ಸ್ಟಿಂಗ್‌ ಸಂತ್ರಸ್ತೆಯ ದೂರಿನ ಇ- ಮೇಲ್‌ ನಾಪತ್ತೆ; ಸಿಎಂ, ಗೃಹಸಚಿವನಿಂದ ತನಿಖೆಯ ದಿಕ್ಕು ತಪ್ಪಿದೆ: ಹೆಚ್‌ಡಿಕೆ

Kannadaprabha News   | Kannada Prabha
Published : Nov 04, 2026, 07:19 AM IST
hd kumaraswamy and priyank kharge

ಸಾರಾಂಶ

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದ ಇ-ಮೇಲ್ ನಾಪತ್ತೆಯಾಗಿರುವ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದ್ದಾರೆ. ತನಿಖೆ ದಾರಿ ತಪ್ಪುತ್ತಿದ್ದು, ಗೃಹ ಇಲಾಖೆ ನಡೆಸಲು ಪ್ರಿಯಾಂಕ್ ಖರ್ಗೆ ನಾಲಾಯಕ್ ವಾಗ್ದಾಳಿ ನಡೆಸಿದರು.

ಬೆಂಗಳೂರು (ನ.4): ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್‌ ಆಪರೇಷನ್‌’ ಪ್ರಕರಣದ ಸಂತ್ರಸ್ತೆ, ಕೃಪಾ ಆಳ್ವಾ ಅವರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆಯಾಗಿದ್ದಾಗ ಆಯೋಗಕ್ಕೆ ಕಳುಹಿಸಿದ್ದ ಇ-ಮೇಲ್‌ ಎಲ್ಲಿ ಹೋಯಿತು? ಅದನ್ನು ಇಟ್ಟುಕೊಂಡಿದ್ದೀರಾ? ಅಥವಾ ಅಳಿಸಿ ಹಾಕಿದ್ದೀರಾ?’ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ, ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ಗೃಹ ಸಚಿವ ಪ್ರಿಯಾಂಕ್‌ ಖರ್ಗೆಯವರಿಗೆ ಖಾರವಾಗಿ ಪ್ರಶ್ನಿಸಿದ್ದಾರೆ.

ನಗರದ ಜೆಡಿಎಸ್‌ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇ-ಮೇಲ್‌ಗೂ, ತನಿಖೆಗೂ ಏನು ಸಂಬಂಧ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಕೇಳುತ್ತಿದ್ದಾರೆ. ಆಗ ಪ್ರಿಯಾಂಕ್ ಖರ್ಗೆಯವರ ಖಾತೆ ಬೇರೆ ಇತ್ತು. ಈಗ ಅವರಿಗೆ ಗೃಹ ಖಾತೆ ಕೊಡಲಾಗಿದೆ. ಆಗ ಬಂದಿದ್ದ ಇ-ಮೇಲ್ ನೋಡಿದ್ದವರನ್ನೇ ತನಿಖೆ ಮಾಡಲು ಹೇಳಿ. ಅದು ನನ್ನ ವ್ಯಾಪ್ತಿಗೆ ಬರಲ್ಲ ಎಂದರೆ ಏನರ್ಥ?. ಮತ್ತೆ ಇದು ಯಾರಿಗೆ ಬರುತ್ತೆ?. ಆ ವ್ಯಾಪ್ತಿ, ಈ ವ್ಯಾಪ್ತಿ ಯಾಕೆ ಎಂದು ಪ್ರಶ್ನಿಸಿದರು.

ಸಿಎಂ, ಗೃಹಸಚಿವನ ಒತ್ತಡಕ್ಕೆ ಸ್ಟಿಂಗ್ ತನಿಖೆ ದಾರಿ ತಪ್ಪಿದೆ:

ಸ್ಟಿಂಗ್ ಸೂತ್ರಧಾರರನ್ನು ಬಂಧಿಸಬೇಕು ಎಂದು ಸಿದ್ದರಾಮಯ್ಯನವರು ಈಗಾಗಲೇ ಹಲವು ಬಾರಿ ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಅವರು ಹೈಕಮಾಂಡ್ ಮೇಲೂ ಒತ್ತಡ ಹೇರಿದ್ದಾರೆ. ಸಿದ್ದರಾಮಯ್ಯ ಅವರು ಹೇಳುತ್ತಿರುವುದನ್ನೇ ನಾನು ಕೂಡ ಹೇಳುತ್ತಿದ್ದೇನೆ. ಆದರೆ, ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಒತ್ತಡದಿಂದ ತನಿಖೆಯ ದಾರಿ ತಪ್ಪುತ್ತಿದೆ. ಪೊಲೀಸರು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಕಿಡಿಕಾರಿದರು.

ತನಿಖೆಯ ದಾರಿ ತಪ್ಪುವುದು ಬೇಡ. ಅದನ್ನು ಸರಿ ಮಾಡಿಕೊಳ್ಳಿ ಎಂದಷ್ಟೇ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಅವರ ವಿರುದ್ಧ ನಾನು ಹೋರಾಟ ಮಾಡಿಕೊಂಡು ಬಂದವನು. ಇಲ್ಲಿ ಸಿದ್ದರಾಮಯ್ಯನವರ ಮೇಲಿನ ಅನುಕಂಪಕ್ಕೆ ನಾನು ಮಾತಾಡಿಲ್ಲ. ಇವತ್ತು ನಮ್ಮ ಸಮಾಜದ ವ್ಯಕ್ತಿ ಮುಖ್ಯಮಂತ್ರಿ ಆಗಿದ್ದಾರೆ, ಅವರ ಮೇಲಿನ ಅಸೂಯೆಗೆ ಹೊಟ್ಟೆ ಕಿವುಚಿಕೊಂಡು ಇದನ್ನೆಲ್ಲ ಹೇಳುತ್ತಿಲ್ಲ. ಎಂತಹ ದಾರಿದ್ರ್ಯ ರಾಜ್ಯಕ್ಕೆ ಬಂತು ಎಂಬ ನೋವಿನಿಂದ ಹೇಳಿದ್ದೇನೆ. ಇದೇನಾದರೂ ಮುಂದುವರೆದರೆ ಈ ರಾಜ್ಯ ಏನಾಗಲಿದೆ ಎಂದು ಅರ್ಥ ಮಾಡಿಕೊಳ್ಳಿ ಎಂದು ಹೇಳುತ್ತಿದ್ದೇನೆ ಅಷ್ಟೇ ಎಂದು ಕುಮಾರಸ್ವಾಮಿ ಹೇಳಿದರು.

ಗೃಹ ಇಲಾಖೆಗಗೆ ಪ್ರಿಯಾಂಕ್‌ ಅನ್‌ಫಿಟ್‌:

ಗೃಹ ಇಲಾಖೆಯನ್ನು ನಡೆಸಲು ಪ್ರಿಯಾಂಕ್ ಖರ್ಗೆ ಅನ್‌ಫಿಟ್‌. ಗೃಹ ಇಲಾಖೆ ಅವರ ಕೈಯಲ್ಲಿದೆ. ಅಧಿಕಾರ ಅವರ ಕೈಯಲ್ಲೇ ಇದೆ. ಗುಪ್ತದಳವೂ ಅವರ ಬಳಿಯೇ ಇದೆ. ಆದರೆ, ಪ್ರಿಯಾಂಕ್ ಖರ್ಗೆ ಸಾಕ್ಷ್ಯ ಕೊಡಿ ಎಂದು ನನ್ನನ್ನು ಕೇಳುತ್ತಿದ್ದಾರೆ. ಇಂತಹ ವ್ಯಕ್ತಿಯನ್ನು ಗೃಹ ಸಚಿವ ಎನ್ನಲು ಆಗುತ್ತದೆಯೇ?. ಈ ಮನುಷ್ಯನಿಗೆ ಗೃಹ ಸಚಿವನಾಗುವ ಹಾಗೂ ಅಂತಹ ಜವಾಬ್ದಾರಿಯುತ ಖಾತೆ ನಿರ್ವಹಣೆ ಮಾಡುವ ಯೋಗ್ಯತೆ ಇಲ್ಲ ಎಂದು ಕುಮಾರಸ್ವಾಮಿ ಹರಿಹಾಯ್ದರು.

ಸಿದ್ದರಾಮಯ್ಯ ಅವರು ಹೈಕಮಾಂಡ್‌ಗೆ ಗಟ್ಟಿಯಾಗಿಯೇ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಬಂದಿದೆ. 2028ಕ್ಕೆ ನಾನು ಇರಬೇಕೋ, ಬೇಡವೋ ನೀವೇ ಹೇಳಿ ಎಂದು ಅವರು ರಾಹುಲ್ ಗಾಂಧಿ ಅವರನ್ನು ಕೇಳಿದ್ದಾರೆ ಅಂತ ವರದಿಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೆಹಲಿ ಆಯ್ತು, ನಾಳೆ ಬೆಂಗಳೂರಲ್ಲೂ SIR ವಿರುದ್ಧ ಇಂಡಿಯಾ ಒಕ್ಕೂಟ ಪ್ರತಿಭಟನೆ: ಬಿಕೆ ಹರಿಪ್ರಸಾದ್ ಹೇಳಿದ್ದೇನು?
'ಕೆ.ಎನ್.ರಾಜಣ್ಣ ಪಕ್ಷ ಬಿಟ್ಟು ಹೋಗೋದಾದ್ರೆ ಹೋಗಲಿ': ಸಚಿವ ಹೆಚ್.ಸಿ. ಬಾಲಕೃಷ್ಣ ಸಿಡಿಮಿಡಿ!