ಪೌರತ್ವ ತಿದ್ದುಪಡಿ ಕಾಯ್ದೆ ಟೀಕಿಸುವ ಸಿಎಂ ಸಿದ್ದರಾಮಯ್ಯಗೆ ರಾಷ್ಟ್ರೀಯತೆ ಅರ್ಥವೇ ಗೊತ್ತಿಲ್ಲ; ಕೆ.ಎಸ್. ಈಶ್ವರಪ್ಪ

By Sathish Kumar KH  |  First Published Mar 13, 2024, 3:59 PM IST

ಪ್ರಧಾನಿ ಮೋದಿ ಅವರು ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ಸಿಎಂ ಸಿದ್ದರಾಮಯ್ಯಗೆ ರಾಷ್ಟ್ರೀಯತೆ ಅರ್ಥವೇ ಗೊತ್ತಿಲ್ಲ. ಸಿಎಎ ಜಾರಿ ಚುನಾವಣೆ ಗಿಮಿಕ್ ಆದರೆ, ಜಾತಿಗಣತಿ ವರದಿ ಸ್ವೀಕಾರವೇನು? ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು.


ಶಿವಮೊಗ್ಗ (ಮಾ.13): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಅತ್ಯಂತ ಸ್ವಾಗತಾರ್ಹವಾಗಿದ್ದು, ಇದನ್ನು ಟೀಕಿಸುವ ಕಾಂಗ್ರೆಸ್‌ ಪಕ್ಷ ಮತ್ತು ರಾಜ್ಯದಲ್ಲಿ ಸಿದ್ದರಾಮಯ್ಯನವರಿಗೆ ರಾಷ್ಟ್ರೀಯತೆಯ ಅರ್ಥವೇ ಗೊತ್ತಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಟೀಕಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು  ಈ ಕಾಯ್ದೆಯಿಂದ ಸಂಕಷ್ಟ ಎದುರಿಸುತ್ತಿರುವ ಹಿಂದೂ,ಪಾರ್ಸಿ, ಬೌದ್ಧ, ಸಿಖ್ ಸಮುದಾಯಕ್ಕೆ ನೆಮ್ಮದಿ ಸಿಕ್ಕಿದೆ. ಅತಂತ್ರ ಸ್ಥಿತಿಯಲ್ಲಿ ಇದ್ದ ಅವರಿಗೆ ನೆಮ್ಮದಿ ದೊರೆತಿದ್ದು, ಅವರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಸ್ವಾತಂತ್ರ ಬಂದ ವೇಳೆಯಲ್ಲಿ  ಪಾಕಿಸ್ಥಾನದಲ್ಲಿ ಇದ್ದ ಶೇ. 20.5 ರಷ್ಟು ಹಿಂದೂಗಳ ಸಂಖ್ಯೆ ಈಗ ಶೇ. 1.9 ಕ್ಕೆ ಇಳಿದಿದೆ.  ಬಾಂಗ್ಲಾದಲ್ಲಿ ಶೇ. 25 ರಷ್ಟು ಇದ್ದ ಹಿಂದೂಗಳ ಸಂಖ್ಯೆ ಈಗ ಶೇ. 7.5 ಕ್ಕೆ ಇಳಿದಿದೆ. ಇದಕ್ಕೆ ಬಲವಂತದ ಮತಾಂತರ ಅಥವಾ ಕಗ್ಗೊಲೆ ಕಾರಣವಾಗಿದೆ. ಆದರೆ ಈ ಪರಿಸ್ಥಿತಿ ಕಾಂಗ್ರೆಸ್‌ ಗೆ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ.ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ಇಂದು ಕೇವಲ ಮತ ಗಳಿಕೆಗಾಗಿ ಈ ಮಟ್ಟದ ಮುಸ್ಲಿಂ ತುಷ್ಟೀಕರಣಕ್ಕೆ ಇಳಿದಿರುವುದು ದುರಂತದ ಸಂಗತಿ ಎಂದು ಹೇಳಿದರು.

Latest Videos

undefined

ಜೊತೆಗೆ ಈ ಕಾಯ್ದೆಯಿಂದ ಅಕ್ರಮ ನುಸುಳುಕೋರರನ್ನು ಕೂಡ ತಡೆಯಬಹುದು. ಆದರೆ ಇದಾವುದೂ ಕೇವಲ ಮತ ಗಳಿಕೆಗಾಗಿ ದೇಶ ವಿರೋಧಿಗಳನ್ನು ಬೆಂಬಲಿಸುವ  ಮನಃಸ್ಥಿತಿಗೆ ಬಂದಿರುವ ಕಾಂಗ್ರೆಸ್‌ ಗೆ ಕಾಣುತ್ತಿಲ್ಲ.  ಹಲವಾರು ದೇಶ ಭಕ್ತ ಮುಸ್ಲಿಂರು, ಮುಸ್ಲಿಂ ಜಮಾತೆ ಅಧ್ಯಕ್ಷರು ಕೂಡ ಇದನ್ನು ಸ್ವಾಗತಿಸಿದ್ದಾರೆ. ಕಾಂಗ್ರೆಸ್‌ ಆಟವನ್ನು ಜನ ಗಮನಿಸುತ್ತಿದ್ದಾರೆ. ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ ಎಂದರು.

ಪ್ರತಿಭಟನೆ ಮಾಡಬೇಡಿ, ಮೋದಿಜಿ ಇಲ್ಲದೆ ನಾನಿಲ್ಲ ಇಬ್ಬರಿಗೆ ಫೋಟೋ ಟ್ಯಾಗ್ ಮಾಡಿದ ಪ್ರತಾಪ್ ಸಿಂಹ

ಚುನಾವಣೆ ಹೊತ್ತಿನಲ್ಲಿ ಈ ಕಾಯ್ದೆ ಜಾರಿ ತರಲಾಗಿದೆ ಎಂದು ಸಿದ್ದರಾಮಯಯ ಆರೋಪಿಸಿದ್ದಾರೆ. ಇದು ಈಗ ಅನುಮೋದನೆ  ಸಿಕ್ಕಿರುವ ಕಾಯ್ದೆಯಲ್ಲ. ದೇಶದ ಉಳಿವಿಗೆ ಅನಿವಾರ್ಯವಾದ ಕಾಯ್ದೆಯಾಗಿದೆ. ಆದರೆ, ರಾಜ್ಯ ಸರ್ಕಾರ ಕೇವಲ ಚುನಾವಣೆಗಾಗಿ ಜನಗಣತಿಯನ್ನು ಈ ಹೊತ್ತಿನಲ್ಲಿ ಸ್ವೀಕರಿಸಿದೆ ಎಂದು ತಿರುಗೇಟು ನೀಡಿದರು.  

ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವೆ ಎಂದು ಹೇಳಿದ್ದ ಮಾಜಿ ಪ್ರಧಾನಿ ದೇವೇಗೌಡರು ಈಗ ಬಿಜೆಪಿ ಸಹವಾಸ ಮಾಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಟೀಕೆಗೆ ಉತ್ತರಿಸಿದ ಈಶ್ವರಪ್ಪ ಅವರು, ನರೇಂದ್ರ ಮೋದಿಗೆ ವೀಸಾ ಕೊಡಲ್ಲ ಎಂದಿದ್ದ ಬಲಾಢ್ಯ ದೇಶಗಳೇ ಈಗ ಕೆಂಪು ರತ್ನಗಂಬಳಿ ಹಾಸಿ ಸ್ನೇಹಕ್ಕಾಗಿ ಹಾತೊರೆಯುತ್ತಿವೆ. ಇಡೀ ವಿಶ್ವವೇ ಮೋದಿ ಕುರಿತು ಪರಿವರ್ತನೆಯಾಗಿರುವಾಗ ದೇವೇಗೌಡರು ಕೂಡ ಮೋದಿ ಕುರಿತು ತಮ್ಮ ಅಭಿಪ್ರಾಯ ಬದಲಿಸಿಕೊಂಡಿದ್ದಾರೆ ಎಂದು ಹೇಳಿದರು.

