ಗೌಡ, ಎಚ್‌ಡಿಕೆ ಜಾತಿವಾದಿಗಳಲ್ಲ, ಕುಟುಂಬವಾದಿಗಳು : ಸಿದ್ದರಾಮಯ್ಯ ತರಾಟೆ

Kannadaprabha News   | Kannada Prabha
Published : Feb 23, 2026, 06:45 AM IST
Siddaramaiah

ಸಾರಾಂಶ

‘ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ದೇವೇಗೌಡ ಜಾತಿವಾದಿಗಳಲ್ಲ, ಸ್ವಜಾತಿ ವಿರೋಧಿಗಳು. ಸ್ವಜಾತಿ ನಾಯಕರು ಬೆಳೆಯದಂತೆ ಒಬ್ಬೊಬ್ಬರನ್ನು ಮುಗಿಸಿದ ಕುಟುಂಬವಾದಿಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪಾದಿಸಿದ್ದಾರೆ.

ಬೆಂಗಳೂರು : ‘ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ದೇವೇಗೌಡ ಜಾತಿವಾದಿಗಳಲ್ಲ, ಸ್ವಜಾತಿ ವಿರೋಧಿಗಳು. ಸ್ವಜಾತಿ ನಾಯಕರು ಬೆಳೆಯದಂತೆ ಒಬ್ಬೊಬ್ಬರನ್ನು ಮುಗಿಸಿದ ಕುಟುಂಬವಾದಿಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪಾದಿಸಿದ್ದಾರೆ.

‘ದೇವೇಗೌಡರ ಕುಟುಂಬ ಹೊರತುಪಡಿಸಿ ಒಕ್ಕಲಿಗರು ಮುಖ್ಯಮಂತ್ರಿಯಾದರೆ ಅದು ಕಾಂಗ್ರೆಸ್‌ನಿಂದ ಮಾತ್ರ’ ಎಂದೂ ಅವರು ಹೇಳಿದ್ದಾರೆ.

‘ಸಾಮಾಜಿಕ ನ್ಯಾಯದ ಕುರಿತ ನನ್ನ ಅಭಿಪ್ರಾಯಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ಕುರ್ಚಿಗಾಗಿ ಜಾತಿ ಎಳೆದು ತಂದಿದ್ದೇನೆ ಎಂದಿದ್ದಾರೆ. ಅವರ ಆರೋಪವನ್ನು ತಮಾಷೆಯಾಗಿ ಸ್ವೀಕರಿಸಿದ್ದೇನೆ. ಅಧಿಕಾರ ಇರಲಿ, ಇಲ್ಲದಿರಲಿ ನಾಲ್ಕು ದಶಕದಿಂದ ಸಾಮಾಜಿಕ ನ್ಯಾಯದ ಪರ ನನ್ನ ನಿಲುವು ಅಚಲ. ಜಾತಿ ವ್ಯವಸ್ಥೆ ಬಗ್ಗೆ ನನ್ನನ್ನು ಟೀಕಿಸುತ್ತಿರುವ ರಾಜಕಾರಣಿಗಳಿಗಿಂತ ನನಗೆ ಹೆಚ್ಚಿನ ಸ್ಪಷ್ಟತೆಯಿದೆ. ಈ ಬಗ್ಗೆ ನಾನು ಸಾರ್ವಜನಿಕ ಸಂವಾದಕ್ಕೆ ಸಿದ್ಧವಾಗಿದ್ದೇನೆ’ ಎಂದು ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದ ಮೂಲಕ ಸವಾಲು ಹಾಕಿದ್ದಾರೆ.

ವೋಟ್‌ ಬ್ಯಾಂಕ್‌ ಅಷ್ಟೆ:

ದೇವೇಗೌಡ, ಕುಮಾರಸ್ವಾಮಿ ಅವರಿಗೆ ತಮ್ಮ ಜಾತಿ ಒಂದು ವೋಟ್ ಬ್ಯಾಂಕ್ ಅಷ್ಟೆ. ಕುಟುಂಬದ ಸ್ವಾರ್ಥಕ್ಕಾಗಿ ಸ್ವಜಾತಿ ನಾಯಕರು ಕೂಡಾ ಬೆಳೆಯದಂತೆ ಒಬ್ಬೊಬ್ಬರನ್ನೇ ಮುಗಿಸುತ್ತಾ ಬಂದವರು ಅಪ್ಪ ಮಕ್ಕಳು. ಹಿಂದೆ, ಇಂದು ಮತ್ತು ಮುಂದೆ ಜಾತ್ಯತೀತ ಜನತಾದಳದ ತುತ್ತತುದಿಯ ನಾಯಕರು ಗೌಡರ ಕುಟುಂಬದವರೇ ಆಗಿರುತ್ತಾರೆ ಎನ್ನುವುದು ಸತ್ಯ ಎಂದು ಹೇಳಿದ್ದಾರೆ.

