* ಸಿದ್ದರಾಮೋತ್ಸವಕ್ಕೆ ಹೆಚ್.ವಿಶ್ವನಾಥ್ ಲೇವಡಿ
* ಹುಟ್ಟುಹಬ್ಬ ಕಾರ್ಯಕರ್ತರ ಉತ್ಸವವಾಗಬೇಕು
* ಬೊಮ್ಮಾಯಿ ಪ್ರಯತ್ನಕ್ಕೆ ಸಂಪುಟ ಸಹೋದ್ಯೋಗಿಗಳು ಕೈ ಜೋಡಿಸುತ್ತಿಲ್ಲ
ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು
ಮೈಸೂರು(ಜು.09): ಮಾಜಿ ಸಿಎಂ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಆಚರಿಸುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಹೆಚ್.ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹುಟ್ಟುಹಬ್ಬ ಕಾರ್ಯಕರ್ತರ ಉತ್ಸವವಾಗಬೇಕು. ಆದರೆ ವ್ಯಕ್ತಿ ಪೂಜೆಯ ಉತ್ಸವವಾಗಬಾರದು. ಯಾವುದೇ ಉತ್ಸವವಾದರೂ ಪಕ್ಷದ ಚೌಕಟ್ಟಿನೊಳಗೇ ಆಗಬೇಕು. ಪಕ್ಷದ ಉತ್ಸವವಾಗಬೇಕು, ಅದು ಕಾರ್ಯಕರ್ತರಿಗೆ ಇಷ್ಟವಾಗುವಂತಿರಬೇಕು. ನಾನು ಸಹ ಬಹಳಷ್ಟು ಕಾಲ ಕಾಂಗ್ರೆಸ್ ನಲ್ಲಿದ್ದೆ. ಆದರೆ ಇಷ್ಟು ವರ್ಷಗಳ ಕಾಂಗ್ರೆಸ್ ಇತಿಹಾಸದಲ್ಲಿ ಈ ರೀತಿಯ ವ್ಯಕ್ತಿ ಉತ್ಸವ ನೋಡಿಲ್ಲ. ಡಿ ಕೆ ಶಿವಕುಮಾರ್ ಕೂಡಾ ಮೊದಲು ಇದನ್ನೇ ಹೇಳಿದ್ರು, ಆ ನಂತರ ಏಕೆ ಸುಮ್ಮನಾದರೋ ಗೊತ್ತಿಲ್ಲ ಅಂತ ಹೆಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಇದೇ ಮಾತು ಮುಂದುವರಿಸಿದ ಅವರು ರಾಜ್ಯದ ಮೂರು ಪಕ್ಷಗಳಿಗೂ ಲೋಕಾಯುಕ್ತದ ಭಯವಿದೆ ಹಾಗಾಗಿ ಲೋಕಾಯುಕ್ತಕ್ಕೆ ಮೂಲ ಸ್ವರೂಪ ನೀಡುವ ಕೆಲಸವನ್ನ ಯಾರೂ ಮಾಡಲಿಲ್ಲ, ಲೋಕಾಯುಕ್ತಕ್ಕೆ ಬೀಗ ಹಾಕಿದ್ದೇ ಮಾಜಿ ಸಿಎಂ ಸಿದ್ದರಾಮಯ್ಯ ಅಂತ ಮೈಸೂರಿನಲ್ಲಿ ಹಳ್ಳಿಹಕ್ಕಿ ಎಂಎಲ್ಸಿ ವಿಶ್ವನಾಥ್ ಗುಡುಗಿದ್ದಾರೆ.
ಸಿದ್ದರಾಮೋತ್ಸವ ಮಾಡಲು ಹೊರಟಿರುವುದು ಕಾಂಗ್ರೆಸ್‌ನ ಶಿಖಂಡಿತನ: KS Eshwarappa
ಸರ್ಕಾರ ಲೋಕಾಯುಕ್ತಕ್ಕೆ ಬಲ ತುಂಬುವ ಕೆಲಸ ಮಾಡಬೇಕು
ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ಲೋಕಾಯುಕ್ತದ ಪಾತ್ರ ಮುಖ್ಯವಾಗಿತ್ತು. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ನಂತರ ಲೋಕಾಯುಕ್ತಕ್ಕೇ ಬಾಗಿಲು ಹಾಕಿದರು. ಆ ಬಳಿಕ ಲೋಕಾಯುಕ್ತಕ್ಕೆ ಮೂಲ ಸ್ವರೂಪ ನೀಡಲು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಾಯಕರೂ ಮುಂದಾಗುತ್ತಿಲ್ಲ. ಯಾಕಂದ್ರೆ ಮೂರು ಪಕ್ಷಗಳ ನಾಯಕರಿಗೂ ಕೂಡಾ ಲೋಕಾಯುಕ್ತದ ಬಗ್ಗೆ ಭಯವಿದೆ. ಹಾಗಾಗಿ ಇಡೀ ವ್ಯವಸ್ಥೆಯನ್ನು ಅಧಿಕಾರಶಾಹಿ ಮತ್ತು ರಾಜಕಾರಣಿಗಳು ನಿಯಂತ್ರಿಸುತ್ತಿದ್ದಾರೆ. ಇನ್ನಾದರೂ ಸರ್ಕಾರ ಲೋಕಾಯುಕ್ತಕ್ಕೆ ಬಲ ತುಂಬುವ ಕೆಲಸ ಮಾಡಬೇಕು, ಲೋಕಾಯುಕ್ತವನ್ನು ಸರ್ಕಾರ ಮೂಲ ಸ್ವರೂಪಕ್ಕೆ ತರಬೇಕು ಅಂತ ಸರ್ಕಾರಕ್ಕೆ ವಿಶ್ವನಾಥ್ ಮನವಿ ಮಾಡಿದ್ದಾರೆ.
