
ವಿಧಾನಸಭೆ (ಜು.14): ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಇಲಾಖೆಯೊಂದರ ವರ್ಗಾವಣೆ ದರಪಟ್ಟಿ ವಿಚಾರವನ್ನು ಪ್ರಸ್ತಾಪಿಸಿದ ಬೆನ್ನಲ್ಲೇ ಇದೀಗ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಜೆಡಿಎಸ್ ಸರ್ಕಾರದ ಅವಧಿಯಲ್ಲೂ ರೇಟ್‌ಕಾರ್ಡ್ ಇತ್ತು ಎಂದು ಸದನದಲ್ಲೇ ಆರೋಪಿಸಿದ್ದು, ಇದಕ್ಕೆ ತಾವು ಮುಖ್ಯಮಂತ್ರಿಯಾಗಿದ್ದಾಗ ವರ್ಗಾವಣೆಗೆ ಹಣ ಪಡೆದಿದ್ದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಕುಮಾರಸ್ವಾಮಿ ಸವಾಲು ಹಾಕಿದ ಘಟನೆ ನಡೆಯಿತು.
ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡುವ ಸಂದರ್ಭದಲ್ಲಿ ಮಾತನಾಡಿದ ಚಲುವರಾಯಸ್ವಾಮಿ ಅವರು, ‘ಎಚ್.ಡಿ. ಕುಮಾರಸ್ವಾಮಿ ಅವರು ಬುಧವಾರ ಸದನದಲ್ಲಿ ವರ್ಗಾವಣೆಗೆ ಸಂಬಂಧಿಸಿದಂತೆ ಯಾವುದೋ ರೇಟ್‌ಕಾರ್ಡ್ ಪ್ರದರ್ಶಿಸಿದರು. ಆದರೆ, ಅದನ್ನು ತಮಗೆ ನೀಡಲೇ ಇಲ್ಲ. ಅವರೇ ತೆಗೆದುಕೊಂಡು ಹೋದರು. ಕೊನೆಗೆ ಪತ್ರಿಕೆಗಳಲ್ಲಿ ಅದು ಮುದ್ರಣವಾಗಿದೆ’ ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಎಚ್.ಡಿ. ಕುಮಾರಸ್ವಾಮಿ, ‘ನೀವು ಅದನ್ನು ಕೇಳಲಿಲ್ಲ, ನಾನು ಕೊಡಲಿಲ್ಲ. ಪತ್ರಿಕೆಗಳಲ್ಲಿ ಅದು ಪ್ರಕಟವಾದರೆ ಅದಕ್ಕೆ ನಾನು ಹೊಣೆಯಲ್ಲ’ ಎಂದರು.
ರಾಜ್ಯದಲ್ಲಿ 46 ಸಾವಿರ ರೌಡಿಶೀಟರ್‌ಗಳು: ಸಚಿವ ಪರಮೇಶ್ವರ್ ಮಾಹಿತಿ
ಆಗ ಚೆಲುವರಾಯಸ್ವಾಮಿ ಅವರು, ‘2018ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ವರ್ಗಾವಣೆ ರೇಟ್‌ಕಾರ್ಡ್ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅಧಿಕಾರಿಗಳ ಹುದ್ದೆಯನ್ನಾಧರಿಸಿ 1 ಕೋಟಿಯಿಂದ 10 ಕೋಟಿ ರು.ವರೆಗೆ ದರ ನಿಗದಿ ಮಾಡಲಾಗಿತ್ತು. ಐಎಂಎ ಹಗರಣದಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಐಎಎಸ್ ಅಧಿಕಾರಿ ವಿಜಯ್‌ಶಂಕರ್ ಅವರಿಗೆ ಕೆಪಿಎಸ್ಸಿ ಕಾರ್ಯದರ್ಶಿ ಹುದ್ದೆಯ ಆಶ್ವಾಸನೆ ನೀಡಿದ್ದರು. ಮಂಡ್ಯ ಮೂಲದ ಈ ನಿವೃತ್ತರಾಗಿರುವ ಕೆಎಎಸ್ ಅಧಿಕಾರಿಯೊಬ್ಬರನ್ನು ಒಂದೇ ವರ್ಷದಲ್ಲಿ 7 ಬಾರಿ ವರ್ಗಾವಣೆ ಮಾಡಿದ್ದರು. ಮುಖ್ಯಮಂತ್ರಿಗಳು ಒಪ್ಪಿದರೆ ಅವರ ಕಾಲದಲ್ಲಿ ಆಗಿರುವ ವರ್ಗಾವಣೆಯ ಪಟ್ಟಿಯೂ ಬಿಡುಗಡೆ ಮಾಡುವೆ’ ಎಂದು ಗುಡುಗಿದರು.
