ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿರುವುದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೇ ಪ್ರೇರಣೆ ಎಂದು ಜೆಡಿಎಸ್‌ನ ಟಿ.ಎ.ಶರವಣ ಹೇಳಿದ್ದಾರೆ.
ಬೆಂಗಳೂರು (ಜು.14): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿರುವುದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೇ ಪ್ರೇರಣೆ ಎಂದು ಜೆಡಿಎಸ್‌ನ ಟಿ.ಎ.ಶರವಣ ಹೇಳಿದ್ದಾರೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದರು. ಆಗಲೇ ಅಕ್ಕಿ ನೀಡುವ ಯೋಜನೆ ಜಾರಿಗೊಳಿಸುವಂತೆ ದೇವೇಗೌಡ ಅವರು ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದರು. ಅದರ ಭಾಗವಾಗಿ 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದರು ಎಂದರು.
ಈ ಬಾರಿಯ ಚುನಾವಣೆಗೂ ಮುನ್ನ ರಾಜ್ಯ ಸರ್ಕಾರದಿಂದ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ನೀಡುವುದಾಗಿ ತಿಳಿಸಿದ್ದರು. ಈಗ ರಾಜ್ಯ ಸರ್ಕಾರದಿಂದ 5 ಕೆಜಿ ಹಾಗೂ ಕೇಂದ್ರ ಸರ್ಕಾರ ನೀಡುವ 5 ಕೆಜಿ ಸೇರಿ ಒಟ್ಟು 10 ಕೆಜಿ ನೀಡುವುದಾಗಿ ಹೇಳಲಾಗುತ್ತಿದೆ. ಅದರ ಬದಲು ಒಟ್ಟು 15 ಕೆಜಿ ಅಕ್ಕಿ ನೀಡಬೇಕು. ಅಲ್ಲದೆ ಅಕ್ಕಿ ಬದಲಿಗೆ ದುಡ್ಡು ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅದರ ಬದಲು ಸಿರಿಧಾನ್ಯ, ಬೇಳೆ, ಎಣ್ಣೆ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ‘ಸರ್ಕಾರ ರಾಜ್ಯಪಾಲರಿಂದ ಸುಳ್ಳುಗಳನ್ನು ಹೇಳಿಸಿದೆ. ಗ್ಯಾರಂಟಿ ಯೋಜನೆಗಳಲ್ಲಿ ಒಂದೂ ಯೋಜನೆಯನ್ನೂ ಸಮರ್ಪಕವಾಗಿ ಜಾರಿಗೊಳಿಸಿಲ್ಲ.
ಬೆಂ-ಮೈ ಹೈವೇನಲ್ಲಿ ಅಪಘಾತ ತಡೆಗೆ ಕ್ರಮವಹಿಸಿ: ಸಂಸದ ಸುರೇಶ್ ಸೂಚನೆ
ಗೃಹ ಜ್ಯೋತಿ ಯೋಜನೆ ಪಡೆಯಲು ಷರತ್ತುಗಳನ್ನು ವಿಧಿಸಲಾಗಿದೆ. ಗೃಹಲಕ್ಷ್ಮೇ, ಯುವನಿಧಿ ಯೋಜನೆಗಳಿಗೆ ಇನ್ನೂ ಚಾಲನೆಯನ್ನೇ ನೀಡಿಲ್ಲ. ಶಕ್ತಿ ಯೋಜನೆ ವ್ಯವಸ್ಥಿತವಾಗಿಲ್ಲ. ರಾಜ್ಯ ಸರ್ಕಾರ ಮೂಗಿಗೆ ಬದಲಿಗೆ ನೆತ್ತಿಗೆ ತುಪ್ಪ ಸವರುವ ಕೆಲಸ ಮಾಡಿದೆ’ ಎಂದು ಆರೋಪಿಸಿದರು. ‘ಇದೀಗ ಐದು ಗ್ಯಾರಂಟಿಗಳ ಜತೆಗೆ ಆರನೇ ಗ್ಯಾರಂಟಿ ನೀಡುವ ಪ್ರಯತ್ನ ಆರಂಭವಾಗಿದೆ. ನಮ್ಮ ಪಕ್ಷದ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ವರ್ಗಾವಣೆಯ ದರಪಟ್ಟಿಯನ್ನು ಪ್ರದರ್ಶಿಸಿದ್ದಾರೆ. ಆ ಬಗ್ಗೆ ನಾನು ಈಗ ಹೆಚ್ಚು ಮಾತನಾಡಲು ಹೋಗುವುದಿಲ್ಲ’ ಎಂದು ಟಾಂಗ್ ನೀಡಿದರು.
