ಕಾಂಗ್ರೆಸ್‌ನತ್ತ ಮುಖಮಾಡಿದ ಜೆಡಿಎಸ್‌ ನಾಯಕರು: ಕುಮಾರಸ್ವಾಮಿ ಪ್ರತಿಕ್ರಿಯೆ

By Suvarna NewsFirst Published Oct 19, 2020, 3:15 PM IST
Highlights

ಮಧು ಬಂಗಾರಪ್ಪರನ್ನ ಅವರ ತಂದೆಗಿಂತ ಹೆಚ್ಚಾಗಿ ಬೆಳೆಸಿದ್ದೇವೆ| ಲೋಕಸಭೆ ಚುನಾವಣೆ ಬಳಿಕ ನಾನು ಅವರ ಜೊತೆ ಮಾತನಾಡಿಲ್ಲ. ಪಕ್ಷ ಬಿಡುವ ವಿಚಾರ ನೀವು ಅವ್ರನ್ನೆ ಕೇಳಿ ಎಂದು ಪರೋಕ್ಷವಾಗಿ ಮಧು ಬಂಗಾರಪ್ಪ ವಿರುದ್ಧ  ಕಿಡಿ ಕಾರಿದ ಕುಮಾರಸ್ವಾಮಿ| 

ಬೆಂಗಳೂರು(ಅ.19): ಶಾರದಾ ಪೂರ್ಯ ನಾಯಕ್ ಬಗ್ಗೆ ಮಾತಾಡಬೇಡಿ. ಆಕೆ ನನ್ನ ಸಹೋದರಿ ಇದ್ದ ಹಾಗೆ. ಇವತ್ತು ಕೂಡಾ ಕಣ್ಣಲ್ಲಿ ನೀರು ಹಾಕಿಕೊಂಡು ನಾನು ಪಕ್ಷ ಬಿಡುವುದಿಲ್ಲ ಅಂತ ಹೇಳಿದ್ದಾರೆ. ಮಧು ಬಂಗಾರಪ್ಪ ಜೆಡಿಎಸ್‌ ತೊರೆಯುವ ಬಿಡುವ ಬಗ್ಗೆ ನನಗೆ ಗೊತ್ತಿಲ್ಲ. ನೀವು ಅವರನ್ನೇ ಕೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮಧು ಬಂಗಾರಪ್ಪ ಮತ್ತು ಶಾರದಾ ಪೂರ್ಯ ನಾಯಕ್ ಪಕ್ಷ ಬಿಡುವ ವಿಚಾರದ ಬಗ್ಗೆ ಇಂದು(ಸೋಮವಾರ) ನಗರದಲ್ಲಿ ಮಾತನಾಡಿದ ಅವರು, ಮಧು ಬಂಗಾರಪ್ಪರನ್ನ ಅವರ ತಂದೆಗಿಂತ ಹೆಚ್ಚಾಗಿ ನಾವು ಬೆಳೆಸಿದ್ದೇವೆ. ಲೋಕಸಭೆ ಚುನಾವಣೆ ಬಳಿಕ ನಾನು ಅವರ ಜೊತೆ ಮಾತನಾಡಿಲ್ಲ. ಪಕ್ಷ ಬಿಡುವ ವಿಚಾರ ನೀವು ಅವ್ರನ್ನೆ ಕೇಳಿ ಎಂದು ಪರೋಕ್ಷವಾಗಿ ಮಧು ಬಂಗಾರಪ್ಪ ವಿರುದ್ಧ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. 

ದೇವೇಗೌಡ-ಹೆಚ್‌ಡಿಕೆ ನಡೆಯಿಂದ ಬೇಸತ್ತ ಮತ್ತೊಬ್ಬ ಜೆಡಿಎಸ್‌ ನಾಯಕ ಕಾಂಗ್ರೆಸ್‌ ತೆಕ್ಕೆಗೆ..?

ಇನ್ನು ಈ ಬಗ್ಗೆ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ ಮಾಜಿ ಶಾಸಕಿ ಶಾರದಾ ಪೂರ್ಯ ನಾಯಕ್ ಅವರು, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವ ಉದ್ದೇಶ ಅಥವಾ ಆಲೋಚನೆ ನನ್ನ ಮುಂದಿಲ್ಲ. ನಾನು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಾತ್ರ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿದ್ದೆ, ಚುನಾವಣೆ ಸಂಬಂಧ ಮಾತ್ರ ಮಾತನಾಡಿದ್ದೇನೆ. ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಗೆಲುವಿಗೆ ಜಂಟಿಯಾಗಿ ಪ್ರಚಾರ ಮಾಡಲಾಗಿತ್ತು. ಚುನಾವಣೆ ಮುಗಿದ ಬಳಿಕ ಡಿ.ಕೆ.ಶಿವಕುಮಾರ್ ಅವರು ನನ್ನೊಂದಿಗೆ ಮಾತನಾಡಿಲ್ಲ. ನಾನು‌ ಬೆಂಗಳೂರಿಗೆ ಬಂದು ರಾಜಕಾರಣ ಮಾಡುತ್ತಿಲ್ಲ. ಅಸೆಂಬ್ಲಿ ಚುನಾವಣೆಯಲ್ಲಿ ಸೋತ ಬಳಿಕ ಕ್ಷೇತ್ರದಲ್ಲಿ ಜನರ ಜೊತೆಗೆ ಇದ್ದೇನೆ. ನಾನು‌ ಕಾಂಗ್ರೆಸ್ ಸೇರುವ ಚಿಂತನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಮಧು ಬಂಗಾರಪ್ಪ, ಮಾಜಿ ಶಾಸಕಿ ಶಾರದಾ ಪೂರ್ಯ ನಾಯಕ್ ಜತೆಗೆ ಡಿ.ಕೆ.ಶಿವಕುಮಾರ್‌ ಮಾತುಕತೆ ನಡೆಸಿದ್ದಾರೆ. ಜತೆಗೆ ಇನ್ನೂ ಕೆಲವರನ್ನೂ ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ. 
 

click me!