
ಬೆಂಗಳೂರು (ನ.04): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಗೃಹಲಕ್ಷ್ಮಿ' ಯೋಜನೆಯ ₹2,600 ಕೋಟಿಗೂ ಅಧಿಕ ಹಣವನ್ನು ಬೇರೆಡೆಗೆ ಡೈವರ್ಟ್ ಮಾಡಲಾಗಿದೆ ಹಾಗೂ ಸರ್ಕಾರದ ಬಳಿ ಹಣವಿಲ್ಲದೆ ಬೊಕ್ಕಸ ಸಂಪೂರ್ಣ ಖಾಲಿಯಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಜೆ.ಪಿ. ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಲೋಪದೋಷಗಳನ್ನು ದಾಖಲೆ ಸಮೇತ ಬಿಚ್ಚಿಟ್ಟರು. 'ಗೃಹಲಕ್ಷ್ಮಿ ಯೋಜನೆ ಜಾರಿಯಾದ ಮೊದಲ ವರ್ಷ ಫಲಾನುಭವಿ ಮಹಿಳೆಯರಿಗೆ ಕೇವಲ 8 ತಿಂಗಳು ಮಾತ್ರ ಹಣ ನೀಡಲಾಗಿದೆ. ಸರಿಯಾಗಿ ಹಣ ಬಿಡುಗಡೆಯಾಗದ ಕಾರಣ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದೆ. ಈ ಅರ್ಜಿಯ ವಿಚಾರಣೆ ವೇಳೆ ಸರ್ಕಾರ ಲಿಖಿತ ಅಫಿಡವಿಟ್ ಸಲ್ಲಿಸದೆ, ಆಕ್ಷೇಪಣೆ ಸಲ್ಲಿಸಲು ಸಮಯ ಕೋರಿದೆ. ಆಕ್ಷೇಪಣೆಯಲ್ಲಿ ಹಣಕಾಸಿನ ಕೊರತೆಯಿಂದಾಗಿ ಹಣ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಲಾಗಿದೆ. ಇದರರ್ಥ ಸರ್ಕಾರ ಬಳಿ ಹಣವಿಲ್ಲ, ಬೊಕ್ಕಸ ಸಂಪೂರ್ಣ ಖಾಲಿಯಾಗಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?' ಎಂದು ಪ್ರಶ್ನಿಸಿದರು.
ಇಷ್ಟೇ ಅಲ್ಲದೆ, ಗೃಹಲಕ್ಷ್ಮಿ ಯೋಜನೆಯು ಕೇವಲ ಒಂದು ‘ಬೆನವಲೆಂಟ್ ಸ್ಕೀಮ್’ (ಉಪಕಾರದ ಯೋಜನೆ), ಸರ್ಕಾರಕ್ಕೆ ಸಾಧ್ಯವಾದಾಗ ಹಣ ನೀಡುತ್ತದೆ, ನ್ಯಾಯಾಲಯದ ಮೂಲಕ ಒತ್ತಡ ಹೇರಬಾರದು ಎಂದು ಕೋರ್ಟ್‌ಗೆ ತಿಳಿಸಿರುವುದು ನಾಡಿನ ತಾಯಂದಿರಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದರು.
'2025ರ ಮಾರ್ಚ್ 31ರಂದು ಹಣಕಾಸು ಇಲಾಖೆಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ₹2,600 ಕೋಟಿ ಅನುದಾನ ವರ್ಗಾವಣೆಯಾಗಿದೆ. ಈ ಹಣದಲ್ಲಿ ಬರೋಬ್ಬರಿ ₹1,111 ಕೋಟಿ ಮೊತ್ತವನ್ನು ಆನೇಕಲ್ ತಾಲೂಕು ಪಂಚಾಯಿತಿಗೆ ವರ್ಗಾವಣೆ ಮಾಡಲಾಗಿದೆ. ಉಳಿದ ₹1,500 ಕೋಟಿ ಹಣವನ್ನು ಮಹಿಳಾ ಅಭಿವೃದ್ಧಿ ನಿಗಮಕ್ಕೆ ಜಮೆ ಮಾಡಲಾಗಿದೆ. ಆನಂತರ ಆನೇಕಲ್ ಪಂಚಾಯಿತಿಯಲ್ಲಿದ್ದ ₹1,111 ಕೋಟಿ ಹಣವನ್ನೂ ಮತ್ತೆ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಡೈವರ್ಟ್ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಮೀಸಲಿದ್ದ ಈ ₹2,600 ಕೋಟಿ ಅಂತಿಮವಾಗಿ ಎಲ್ಲಿಗೆ ಹೋಯಿತು? ಇದನ್ನು ಮುಂಬರುವ ಉಪಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆಯೇ?' ಎಂದು ನಿಖಿಲ್ ಕುಮಾರಸ್ವಾಮಿ ನೇರವಾಗಿ ಪ್ರಶ್ನಿಸಿ ತನಿಖೆಗೆ ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.