ಎರವಲು ಸೇವೆ ಮೇಲೆ ಎಚ್‌ಡಿಕೆ, ಸವದಿ ವ್ಯಂಗ್ಯ: ‘ಸ್ವಲ್ಪ ದಿನ ಕಾಯಿರಿ, ಸದ್ಯಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿಪಕ್ಷ ನಾಯಕರಾಗಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಆಮೇಲೆ ಎರವಲು ಸೇವೆಯ ಮೇಲೆ ಪ್ರತಿಪಕ್ಷ ನಾಯಕರಾಗಿ ಬರಲಿದ್ದಾರೆ’. ಬುಧವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಜೆಡಿಎಸ್ ಸದಸ್ಯ ಜಿ.ಟಿ.ದೇವೇಗೌಡ ಅವರನ್ನು ಕಾಂಗ್ರೆಸ್ ಸದಸ್ಯ ಲಕ್ಷ್ಮಣ್ ಸವದಿ ಕಿಚಾಯಿಸಿದ್ದು ಹೀಗೆ. ಈ ವೇಳೆ ಬಿಜೆಪಿ ಸದಸ್ಯರು ಪ್ರತಿಭಟನೆಯಲ್ಲಿ ನಿರತರಾಗಿದ್ದರಿಂದ ಸದನದಲ್ಲಿ ಗೈರಾಗಿದ್ದರು.
ಜಿ.ಟಿ. ದೇವೇಗೌಡ ಅವರು ಮಾತನಾಡುತ್ತಿದ್ದ ವೇಳೆ, ‘ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಯಾಕೆ ಕೆಳಗಿಳಿಸಿದರು ಎಂಬುದು ಯಾರಿಗೂ ಗೊತ್ತಿಲ್ಲ. ಬಹುಶಃ ಲಕ್ಷ್ಮಣ್ ಸವದಿಗೆ ಗೊತ್ತಿದೆ. ಇನ್ನು ಬಿಜೆಪಿಯವರು ವಿರೋಧ ಪಕ್ಷದ ನಾಯಕನ್ನೇ ಆಯ್ಕೆ ಮಾಡಿಲ್ಲ’ ಎಂದು ಲೇವಡಿ ಮಾಡಿ ಅವರನ್ನು ಮಾತಿಗೆಳೆದರು. ಆಗ ಸವದಿ, ‘ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ವಿಷಯ ಕುರಿತು ನನಗಿಂತಲೂ ನಿಮಗೆ (ಜಿ.ಟಿ.ದೇವೇಗೌಡ) ಹೆಚ್ಚಿನ ಮಾಹಿತಿ ಇದೆ. ಆದರೆ ಅದನ್ನು ಹೇಳುತ್ತಿಲ’ ಎಂದು ಕಾಲೆಳೆದರು.
ವರ್ಗಾವಣೆ ರೇಟ್‌ಕಾರ್ಡ್: ಕುಮಾರಸ್ವಾಮಿ-ಚೆಲುವರಾಯಸ್ವಾಮಿ ವಾಗ್ವಾದ
‘ಇನ್ನು ಸ್ವಲ್ಪ ದಿನ ಸುಮ್ಮನಿದ್ದು ಕಾಯಿರಿ. ಪ್ರತಿಪಕ್ಷ ನಾಯಕನ ಸ್ಥಾನ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಬಿಜೆಪಿಯಲ್ಲಿ ಕಚ್ಚಾಡುತ್ತಿದ್ದು, ಯಾರಿಗೂ ಪ್ರತಿಪಕ್ಷ ನಾಯಕನ ಸ್ಥಾನ ಸಿಗುವುದಿಲ್ಲ. ಹೀಗಾಗಿ ಸದನದಲ್ಲಿ ಪ್ರತಿಪಕ್ಷ ನಾಯಕನ ಕುರ್ಚಿಯಲ್ಲಿ ಯಾರೂ ಕುಳಿತುಕೊಳ್ಳುತ್ತಿಲ್ಲ. ಕುಮಾರಸ್ವಾಮಿ ಅವರೇ ಪ್ರತಿಪಕ್ಷ ನಾಯಕನಾಗಿ ಒಳ್ಳೆಯ ಕೆಲಸ ಮಾಡುತ್ತಾರೆ. ಆ ಮೇಲೆ ಬಿಜೆಪಿಯವರಿಗೆ ಬಿಟ್ಟುಕೊಡುತ್ತಾರೆ. ಎರವಲು ಸೇವೆಯ ಮೇಲೆ ಪ್ರತಿಪಕ್ಷ ನಾಯಕನ ಸ್ಥಾನ ಹಂಚಿಕೆಯಾಗಲಿದೆ’ ಎಂದರು.