ಹಾಸನ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಅಧ್ಯಕ್ಷ, ಉಪಾಧ್ಯಕ್ಷ ಗಾದಿ ದಕ್ಕಿಸಿಕೊಂಡಿದೆ. ಈ ವೇಳೆ ವಿಚಿತ್ರ ಸನ್ನಿವೇಶಕ್ಕೆ ನಗರಸಭೆ ಸಾಕ್ಷಿಯಾಯಿತು.
ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ
ಹಾಸನ (ಆ.21): ಹಾಸನ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಅಧ್ಯಕ್ಷ, ಉಪಾಧ್ಯಕ್ಷ ಗಾದಿ ದಕ್ಕಿಸಿಕೊಂಡಿದೆ. ಈ ವೇಳೆ ವಿಚಿತ್ರ ಸನ್ನಿವೇಶಕ್ಕೆ ನಗರಸಭೆ ಸಾಕ್ಷಿಯಾಯಿತು. ಹೌದು,
ಉಪಾಧ್ಯಕ್ಷರ ಚುನಾವಣೆಯಲ್ಲಿ ತಮ್ಮ ವಿರುದ್ಧವೇ ಮತ ಹಾಕಿದ್ರೂ ಬಿಜೆಪಿ ಸದಸ್ಯೆ ಲತಾದೇವಿ ಸುರೇಶ್ ಗೆದ್ದು ಬೀಗಿದರು. ಬಿಜೆಪಿಯಿಂದ ಗೆದ್ದು ಜೆಡಿಎಸ್ ಜೊತೆ ಲತಾದೇವಿ ಗುರುತಿಸಿಕೊಂಡಿದ್ದರು. ಇದೇ ಕಾರಣಕ್ಕೆ ಉಪಾಧ್ಯಕ್ಷ ಸ್ಥಾನಕ್ಕೆ ಶಿಲ್ಪಾ ವಿಕ್ರಂ ಅವರನ್ನು ಬಿಜೆಪಿ ಅಧಿಕೃತ ಅಭ್ಯರ್ಥಿ ಮಾಡಿತ್ತು. ಅಷ್ಟೇ ಅಲ್ಲ ಶಿಲ್ಪಾಗೆ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಲಾಗಿತ್ತು. ಆದರೆ ಜೆಡಿಎಸ್ ಸದಸ್ಯರ ಬೆಂಬಲದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಲತಾದೇವಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಕೈ ಎತ್ತುವ ಮೂಲಕ ಮತ ಹಾಕುವ ವೇಳೆ ಬಿಜೆಪಿಯ ಅಧಿಕೃತ ಅಭ್ಯರ್ಥಿ ಶಿಲ್ಪಾಗೆ ಲತಾದೇವಿ ಮತ ಹಾಕಿದರು. ಲತಾದೇವಿ ವಿರುದ್ಧ ಇರುವವರು ಕೈ ಎತ್ತಿ ಎಂದು ಚುನಾವಣಾ ಅಧಿಕಾರಿ ಹೇಳಿದಾಗ ಅನಿವಾರ್ಯವಾಗಿ ಬಿಜೆಪಿ ಸದಸ್ಯರ ಜೊತೆ ಲತಾದೇವಿ ಕೂಡ ತಮ್ಮ ವಿರುದ್ಧವೇ ಕೈ ಎತ್ತಿ ಮತ ಚಲಾವಣೆ ಮಾಡಿದರು.
ವಿಪ್ ಉಲ್ಲಂಘನೆ ಮಾಡಿದರೆ ಸದಸ್ಯತ್ವ ಅನರ್ಹ ಭೀತಿಯಿಂದ ತಮ್ಮ ವಿರುದ್ಧವೇ ಲತಾ ದೇವಿ ಮತ ಚಲಾವಣೆ ಮಾಡಿಕೊಳ್ಳುವ ಮೂಲಕ ವಿಚಿತ್ರ ಸನ್ನಿವೇಶಕ್ಕೆ ಮುನ್ನುಡಿ ಬರೆದರು. ಆದರೆ ತಮ್ಮ ವಿರುದ್ಧ ತಾವೇ ಮತ ಹಾಕಿಕೊಂಡರೂ ನಗರಸಭೆ ಉಪಾಧ್ಯಕ್ಷೆಯಾಗಿ ಲತಾದೇವಿ ಆಯ್ಕೆಯಾದರು. ಜೆಡಿಎಸ್ ಸದಸ್ಯರು, ಶಾಸಕ ಹಾಗೂ ಓರ್ವ ಕಾಂಗ್ರೆಸ್ ಸದಸ್ಯೆ ಬೆಂಬಲದೊಂದಿಗೆ ಲತಾದೇವಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಅಂತಿಮವಾಗಿ ಲತಾದೇವಿಗೆ ೨೧ ಮತ ಲಭಿಸಿದರೆ, ಪ್ರೀತಂ ಗೌಡ ಸೂಚಿಸಿದ್ದ ಬಿಜೆಪಿಯ ಶಿಲ್ಪಾ ವಿಕ್ರಂಗೆ ೧೪ ಮತ ಸಿಕ್ಕವು.
