ಗೌಡ್ರು ಕುಟುಂಬವಾದಿ ಆಗಿದ್ದರೆ ಸಿದ್ದುಗೆ ಕುರ್ಚಿ ಸಿಗ್ತಿರಲಿಲ್ಲ : ಎಚ್ಡಿಕೆ

Kannadaprabha News   | Kannada Prabha
Published : Feb 23, 2026, 06:21 AM IST
hd kumaraswamy

ಸಾರಾಂಶ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಕುಟುಂಬವಾದಿಗಳು. ದೇವೇಗೌಡರ ಕುಟುಂಬ ಬಿಟ್ಟು ಒಕ್ಕಲಿಗರು ರಾಜ್ಯದಲ್ಲಿ ಸಿಎಂ ಆದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ

ಬೆಂಗಳೂರು : ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಕುಟುಂಬವಾದಿಗಳು. ದೇವೇಗೌಡರ ಕುಟುಂಬ ಬಿಟ್ಟು ಒಕ್ಕಲಿಗರು ರಾಜ್ಯದಲ್ಲಿ ಸಿಎಂ ಆದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಒಕ್ಕಲಿಗರ ಮೇಲೆ ನಿಮಗಿರುವ ಪ್ರೀತಿ ತೋರಿಸಲು ಇದು ಸಕಾಲ. ಕೂಡಲೇ ಕುರ್ಚಿ ತ್ಯಜಿಸಿ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಅವರು ಒತ್ತಾಯಿಸಿದ್ದಾರೆ.

‘ಸಿದ್ದರಾಮಯ್ಯ ಅವರು ಕುರ್ಚಿಗಾಗಿ ಜಾತಿ ಎಳೆದು ತಂದಿದ್ದಾರೆ ಎಂದು ನಾನು ತಮಾಷೆಗೆ ಹೇಳಿದ್ದಲ್ಲ. ಇವತ್ತು ನಿಮಗೆ (ಸಿದ್ದರಾಮಯ್ಯ) ಸಿಕ್ಕಿರುವ ಅಧಿಕಾರ, ಸಾಮಾಜಿಕ ನ್ಯಾಯದ ಹರಿಕಾರ ಎಂಬ ಪೋಷಾಕು ದೇವೇಗೌಡರು ಕೊಟ್ಟಿರುವ ದೇಣಿಗೆ’ ಎಂದೂ ತಿರುಗೇಟು ನೀಡಿದ್ದಾರೆ.

‘ಸಾಮಾಜಿಕ ನ್ಯಾಯದ ಸೋಗುಗಾರ, ಸಾಮಾಜಿಕ ನ್ಯಾಯದ ಸಂಹಾರಿ ನೀವು. ನಿಮಗೆ ರಾಜಕೀಯ ಶಕ್ತಿ-ಬದುಕು ಕೊಟ್ಟ ದೇವೇಗೌಡರ ಕಡೆ ಬೊಟ್ಟು ಮಾಡುವುದು ಆಘಾತಕಾರಿ. ನೀವೂ ದೇವೇಗೌಡರ ಸಾಮಾಜಿಕ ನ್ಯಾಯದ ಫಲ ಮತ್ತು ಫಲಾನುಭವಿ. ದೇವೇಗೌಡರು ಸ್ವಜಾತಿ, ಕುಟುಂಬ ಎಂದು ಅಂದು ಭಾವಿಸಿದ್ದರೆ ನೀವು ಹಣಕಾಸು ಮಂತ್ರಿ ಅಲ್ಲ, ಕನಿಷ್ಠ ಒಂದು ನಿಗಮದ ಅಧ್ಯಕ್ಷಗಿರಿಯೂ ನಿಮಗೆ ದಕ್ಕುತ್ತಿರಲಿಲ್ಲ’ ಎಂದು ಸಾಮಾಜಿಕ ಜಾಲತಾಣದ ಮೂಲಕ ಕುಮಾರಸ್ವಾಮಿ ಕುಟುಕಿದ್ದಾರೆ.

