
ಬಳ್ಳಾರಿ (ಏ.11) : ಹಾಸನ ಟಿಕೆಟ್ ಕುರಿತು ಮಾಜಿ ಸಚಿವ ಎಚ್.ಡಿ. ರೇವಣ್ಣ ನನ್ನ ಬಳಿ ಚರ್ಚಿಸಿಯೇ ಇಲ್ಲ. ಈ ಬಗ್ಗೆ ನನ್ನ ಮನವೊಲಿಸಲು ಅವರಿಗೆ ಭಯ ಕಾಡುತ್ತಿದೆ. ದುರಾದೃಷ್ಟವೆಂದರೆ, ಎಚ್.ಡಿ.ದೇವೇಗೌಡರಿಗೂ ರೇವಣ್ಣ ಅವರನ್ನು ಮನವೊಲಿಸಲು ಶಕ್ತಿ ಇಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಹೇಳಿದ್ದಾರೆ.
ಅಲ್ಲದೆ, ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ ಗೆಲ್ಲಿಸುವ ನನ್ನ ಆಸೆಯನ್ನು ಹಾಳು ಮಾಡಲು ಹಾಸನದ ಕೆಲವರು ಮುಂದಾಗಿದ್ದಾರೆ. ಮನೆ ಹಾಳು ಕೆಲಸ ಮಾಡುತ್ತಿದ್ದಾರೆ. ಶಕುನಿಗಳಂತೆ ಬ್ರೇನ್‌ವಾಶ್ ಮಾಡುತ್ತಿದ್ದಾರೆ. ಆದರೂ ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಬೇಕು ಎನ್ನುವ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಚರತ್ನ ಯೋಜನೆ ಜಾರಿಯಾದರೆ ರಾಜ್ಯ ಸ್ವರ್ಗ ಸದೃಶ್ಯವಾಗಲಿದೆ: ಎಚ್.ಡಿ.ಕುಮಾರಸ್ವಾಮಿ
ಇದೇ ವೇಳೆ, ಈ ಮನೆಹಾಳು ಕೆಲಸ ಮಾಡುವ ಶಕುನಿಗಳು ನಿಮ್ಮ ಮನೆಯಲ್ಲಿಯೇ ಇದ್ದಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ನಮ್ಮ ಮನೆಯಲ್ಲಿ ಇಲ್ಲ. ಹಾಸನದಲ್ಲಿದ್ದಾರೆ’ ಎಂದಿದ್ದಾರೆ.
ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ(Hassan JDS Candidate)ಯಾಗಿ ಸ್ಪರ್ಧಿಸುವುದಾಗಿ ಭವಾನಿ ರೇವಣ್ಣ(Bhavani revanna) ಘೋಷಿಸಿದ್ದು, ಇದಕ್ಕೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಸನದಲ್ಲಿ ಪಕ್ಷದ ಸಾಮಾನ್ಯ ಅಭ್ಯರ್ಥಿಯನ್ನು ನಿಲ್ಲಿಸಿ, ಗೆಲ್ಲಿಸಿಕೊಂಡು ಬರುವುದಾಗಿ ತಿಳಿಸಿದ್ದರು. ಇದು ಕುಮಾರಸ್ವಾಮಿ(HD Kumaraswamy) ಹಾಗೂ ರೇವಣ್ಣ ಕುಟುಂಬದ ನಡುವೆ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ವಿಷಯವನ್ನು ದೇವೇಗೌಡರ ನಿರ್ಧಾರಕ್ಕೆ ಬಿಡಲಾಗಿತ್ತು. ಈ ಮಧ್ಯೆ, ಪಂಚರತ್ನಯಾತ್ರೆಯಲ್ಲಿ ಪಾಲ್ಗೊಳ್ಳಲು ಸೋಮವಾರ ಬಳ್ಳಾರಿಗೆ ಆಗಮಿಸಿದ ಕುಮಾರಸ್ವಾಮಿ, ಸುದ್ದಿಗಾರರ ಜೊತೆ ಮಾತನಾಡಿದರು. ‘ಕಳೆದ ನಾಲ್ಕೂವರೆ ತಿಂಗಳಿನಿಂದ ದಿನಕ್ಕೆ 17 ಗಂಟೆ ಕೆಲಸ ಮಾಡುತ್ತಿದ್ದೇನೆ. ಈ ಬಾರಿ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಹಗಲು-ರಾತ್ರಿ ಶ್ರಮಿಸುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ನನ್ನ ಗುರಿಗೆ ಅಡ್ಡಗಾಲು ಹಾಕಲು ಕೆಲವರು ಈ ರೀತಿಯ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಹಲವು ವಿಷಯಗಳನ್ನು ನುಂಗಿಕೊಂಡಿದ್ದೇನೆ. ಅನೇಕ ಸಂಗತಿಗಳನ್ನು ಹೊರಗಡೆ ಹೇಳಿಕೊಳ್ಳಲು ಆಗುತ್ತಿಲ್ಲ. ಈಗ ಆಗುತ್ತಿರುವ ಅನಾಹುತಗಳ ಅರಿವು ನನಗಿದೆ. ತಪ್ಪುಗಳನ್ನು ಮಾಡದಿದ್ದರೂ ನಾನು ಆ ತಪ್ಪುಗಳನ್ನು ನನ್ನ ತಲೆ ಮೇಲೆ ಹೊತ್ತುಕೊಳ್ಳಬೇಕಾಗಿದೆ’ ಎಂದು ವಿಷಾದಿಸಿದರು.
‘ಈ ಚುನಾವಣೆಯಲ್ಲಿ 59ಕ್ಕೂ ಹೆಚ್ಚಿನ ಸ್ಥಾನಗಳನ್ನು ಜೆಡಿಎಸ್ ಗೆಲ್ಲಲಿದೆ. ರಾಜ್ಯದಲ್ಲಿ ಜೆಡಿಎಸ್ ಗೆಲ್ಲುವ ಕ್ಷೇತ್ರಗಳನ್ನು ಪಟ್ಟಿಮಾಡಿದ್ದು, ಆ ಕ್ಷೇತ್ರಗಳಿಗೆ ಮಾತ್ರ ಹೆಚ್ಚಿನ ನಿಗಾ ವಹಿಸಿ ಕೆಲಸ ಮಾಡುತ್ತಿದ್ದೇನೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 16 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ತೆಲಂಗಾಣ ಮುಖ್ಯಮಂತ್ರಿ ಸಹ ನಮಗೆ ಬೆಂಬಲ ನೀಡಿದ್ದು, ಕೆಸಿಆರ್ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದರು.
ದೇವೇಗೌಡರ ರೀತಿ ನನ್ನ ಬ್ಲಾಕ್ಮೇಲ್ ಅಸಾಧ್ಯ: ಭವಾನಿಗೆ ಪರೋಕ್ಷ ಟಾಂಗ್ ಕೊಟ್ಟ ಎಚ್‌ಡಿಕೆ
ಇದೇ ವೇಳೆ, ‘ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ ಜೆಡಿಎಸ್‌ಗೆ 59 ಸೀಟುಗಳು ಬಂದಿದ್ದವು. ನಂತರ ಅಷ್ಟುಸ್ಥಾನ ಬಂದೇ ಇಲ್ಲ’ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿ, ‘59 ಸೀಟು ಪಡೆಯಲು ಯಾರ ಕೊಡುಗೆ ಎಷ್ಟುಎಂಬುದು ಗೊತ್ತಿದೆ. ಈ ಬಾರಿಯ ಚುನಾವಣೆಯಲ್ಲಿ 59 ಕ್ಷೇತ್ರಗಳನ್ನು ಕ್ರಾಸ್ ಮಾಡುತ್ತೇನೆ. ಒಬ್ಬನೇ ಹೋರಾಟ ಮಾಡಿ ಬಿಜೆಪಿ ಮತ್ತು ಕಾಂಗ್ರೆಸ್‌ಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸುತ್ತೇನೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.