
ಬೆಂಗಳೂರು: 'ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ...' ಎಂದು ಭವಿಷ್ಯ ನುಡಿದಿದ್ದ ಕೊಪ್ಪ ಹರಿಹರಪುರ ಸಮೀಪದ ಗೌರಿಗದ್ದೆಯ ವಿನಯ್ ಗುರೂಜಿಯವರು ಇದೀಗ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರಕ್ಕೆ ಯಾವುದೇ ಅಪಾಯ ಇಲ್ಲ. ಯಾವ ದುಷ್ಟ ಶಕ್ತಿಯೂ ಅವರಿಗೆ ತೊಂದರೆ ನೀಡುವುದಿಲ್ಲವೆಂದು ಅಭಯ ನೀಡಿದ್ದಾರೆ.
ಅತೃಪ್ತರನ್ನು ಸರಿ ದಾರಿಗೆ ತರಲು ಕೈ ಪಡೆ ಯತ್ನ
ಕಳೆದೆರಡು ತಿಂಗಳಿನಿಂದ ನಡೆಯುತ್ತಿರುವ ಸಮ್ಮಿಶ್ರ ಸರಕಾರದ ಹಗ್ಗ ಜಗ್ಗಾಟ ಇದೀಗ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಅತೃಪ್ತ ಶಾಸಕರು ಬಜೆಟ್ ಅಧಿವೇಶನಕ್ಕೆ ಗೈರಾಗಿದ್ದಾರೆ. ಒಂದೆಡೆ ಐವರು ಅತೃಪ್ತ ಶಾಸಕರು ರಾಜೀನಾಮೆ ನೀಡುತ್ತಾರೆನ್ನುವ ಮಾಹಿತಿ ಇದ್ದರೆ, ಅತೃಪ್ತರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಲು ಕೆಲವು ಸಚಿವರೂ ರಾಜೀನಾಮೆ ನೀಡುತ್ತಾರೆಂದೂ ಹೇಳಲಾಗುತ್ತಿದೆ.
ತ್ರಿಮೂರ್ತಿ ವರ ಪಡೆದ ವಿನಯ್ ಗುರೂಜಿ ಶಕ್ತಿ ಏನು?
ಬಜೆಟ್ ಮಂಡನೆಗೂ ಮುನ್ನ ರಾಜ್ಯಪಾಲರು ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ, ಮಾತನಾಡಲು ಪ್ರತಿಪಕ್ಷ ಬಿಜೆಪಿ ಅಡ್ಡಿಪಡಿಸಿತ್ತು. ಒಟ್ಟಿನಲ್ಲಿ ಸರಕಾರದ ಭವಿಷ್ಯವೇ ಅತಂತ್ರದಲ್ಲಿದ್ದು, ಇದೀಗ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಅಪಾರ ನಂಬಿಕೆ ಇಟ್ಟಿರುವ ವಿನಯ್ ಗುರೂಜಿ ಹೇಳಿಕೆ ಅವರಲ್ಲಿ ವಿಶ್ವಾಸ ಹೆಚ್ಚಿಸಿದೆ.
ಕುತೂಹಲ ಹುಟ್ಟಿಸಿದೆ ಶೋಭಾ-ಬಿಎಸ್‌ವೈ ವಿನಯ್ ಗುರೂಜಿ ಭೇಟಿ
ಗುರೂಜಿಯವರು ಸಮ್ಮಿಶ್ರ ಸರಕಾರದ ಸ್ಥಿರತೆ ಬಗ್ಗೆ ಭವಿಷ್ಯ ನುಡಿದಿದ್ದಾರೆ ಎನ್ನುವ ಪೋಸ್ಟ್‌ವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇಂಥ ಹೇಳಿಕೆ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲವೆಂದು ಗುರೂಜಿ ಆಪ್ತರು ಸುವರ್ಣನ್ಯೂಸ್.ಕಾಮ್‌ಗೆ ಹೇಳಿದ್ದಾರೆ. ಆದರೆ, ಗುರೂಜಿ ಚೆನ್ನೈನಲ್ಲಿದ್ದು, ಈ ಹೇಳಿಕೆ ಎಲ್ಲಿ ನೀಡಿದ್ದಾರೆಂಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ.
ಭವಿಷ್ಯದಂತೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ದೇವೇಗೌಡರು ವಿನಯ್ ಗುರೂಜಿಯವರನ್ನು ಬೆಂಗಳೂರಿನ ಪದ್ಮನಾಭನಗರದಲ್ಲಿರುವ ತಮ್ಮ ಮನೆಗೆ ಕರೆಯಿಸಿಕೊಂಡು, ಪತ್ನಿ ಚೆನ್ನಮ್ಮ ಅವರೊಂದಿಗೆ ಪಾದಪೂಜೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಪಾರ ದೈವ ಭಕ್ತರೂ ಆದ ಕುಮಾರಸ್ವಾಮಿಯವರು ಗುರೂಜಿಯವರ ಈ ಅಭಯದಿಂದಲೇ ಇಷ್ಟು ರಾಜಕೀಯ ಗೊಂದಲಗಳಿದ್ದರೂ ಶಾಂತರಾಗಿದ್ದಾರೆ, ಎಂದು ಹೇಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.