‘ನೀವು ಪಟ್ಟಿ ಮಾಡಿರುವ ಒಕ್ಕಲಿಗ ನಾಯಕರ ಹೆಸರುಗಳನ್ನು ಓದಿದೆ. ಪಾಪ, ನೀವು ಅವರ ಹೆಸರನ್ನು ಉಲ್ಲೇಖಿಸಿ ಅವರನ್ನೂ ಅಪಹಾಸ್ಯ ಮಾಡಿದ್ದೀರಿ. ನೀವೂ ಅಪಹಾಸ್ಯ ಮತ್ತು ನಗೆಪಾಟಲಿಗೀಡಾಗಿದ್ದೀರಿ. ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಆ 13 ಜನರ ಶೆಲ್ಟರ್‌ ಪಡೆದಿದ್ದೀರಿ. ಹಾಗಾದರೆ, ಅವರೆಲ್ಲರೂ ದೇವೇಗೌಡರಿಂದ ಅಧಿಕಾರ ಅನುಭವಿಸಲೇ ಇಲ್ಲವೇ? ಅವರೆಲ್ಲರೂ ನಿಮ್ಮಂತೆಯೇ ದೇವೇಗೌಡರ ಶ್ರಮ, ತ್ಯಾಗದಿಂದ ಅಧಿಕಾರ ಉಂಡು, ಪೊಗದಸ್ತಾಗಿ ಬೆಳೆದು ಬೇಲಿ ಹಾರಿದವರು. ನೀವು ಹೇಳಿದಂತೆ ಕುಟುಂಬವೇ ಮಿಗಿಲು ಎಂದು ಗೌಡರು ಭಾವಿಸಿದ್ದರೆ ನೀವೂ ಸೇರಿ ಯಾರೊಬ್ಬರೂ ಶಾಸಕ, ಮಂತ್ರಿ, ಸಂಸದ ಆಗುತ್ತಲೇ ಇರಲಿಲ್ಲ. ನೀವೆಲ್ಲರೂ ನೆರಳು ಕೊಟ್ಟ ವೃಕ್ಷಕ್ಕೆ ನಿರ್ದಯದಿಂದ ಕೊಡಲಿ ಹಾಕಿದಿರಿ. ಉಂಡು ಹೋದರಿ, ಕೊಂಡೂ ಹೋದಿರಿ’ ಎಂದು ಟಾಂಗ್‌ ನೀಡಿದ್ದಾರೆ.

ಎಸ್‌ಎಂಕೆ ಹೆಸರು ಹೇಳುವ ಯೋಗತ್ಯೆ ಇಲ್ಲ:

ನಿಮ್ಮ ಸ್ವಾರ್ಥಕ್ಕೆ ಜಾತಿ ಎಳೆದು ತಂದಂತೆ ಹಿರಿಯರಾದ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್.ಎಂ.ಕೃಷ್ಣ ಅವರನ್ನು ಏಕೆ ಎಳೆದು ತರುತ್ತೀರಿ? ಎಸ್.ಎಂ.ಕೃಷ್ಣ ಅವರ ಹೆಸರೇಳುವ ಸಾಸಿವೆ ಕಾಳಷ್ಟು ಯೋಗ್ಯತೆ, ನೈತಿಕತೆ ನಿಮಗಿದೆಯೇ? ಹಿ ಈಸ್‌ ಅನ್‌ಪಾಲಿಷ್ಡ್‌ ಡೈಮಂಡ್‌ ಎಂದು ಸೋನಿಯಾ ಗಾಂಧಿ ಅವರ ಮುಂದೆ ಹೇಳಿ ನೀವು ಕಾಂಗ್ರೆಸ್‌ ಮೆಟ್ಟಿಲು ಹತ್ತಲು ಕಾರಣರಾದ ಎಸ್.ಎಂ.ಕೃಷ್ಣ ಅವರನ್ನು ಎಷ್ಟು ಕ್ರೂರವಾಗಿ ವಂಚಿಸಿದಿರೆನ್ನುವುದು ಜಗತ್ತು ಬಲ್ಲ ಸತ್ಯ. ರಾಜಕೀಯದ ಕಡೆಗಾಲದಲ್ಲಿ ಅವರನ್ನು ನೀವೆಷ್ಟು ತುಚ್ಛವಾಗಿ ನಡೆಸಿಕೊಂಡಿರಿ ಎನ್ನುವುದನ್ನೂ ಜನ ಮರೆತಿಲ್ಲ. ಅನ್‌ಪಾಲಿಷ್ಡ್‌ ಡೈಮಂಡ್‌ ಕೃಷ್ಣ ಅವರಿಗೆ ಚೂರಿ ಹಾಕಿದ್ದನ್ನು ಎಲ್ಲರೂ ಬಲ್ಲರು ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ಒಕ್ಕಲಿಗ ನಾಯಕರ ಬಗ್ಗೆ ಉದಾರತೆ ತೋರಿ:

