ಇಬ್ರಾಹಿಂ ಕರೆತರಲು ಪುನಃ ಎಚ್‌ಡಿಕೆ ಯತ್ನ| 2ನೇ ಬಾರಿ ಇಬ್ರಾಹಿಂ ಜತೆ ಮಾಜಿ ಸಿಎಂ ಭೇಟಿ| ಜೆಡಿಎಸ್‌ಗೆ ಬೇಗ ಬನ್ನಿ ಎಂದು ಮನವಿ| ಜೆಡಿಎಸ್‌ನ ಮುಸ್ಲಿಂ ಸಮುದಾಯಕ್ಕೆ ಸೇರಿದ ಸಮರ್ಥ ನಾಯಕರಿಲ್ಲ|
ಬೆಂಗಳೂರು(ಡಿ.28): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತಕೂಟದಲ್ಲಿದ್ದ ಕಾಂಗ್ರೆಸ್ಸಿನ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರನ್ನು ಜೆಡಿಎಸ್‌ಗೆ ಕರೆತರುವ ಪ್ರಯತ್ನವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದುವರಿಸಿದ್ದು, ಎರಡನೇ ಬಾರಿ ಇಬ್ರಾಹಿಂ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.
‘ಭಾನುವಾರ ನಗರದ ಬೆನ್ಸನ್ ಟೌನ್‌ನಲ್ಲಿನ ಇಬ್ರಾಹಿಂ ನಿವಾಸಕ್ಕೆ ಭಾನುವಾರ ತೆರಳಿದ ಕುಮಾರಸ್ವಾಮಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು. ಇದೇ ತಿಂಗಳು 7ರಂದು ಮೊದಲ ಬಾರಿ ಇಬ್ರಾಹಿಂ ಅವರನ್ನು ಭೇಟಿಯಾಗಿದ್ದ ಕುಮಾರಸ್ವಾಮಿ ಪಕ್ಷಕ್ಕೆ ಆಹ್ವಾನಿಸಿದ್ದರು. ಆದರೆ, ಇಬ್ರಾಹಿಂ ಅವರು ಯಾವುದೇ ತೀರ್ಮಾನವನ್ನು ಹೇಳಿರಲಿಲ್ಲ. ರಾಜ್ಯಾದ್ಯಂತ ಪ್ರವಾಸ ಕೈಗೊಂಡ ಬಳಿಕ ಮುಂದಿನ ನಿರ್ಣಯ ತಿಳಿಸುವ ಬಗ್ಗೆ ಹೇಳಿದ್ದರು. ಆದರೆ, ಪಕ್ಷಕ್ಕೆ ಬರುವ ಬಗ್ಗೆ ಯಾವುದೇ ವಿಷಯ ತಿಳಿಸದ ಕಾರಣ ಕುಮಾರಸ್ವಾಮಿ ಅವರು ಮತ್ತೊಮ್ಮೆ ಇಬ್ರಾಹಿಂ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಬರುವ ಬಗ್ಗೆ ಅದಷ್ಟುಬೇಗ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಿದರು’ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಸಂಬಂಧವನ್ನೇ ಮುರಿದ್ಕೊಂಡು ಜೆಡಿಎಸ್ ಸೇರಲು ತೀರ್ಮಾನಿಸಿದ ಹಿರಿಯ ನಾಯಕ
ಇಬ್ರಾಹಿಂ ಅವರನ್ನು ಕುಮಾರಸ್ವಾಮಿ ಮೊದಲ ಸಲ ಭೇಟಿಯಾದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಭೇಟಿಯಾಗಿದ್ದರು. ಈ ವೇಳೆ ಇಬ್ರಾಹಿಂ ಅವರನ್ನು ಕಾಂಗ್ರೆಸ್‌ನಲ್ಲಿರುವಂತೆ ಶಿವಕುಮಾರ್ ಮನವಿ ಮಾಡಿಕೊಂಡಿದ್ದರು. ಕಾಂಗ್ರೆಸ್‌ನಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಅಶ್ವಾಸನೆ ನೀಡಿದ್ದರು. ಉಭಯ ನಾಯಕರು ಭೇಟಿ ಮಾಡಿದ ಬಳಿಕ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬ ಚಿಂತನೆಯಲ್ಲಿರುವ ಇಬ್ರಾಹಿಂ ಅವರನ್ನು ಕುಮಾರಸ್ವಾಮಿ ಮತ್ತೊಮ್ಮೆ ಭೇಟಿಯಾಗಿ ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಜೆಡಿಎಸ್‌ನ ಮುಸ್ಲಿಂ ಸಮುದಾಯಕ್ಕೆ ಸೇರಿದ ಸಮರ್ಥ ನಾಯಕರು ಇಲ್ಲ. ಸಮುದಾಯದ ಮತಗಳನ್ನು ಸೆಳೆಯುವಂತಹ ಮುಸ್ಲಿಂ ನಾಯಕರು ಇಲ್ಲದ ಕಾರಣ ಇಬ್ರಾಹಿಂ ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.