ನಗರಸಭೆ ಅಧ್ಯಕ್ಷ-ಉಪ್ಯಾಧ್ಯಕ್ಷ ಚುನಾವಣೆ: ಸಿ.ಟಿ ರವಿ-ಹೆಚ್ ಡಿ ತಮ್ಮಯ್ಯ ನಡುವೆ ಪ್ರತಿಷ್ಠೆಯ ಫೈಟ್
ಮೈತ್ರಿ ನಪಾಲನೆ: ಪ್ರೀತಂ ಖಂಡನೆ ಮುಂದೆ ಅಧಿಕಾರ ಕೊಡದಿದ್ರೆ ಜೆಡಿಎಸ್ ಎರಡಂಕಿ ದಾಟಲು ಬಿಡಲ್ಲ ಎಂದು ಸವಾಲ್
ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಮೈತ್ರಿಧರ್ಮ ಪಾಲನೆ ಆಗಿಲ್ಲ ಎಂದು ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ಆಕ್ರೋಶ ಹೊರ ಹಾಕಿದರು.
ಚುನಾವಣೆ ಮುಗಿದ ಕೂಡಲೇ ತುರ್ತು ಪತ್ರಿಕಾಗೋಷ್ಟಿ ನಡೆಸಿದ ಅವರು, ನಮ್ಮ ರಾಷ್ಟ್ರೀಯ ನಾಯಕರ ಅಪೇಕ್ಷೆಯಂತೆ ಮೈತ್ರಿ ಧರ್ಮಕ್ಕೆ ಚ್ಯುತಿ ಬಾರದಂತೆ ನಡೆಯಿರಿ ಎಂದು ರಾಜ್ಯ ನಾಯಕರು ಹೇಳಿದ್ದರು.
ವಿಪಕ್ಷ ನಾಯಕ ಆರ್.ಅಶೋಕ್, ಅಶ್ವಥ್ ನಾರಾಯಣ್ ಹಾಗೂ ಶಾಸಕ ಸಿಮೆಂಟ್ ಮಂಜು ಮೊದಲಾದವರು ಹೆಚ್.ಡಿ.ರೇವಣ್ಣ ಅವರ ಜೊತೆಗೆ ಚರ್ಚಿಸಿ ತೀರ್ಮಾನಿಸಿದ್ದರು. ತಲಾ ೧೦ ತಿಂಗಳ ಅವಧಿಯಂತೆ ಅಧಿಕಾರ ಹಂಚಿಕೆಗೆ ತೀರ್ಮಾನ ಆಗಿತ್ತು ಆದರೆ ಆ ರೀತಿ ಚುನಾವಣೆ ನಡೆದಿಲ್ಲ ಎಂದು ದೂರಿದರು. ಬಿಜೆಪಿಯಿಂದ ಉಪಾಧ್ಯಕ್ಷ ಸ್ಥಾನಕ್ಕಷ್ಟೇ ನಾಮಪತ್ರ ಸಲ್ಲಿಕೆ ಆಗಬೇಕು ಎಂದು ಸೂಚನೆ ಇತ್ತು. ಅದರಂತೆ ನಾವು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಲಿಲ್ಲ. ಆದರೆ ನಾವು ನಿಲ್ಲಿಸಿದ್ದ ಉಪಾಧ್ಯಕ್ಷ ಅಭ್ಯರ್ಥಿ ಮತ ನೀಡಲಿಲಿಲ್ಲ. ಇದರಿಂದ ಮೈತ್ರಿ ಧರ್ಮ ಪಾಲಿಸಿಲ್ಲ ಎನ್ನೋದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದರು. ಈ ಬಗ್ಗೆ ರಾಜ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರಲು ನಮ್ಮ ಸ್ಥಳೀಯ ನಾಯಕರು ತೀರ್ಮಾನಿಸಿದ್ದಾರೆ. ನಾವು ವೀರಶೈವ ಸಮುದಾಯಕ್ಕೆ ಅವಕಾಶ ನೀಡಿದ್ದೆವು. ಮತ ಎಲ್ಲರದ್ದೂ ಬೇಕು, ಅಧಿಕಾರ ಒಂದೇ ಸಮುದಾಯದಕ್ಕೆ ಸಿಗಬಾರದು ಎಂಬ ಕಾರಣಕ್ಕೆ ಈ ತೀರ್ಮಾನ ಮಾಡಲಾಗಿತ್ತು. ಆದರೆ ಮೈತ್ರಿ ಪಕ್ಷದ ನಡೆ ಅಚ್ಚರಿ ಮೂಡಿಸಿದೆ ಎಂದರು.
