ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ವಿತ್ತೀಯ ಕೊರತೆ ಸೃಷ್ಟಿ: ಸಿಎಜಿ

Published : Aug 20, 2025, 04:46 AM IST
Guarantee Schemes

ಸಾರಾಂಶ

ವಿತ್ತೀಯ ಕೊರತೆ ಮತ್ತು ರಾಜಸ್ವ ಕೊರತೆಯನ್ನು ಸರಿದೂಗಿಸಲು ರಾಜ್ಯ ಸರ್ಕಾರ 63 ಸಾವಿರ ಕೋಟಿ ರು. ನಿವ್ವಳ ಮಾರುಕಟ್ಟೆ ಸಾಲವನ್ನು ಪಡೆದುಕೊಂಡಿದೆ.

ವಿಧಾನಸಭೆ (ಆ.20): ರಾಜ್ಯ ಸರ್ಕಾರ ಜಾರಿಗೊಳಿಸಿರುವ 5 ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ವೆಚ್ಚ ಮಾಡಿದ ಪರಿಣಾಮ 2023-24ನೇ ಸಾಲಿನಲ್ಲಿ 9,271 ಕೋಟಿ ರು. ರಾಜಸ್ವ ಕೊರತೆ ಉಂಟಾಗಿದೆ. ಅಲ್ಲದೆ, ವಿತ್ತೀಯ ಕೊರತೆ 65,522 ಕೋಟಿ ರು.ಗೆ ಏರಿಕೆಯಾಗುವಂತಾಗಿದೆ ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ (ಸಿಎಜಿ) ವ್ಯಾಖ್ಯಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2023-24ನೇ ಸಾಲಿಗೆ ಕೊನೆಗೊಂಡ ರಾಜ್ಯದ ಹಣಕಾಸು ವ್ಯವಹಾರಗಳ ಲೆಕ್ಕಪರಿಶೋಧನಾ ವರದಿಯಲ್ಲಿ 2023-24ರಲ್ಲಿನ ರಾಜ್ಯದ ಆರ್ಥಿಕ ಪರಿಸ್ಥಿತಿ, ಪಂಚ ಗ್ಯಾರಂಟಿಗಳಿಂದ ಎದುರಾಗುತ್ತಿರುವ ಆರ್ಥಿಕ ಪರಿಣಾಮಗಳ ಕುರಿತಂತೆ ಹಲವು ಅಂಶಗಳನ್ನು ವಿವರಿಸಲಾಗಿದೆ.

ಅಲ್ಲದೆ, ವಿತ್ತೀಯ ಕೊರತೆ ಮತ್ತು ರಾಜಸ್ವ ಕೊರತೆಯನ್ನು ಸರಿದೂಗಿಸಲು ರಾಜ್ಯ ಸರ್ಕಾರ 63 ಸಾವಿರ ಕೋಟಿ ರು. ನಿವ್ವಳ ಮಾರುಕಟ್ಟೆ ಸಾಲವನ್ನು ಪಡೆದುಕೊಂಡಿದೆ. 2022-23ಕ್ಕೆ ಹೋಲಿಸಿದರೆ 37 ಸಾವಿರ ಕೋಟಿ ರು. ಹೆಚ್ಚಿನ ನಿವ್ವಳ ಮಾರುಕಟ್ಟೆ ಸಾಲ ಪಡೆಯಲಾಗಿದೆ ಹಾಗೂ ಗ್ಯಾರಂಟಿ ಯೋಜನೆಗಳ ಕಾರಣದಿಂದಲೇ ಬಂಡವಾಳ ವೆಚ್ಚವನ್ನು 5,229 ಕೋಟಿ ರು. ಕಡಿಮೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಂಡವಾಳ ವೆಚ್ಚದಲ್ಲಿ ಕಡಿಮೆ ಮಾಡುವುದರಿಂದ ಬಂಡವಾಳ ರಚನೆಯಲ್ಲಿ ಈ ಕೊರತೆಯು ಭವಿಷ್ಯದ ಬೆಳವಣಿಗೆಗೆ ಹಾನಿಕಾರ. ಜತೆಗೆ ಪಂಚ ಗ್ಯಾರಂಟಿಗಳ ಅನುಷ್ಠಾನವು ರಾಜ್ಯದ ಸಂಪನ್ಮೂಲಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.

