ಕೈ ಬಿಟ್ಟ ಬೊಹ್ರಾ ಬಿಜೆಪಿಗೆ ಸೇರ್ಪಡೆ : ನೀವಿನ್ನು ನಮ್ಮ ಹೆಮ್ಮೆ ಸದಸ್ಯ ಎಂದ ಸಿಎಂ

Kannadaprabha News   | Kannada Prabha
Published : Feb 23, 2026, 06:26 AM IST
assam congress former chief bhupen bora joins bjp impact on assam politics 2026

ಸಾರಾಂಶ

ಪಕ್ಷದಲ್ಲಿ ತಮಗೆ ಅವಮಾನವಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ತೊರೆದಿದ್ದ, ಅಸ್ಸಾಂ ಕಾಂಗ್ರೆಸ್‌ ಘಟಕದ ಮಾಜಿ ಮುಖ್ಯಸ್ಥ ಭೂಪೇನ್‌ ಬೊಹ್ರಾ, ಭಾನುವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ವಿಧಾನಸಭೆ ಚುನಾವಣೆಗೂ ಮುನ್ನ ನಡೆದ ಈ ಬೆಳವಣಿಗೆ ಕಾಂಗ್ರೆಸ್‌ಗೆ ದೊಡ್ಡ ಪೆಟ್ಟು ನೀಡಿದೆ. ಅ

ಗುವಾಹಟಿ: ಪಕ್ಷದಲ್ಲಿ ತಮಗೆ ಅವಮಾನವಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ತೊರೆದಿದ್ದ, ಅಸ್ಸಾಂ ಕಾಂಗ್ರೆಸ್‌ ಘಟಕದ ಮಾಜಿ ಮುಖ್ಯಸ್ಥ ಭೂಪೇನ್‌ ಬೊಹ್ರಾ, ಭಾನುವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ವಿಧಾನಸಭೆ ಚುನಾವಣೆಗೂ ಮುನ್ನ ನಡೆದ ಈ ಬೆಳವಣಿಗೆ ಕಾಂಗ್ರೆಸ್‌ಗೆ ದೊಡ್ಡ ಪೆಟ್ಟು ನೀಡಿದೆ. ಅಸ್ಸಾಂ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿಯ ಮುಖ್ಯಸ್ಥ ದಿಲೀಪ್‌ ಸೈಕಿಯಾ ಅವರ ಉಪಸ್ಥಿತಿಯಲ್ಲಿ ಬೊಹ್ರಾ ಜತೆ 10ಕ್ಕೂ ಅಧಿಕ ಮಾಜಿ ಕಾಂಗ್ರೆಸ್‌ ನಾಯಕರು ಬಿಜೆಪಿ ಸೇರಿದ್ದಾರೆ.

ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ, ‘ನೀವಿನ್ನು ಬಿಜೆಪಿಯ ಹೆಮ್ಮೆಯ ಸದಸ್ಯರು’ ಎಂದು ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಬೊಹ್ರಾ, ‘ಕಾಂಗ್ರೆಸ್‌ ತೊರೆಯುವಾಗ, ಬಿಜೆಪಿ ಸೇರುವ ಉದ್ದೇಶ ನನ್ನದಾಗಿರಲಿಲ್ಲ. ಬದಲಿಗೆ ಕಾಂಗ್ರೆಸ್‌ನಲ್ಲಿನ ಅದರ ತಪ್ಪುಗಳ ಆತ್ಮಾವಲೋಕನ ನಡೆದು ಅವುಗಳನ್ನು ತಿದ್ದಿಕೊಳ್ಳುವ ಭರವಸೆ ಸಿಗಬಹುದು ಎಂದು ಭಾವಿಸಿದ್ದೆ. ಆದರೆ 32 ವರ್ಷಗಳಿಂದ ಕಾಂಗ್ರೆಸ್‌ಗಾಗಿ ಕೆಲಸ ಮಾಡಿದ ನನಗೆ ತುಂಬಾ ನೋವಾಗಿದೆ’ ಎಂದರು. ಜೊತೆಗೆ ಮುಂಬರುವ ಚುನಾವಣೆ ಎದುರಿಸಲು ರಾಜ್ಯ ಕಾಂಗ್ರೆಸ್‌ ಬಳಿ ಹಣವೇ ಇಲ್ಲ ಎಂದು ಹೇಳಿದ್ದಾರೆ.