ಅವರು ೧೭ ನಾವು ೧೪ ಸದಸ್ಯರಿದ್ದೇವೆ. ಈ ಬಾರಿಯೂ ಮನಸ್ಸು ಮಾಡಿದ್ರೆ ನಾವೇ ಅಧ್ಯಕ್ಷ-ಉಪಾಧ್ಯಕ್ಷ ಆಗಬಹುದಿತ್ತು. ಆದರೆ ನಾವು ಯಾವುದೇ ಬೆಳವಣಿಗೆಗೆ ಎಡೆ ಮಾಡಿಕೊಡದೆ ಪಕ್ಷದ ಸೂಚನೆ ಪಾಲಿಸಿದೆವು. ರಾಜ್ಯ, ರಾಷ್ಟ್ರೀಯ ನಾಯಕರು ಏನು ತೀರ್ಮಾನ ಮಾಡ್ತಾರೆ ನೋಡೋಣ. ನನ್ನ ಮಾತಿನ ಮೇಲೆ ಗೌರವ ಇಟ್ಟು ನಮ್ಮ ಸದಸ್ಯರು ನಡೆದುಕೊಂಡರು. ಆದರೆ ಮೈತ್ರಿ ಪಕ್ಷದ ನಡೆಯಿಂದ ನೋವಾಗಿದೆ ಎಂದರು. ವೀರಶೈವ ಸಮಾಜದ ಮುಖಂಡರು ಫೋನ್ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಂದೆ ಯಡಿಯೂರಪ್ಪ ಅವರಿಗೂ ಹೀಗಾಗಿತ್ತು,ಈಗ ಹಾಸನದಲ್ಲಿ ಹೀಗಾಗಿದೆ ಎಂದು ಜನ ಹೇಳ್ತಿದ್ದಾರೆ ಎಂದು ಬೇಸರ ಹೊರ ಹಾಕಿದರು. ಮೈತ್ರಿ ಎಂದು ಹೇಳಿ ಕೇವಲ ಅನುಕೂಲ ಸಿಂಧು ಆಗಬಾರದು.ಕೊಡು ಕೊಳ್ಳುವಿಕೆ ಇರಬೇಕು ಎಂದು ಹೇಳಿದರು ರಾಜ್ಯ ನಾಯಕರ ಸೂಚನೆಯಂತೆ ಕಾರಾವಾರ ಸೇರಿ ಬೇರೆ ಬೇರೆ ಕಡೆ ಚುನಾವಣೆ ನಡೆದಿದೆ. ಅದರಂತೆ ಇಲ್ಲೂ ಕೂಡ ಅಧ್ಯಕ್ಷ ಅವರು, ಉಪಾಧ್ಯಕ್ಷ ನಾವು ಎಂದು ತೀರ್ಮಾನ ಆಗಿತ್ತು. ಹಾಗಾಗಿಯೇ ನಾವು ಅಧಿಕೃತ ಅಭ್ಯರ್ಥಿ ಹಾಕಿದ್ದೆವು. ಆದರೆ ಮತ ನೀಡಲಿಲ್ಲ ಎಂದರು. ನಮ್ಮ ಸದಸ್ಯರಿಗೂ ಅಗೌರವ ತೋರಿದ್ದಾರೆ ಎಂದು ಬೇಸರ ಹೊರ ಹಾಕಿದರು. ಈ ಬಗ್ಗೆ ಜೆಡಿಎಸ್-ಬಿಜೆಪಿ ರಾಜ್ಯ ನಾಯಕರು ಚರ್ಚೆ ಮಾಡ್ತಾರೆ ಎಂದರು.
