
ವರದಿ : ವರದರಾಜ್
ದಾವಣಗೆರೆ (ಡಿ 2 ) : ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ ಹೆಸರಿಡಲಾಗಿದೆ. ಆದರೆ ಬಿಜೆಪಿಯವರು ಹೆಸರು ಬದಲಾಯಿಸಲು ಮುಂದಾಗಿದ್ದಾರೆ. ಈ ಮೂಲಕ ದ್ವೇಷದ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಮಹಾನಗರ ಪಾಲಿಕೆ ವಿಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿ, ಎಲ್ಲಾ ಧರ್ಮದ, ಎಲ್ಲಾ ಜಾತಿಯವರಿಗೆ ನೆರವು ನೀಡಿದವರು ಹಾಗೂ ದಾವಣಗೆರೆ ಅಭಿವೃದ್ಧಿಗೆ ಶಾಮನೂರು ಶಿವಶಂಕರಪ್ಪರು ನೀಡಿರುವ ಕೊಡುಗೆ ಅಪಾರ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಬಡವರ, ದಲಿತರ, ಅಲ್ಪಸಂಖ್ಯಾತರಿಗೆ ಸಹಾಯ ಮಾಡಿದ ಶಾಮನೂರು ಶಿವಶಂಕರಪ್ಪ ಕೊಡುಗೈ ದಾನಿಯೆಂದೇ ಪ್ರಸಿದ್ಧಿ. ಇಂಥವರ ಹೆಸರು ಬದಲಿಸಲು ಹೊರಟಿರುವ ಬಿಜೆಪಿ ಕೀಳುಮಟ್ಟದ, ಲಜ್ಜೆಗೆಟ್ಟ, ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ದಾವಣಗೆರೆ ಉತ್ತರದಲ್ಲಿ ಎಸ್.ಎ. ರವೀಂದ್ರನಾಥ್ ಅವರನ್ನು ಗೆಲ್ಲಿಸಿ - ಸಿಎಂ ಬೊಮ್ಮಾಯಿ
ಕಾನೂನಿನ ಪ್ರಕಾರ ಜೀವಂತವಾಗಿರುವ ವ್ಯಕ್ತಿಗಳ ಹೆಸರು ನಾಮಕರಣ ಮಾಡಬಾರದು ಎನ್ನುವ ಬಿಜೆಪಿಗರು ಬಸ್ ತಂಗುದಾಣಕ್ಕೆ ಸತ್ತವರ ಹೆಸರು ಇಟ್ಟಿದ್ದಾರೆಯೇ? ಎಲ್ಲಾ ಕಡೆಗಳಲ್ಲಿಯೂ ಶಾಸಕರು, ಸಂಸದರ ಹೆಸರಿಡಲಾಗಿದೆ. ಹಿರಿಯರಿಗೆ ಗೌರವ ಕೊಡಬೇಕು. ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಯೋಜನೆಗಳು ಇಲ್ಲವೇ? ಎಲ್ಲದ್ದಕ್ಕೂ ಮೃತಪಟ್ಟ ಮಹನೀಯರ ಹೆಸರು ಇಡಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರು ಜನರಿಗೆ ಸುಳ್ಳು ಹೇಳುವುದು, ದಾರಿ ತಪ್ಪಿಸುವುದು, ಸರಿಯಾಗಿ ಇದ್ದದ್ದನ್ನು ಹಾಳು ಮಾಡುವುದು, ಮಹನೀಯರಿಗೆ ಅಗೌರವ ಬರುವಂತೆ ಮಾಡುವುದು, ಧರ್ಮ ಧರ್ಮಗಳ ನಡುವೆ ಹಾಗೂ ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಬೇಳೆ ಬೇಯಿಸಿಕೊಳ್ಳುವಂಥ ರಾಜಕಾರಣ ಮಾಡುತ್ತಿರುವುದು ಇದೇ ಮೊದಲೇನಲ್ಲ. ಒಂದು ವೇಳೆ ಶಾಮನೂರು ಶಿವಶಂಕರಪ್ಪರ ಹೆಸರು ತೆಗೆದರೆ ನಾವು ಸುಮ್ಮನಿರೋಲ್ಲ. ಅವರಂಥ ಕೊಡುಗೈ ದಾನಿಗಳಿಗೆ ಅವಮಾನಿಸುವ ಕೆಲಸಕ್ಕೆ ಕೈ ಹಾಕಿದರೆ ಸರಿಯಾದ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರಕ್ಕೆ ಶಾಮನೂರು ಶಿವಶಂಕರಪ್ಪ ಅವರು ಕೊಟ್ಟಿರುವ ಕೊಡುಗೆ ಜಾಸ್ತಿಯೇ. ಗಣ್ಯವ್ಯಕ್ತಿಗಳ, ಸ್ವಾತಂತ್ರ್ಯ ಹೋರಾಟಗಾರರು ಈಗ ಬಿಜೆಪಿಯವರಿಗೆ ನೆನಪಾಗಿದೆ. ಇಂಥ ಮಹನೀಯರು ನೆನಪಾಗುವುದು ಬಿಜೆಪಿಯವರಿಗೆ ಚುನಾವಣೆ ಸಮೀಪ ಬಂದಾಗ ಮಾತ್ರ. ಕ್ಷುಲ್ಲಕ ರಾಜಕಾರಣ ಬಿಡಲಿ. ಈಗಿರುವ ನಮ್ಮ ನಾಯಕರ ಹೆಸರು ತೆಗೆಸಲು ಮುಂದಾದರೆ ಸಹಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Davanagere: ನ.26ರಂದು ನಿವೃತ್ತ ಪಿಂಚಣಿ ನೌಕರರ ಸಮಾವೇಶ: ಕೆ.ಎಂ.ಮರುಳಸಿದ್ದಯ್ಯ
ಖಾಸಗಿ ಬಸ್ ನಿಲ್ದಾಣಕ್ಕೆ ಶಾಮನೂರು ಶಿವಶಂಕರಪ್ಪ ಹೆಸರು ತೆಗೆದರೆ ಉಗ್ರ ಹೋರಾಟ ಮಾಡಲಾಗುವುದು. ಇದು ದ್ವೇಷದ ರಾಜಕಾರಣ.ಸಂಸದರ ಕುಮ್ಮಕ್ಕಿನಿಂದ ಬಿಜೆಪಿಯವರು ಈ ರೀತಿ ವರ್ತಿಸುವುದು ಸರಿಯಲ್ಲ. ಹೆಸರು ಅಂಗೀಕಾರವಾದ ಮೇಲೆ ಮತ್ತೆ ಬದಲಾಯಿಸುವುದು ಸರಿಯಲ್ಲ. ಕೂಡಲೇ ಪ್ರಸ್ಥಾವನೆ ಕೈಬಿಡಬೇಕು. ನೇರಾನೇರ ರಾಜಕಾರಣ ಮಾಡಲಿ ಅದನ್ನು ಬಿಟ್ಟು ಕೀಳು ರಾಜಕಾರಣ ಮಾಡುವುದು ಸರಿಯಲ್ಲ ಎ.ನಾಗರಾಜ್ ಪಾಲಿಕೆ ಸದಸ್ಯ ನಾಗರಾಜ್ ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಗಣೇಶ್ ಹುಲ್ಲುಮನಿ, ಉಮೇಶ್, ಜಗದೀಶ್ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.