ಹೊಟ್ಟೇಲಿ ₹21 ಲಕ್ಷದ ಚಿನ್ನ ಇಟ್ಕೊಂಡು ಅಬುಧಾಬಿ ಟು ಅಹ್ಮದಾಬಾದ್‌ ಸಾಗಣೆ

ಅಹಮದಾಬಾದ್‌: 21.89 ಲಕ್ಷ ರು. ಮೌಲ್ಯದ ಚಿನ್ನವನ್ನು ಹೊಟ್ಟೆಯಲ್ಲಿಟ್ಟುಕೊಂಡು ಅಬುಧಾಬಿಯಿಂದ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಶನಿವಾರ ಅಹಮದಾಬಾದ್‌ನಲ್ಲಿ ಬಂಧಿಸಲಾಗಿದೆ. ಆರೋಪಿ ಶಾರುಖ್‌, ಚಿನ್ನದ 3 ಮಾತ್ರೆ ತಯಾರಿಸಿ ನುಂಗಿದ್ದ ಎಂದು ತಿಳಿದುಬಂದಿದೆ. ಫೆ.19ರಂದು ಅಹಮದಾಬಾದ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಾರುಖ್‌ನನ್ನು ಅಲ್ಲಿನ ಗುಪ್ತಚರ ವಿಭಾಗದ ಅಧಿಕಾರಿಗಳು ತಡೆದು ವಿಚಾರಣೆಗೆ ಒಳಪಡಿಸಿದ್ದರು. ಆಗ ಆತ, ನಿಷೇಧಿತ ವಸ್ತುಗಳನ್ನು ನುಂಗಿರುವುದಾಗಿ ತಿಳಿಸಿದ್ದ. ಕೂಡಲೇ ಅವನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು, ಸ್ವರ್ಣವರ್ಣದ 3 ಮತ್ತು ಸ್ಟೀಲ್‌ ಬಣ್ಣದ 1 ಮಾತ್ರೆಯಾಕಾರದ ವಸ್ತು ಶಾರುಖ್‌ನ ಹೊಟ್ಟೆಯಲ್ಲಿರುವುದನ್ನು ಪತ್ತೆ ಮಾಡಿದ್ದಾರೆ. ಅದನ್ನು ವಶಪಡಿಸಿಕೊಂಡ ಬಳಿಕ ಅವನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ನಂತರ ಮಾತ್ರೆಗಳನ್ನು ಸರ್ಕಾರಿ ಮೌಲ್ಯಮಾಪಕ ಪರೀಕ್ಷಿಸಿದ್ದು, 3 ಮಾತ್ರೆಗಳು 24 ಕ್ಯಾರಟ್‌ನ 135 ಗ್ರಾಂ. ಚಿನ್ನ ಹಾಗೂ ಇನ್ನೊಂದು ಫೆರಸ್‌(ಕಬ್ಬಿಣ) ಎಂದು ತಿಳಿದುಬಂದಿದೆ.

ಮ.ಪ್ರ. ವಿವಿಗಳಲ್ಲಿ ದೇಗುಲ ನಿರ್ವಹಣೆ ಕೋರ್ಸ್‌: ಸಿಎಂ

ಇಂದೋರ್‌: ರಾಜ್ಯದಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಹಾಗೂ ಆ ಮೂಲಕ ಆರ್ಥಿಕತೆಯ ಬೆಳವಣಿಗೆಗೆ ದಾರಿ ಮಾಡಿಕೊಡುವ ಉದ್ದೇಶದಿಂದ ಮಧ್ಯಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ದೇವಸ್ಥಾನ ನಿರ್ವಹಣೆಯ ತರಬೇತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಮೋಹನ್‌ ಯಾದವ್‌ ಘೋಷಿಸಿದ್ದಾರೆ.ಸುದ್ದಿಗಾರರ ಸಮ್ಮುಖ ಈ ಬಗ್ಗೆ ಮಾತನಾಡಿದ ಸಿಎಂ, ‘ದೇವಾಲಯ ನಿರ್ವಹಣೆಯ ಕುರಿತು ಶೈಕ್ಷಣಿಕ ಕೋರ್ಸ್‌ಗಳನ್ನು ನಡೆಸಲು ನಿರ್ಧರಿಸಿದ್ದೇವೆ. ಸಾಮ್ರಾಟ್‌ ವಿಕ್ರಮಾದಿತ್ಯ ವಿವಿ ಈಗಾಗಲೇ ವಿದ್ವಾಂಸರಿಂದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಬೇತಿಗಳನ್ನು ಸ್ನಾತಕೋತ್ತರ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಪರಿಚಯಿಸಿದೆ’ ಎಂದರು. ಜತೆಗೆ, ರಾಜ್ಯದ 13 ಯಾತ್ರಾ ಸ್ಥಳಗಳಲ್ಲಿ ಧಾರ್ಮಿಕ ಕಾರಿಡಾರ್‌ ನಿರ್ಮಾಣ, ಫೈಬರ್‌ ಮೂರ್ತಿಗಳನ್ನು ತೆಗೆದು ಕಲ್ಲು ಮತ್ತು ಲೋಹದ ಮೂರ್ತಿಗಳ ಸ್ಥಾಪನೆ ಬಗ್ಗೆಯೂ ಮಾಹಿತಿ ನೀಡಿದರು.