ಹಾಸನದ ಪುಟ್ಟಸ್ವಾಮಿಗೌಡ, ಸಿ.ಎಸ್.ಪುಟ್ಟೇಗೌಡ, ಜವರೇಗೌಡ, ಕೆ.ಎಂ.ವಿಶ್ವನಾಥ್, ಹನುಮೇಗೌಡ, ಮಂಡ್ಯದ ಕೆ.ಎನ್.ನಾಗೇಗೌಡ, ಕೆ.ಆರ್.ಪೇಟೆ ಕೃಷ್ಣ, ವೈ.ಕೆ.ರಾಮಯ್ಯ, ಸಿ.ಬೈರೇಗೌಡ, ಬಚ್ಚೇಗೌಡ, ಬಿ.ಎಲ್.ಶಂಕರ್, ಸಿ.ನಾರಾಯಣಸ್ವಾಮಿ, ಚೆಲುವರಾಯ ಸ್ವಾಮಿ ಮೊದಲಾದವರೆಲ್ಲ ಯಾಕೆ ದೇವೇಗೌಡರನ್ನು ಬಿಟ್ಟು ಹೊರಬಂದರು ಎನ್ನುವುದನ್ನು ನಾನು ವಿವರಿಸಿ ಹೇಳಬೇಕಾಗಿಲ್ಲ. ಒಕ್ಕಲಿಗ ನಾಯಕರನ್ನು ಗುರುತಿಸಿ ರಾಜಕೀಯವಾಗಿ ಬೆಳೆಸಿದ್ದು ಕಾಂಗ್ರೆಸ್ ಪಕ್ಷ ಮಾತ್ರ. ಕೆಂಗಲ್ ಹನುಮಂತಯ್ಯ ಅವರಿಂದ ಹಿಡಿದು ಎಸ್.ಎಂ.ಕೃಷ್ಣವರೆಗೆ ನೂರಾರು ಒಕ್ಕಲಿಗ ನಾಯಕರನ್ನು ಪಕ್ಷ ಬೆಳೆಸಿದೆ. ದೇವೇಗೌಡರಿಂದ ಮೋಸಕ್ಕೊಳಗಾದ ನಾಯಕರಿಗೆ ಅವಕಾಶ ನೀಡಿ ರಾಜಕೀಯವಾಗಿ ಬೆಳೆಸುತ್ತಿರುವುದು ಕೂಡಾ ಕಾಂಗ್ರೆಸ್ ಪಕ್ಷ. ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ ಎಂದು ತಿರುಗೇಟು ನೀಡಿದ್ದಾರೆ.

ಒಕ್ಕಲಿಗ ಸಿಎಂ ಕಾಂಗ್ರೆಸ್‌ನಿಂದಲೇ ಆಗ್ತಾರೆ:

ಡಿ.ಕೆ.ಶಿವಕುಮಾರ್, ಟಿ.ಬಿ.ಜಯಚಂದ್ರ, ಕಿಮ್ಮನೆ ರತ್ನಾಕರ್, ಎಂ.ಕೃಷ್ಣಪ್ಪ, ಕೃಷ್ಣಬೈರೇಗೌಡ, ಪಿರಿಯಾಪಟ್ಟಣ ವೆಂಕಟೇಶ್ ಹೀಗೆ ನಮ್ಮಲ್ಲಿರುವ ಒಕ್ಕಲಿಗರ ನಾಯಕರ ದೊಡ್ಡ ಪಟ್ಟಿಯೇ ಇದೆ. ಮುಂದೊಂದು ದಿನ ದೇವೇಗೌಡರ ಕುಟುಂಬವನ್ನು ಹೊರತುಪಡಿಸಿ ಯಾರಾದರೂ ರಾಜ್ಯದ ಮುಖ್ಯಮಂತ್ರಿಗಳಾದರೆ ಅದು ಕಾಂಗ್ರೆಸ್ ಪಕ್ಷದಿಂದಲೇ ಎಂದು ಒತ್ತಿ ಹೇಳುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದಿಂದ ಒಕ್ಕಲಿಗರು, ಲಿಂಗಾಯತರು, ಹಿಂದುಳಿದವರು ಮುಖ್ಯಮಂತ್ರಿಗಳಾಗಿದ್ದಾರೆ, ಹಿಂದುಳಿದ ಜಾತಿಗೆ ಸೇರಿದ ನನ್ನನ್ನು ಗುರುತಿಸಿ ಎರಡನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಕಲ್ಪಿಸಿಕೊಟ್ಟಿರುವುದು ಕೂಡಾ ಕಾಂಗ್ರೆಸ್ ಪಕ್ಷ ಮಾತ್ರ ಎಂದಿದ್ದಾರೆ.