ರಾಜ್ಯದ ಹಣಕಾಸು ಕೊರತೆಯು 2022-23ನೇ ಸಾಲಿನಲ್ಲಿ 46,623 ಕೋಟಿ ರು.ನಿಂದ 2023-24ನೇ ಸಾಲಿಗೆ 65,522 ಕೋಟಿ ರು.ಗೆ ಹೆಚ್ಚಳವಾಗಿದೆ. ಗ್ಯಾರಂಟಿ ಯೋಜನೆಗಳು ಮತ್ತು ಅದರಿಂದ ಉಂಟಾದ ಕೊರತೆಗಳಿಗೆ ಹಣಕಾಸು ಒದಗಿಸುವ ಸಲುವಾಗಿಯೇ ಈ ಕೊರತೆ ಉಂಟಾಗಿದ್ದಲ್ಲದೆ, 63 ಸಾವಿರ ಕೋಟಿ ರು. ನಿವ್ವಳ ಮಾರುಕಟ್ಟೆ ಸಾಲವನ್ನು ಪಡೆದುಕೊಂಡಿದೆ. ಅಲ್ಲದೆ, 2023-24ನೇ ಸಾಲಿನಲ್ಲಿನ ರಾಜಸ್ವ ವೆಚ್ಚದ ಶೇ. 15ರಷ್ಟು ಪಾಲನ್ನು ಗ್ಯಾರಂಟಿ ಯೋಜನೆಗಳು ಹೊಂದಿವೆ ಎಂದು ತಿಳಿಸಲಾಗಿದೆ.

ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು (ಜಿಎಸ್‌ಡಿಪಿ) 2019-20ಕ್ಕೆ ಹೋಲಿಸಿದರೆ 2023-24ರಲ್ಲಿ ಶೇ. 11.84ರಷ್ಟು ಹೆಚ್ಚಳವಾಗಿದೆ. 2019-20ರಲ್ಲಿ 16.15 ಲಕ್ಷ ಕೋಟಿ ರು.ಗಳಿಷ್ಟಿದ್ದ ಜಿಎಸ್‌ಡಿಪಿ ದರ, 2023-24ಕ್ಕೆ 25.67 ಲಕ್ಷ ಕೋಟಿ ರು.ಗಳಷ್ಟಾಗಿದೆ. ಅಲ್ಲದೆ, 2022-23ಕ್ಕೆ ಹೋಲಿಸಿದರೆ 2023-24ರಲ್ಲಿ ಶೇ. 13.10ರಷ್ಟು ಬೆಳವಣಿಗೆ ಸಾಧಿಸಿದೆ. ಇನ್ನು, ರಾಜಸ್ವ ಸ್ವೀಕೃತಿಯು 2022-23ಕ್ಕೆ ಹೋಲಿಸಿದರೆ 2023-24ನೇ ಸಾಲಿನಲ್ಲಿ ಶೇ.1.86ರಷ್ಟು ಹೆಚ್ಚಳವಾಗಿದೆ. ಹಾಗೆಯೇ, ರಾಜ್ಯದ ಒಟ್ಟು ವೆಚ್ಚವು ಹಿಂದಿನ ವರ್ಷಕ್ಕೆ ಹೋಲಿಸಿದರೆ (2.76 ಲಕ್ಷ ಕೋಟಿ ರು.) 2023-24ನೇ ಸಾಲಿನಲ್ಲಿ (2.99 ಲಕ್ಷ ಕೋಟಿ ರು.) ಶೇ. 8.34ರಷ್ಟು ಏರಿಕೆಯಾಗಿದೆ. ಆದರೆ, ಜಿಎಸ್‌ಡಿಪಿಗೆ ಇರುವ ಅನುಪಾತವು ಹಿಂದಿನ ವರ್ಷ ಶೇ. 12.17ರಷ್ಟಿದ್ದರೆ 2023-24ರಲ್ಲಿ ಶೇ. 11.65ಕ್ಕೆ ಕುಸಿದಿದೆ.

