ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ, ಕಲಬುರಗಿಗೆ ಮೋದಿ ಕೊಡುಗೆ ಏನಿದೆ? ಖರ್ಗೆ ಪ್ರಶ್ನೆ

By Suvarna NewsFirst Published Mar 13, 2024, 6:55 PM IST
Highlights

ಕಲಬುರಗಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಏನಿದೆ? ಈಗ ಮತ್ತೆ ಬರುತ್ತಿದ್ದಾರೆ‌ ಏನಾದರೂ ಘೋಷಣೆ ಮಾಡುತ್ತಾರೆಯೇ? ಏನು ಘೋಷಣೆ ಮಾಡದೆ ಬಂದರೆ ಏನು ಪ್ರಯೋಜನ ? ಎಂದು ರಾಜ್ಯ ಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ಕಲಬುರಗಿ (ಮಾ.13): ಕಲಬುರಗಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಏನಿದೆ? ಈಗ ಮತ್ತೆ ಬರುತ್ತಿದ್ದಾರೆ‌ ಏನಾದರೂ ಘೋಷಣೆ ಮಾಡುತ್ತಾರೆಯೇ? ಏನು ಘೋಷಣೆ ಮಾಡದೆ ಬಂದರೆ ಏನು ಪ್ರಯೋಜನ ? ಎಂದು ರಾಜ್ಯ ಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ಜಿಲ್ಲಾಡಳಿತ ಹಾಗೂ ಜಿಲ್ಲಾಪಂಚಾಯತ ವತಿಯಿಂದ ನಗರದ ಎನ್.ವಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಕೇವಲ ರೈಲುಗಳಿಗೆ ಹಸಿರು ಝಂಡಾ ತೋರಿಸಿದರೇ ಅಭಿವೃದ್ದಿ ಆದಂತಾಗುತ್ತದೆಯೇ? ಸಾವಿರಾರು ಕೋಟಿಯ ಯೋಜನೆಗಳಿಗೆ ಮೋದಿ ಹಸಿರುನಿಶಾನೆ ತೋರಿಸಲಿ ಅದು ಬಿಟ್ಟು ಬರೀ ರೆಲ್ವೆಗಳಿಗೆ ಝಂಡಾ ತೋರಿಸಿದರೆ ಏನರ್ಥ ಎಂದು ಟೀಕಿಸಿದ ಅವರು ವಾಡಿಯ ರೇಲ್ವೆ ಮೇಲ್ಸೇತುವೆ ಪ್ರಾರಂಭವಾಗಿ ವರ್ಷಗಳೇ ಕಳೆದರು ಇನ್ನೂ ಮುಗಿದಿಲ್ಲ ಎಂದರು.

ಕಲ್ಯಾಣ ಕರ್ನಾಟಕದ ಯಾವ ಜಿಲ್ಲೆಗಳಿಗೆ ಏನು ಮಾಡಿದ್ದಾರೆ? ಆದರೆ ಕಾಂಗ್ರೆಸ್ ಪಕ್ಷಕ್ಕೆ ಬೈಯುವುದು ಮಾತ್ರ ಬಿಟ್ಟಿಲ್ಲ. ನೀವು ಎಷ್ಟೇ ಬೈದರೂ ಪರವಾಗಿಲ್ಲ ಕೆಲಸ ಮಾಡಿ ತೋರಿಸಪ್ಪಾ ಮಾರಾಯ ಎಂದ ಖರ್ಗೆ ಏನು ಕೆಲಸ ಮಾಡದೇ ನಿಮಗೆ ಯಾಕೆ ಜನರು ಮತ ಹಾಕಬೇಕು ಎಂದು‌ ಪ್ರಶ್ನಿಸಿದರು.