ಬೆಕ್ಕಿಗೆ ನಾನೇ ಗಂಟೆ ಕಟ್ಟುತ್ತೇನೆಂಬ ನ್ಯಾಯಾಧೀಶರ ಹೇಳಿಕೆ ಸ್ವಾಗತಾರ್ಹ
ಇತ್ತೀಚಿಗಷ್ಟೇ ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಗ್ರಹ ಮಾಡುವ ನಿಟ್ಟಿನಲ್ಲಿ ಹೈಕೋರ್ಟ್ ಜಡ್ಜ್ ಸಂದೇಶ್ ರವರ ಮಾತು ನಿಜಕ್ಕೂ ಸ್ವಾಗತಾರ್ಹ. ಅವರು ಬೀಸಿದ ಚಾಟಿಯಿಂದಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಓರ್ವ ಜಿಲ್ಲಾಧಿಕಾರಿ, ಓರ್ವ ಐಪಿಎಸ್ ಅಧಿಕಾರಿ ಜೈಲು ಪಾಲಾಗಿದ್ದಾರೆ. ಬೆಕ್ಕಿಗೆ ನಾನೇ ಗಂಟೆ ಕಟ್ಟುತ್ತೇನೆ ಎಂಬ ನ್ಯಾಯಾಧೀಶರ ಹೇಳಿಕೆ ಜನ ಸಾಮಾನ್ಯರಲ್ಲಿ ನ್ಯಾಯಾಂಗದ ಬಗ್ಗೆ ನಂಬಿಕೆ ಹುಟ್ಟಿಸಿದೆ. ಶಾಸಕಾಂಗ, ಕಾರ್ಯಾಂಗ ವಿಫಲವಾದಾಗ ನ್ಯಾಯಾಂಗ ತನ್ನ ಮಹತ್ವದ ಕಾರ್ಯ ಮಾಡಿ ತೋರಿಸಿದೆ ಇದಕ್ಕಾಗಿ ಹೈಕೋರ್ಟ್ ಜಡ್ಜ್ ಸಂದೇಶ್ ಅವರನ್ನು ಅಭಿನಂದಿಸುತ್ತೇನೆ ಅಂತ ವಿಶ್ವನಾಥ್ ತಿಳಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳ, ಸಿಒಡಿಗೆ ಸರ್ಕಾರ ಮುಕ್ತ ಅವಕಾಶ ನೀಡಿದ್ದರಿಂದ 30ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಜೈಲು ಪಾಲಾಗಿದ್ದಾರೆ. ಈಗ ಬೊಮ್ಮಾಯಿ ಸರ್ಕಾರ ಲೋಕಾಯುಕ್ತರ ನೇಮಕ ಮಾಡಿದ್ದಾರೆ. ಜೊತೆಗೆ ಲೋಕಾಯುಕ್ತಕ್ಕೆ ಪೂರ್ಣ ಪ್ರಮಾಣದ ಅಧಿಕಾರ ಕೊಡಬೇಕು. ವಿರೋಧ ಪಕ್ಷಗಳೂ ಇದನ್ನು ಒತ್ತಾಯ ಮಾಡಬೇಕು.
ಬೊಮ್ಮಾಯಿ ಪ್ರಯತ್ನಕ್ಕೆ ಸಂಪುಟ ಸಹೋದ್ಯೋಗಿಗಳು ಕೈ ಜೋಡಿಸುತ್ತಿಲ್ಲ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಟೇಕ್ಅಪ್ ಆಗಿದೆ ಅನ್ನೋದನ್ನ ಸಂಪೂರ್ಣ ಒಪ್ಪಲಾಗಲ್ಲ. ಬೊಮ್ಮಾಯಿಯವರು ಆಡಳಿತಕ್ಕೆ ವೇಗ ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಸಂಪುಟ ಸಹೋದ್ಯೋಗಿಗಳು ಇದಕ್ಕೆ ಕೈ ಜೋಡಿಸುತ್ತಿಲ್ಲ. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಆಗುವುದು ಕೂಡಾ ಅನುಮಾನ. ನಿಗಮ ಮಂಡಳಿಗಳ ಅಧ್ಯಕ್ಷರನ್ನು ಬದಲಾವಣೆ ಮಾಡಿದರೆ ಯಡಿಯೂರಪ್ಪ ಸುಮ್ಮನಿರುತ್ತಾರಾ. ಹಾಗಾಗಿ ನೇರವಾಗಿ ಚುನಾವಣೆಗೆ ಹೋಗುವ ಸಾಧ್ಯತೆ ಹೆಚ್ಚಾಗಿದೆ ಅಂತ ವಿಶ್ವನಾಥ್ ತಿಳಿಸಿದ್ರು.