ಇದೇ ಸಿದ್ಧರಾಮಯ್ಯ ಮತ್ತು ಸಿ.ಎಂ. ಇಬ್ರಾಹಿಂ ಅವರುಗಳು ಜೆಡಿಎಸ್‌ ಪಕ್ಷದಲ್ಲಿ ಇರುವ ಸಂದರ್ಭದಲ್ಲಿ ಇಂದಿರಾ ಗಾಂಧಿ ಕುರಿತು ಬಳಸಬಾರದ ಪದ ಬಳಸಿ ಟೀಕಿಸಿದ್ದರು. ಇದನ್ನು ಜನ ಮರೆತಿಲ್ಲ ಎಂದು ತಿರುಗೇಟು ನೀಡಿದರು.

ಒಂದು ವೇಳೆ ನಮಗೆ ಹಾವೇರಿಯಿಂದ ಸ್ಪರ್ಧಿಸುವಂತೆ ಟಿಕೆಟ್‌ ನೀಡಿದರೆ ಎಂಬ  ಪ್ರಶ್ನೆಗೆ, ಯಾವುದೇ ಕಾರಣಕ್ಕೂ ನಾನು ಆ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ನಾನು ಮೊದಲು ನನ್ನ ಪುತ್ರನಿಗೆ ಟಿಕೆಟ್‌ ಕೇಳಿರಲಿಲ್ಲ. ಸ್ವತಃ ಯಡಿಯೂರಪ್ಪ ಅವರೇ ಹಾವೇರಿಯಲ್ಲಿ ಉದಾಸಿಯವರು ರಾಜಕೀಯದಿಂದ ನಿವೃತ್ತಿಯಾಗಲಿದ್ದಾರೆ. ನಿಮ್ಮ ಪುತ್ರ ಕಾಂತೇಶ್‌ ಅಲ್ಲಿಂದ ಸ್ಪರ್ಧಿಸಲಿ. ಅವನಿಗೆ ಟಿಕೆಟ್‌ ಕೊಡಿಸಿ ಗೆಲ್ಲಿಸಿಕೊಂಡು ಬರುವುದು ನನ್ನ ಜವಾಬ್ದಾರಿ ಎಂದಿದ್ದರು. ಹೀಗಾಗಿ, ಆ ಕ್ಷೇತ್ರದಲ್ಲಿ ಓಡಾಡಿ ಪಕ್ಷ ಸಂಘಟಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಡಾ.ಸಿ.ಎನ್. ಮಂಜುನಾಥ್ ನಾಳೆ ಬಿಜೆಪಿ ಸೇರ್ಪಡೆ, ಆರ್.ಆರ್.ನಗರದಲ್ಲಿ ಪ್ರಚಾರ ಪೂರ್ವಭಾವಿ ಸಭೆ

ಆದರೆ ಈಗ ತಮ್ಮ ಪುತ್ರ ಕೆ.ಇ.ಕಾಂತೇಶ್‌ಗೆ ಹಾವೇರಿ-ಗದಗ ಲೋಕಸಭಾ ಟಿಕೆಟ್‌ ಕೈತಪ್ಪುವ ವಿಚಾರ ಕುರಿತು ರಾಜ್ಯಾದ್ಯಂತ ಅಭಿಮಾನಿಗಳು, ಬೆಂಬಲಿಗರು, ಹಿತೈಷಿಗಳು ದೂರವಾಣಿ ಕರೆ ಮಾಡಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ನಿಮಗೆ  ಅನ್ಯಾಯವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಬೇರೆಯದೇ ರಾಜಕೀಯ ನಿರ್ಧಾರ ಕೈಗೊಳ್ಳಿ, ಸ್ವತಂತ್ರವಾಗಿ ಸ್ಪರ್ಧಿಸಿ ಎಂದು ಹೇಳುತ್ತಿದ್ದಾರೆ. ಆದರೆ, ನಾನು ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈಗಲೂ ನನ್ನ ಪುತ್ರ ಕಾಂತೇಶ್‌ಗೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

click me!