ದಲಿತ ಸಿಎಂ ಆಗುವುದು ‘ಕೈ’ನಿಂದ ಮಾತ್ರ: ಸಿದ್ದು

ಜಾತಿಯಿಂದ ಮಾತ್ರವಲ್ಲ, ಅರ್ಹತೆ ಬಲದಿಂದಲೇ ಮುಖ್ಯಮಂತ್ರಿಯಾಗುವಂಥ ದಲಿತ ಸಮುದಾಯದ ನಾಯಕರು ಕೂಡಾ ಕಾಂಗ್ರೆಸ್ ಪಕ್ಷದಲ್ಲೇ ಇರುವುದು. ಮುಂದೊಂದು ದಿನ ದಲಿತ ಸಮುದಾಯದಿಂದ ಯಾರಾದಾರೂ ರಾಜ್ಯದ ಮುಖ್ಯಮಂತ್ರಿಯಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎನ್ನುವುದನ್ನು ವಿಶ್ವಾಸಪೂರ್ವಕವಾಗಿ ಹೇಳಬಲ್ಲೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇಂಥದ್ದೊಂದು ಆಶಯ ಕೂಡಾ ವ್ಯಕ್ತಪಡಿಸುವ ಸ್ಥಿತಿಯಲ್ಲಿ ರಾಜ್ಯದ ಜೆಡಿಎಸ್ ಅಂಥವಾ ಬಿಜೆಪಿ ಇದೆಯೇ? ಇದು ಕಾಂಗ್ರೆಸ್ ಪಕ್ಷ ಮತ್ತು ಬಿಜೆಪಿ, ಜೆಡಿಎಸ್‌ ಪಕ್ಷಗಳಿಗಿರುವ ವ್ಯತ್ಯಾಸ. ಆದ್ದರಿಂದ ನನ್ನ ವಿರುದ್ಧ ಜಾತಿ ರಾಜಕೀಯದ ಆರೋಪ ಮಾಡುತ್ತಿರುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

ಸಿದ್ದು ವಾಕ್‌ಪ್ರಹಾರ

- ಕುರಿಗಾಹಿ ಮುಖ್ಯಮಂತ್ರಿ ಆಗಿದ್ದಕ್ಕೆ ಕೆಲವರಿಗೆ ಹೊಟ್ಟೆ ಕಿಚ್ಚು ಎಂದು ಹೇಳಿದ್ದ ಸಿದ್ದರಾಮಯ್ಯ

- ಸಿಎಂ ಕುರ್ಚಿ ಉಳಿಸಿಕೊಳ್ಳಲು ಜಾತಿ ತಂದಿದ್ದಾರೆ ಎಂದು ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ

- ಇದಕ್ಕೆ ಸಿದ್ದು ತಿರುಗೇಟು. ದೇವೇಗೌಡ, ಎಚ್‌ಡಿಕೆಗೆ ಜಾತಿ ಎಂಬುದು ವೋಟ್‌ ಬ್ಯಾಂಕ್‌ ಮಾತ್ರ

- ಸ್ವಜಾತಿಗರನ್ನೂ ಅವರು ಬೆಳೆಸಲಿಲ್ಲ. ಜೆಡಿಎಸ್‌ನ ಟಾಪ್‌ ನಾಯಕತ್ವ ಅವರ ಕುಟುಂಬಕ್ಕಷ್ಟೆ

- ಒಕ್ಕಲಿಗರನ್ನು ಬೆಳೆಸಿದ್ದು ಕಾಂಗ್ರೆಸ್‌ ಪಕ್ಷ ಮಾತ್ರ ಎಂದು ದಳಪತಿಗಳಿಗೆ ಮುಖ್ಯಮಂತ್ರಿ ತರಾಟೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Karnataka News Live: ಗೌಡ, ಎಚ್‌ಡಿಕೆ ಜಾತಿವಾದಿಗಳಲ್ಲ, ಕುಟುಂಬವಾದಿಗಳು - ಸಿದ್ದರಾಮಯ್ಯ ತರಾಟೆ
ಕೈ ಬಿಟ್ಟ ಬೊಹ್ರಾ ಬಿಜೆಪಿಗೆ ಸೇರ್ಪಡೆ : ನೀವಿನ್ನು ನಮ್ಮ ಹೆಮ್ಮೆ ಸದಸ್ಯ ಎಂದ ಸಿಎಂ