ಸ್ವರೂಪ್ ವಿರುದ್ಧ ಗರಂ:
ನಾನೂ ಜೆಡಿಎಸ್ ಸದಸ್ಯರ ಓಟು ಹಾಕಿಸಿಕೊಳ್ಳಬಹುದಾಗಿತ್ತು. ನಾನೇನು ಅಸಹಾಯಕನಲ್ಲ, ನನಗೂ ಶಕ್ತಿ ಇತ್ತು. ಮೈತ್ರಿ ಎಂದರೆ ಪರಸ್ಪರ ಒಡಂಬಡಿಕೆ. ಅದನ್ನು ಬಿಜೆಪಿ ಪಾಲಿಸಿದೆ. ಸಾಂದರ್ಭಿಕ ಶಾಸಕರಿಗೆ ಸಾಂದರ್ಭಿಕವಾಗಿ ಏನು ನಡೆಯುತ್ತದೆ ಅಂತ ಗೊತ್ತಿರಲ್ಲ ಎಂದು ವಾಗ್ದಾಳಿ ನಡೆಸಿದರು. ಅವರಿಗೆ ಕ್ಷೇತ್ರದ ಬಗ್ಗೆಯೇ ಗೊತ್ತಿಲ್ಲ, ಒಂದು ಗುದ್ದಲಿ ಪೂಜೆ ಮಾಡಿಲ್ಲ. ಇನ್ನೂ ಪ್ರೊಬೆಷನರಿ ಪಿರಿಯಡ್‌ನಲ್ಲಿದ್ದಾರೆ. ಇನ್ನೂ ಮೂರೂವರೆ ವರ್ಷ ಹಾಗೇ ಇರ್ತಾರೆ. ಅವರು ಕೆಲಸ ಮಾಡಲಿ ಆಮೇಲೆ ಸೀರಿಯಸ್ ಆಗಿ ತಗೋತಿನಿ ಎಂದರು. ಇದು ಹೆಚ್.ಡಿ.ರೇವಣ್ಣ, ಅಶ್ವಥ್‌ನಾರಾಯಣ್, ಆರ್.ಅಶೋಕ್ ಮಾಡಿರುವ ತೀರ್ಮಾನ. ಅದು ಶಾಸಕರಿಗೆ ಗೊತ್ತಿಲ್ಲ, ಸ್ವರೂಪ್ ಅವರನ್ನು ಅವರ ಪಕ್ಷದವರೇ ಸಿರಿಯಸ್ ಆಗಿ ತಗೊಂಡಿಲ್ಲ. ಅದು ಅವರ ವೀಕ್ನೆಸ್ ಎಂದು ಜರಿದರು.
ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧ ಮಾಡಿದ್ದ ಟಿಪ್ಪು ಸುಲ್ತಾನ್ ಕೂಡ ಸ್ವಾತಂತ್ರ್ಯ ಹೋರಾಟಗಾರ: ಸಚಿವ ರಾಜಣ್ಣ
ಹತ್ತು ತಿಂಗಳ ನಂತರ ಅವರು ಅಧಿಕಾರ ಬಿಟ್ಟು ಕೊಡಲಿಲ್ಲ ಅಂದರೆ ನಗರಸಭೆಯಲ್ಲಿ ಜೆಡಿಎಸ್‌ನವರಿಗೆ ಇದೇ ಕೊನೆ ಅಧಿಕಾರ ಆಗಲಿದೆ. ಅವರು ಎರಡು ಅಂಕಿ ದಾಟಲು ಬಿಡಲ್ಲ ಎಂದು ಸವಾಲು ಹಾಕಿದರು. ಮುಂದೆ ಬಿಜೆಪಿಯೇ ಅಧಿಕಾರದಲ್ಲಿರುತ್ತೆ. ಬಿಜೆಪಿ ಸದಸ್ಯನಿಗೆ ಅಧಿಕಾರ ಸಿಗುವ ಹಾಗೇ ಮಾಡ್ತೀನಿ ಎಂದು ಗುಡುಗಿದರು. ಸಾಂದರ್ಭಿಕ ಮತಗಳು ಅವರ ಜೊತೆ ಇಲ್ಲ. ಅವರಿಗೆ ಮತ ಹಾಕಿದ ಅಲ್ಪಸಂಖ್ಯಾತರಿಗೆ ಅಧ್ಯಕ್ಷ ಸ್ಥಾನ ಸಿಗುತ್ತೆ ಎಂದು ಕಾಯುತ್ತಿದ್ದರು. ತಾವು ಗೆಲ್ಲಲು ಮತ ನೀಡಿದವರ ಋಣವನ್ನಾದರೂ ತೀರಿಸುತ್ತಾರೆ ಅಂದು ಕೊಂಡಿದ್ದೆ, ಅದನ್ನೂ ಮಾಡಲಿಲ್ಲ ಎಂದರು.