ರೈತರ ಬೆಳೆಗಳಿಗೆ ಎಂ ಎಸ್ ಪಿ ದರ ನಿಗದಿ ಮಾಡಿ ಅದರ ಲಾಭ ದುಪ್ಪಟ್ಟು ಮಾಡುವೆ ಎಂದು ಬರೀ ಘೋಷಣೆ ಮಾಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಂ ಎಸ್ ಪಿ ಕಾನೂನುಬದ್ಧ ಮಾಡುತ್ತೇವೆ ಎಂದರು. ಆದರೆ, ದಿಲ್ಲಿ ಗಡಿಯಲ್ಲಿ ರೈತರು ಪ್ರತಿಭಟನೆ ಕುಳಿತಿದ್ದಾರೆ.  ಅವರ ಸಮಸ್ಯೆ‌ ಬಗೆಹರಿಸುವುದು ಬಿಟ್ಟು ಅವರು ದಿಲ್ಲಿಗೆ ಬರದಂತೆ ತಡೆಯಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕು ನೀಡಿದ್ದೇ ಕಾಂಗ್ರೆಸ್ ಪಕ್ಷ ಎಂದು ಖರ್ಗೆ,  ಈಗ ದೇಶದ ಆದಿವಾಸಿಗಳ ಕಲ್ಯಾಣಕ್ಕಾಗಿ ಯೋಜನೆಗಳನ್ನು ಹಮ್ಮಿಕೊಳ್ಳಲಿದ್ದೇವೆ. ಸರ್ಕಾರದ ಐದು ಗ್ಯಾರಂಟಿಗಳನ್ನು ಅವರು ನಿಭಾಯಿಸುತ್ತಿದ್ದಾರೆ. ಅದರ ಜೊತೆಗೆ ಜನಗಣತೆ ಹಾಗೂ ಸರ್ವೆ ಮಾಡಲಾಗುತ್ತದೆ. ಶಿಕ್ಷಣ ಹಾಗೂ ಆದಾಯ ದ್ವಿಗುಣ ಮಾಡಲು ಯೋಜನೆ ಹಾಕಿಕೊಳ್ಳುತ್ತಿದ್ದೇವೆ. ಯುವನಿಧಿ ಗ್ಯಾರಂಟಿ ಯೋಜನೆಯಡಿಯಲ್ಲಿ ಪದವಿ, ಡಿಪ್ಲೋಮ ಆದವರಿಗೆ ತರಬೇತಿ ನೀಡಿ ಒಂದು‌ ಲಕ್ಷ‌ ಸಹಾಯ‌ಧನ ನೀಡುತ್ತೇವೆ.  ಅಲ್ಲದೇ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ತುಂಬುತ್ತೇವೆ ಎಂದು ಭರವಸೆ ನೀಡಿದರು.

ಸಂವಿಧಾನ ರಚನೆ ಸುಮ್ಮನೆ ಆಗಿದ್ದಲ್ಲ ಅದರ ಹಿಂದೆ ಅಸಂಖ್ಯಾತ ಜನರ ತ್ಯಾಗವಿದೆ. ಅಂತಹ ಸಂವಿಧಾನ ಬದಲಾಯಿಸುತ್ತೇವೆ ಎಂದು ಸಂಸದನೊಬ್ಬ ಹೊರಟಿದ್ದಾನೆ. ಆದರೆ ಬಿಜೆಪಿಯವರು ಅವನ ಹೇಳಿಕೆ ಪಕ್ಷಕ್ಕೆ ಸಂಬಂಧಿಸಿಲ್ಲ ಎನ್ನುತ್ತಿದ್ದಾರೆ. ಅದ್ಹೇಗೆ ಸಂಬಂಧವಿಲ್ಲ ? ಅವನು‌ ಚುನಾವಣೆಯಲ್ಲಿ ನಿಲ್ಲಲು ಟಿಕೇಟು ನೀಡಿದ್ದು ಬಿಜೆಪಿಯವರಲ್ಲವೇ?  ಸಂವಿಧಾನದ ಆಶಯಕ್ಕೆ ಧಕ್ಕೆ ಆಗಿ ಮತ್ತೆ ಗುಲಾಮಿಗಿರಿ ಬಂದರೆ ದೇಶದ ಭವಿಷ್ಯಕ್ಕೆ ಕುತ್ತು ಬರಲಿದೆ. ಅದಕ್ಕಾಗಿ ಯುವಕರು ಸಂವಿಧಾನ ರಕ್ಷಣೆ ಮಾಡಲು ಕೈಜೋಡಿಸಬೇಕು ಎಂದರು. ಮೋದಿ ಸಿಎಂ ಆಗಿದ್ದಾಗ 25,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಈಗಲೂ ಮುಂದುವರೆದಿವೆ. ರೈತರ ಸಮಸ್ಯೆಗಳ ಕಡೆ ಗಮನ ಹರಿಸದೇ ಅಂಬಾನಿ, ಅದಾನಿ ಅಂತ ಹೊರಟಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತಗಳ ಸುಭದ್ರತೆ ಹಾಗೂ‌ ಬೆಳವಣಿಗೆಗೆ ವಿಶೇಷ ಯೋಜನೆಗಳನ್ನು ಜಾರಿಗೆ ತರಲಿದ್ದೇವೆ. ಮಹಿಳೆಯರ ಸಬಲೀಕರಣಕ್ಕೆ ಹಾಗೂ ಯುವಕರಿಗೆ ಉದ್ಯೋಗಕ್ಕೆ ಕ್ರಮ ಕೈಗೊಳ್ಳಲಿದ್ದೇವೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ನೀಡಿ ಆದಾಯ ಡಬಲ್ ಮಾಡಲು‌ ಯೋಜನೆ ರೂಪಿಸಲಿದ್ದೇವೆ. ಹೈಕ ಭಾಗದ ಬಡ ಜನರ ಆದಾಯ ಬೆಳವಣಿಗೆಗೆ ಯೋಜನೆ ಜಾರಿಗೆ ತರಲಿದ್ದೇವೆ ಎಂದು ಖರ್ಗೆ ಹೇಳಿದರು.