ಅಮೆರಿಕದಲ್ಲಿ ಹಿಂದೂಗಳೇ ಅತಿ ಹೆಚ್ಚು ಶಿಕ್ಷಿತ ಗುಂಪು:

ಹೂಸ್ಟನ್‌: ಅಮೆರಿಕದಲ್ಲಿ ಹಿಂದೂಗಳೇ ಅತಿ ಹೆಚ್ಚು ವಿದ್ಯಾವಂತ ಧಾರ್ಮಿಕ ಗುಂಪು ಎಂದು ದೇಶದ ಚಿಂತಕರ ಚಾವಡಿ ಎನಿಸಿದ ಪ್ಯೂ ಸಂಶೋಧನಾ ಕೇಂದ್ರದ ವರದಿ ಹೇಳಿದೆ.ಪ್ಯೂ ಸಂಸ್ಥೆಯು 2023-24ನೇ ಸಾಲಿನ ಧಾರ್ಮಿಕ ಭೂದೃಶ್ಯ ಅಧ್ಯಯನ (ಆರ್‌ಎಲ್‌ಎಸ್‌) ಮೂಲಕ ಅಮೆರಿಕದ ಪ್ರಮುಖ ಸಮುದಾಯಗಳ ಶೈಕ್ಷಣಿಕ ಸಾಧನೆಗಳ ಮಾದರಿ ಸಂಗ್ರಹಿಸಿದ್ದು ಫೆ.19ಕ್ಕೆ ವರದಿ ಬಿಡುಗಡೆ ಮಾಡಿದೆ. ಇದು ಅಮೆರಿಕದ ಜನರ ಜೀವನ ಮತ್ತು ಧರ್ಮದ ಅತ್ಯಂತ ಸಮಗ್ರ ಸಮೀಕ್ಷೆ ಎಂದು ಸಂಸ್ಥೆ ಹೇಳಿದೆ. ಅಮೆರಿಕದಲ್ಲಿ ಶೇ.35 ವಯಸ್ಕರಿಗೆ ಹೋಲಿಸಿದರೆ 10ರಲ್ಲಿ 7 ಹಿಂದೂಗಳು (ಶೇ.70) ಮತ್ತು ಶೇ.65 ಯಹೂದಿಗಳು ಪದವಿ ಇಲ್ಲವೇ ಉನ್ನತ ಶಿಕ್ಷಣ ಪಡೆದಿದ್ದಾರೆ. ಮುಸ್ಲಿಂ, ಬುದ್ಧ, ಅರ್ಥೊಡಾಕ್ಸ್‌ ಕ್ರಿಶ್ಚಿಯನ್ಸ್‌ ಇತರ ಶಿಕ್ಷಿತ ಧಾರ್ಮಿಕ ಗುಂಪುಗಳು ಎಂದು ಸಂಸ್ಥೆ ವರದಿ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರಿಯಾಂಕ್‌ ಖರ್ಗೆ ಅಪ್ಪನ ಹೆಸರಿಲ್ಲದೇ ಗ್ರಾ.ಪಂ ಸದಸ್ಯರಾಗಲು ಅರ್ಹರಲ್ಲ: ಛಲವಾದಿ
ಸಂಸದೆಯರ ಮುಂದೆಬಿಟ್ಟು ಪ್ರಧಾನಿ ಆಗಬೇಕೆ ? : ಮೋದಿ