* ಈಗಿನಿಂದಲೇ ಸಿದ್ಧತೆ ನಡೆಸುವಂತೆ ವೀರೇಶ ಮಹಾಂತಯ್ಯನಮಠಗೆ ಸೂಚನೆ
* ಜೆಡಿಎಸ್ ಕಾರ್ಯಾಗಾರದಲ್ಲಿಯೇ ಅಧಿಕೃತ ಘೋಷಣೆ
* ಕೊಪ್ಪಳ ಜಿಲ್ಲೆಯಲ್ಲಿ ಜೋರಾಗಿ ನಡೆದ ಜೆಡಿಎಸ್ ಸಂಘಟನೆ
ಸೋಮರಡ್ಡಿ ಅಳವಂಡಿ
ಕೊಪ್ಪಳ(ಅ.01): ವಿಧಾನಸಭಾ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಇರುವಾಗಲೇ ಜೆಡಿಎಸ್(JDS) ಪಕ್ಷ ಮಿಷನ್ 123 ಕಾರ್ಯಾಗಾರವನ್ನು ನಡೆಸಿ, ಕೆಲವೊಂದು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದ್ದು, ಜಿಲ್ಲಾ ಕೇಂದ್ರ ಕೊಪ್ಪಳ(Koppal) ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ ಅವರನ್ನು ನಿಯೋಜಿತ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.
ಇದು ಜಿಲ್ಲೆಯಲ್ಲಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಹಲವರು ಈ ಬಾರಿ ಜೆಡಿಎಸ್ ಪಕ್ಷದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದರು. ರಾಷ್ಟ್ರೀಯ ಪಕ್ಷದಲ್ಲಿದ್ದ ಕೆಲವರು ಅಲ್ಲಿ ಟಿಕೆಟ್ ದಕ್ಕದಿದ್ದರೆ ಜೆಡಿಎಸ್ ಪಕ್ಷದಿಂದ ಅಖಾಡಕ್ಕೆ ಇಳಿಯಲು ತಯಾರಿ ನಡೆಸಿದ್ದಾರೆ ಎನ್ನುವ ವದಂತಿ ಜೋರಾಗಿತ್ತು. ಹೀಗಾಗಿ, ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್‌ಗಿಂತಲೂ ಜೆಡಿಎಸ್ ಅಭ್ಯರ್ಥಿಯ ಕುರಿತು ಭಾರಿ ಚರ್ಚೆಯಾಗುತ್ತಿತ್ತು. ಈ ನಡುವೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಪಕ್ಷದ ಕಾರ್ಯಾಗಾರದಲ್ಲಿ ಕೊಪ್ಪಳ ವಿಧಾನಸಭೆ ಕ್ಷೇತ್ರಕ್ಕೆ ವೀರೇಶ ಮಹಾಂತಯ್ಯನಮಠ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದ್ದು ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಕೇವಲ ಘೋಷಣೆ ಮಾಡಿ ಕೈಬಿಟ್ಟಿಲ್ಲ, ಈಗಿನಿಂದಲೇ ಚುನಾವಣೆಯ(Election) ತಯಾರಿ ನಡೆಸುವಂತೆಯೂ ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ಟಿಕೆಟ್ ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ಸ್ವತಃ ಮಾಜಿ ಸಿ.ಎಂ. ಎಚ್.ಡಿ. ಕುಮಾರಸ್ವಾಮಿ ಬಹಿರಂಗ ಸಭೆಯಲ್ಲಿ ಸೂಚಿಸಿದ್ದಾರೆ.
ಸಿಂದಗಿಯಲ್ಲಿ ವಲಸೆ ರಾಜಕಾರಣ: ಬಿಜೆಪಿ ಸೇರಲಿರುವ ಜೆಡಿಎಸ್ ನಾಯಕ
ಕೈ ತಪ್ಪಿತ್ತು:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ವೀರೇಶ ಮಹಾಂತಯ್ಯನಮಠ ಅವರು ಸ್ಪರ್ಧೆ ಖಚಿತ ಆಗಿತ್ತು. ಟಿಕೆಟ್ ಸಹ ನಿಗದಿಯಾಗಿತ್ತು. ಆದರೆ, ಕೊನೆಗಳಿಗೆಯಲ್ಲಿ ಆದ ಬದಲಾವಣೆಯಿಂದ ಪ್ರದೀಪಗೌಡ ಕವಲೂರು ಅಖಾಡಕ್ಕೆ ಇಳಿದಿದ್ದರಿಂದ ಇವರಿಗೆ ಟಿಕೆಟ್ ಕೈತಪ್ಪಿತ್ತು. ಪ್ರದೀಪಗೌಡ ಈಗ ಜೆಡಿಎಸ್‌ಗೆ ಗುಡ್‌ಬೈ ಹೇಳಿ ಬಿಜೆಪಿ ತೆಕ್ಕೆಗೆ ಹೋಗಿದ್ದಾರೆ.
ಸಂಘಟನೆ ಜೋರು:
ಕೊಪ್ಪಳ ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆ ಜೋರಾಗಿ ನಡೆದಿದೆ. ಕಳೆದ ನಾಲ್ಕು ತಿಂಗಳಲ್ಲಿ ಹತ್ತಾರು ಸಭೆ ನಡೆಸಲಾಗಿದೆ. ಪದಾಧಿಕಾರಿಗಳನ್ನು ಬದಲಾಯಿಸಿ, ನೇಮಿಸುವ ಕಾರ್ಯವೂ ನಡೆದಿದೆ. ಚುನಾವಣೆ ಘೋಷಣೆಗೂ ಮುನ್ನವೇ ರಾಜಕೀಯ ಚರ್ಚೆಗೆ ಜೆಡಿಎಸ್ ನಡೆ ಕಾರಣವಾಗಿದೆ.
ಪಕ್ಷದ ನಾಯಕರು ನನ್ನನ್ನು ಗುರುತಿಸಿ ಈಗಲೇ ಅಭ್ಯರ್ಥಿಯಂದು ಘೋಷಣೆ ಮಾಡಿದ್ದಾರೆ. ಹೀಗಾಗಿ ಸಂತೋಷವಾಗಿದೆ. ಕಳೆದ ಬಾರಿ ನನಗೆ ಟಿಕೆಟ್ ಕೈತಪ್ಪಿತ್ತು. ಆದರೆ, ಈ ಬಾರಿ ವಿವಾದಕ್ಕೆ ಅವಕಾಶ ನೀಡದೆಯೇ ಮೊದಲೇ ಘೋಷಣೆ ಮಾಡಿರುವುದರಿಂದ ಸಂಘಟನೆಗೆ ಅನುಕೂಲವಾಗುತ್ತದೆ ಎಂದು ಜೆಡಿಎಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ ತಿಳಿಸಿದ್ದಾರೆ.