
ನವದೆಹಲಿ(ಮಾ.15): ‘ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ‘ಗುಜರಾತ್ ಮಾದರಿ’ ಅನುಸರಿಸುವ ಬದಲು ಗೆಲ್ಲುವ ಕುದುರೆಗಳು ಎನ್ನಿಸಿಕೊಳ್ಳುವ ಹಾಲಿ ಶಾಸಕರಿಗೆ ಟಿಕೆಟ್ ನೀಡಲು ಬಿಜೆಪಿ ಮುಂದಾಗಿದೆ. ಹೊಸ ಮುಖಗಳ ಬದಲಿಗೆ ಹಾಲಿ ಶಾಸಕರಿಗೆ ಮಣೆ ಹಾಕಲು ಬಿಜೆಪಿ ಯೋಜಿಸಿದೆ’ ಎಂದು ಮೂಲಗಳು ತಿಳಿಸಿದ್ದಾಗಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಆಡಳಿತ ವಿರೋಧಿ ಅಲೆ ತಗ್ಗಿಸಲು ಗುಜರಾತ್ ಚುನಾವಣೆಗೂ ಮೊದಲು ಬಹಳಷ್ಟುಹಾಲಿ ಶಾಸಕರನ್ನು ಕೈಬಿಟ್ಟು ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಆದರೆ ದಕ್ಷಿಣದ ರಾಜ್ಯದಲ್ಲಿ ಈ ಯೋಜನೆ ಫಲ ಕೊಡಲಾರದು ಎಂದು ಭಾವಿಸಿರುವ ಬಿಜೆಪಿ, ಗೆಲ್ಲುವ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಹಾಲಿ ಶಾಸಕರಿಗೇ ಟಿಕೆಟ್ ನೀಡಲು ಮುಂದಾಗಿದೆ ಎಂದು ವರದಿ ಹೇಳಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರಗ ಆಚರಣೆಗೆ ಅನುದಾನ: ಡಿಕೆಶಿ ಭರವಸೆ
‘ಈಗಾಗಲೇ ಗೆದ್ದಿರುವ ಶಾಸಕರು ತಮ್ಮ ವೋಟ್ ಬ್ಯಾಂಕ್‌ಗಳನ್ನು ಭದ್ರಗೊಳಿಸಿಕೊಂಡಿದ್ದಾರೆ. ಹಾಗಾಗಿ ಹೊಸಬರಿಗೆ ಅವಕಾಶ ನೀಡುವ ಮೂಲಕ ಸ್ಥಾನಗಳನ್ನು ಕಳೆದುಕೊಳ್ಳಲು ಬಿಜೆಪಿ ಸಿದ್ಧವಿಲ್ಲ. ಇದರಿಂದಾಗಿ ಬಹುತೇಕ ಹಾಲಿ ಶಾಸಕರೇ ಟಿಕೆಟ್ ಪಡೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ’ ಎಂದು ಮೂಲಗಳು ತಿಳಿಸಿವೆ.
‘ಸುಮಾರು 120 ಶಾಸಕರು ತಮ್ಮ ಸ್ವಂತ ಬಲದಿಂದಲೇ ರಾಜ್ಯದಲ್ಲಿ ಗೆದ್ದಿದ್ದಾರೆ. ಒಂದು ವೇಳೆ ಇವರಿಗೆ ಟಿಕೆಟ್ ನಿರಾಕರಿಸಿದರೆ ಇವರು ಪಕ್ಷಾಂತರ ಮಾಡಬಹುದು ಎಂಬ ಭಯ ಪಕ್ಷದ ಚಿಂತಕರ ಚಾವಡಿಯನ್ನು ಕಾಡಿದೆ’ ಎಂದು ಗೊತ್ತಾಗಿದೆ.
ಮೋದಿ, ಶಾ ಭೇಟಿ ನೀಡಿದ ಬೆನ್ನಲ್ಲೇ 20ರಂದು ಬೆಳಗಾವಿಗೆ ರಾಹುಲ್ ಗಾಂಧಿ
ಇತ್ತೀಚೆಗೆ ಕೇವಲ 6-7 ಶಾಸಕರಿಗೆ ಟಿಕೆಟ್ ನೀಡದಿರುವ ಸಾಧ್ಯತೆಗಳಿವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಇವರಲ್ಲಿ 75 ವರ್ಷ ಮೇಲ್ಪಟ್ಟವರು ಹಾಗೂ ಅನಾರೋಗ್ಯಕ್ಕೆ ತುತ್ತಾಗಿರುವವರೇ ಇದ್ದಾರೆ. ಟಿಕೆಟ್ ಹಂಚಿಕೆ ವೇಳೆ ಈ ಶಾಸಕರ ಮಾತಿಗೆ ಮನ್ನಣೆ ನೀಡಿ ಇವರು ಸೂಚಿಸಿದವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ವರದಿ ಹೇಳಿದೆ.
ಗುಜರಾತಲ್ಲೇನಾಗಿತ್ತು?:
ಗುಜರಾತ್ ಚುನಾವಣೆಯಲ್ಲಿ 42 ಮಂದಿ ಹಾಲಿ ಶಾಸರಿಗೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಆದರೂ ಅಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿತ್ತು. ಹಾಗಾಗಿ ಹಾಲಿ ಶಾಸಕರಿಗೆ ಟಿಕೆಟ್ ನೀಡದೇ ಇರುವ ಬಿಜೆಪಿ ತಂತ್ರ ಕರ್ನಾಟಕದಲ್ಲೂ ಜಾರಿಯಾಗಬಹುದು ಎಂಬ ಗುಸುಗುಸು ಹಬ್ಬಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.