ಕಾಂಗ್ರೆಸ್ ಪಕ್ಷದ ಬ್ಯಾಂಕ್ ಅಕೌಂಟ್ ಬಂದ್ ಮಾಡಿ, ಸಾರ್ವಜನಿಕರು ನೀಡಿದ ದೇಣಿಗೆ ಹಣವನ್ನು ಸೀಜ್ ಮಾಡಿದ್ದಾರೆ.  ರೂ300-400 ಕೋಟಿ ದಂಡ ಹಾಕಿ ಖರ್ಚಿಗೆ ಹಣವಿಲ್ಲದಂತೆ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಸಲ ಕಾಂಗ್ರೆಸ್ ಗೆ ಮತ ನೀಡಿ ಆಶೀರ್ವಾದ ಮಾಡಿ ಎಂದು ಕೋರಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕಷ್ಟದ ಸಮಯದಲ್ಲಿ ಕೆಂದ್ರ ಸರ್ಕಾರ ನಮಗೆ ಸಹಾಯ ಮಾಡದಿದ್ದರೂ ಕೂಡಾರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ‌ ದೇಶದ ಇತಿಹಾಸ ಎಂದ ಶಿವಕುಮಾರ್ ಅಂತ ಪಕ್ಷದ ಚುಕ್ಕಾಣಿ ಹಿಡಿದಿರುವ ಖರ್ಗೆ ಸಾಹೇಬರು ನಿಮ್ಮ ಊರಿನವರು. ನೆಹರು, ಇಂದಿರಾ, ರಾಜೀವ್ ಗಾಂಧಿ‌ ಅವರು ಕುಳಿತ ಜಾಗದಲ್ಲಿ ಕುಳಿತು ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಇದು‌ ಹೆಮ್ಮೆಯ ವಿಷಯ ಎಂದು ಹೊಗಳಿದರು.

ಜೆಡಿಎಸ್ ಹಾಗೂ ಬಿಜೆಪಿಯವರಿಗೆ ಕೇಳಿಕೊಳ್ಳುವುದು ಇಷ್ಟೇ, ಖರ್ಗೆ ಸಾಹೇಬರ ಕೈ ಬಲಪಡಿಸುವ ಮೂಲಕ ಋಣ ತೀರಿಸಬೇಕಾಗಿದೆ ಎಂದರು. CAA, ದೇವಾಲಯ ಹೊರತುಪಡಿಸಿದರೆ, ಬಿಜೆಪಿಯವರಿಗೆ ಬೇರೆ ವಿಚಾರಗಳಿಲ್ಲ. ಧರ್ಮದಲ್ಲಿ ರಾಜಕಾರಣ‌ ಇರಬಾರದು ಆದರೆ ರಾಜಕಾರಣದಲ್ಲಿ ಧರ್ಮ ಇರಬೇಕು. ಕಲಬುರಗಿ ಪುಣ್ಯದ ನಾಡು. ಎಲ್ಲ ಧರ್ಮದ ಜನರಿಗೆ ಸಮಾನವಾದ ಅವಕಾಶ ನೀಡಲಾಗಿದೆ ಎಂದರು.

