆಪಿಸಿಸಿ ನೀಡಿದೆ.
30:30 ಅಧಿಕಾರ ಹಂಚಿಕೆ?: ಪೂರ್ಣಾವಧಿಗೆ ಸಿದ್ದು ಸಿಎಂ, ಡಿಕೆಶಿ ಡಿಸಿಎಂ ಆಗಿರುತ್ತಾರೋ? ಇಬ್ಬರ ನಡುವೆ ಅಧಿಕಾರ ಹಂಚಿಕೆ ಆಗಿದೆಯಾ ಎಂಬುದರ ಬಗ್ಗೆ ಯಾವುದೇ ಕಾಂಗ್ರೆಸ್ ನಾಯಕರು ತುಟಿಪಿಟಿಕ್ ಎಂದಿಲ್ಲ. ಆದರೆ, ಬಲ್ಲಮೂಲಗಳ ಪ್ರಕಾರ ಇಬ್ಬರೂ ನಾಯಕರ ನಡುವೆ ತಲಾ 2.5 ವರ್ಷಗಳ (ತಲಾ 30 ತಿಂಗಳು) ಅಧಿಕಾರ ಹಂಚಿಕೆ ಬಗ್ಗೆ ಒಪ್ಪಿಗೆ ಆಗಿದೆ.
ನಾಳೆ 5 ಗ್ಯಾರಂಟಿ ಪ್ರಕಟ?: ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಗಳಲ್ಲೊಂದು ಎಂದು ಬಣ್ಣಿಸಲಾಗಿರುವ 5 ಗ್ಯಾರಂಟಿಗಳ ಬಗ್ಗೆ ನಾಳೆಯೇ ಘೋಷಣೆ ಆಗುವ ನಿರೀಕ್ಷೆ ಇದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸುತ್ತಿದ್ದಂತೆ ಸಂಪುಟ ಸಭೆ ನಡೆಸಲಿದ್ದು, ಬಳಿಕ ಈ ಬಗ್ಗೆ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಪ್ರತಿ ಮನೆಗೆ ಬಿಪಿಎಲ್ ಕಾರ್ಡಿಗೆ ಮಾಸಿಕ 10 ಕೆ.ಜಿ. ಅಕ್ಕಿ, 200 ಯುನಿಟ್ ಉಚಿತ ವಿದ್ಯುತ್, ಮನೆಯ ಯಜಮಾನಿಗೆ ಮಾಸಿಕ 2000 ರು., ಮಹಿಳೆಯರಿಗೆ ಉಚಿತ ಬಸ್ ಪಾಸ್, ನಿರುದ್ಯೋಗಿಗಳಿಗೆ 3500 ರು.ವರೆಗೆ ಸಹಾಯಧನದ ಭರವಸೆಯನ್ನು ಕಾಂಗ್ರೆಸ್ ಚುನಾವಣೆಗೆ ಮುನ್ನ ನೀಡಿತ್ತು.
ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಸೋಲಿನ ಹೊಣೆ ನಾನೇ ಹೊರುತ್ತೇನೆಂದ ಮಾಜಿ ಶಾಸಕ ಕೆ.ಜಿ.ಬೋಪಯ್ಯ
ಸಂಧಾನ ಹೇಗಾಯ್ತು?
- ರಾಹುಲ್, ಖರ್ಗೆ ಸೇರಿ ಕಾಂಗ್ರೆಸ್ ಹೈಕಮಾಂಡ್‌ನ ಯಾವೊಬ್ಬ ನಾಯಕರಿಂದಲೂ ಸಿದ್ದು, ಡಿಕೆಶಿ ಮನವೊಲಿಕೆ ಸಾಧ್ಯವಾಗದೆ ಕಗ್ಗಂಟು
- ತಾವು ಏಕೈಕ ಡಿಸಿಎಂ, ತಾವು ಹೇಳಿದವರಿಗೆ ಸಚಿವ ಸ್ಥಾನ, ಕೆಪಿಸಿಸಿ ಅಧ್ಯಕ್ಷತೆ ಮುಂದುವರಿಕೆ, ನಿಗದಿತ ಅವಧಿ ಬಳಿಕ ತಮಗೆ ಸಿಎಂ ಹುದ್ದೆ
- ಇದಿಷ್ಟು ಖಾತ್ರಿಯಾಗಿ ಬಹಿರಂಗ ಘೋಷಣೆ ಆಗಬೇಕು. ಸೋನಿಯಾ ಅವರೇ ಈ ಹೊಣೆ ಹೊರಬೇಕು ಎಂಬ ಸೂತ್ರಕ್ಕೆ ಡಿಕೆಶಿ ಬಿಗಿಪಟ್ಟು
- ಡಿಸಿಎಂ ಬಗ್ಗೆ ಒಲವು ತೋರದ ಸಿದ್ದು. ಡಿಸಿಎಂ ಮಾಡುವುದೇ ಆದಲ್ಲಿ, ಒಕ್ಕಲಿಗ, ಲಿಂಗಾಯತ, ಪರಿಶಿಷ್ಟ, ಮುಸ್ಲಿಂ ಪ್ರಾತಿನಿಧ್ಯಕ್ಕೆ ಪಟ್ಟು
- ಬಿಕ್ಕಟ್ಟು ಶಮನಕ್ಕೆ ಸೋನಿಯಾಗೆ ಮೊರೆ. ಸಿದ್ದು, ಡಿಕೆಶಿ ಜತೆ ಸೋನಿಯಾ ಪ್ರತ್ಯೇಕ ವಿಡಿಯೋ ಸಂವಾದ. ತಡರಾತ್ರಿ 1ಕ್ಕೆ ಕಗ್ಗಂಟಿಗೆ ತೆರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.