ತಪ್ಪು ವರ್ಗೀಕರಣ: 504.29 ಕೋಟಿ ರು. ರಾಜಸ್ವ ವೆಚ್ಚವನ್ನು ಬಂಡವಾಳ ವೆಚ್ಚವೆಂದು ಮತ್ತು 0.01 ಕೋಟಿ ರು. ಬಂಡವಾಳ ವೆಚ್ಚವನ್ನು ರಾಜಸ್ವ ವೆಚ್ಚವೆಂದು ತಪ್ಪಾಗಿ ವರ್ಗೀಕರಣ ಮಾಡಿದ ಪರಿಣಾಮ 504.28 ಕೋಟಿ ರು. ರಾಜಸ್ವ ವೆಚ್ಚ ಕೊರತೆಯನ್ನು ಕಡಿಮೆಯಾಗಿ ಹೇಳಲಾಗಿದೆ. ಅಲ್ಲದೆ, 2023-24ನೇ ಸಾಲಿನ ರಾಜ್ಯ ಬಜೆಟ್‌ ಅಂದಾಜಿಗಿಂತ ಶೇ. 3.42ರಷ್ಟು ಕಡಿಮೆ ಖರ್ಚು ಮಾಡಿದ್ದು, ಕಳೆದೆರಡು ವರ್ಷಗಳಲ್ಲಿ ಕನಿಷ್ಠ ವ್ಯತ್ಯಾಸವನ್ನು ಕಾಣುತ್ತಿರುವ ರಾಜ್ಯವು ಬಜೆಟ್‌ ಮತ್ತು ವಾಸ್ತವಿಕ ಅಂಕಿ-ಅಂಶಗಳ ನಡುವಿನ ವ್ಯತ್ಯಾಸದಲ್ಲಿ ಏರಿಕೆ ಕಂಡಿದೆ ಎಂದು ಸಿಎಜಿ ತಿಳಿಸಿದೆ.

ಸ್ವಂತ ಆದಾಯ ಹೆಚ್ಚಳ: 2022-23ನೇ ಸಾಲಿಗೆ ಹೋಲಿಸಿದರೆ 2023-24ನೇ ಸಾಲಿನಲ್ಲಿ ಸ್ವಂತ ತೆರಿಗೆ ಆದಾಯ ಅಥವಾ ಸಂಪನ್ಮೂಲಗಳ ಸ್ವೀಕೃತಿಯಲ್ಲಿ ಹೆಚ್ಚಳವಾಗಿದೆ. 2023-24ನೇ ಸಾಲಿನಲ್ಲಿ ಒಟ್ಟು ರಾಜಸ್ವ ಸ್ವೀಕೃತಿಗಳಲ್ಲಿ ರಾಜ್ಯದ ಸ್ವಂತ ಸಂಪನ್ಮೂಲಗಳ ಪ್ರಮಾಣ ಶೇ. 76ರಷ್ಟಿದ್ದು, 2022-23ಕ್ಕೆ ಹೋಲಿಸಿದರೆ ಸ್ವಂತ ತೆರಿಗೆ ಆದಾಯ ಶೇ. 13.78ರಷ್ಟು ಹೆಚ್ಚಳವಾಗಿದೆ ಹಾಗೂ ಕೇಂದ್ರ ತೆರಿಗೆ ವರ್ಗಾವಣೆಯು ಶೇ. 19.07ರಷ್ಟು ಹೆಚ್ಚಳವಾಗಿದೆ. ಆದರೆ, ತೆರಿಗೇತರ ಆದಾಯವು 2022-23ರಲ್ಲಿ 13,914 ಕೋಟಿ ರು.ಗಳಷ್ಟಿದ್ದರೆ 2023-24ರಲ್ಲಿ 13,117 ಕೋಟಿ ರು.ಗೆ ಕುಸಿದಿದ್ದು, ಒಟ್ಟಾರೆ 797 ಕೋಟಿ ರು. ಇಳಿಕೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸಿಎಜಿ ಶಿಫಾರಸುಗಳು: ರಾಜ್ಯ ಸರ್ಕಾರವು ಬಾಕಿ ಇರುವ ಆದಾಯಗಳ ಅಥವಾ ಸಂಗ್ರಹಣೆಯಲ್ಲಿನ ಕೊರತೆಯನ್ನು ತಡೆಗಟ್ಟಲು ತನ್ನ ಮೇಲ್ವಿಚಾರಣೆಯನ್ನು ಬಲಪಡಿಸಬೇಕು. ರಾಜಸ್ವ ಹೆಚ್ಚಳವನ್ನು ಸಾಧಿಸುವ ನಿಟ್ಟಿನಲ್ಲಿ ರಾಜ್ಯವು ಹೆಚ್ಚುವರಿ ತೆರಿಗೆ ಮತ್ತು ತೆರಿಗೆಯೇತರ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಪರಿಗಣಿಸಬೇಕು. ರಾಜ್ಯ ಸರ್ಕಾರವು ಬಂಡವಾಳ ವೆಚ್ಚವನ್ನು ಹೆಚ್ಚಿಸಲು ಮಿತಿಮೀರಿದ ಸಮಯ ಮತ್ತು ವೆಚ್ಚವನ್ನು ತಡೆಯಲು ಅಪೂರ್ಣ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಮತ್ತು ಪೂರ್ಣಗೊಳ್ಳುತ್ತಿರುವ ಕಾಮಗಾರಿಗಳಿಗೆ ಆದ್ಯತೆ ನೀಡಲು ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಸಿಎಜಿ ಶಿಫಾರಸು ಮಾಡಿದೆ.