ಅದಕ್ಕುತ್ತರಿಸಿದ ಕುಮಾರಸ್ವಾಮಿ, ‘ವರ್ಗಾವಣೆ ವಿಚಾರದಲ್ಲಿ ನಾನು ಯಾವುದೇ ಹಣ ಪಡೆದಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ವರ್ಗಾವಣೆ ಮಾಡಲು ನನ್ನ ಬಳಿ ಅಧಿಕಾರವೇ ಇರಲಿಲ್ಲ. ಎಲ್ಲವನ್ನೂ ಆಯಾ ಇಲಾಖೆಯ ಸಚಿವರಿಗೆ ನೀಡಿದ್ದೆ. ಒಂದು ವೇಳೆ ನಾನು ವರ್ಗಾವಣೆಗಾಗಿ ಹಣ ಪಡೆದಿದ್ದೇನೆ ಎಂಬುದು ಸಾಬೀತಾದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದರು.
ರಕ್ಷಾ ಕವಚವಾಗಿ ಜಾತಿ ಬಳಕೆ: ಭ್ರಷ್ಟಾಚಾರದ ವಿಷಯ ಬಂದಾಗ ಕೆಲವರಿಗೆ ಜಾತಿ ನೆನಪಾಗಿಬಿಡುತ್ತದೆ. ಅಂತಹ ಸಂದರ್ಭದಲ್ಲಿ ಕೆಲವರು ಜಾತಿಯನ್ನೇ ರಕ್ಷಾ ಕವಚ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪರೋಕ್ಷವಾಗಿ ಕೃಷಿ ಸಚಿವ ಚೆಲುವರಾಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸದನದಲ್ಲಿ ಇಲಾಖೆಯೊಂದರಲ್ಲಿ ವರ್ಗಾವಣೆಗೆ ಸಿದ್ಧಪಡಿಸಿರುವ ದರ ಪಟ್ಟಿಕುರಿತು ಪ್ರಸ್ತಾಪಿಸಿದ್ದೆ. ಇಲಾಖೆಯ ಸಚಿವರೊಬ್ಬರು ಆ ಕುರಿತು ಉತ್ತರ ನೀಡುವುದನ್ನು ಬಿಟ್ಟು ತಮ್ಮ ಜಾತಿಯನ್ನು ಎಳೆದು ತಂದಿದ್ದಾರೆ. ಭ್ರಷ್ಟಾಚಾರಕ್ಕೆ ಜಾತಿ ವ್ಯವಸ್ಥೆ ಇದೆಯಾ? ಭ್ರಷ್ಟಾಚಾರದ ಬಗ್ಗೆ ಹೇಳಿದರೆ ಅದಕ್ಕೆ ಜಾತಿ ಬಣ್ಣ ಕಟ್ಟುತ್ತಾರೆ. ನನಗೆ ಯಾರ ಮೇಲೂ ದ್ವೇಷ, ಅಸಮಾಧಾನ ಇಲ್ಲ. ಅವರು ನಮ್ಮನ್ನು ಬಿಟ್ಟು ಹೋದ ಮೇಲೆ ನಾನು ಅವರ ಬಗ್ಗೆ ಮಾತಾಡಿಯೇ ಇಲ್ಲ’ ಎಂದು ಕಿಡಿಕಾರಿದರು.
ಹೈಕೋರ್ಟ್‌ನಲ್ಲಿ ಮೊಳಗಿದ ನಾಡಗೀತೆ: 5 ರಾಗಗಳಲ್ಲಿ ಹಾಡಿ ಕೋರ್ಟ್‌ನಲ್ಲಿ ವಾದ
‘ನಡೆಯುತ್ತಿರುವ ವಿಷಯವನ್ನು ಪ್ರಸ್ತಾಪ ಮಾಡಿದ್ದು, ವಾಸ್ತವ ಸಂಗತಿಯನ್ನು ಸದನಕ್ಕೆ ತಿಳಿಸಿದ್ದೇನೆ. ಸರಿಪಡಿಸಿಕೊಳ್ಳುವುದು, ಬಿಡುವುದು ಅವರಿಗೆ ಬಿಟ್ಟಿದ್ದು. ಹಿಂದಿನ ಸರ್ಕಾರದ ವಿರುದ್ಧ ಇವರೇ ದರ ಪಟ್ಟಿಜಾಹೀರಾತು ಕೊಡಲಿಲ್ಲವೇ? ನಾನು ವೆಸ್ಟೆಂಡ್ ಹೊಟೇಲ್‌ನಲ್ಲಿ ‘ಅಡ್ಡಾ’ ಮಾಡಿಕೊಂಡಿದ್ದೆ ಎಂದಿದ್ದಾರೆ. ಇವರು ಎಲ್ಲಿ ‘ಅಡ್ಡಾ’ ಮಾಡಿಕೊಂಡಿದ್ದಾರೆ ಎನ್ನುವುದು ಗೊತ್ತಿದೆ. ಅಲಿ ಏನೇನು ನಡೆಯುತ್ತದೆ? ಎನ್ನುವ ಮಾಹಿತಿಯೂ ಇದೆ. ನಾನು ದರಪಟ್ಟಿಯನ್ನು ಸಿದ್ಧ ಮಾಡಿಲ್ಲ. ನಾನು ಈ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿ ಜತೆಯಲ್ಲಿ ಕೆಲಸ ಮಾಡಿದ್ದೆ’ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.