ಆರ್.ಆರ್.ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಸಿಎಂಗಳ ಮಾತಿನ ವರಸೆ ಮುಂದುವರೆದಿದೆ.
ತುಮಕೂರು, (ಅ.03): 'ಡಾ. ಸಿ.ಎಂ. ರಾಜೇಶ್ ಗೌಡ ಬಿಜೆಪಿ ಸೇರಲು ನಾನು ಕಾರಣ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ, 'ಅವನಂತಹ ಪೆದ್ದ ಯಾರೂ ಇಲ್ಲ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜೇಶ್, ನನ್ನ ಮಗನ ಸ್ನೇಹಿತ. ನನ್ನ ಸ್ನೇಹಿತ ಅಲ್ಲ. ನನ್ನ ವಯಸ್ಸು ಎಷ್ಟು ಆತನ ವಯಸ್ಸು ಎಷ್ಟು? ರಾಜೇಶ್ ತಂದೆ ಸಿ.ಪಿ. ಮೂಡಲಗಿರಿಯಪ್ಪ ಈ ಹಿಂದೆ ಜೆಡಿಎಸ್‌ನಲ್ಲಿ ಇದ್ದವರು. ಆ ವಿಶ್ವಾಸದಿಂದ ಕುಮಾರಸ್ವಾಮಿಯೇ ರಾಜೇಶ್‌ನನ್ನು ಬಿಜೆಪಿಗೆ ಕಳುಹಿಸಿದ್ದಾರೆ ಎಂದು ನಾನು ಹೇಳುವೆ' ಎಂದರು.
ರಾಜಕೀಯವೇ ಬೇರೆ ಸ್ನೇಹವೇ ಬೇರೆ. ಕುಮಾರಸ್ವಾಮಿ ಜವಾಬ್ದಾರಿಯಿಂದ ರಾಜಕೀಯ ಹೇಳಿಕೆಗಳನ್ನು ಕೊಡಬೇಕು. ಕುಮಾರಸ್ವಾಮಿ ನೀಡುವ ರಾಜಕೀಯ ಹೇಳಿಕೆಗಳಿಗೆಲ್ಲ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.
ಶಿರಾ ಮತ್ತು ರಾಜರಾಜೇಶ್ವರಿ ನಗರದಲ್ಲಿ ನಾವು ಗೆಲವು ಸಾಧಿಸುತ್ತೇವೆ. ಶಿರಾದಲ್ಲಿ ತ್ರಿಕೋನ ಸ್ಪರ್ಧೆ ಇದೆ. ಆದರೆ ಅನುಕಂಪ ಜೆಡಿಎಸ್‌ನವರ ಕೈ ಹಿಡಿಯುವುದಿಲ್ಲ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಆಯೋಗವು ನಡೆಸಿರುವ ರಾಜ್ಯದ ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳಬೇಕು. ಇದರಿಂದ ಸಾಮಾಜಿಕ ನ್ಯಾಯ ಕಲ್ಪಿಸಲು ಸಾಧ್ಯ ಎಂದರು.
ಇದನ್ನೂ ನೋಡಿ: ಎಚ್‌ಡಿಕೆ ಕಣ್ಣೀರು ಬಗ್ಗೆ ಸಿದ್ದರಾಮಯ್ಯ ಲೇವಡಿ