ನಮ್ಮದು ನುಡಿದಂತೆ ನಡೆದ ಸರ್ಕಾರ. ಚುನಾವಣೆ ಮುನ್ನ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮಾತು ಉಳಿಸಿಕೊಂಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಹೇಳಿದರು. ಕಲಬುರಗಿ ಜಿಲ್ಲೆಯನ್ನು ಮೆಡಿಕಲ್ ಹಬ್ ಮಾಡಲಾಗುವುದು ಎಂದು ಸಚಿವರು ಭರವಸೆ‌ ನೀಡಿದರು.

ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ 1.14 ಕೋಟಿ ಫಲಾನುಭವಿಗಳು, ಗೃಹಜ್ಯೋತಿ ಯೋಜನೆಯಡಿಯಲ್ಲಿ 1.05 ಕೋಟಿ ಫಲಾನುಭವಿಗಳು, ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರು ಉಚಿತ ಬಸ್ ಪ್ರಯಾಣ ಲಾಭಪಡೆದುಕೊಂಡಿದ್ದಾರೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರತಿಯೊಬ್ಬರಿಗೆ 5 kg ಅಕ್ಕಿ ಹಾಗೂ 5 kg ಅಕ್ಕಿ ಖರೀದಿಸಲು ರೂ 170 ಫಲಾನುಭವಿಗಳು, ಯುವನಿಧಿ ಯೋಜನೆಯಡಿಯಲ್ಲಿ ಪದವಿಧರರಿಗೆ ರೂ 3000 ಹಾಗೂ ಡಿಪ್ಲೋಮಾ ಆದವರಿಗೆ ರೂ 1500 ನೀಡಲಾಗುತ್ತಿದೆ ಎಂದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ 15,000 ಖಾಲಿ ಹುದ್ದೆಗಳನ್ನು ತುಂಬಲಾಗಿದ್ದು, ಮುಂದಿನ ಐದು ವರ್ಷದಲ್ಲಿ 50,000 ಹುದ್ದೆಗಳನ್ನು ತುಂಬಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಕಲಬುರಗಿ ರೋಟಿ ಬ್ರ್ಯಾಂಡ್ ಬಿಡುಗಡೆ ಮಾಡಲಾಯಿತು. ವೇದಿಕೆಯ ಮೇಲೆ ಸಿಎಂ ಸಲಹೆಗಾರ ಬಿ.ಆರ್. ಪಾಟೀಲ್, ಕೆಕೆಆರ್ ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಶಾಸಕರಾದ ಎಂ ವೈ ಪಾಟೀಲ, ಕಮೀಜ್ ಫಾತಿಮಾ, ಅರವಿಂದ ಅರಳಿ, ತಿಪ್ಪಣ್ಣಪ್ಪ ಕಮಕನೂರು, ಅಲ್ಲಮಪ್ರಭು ಪಾಟೀಲ, ಚಂದ್ರಶೇಖರ ಪಾಟೀಲ್, ಮಜರ್ ಆಲಂ ಖಾನ್, ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ರೇವುನಾಯಕ ಬೆಳಮಗಿ, ಸಿಇಓ ಭಂವರ ಸಿಂಗ್ ಮೀನಾ, ಪೊಲೀಸ್ ಕಮೀಷನರ್ ಆರ್ ಚೇತನ್, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ, ಕೆಕೆಆರ್ ಟಿಸಿ ಎಂ ಡಿ ರಾಚಪ್ಪ ಸೇರಿದಂತೆ ಹಲವರಿದ್ದರು

click me!