ರಾಜ್ಯ ಹಣಕಾಸು ಸಂಹಿತೆಯ ನಿಬಂಧನೆಗಳಿಗೆ ಅನುಗುಣವಾಗಿ ಪುನರ್ವಿನಿಯೋಗ ಆದೇಶಗಳನ್ನು ಹೊರಡಿಸಲಾಗಿದೆಯೇ ಎಂದು ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಹೆಚ್ಚುವರಿ ವೆಚ್ಚಗಳಿಗೆ ಕಾರಣಗಳನ್ನು ರಾಜ್ಯ ಸರ್ಕಾರ ವಿಶ್ಲೇಷಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಬಜೆಟ್‌ನಲ್ಲಿ ತರಲು ಪ್ರಯತ್ನಿಸಬೇಕು. ವೈಯಕ್ತಿಕ ಠೇವಣಿ ಖಾತೆಗಳಲ್ಲಿನ ಉಳಿತಾಯಗಳನ್ನು ಅದರ ಉಪಯುಕ್ತತೆಯ ಅವಧಿಯನ್ನು ಮೀರಿದ ಉಳಿತಾಯಗಳನ್ನು ಸ್ವಚ್ಛಗೊಳಿಸುವುದನ್ನು ಪರಿಶೀಲಿಸುವ ಅಗತ್ಯ ಇದೆ. ಉಳಿತಾಯಗಳ ಹೊಂದಾಣಿಕೆಯ ನಂತರ ನಿರ್ವಾಹಕರು ಮತ್ತು ಖಜಾನೆಯೊಂದಿಗೆ ಸಮಾಲೋಚಿಸಿ ಅಂತಹ ವೈಯಕ್ತಿಕ ಠೇವಣಿ ಖಾತೆಗಳನ್ನು ಮುಚ್ಚಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದೆ.

ಸಿಎಜಿ ವರದಿಯಲ್ಲಿನ ಪ್ರಮುಖ ಅಂಶಗಳು:
* ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ ಸೇರಿದಂತೆ ಇನ್ನಿತರ ಅನುದಾನ ಬರದ ಕಾರಣ ಸಹಾಯಾನುದಾನ ಶೇ. 58ರಷ್ಟು ಕುಸಿತ

* ಕೇಂದ್ರ ಪುರಸ್ಕೃತ ಯೋಜನೆಗಳು ಮತ್ತು ಹಣಕಾಸು ಆಯೋಗದಿಂದ 15,528 ಕೋಟಿ ರು. ಅನುದಾನ ಸ್ವೀಕಾರ

* 2023-24ನೇ ಸಾಲಿನಲ್ಲಿ ಹಿಂದಿನ ವರ್ಷಕ್ಕಿಂತ ಬದ್ಧ ವೆಚ್ಚ ಶೇ. 9ರಷ್ಟು ಹೆಚ್ಚಳ

* ಬಂಡವಾಳ ವೆಚ್ಚದಲ್ಲಿನ ಕುಸಿತದಿಂದ ಅಪೂರ್ಣ ಯೋಜನೆಗಳ ಸಂಖ್ಯೆ 1,864ರಿಂದ 3,140ಕ್ಕೆ ಏರಿಕೆ

* 64 ಸರ್ಕಾರಿ ಸಂಸ್ಥೆಗಳು ಸರ್ಕಾರದ ಅನುದಾನ ಮೇಲೆ ಗಳಿಸಿದ 14,549.91 ಕೋಟಿ ರು. ಬಡ್ಡಿಯನ್ನು ಸರ್ಕಾರದ ಖಾತೆಗೆ ಸಂದಾಯ ಮಾಡಿಲ್ಲ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ - ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