ಒಕ್ಕಲಿಗ ಸಮುದಾಯಕ್ಕೆ ಸಮರ್ಥ ನಾಯಕತ್ವ ನೀಡುವ ಕಾಂಗ್ರೆಸ್‌ ಉದಾರತೆಯನ್ನು ನಾನು ಸ್ವಾಗತಿಸುವೆ. ಈ ಉದಾರತೆ ನಿಮಗೂ ಬೇಕಲ್ಲವೇ? ಈಗ ನೀವು ಉದಾರತೆ ತೋರಬೇಕು. ಎರಡನೇ ಅವಧಿಗೆ ನೀವು ಸಿಎಂ ಆಗುವ ಮುನ್ನ ಆಗಿದ್ದ ಅಗ್ರಿಮೆಂಟ್‌ ಬಗ್ಗೆ ಬಹಿರಂಗವಾಗಿ ಹೇಳುವ ಉದಾರತೆ ತೋರಿ. ದಿಲ್ಲಿಯಲ್ಲಿ ನಿಮ್ಮಿಬ್ಬರ ನಡುವೆ ಆಗಿದ್ದ ಆ ಅಗ್ರಿಮೆಂಟ್‌ಗೆ ಸಾಕ್ಷಿ ಆಗಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜಿವಾಲಾಗೆ ನಿಮ್ಮ ಸಾಮಾಜಿಕ ನ್ಯಾಯ, ಒಕ್ಕಲಿಗ ಪ್ರೀತಿಯ ಪರಾಕಾಷ್ಠೆ ಈಗೀಗ ಅರ್ಥವಾಗಿದೆ ಎಂದು ಭಾವಿಸುತ್ತೇನೆ. ಅವರ ಮಾನಸಿಕ ಸ್ವಾಸ್ಥ್ಯ ಸರಿ ಇದೆ ನಾನು ನಂಬಿದ್ದೇನೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಸಮರ್ಥರ ರಾಜಕೀಯ ನರಮೇಧ:

ನಿಮ್ಮ ಸಾಮಾಜಿಕ ನ್ಯಾಯಕ್ಕೆ ಅಂತಃಕರಣವಿಲ್ಲ. ಇದ್ದಿದ್ದರೆ ನಿಮಗಿಂತ ಮೊದಲೇ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗಬೇಕಿತ್ತು. ಇದ್ದ ಪ್ರತಿಪಕ್ಷ ಸ್ಥಾನವನ್ನೂ ಕಿತ್ತುಕೊಂಡು ಅವರನ್ನು ಅಪಮಾನಿಸಿ ದಿಲ್ಲಿಗೆ ಓಡಿಸಿದಿರಿ. ಇನ್ನೊಬ್ಬ ದಲಿತ ನಾಯಕ ಡಾ.ಜಿ.ಪರಮೇಶ್ವರ್ ಅವರನ್ನು ನಿಮ್ಮ ದಾರಿಗೆ ಅಡ್ಡ ಬರುತ್ತಾರೆಂದು ಚುನಾವಣೆ ಕಣದಲ್ಲೇ ಮುಗಿಸಿದಿರಿ, ನಿಮ್ಮನ್ನು ಕಾಂಗ್ರೆಸ್ಸಿಗೆ ಕರೆತಂದ ಹೆಚ್.ವಿಶ್ವನಾಥ್‌ ಅವರನ್ನು ಎಲ್ಲಿ ಇಟ್ಟಿದ್ದೀರಿ? ನೀವು ಸಿಎಂ ಪಟ್ಟಕ್ಕೆ ಏರಿ ಕೂತಿರಿ? ಎರಡು ಬಾರಿ ನೀವು ಅರ್ಹತೆಯಿಂದ ಸಿಎಂ ಆಗಿಲ್ಲ. ಪಕ್ಷದಲ್ಲಿದ್ದ ಸಮರ್ಥರನ್ನು ಸಾಮಾಜಿಕ ನ್ಯಾಯದ ನೆಪಲ್ಲಿ ರಾಜಕೀಯ ನರಮೇಧ ಮಾಡಿ ಆಕ್ರಮಿಸಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೆಷ್ಟು ಸುಳ್ಳು ಹೇಳುತ್ತೀರಿ? ಇನ್ನೆಷ್ಟು ದಿನ ಈ ಊಸರವಳ್ಳಿ ಅವತಾರ? ನೀವು ಅಸಲಿಗೆ ಅಹಿಂದ ನಾಯಕ, ಸಾಮಾಜಿಕ ನ್ಯಾಯದ ಪ್ರತಿನಿಧಿಯೇ ಆಗಿದ್ದರೆ ನೀವು ಹುಟ್ಟಿದ ಜಾತಿಯನ್ನು ಎಳೆದು ತರುತ್ತಿರಲಿಲ್ಲ. ಇನ್ನು ಮುಂದೆ ಬಸವಣ್ಣ, ನಾರಾಯಣ ಗುರು, ಕುವೆಂಪು, ದೇವರಾಜ ಅರಸು ಮೊದಲಾದ ಮಹನೀಯರ ಹೆಸರೇಳಬೇಡಿ. ನಿಮಗಿಂತ ವಯಸ್ಸಿನಲ್ಲಿ ಚಿಕ್ಕವನಾದ ನಾನು ನಿಮಗೆ ನೀಡುವ ವಿನಮ್ರ ಸಲಹೆ ಇದು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.---

ಒಕ್ಕಲಿಗ ಸಮುದಾಯಕ್ಕೆ ಸಮರ್ಥ ನಾಯಕತ್ವ ನೀಡುವ ಕಾಂಗ್ರೆಸ್‌ ಉದಾರತೆಯನ್ನು ನಾನು ಸ್ವಾಗತಿಸುವೆ. ಈ ಉದಾರತೆ ನಿಮಗೂ ಬೇಕಲ್ಲವೇ ಸಿದ್ದರಾಮಯ್ಯ? ಎರಡನೇ ಅವಧಿಗೆ ನೀವು ಸಿಎಂ ಆಗುವ ಮುನ್ನ ಆಗಿದ್ದ ಅಗ್ರಿಮೆಂಟ್‌ ಬಗ್ಗೆ ಬಹಿರಂಗವಾಗಿ ಹೇಳುವ ಉದಾರತೆ ತೋರಿ.

-ಎಚ್.ಡಿ.ಕುಮಾರಸ್ಲಾಮಿ, ಕೇಂದ್ರ ಕೈಗಾರಿಕಾ ಸಚಿವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರಿಯಾಂಕ್‌ ಖರ್ಗೆ ಅಪ್ಪನ ಹೆಸರಿಲ್ಲದೇ ಗ್ರಾ.ಪಂ ಸದಸ್ಯರಾಗಲು ಅರ್ಹರಲ್ಲ: ಛಲವಾದಿ
ಸಂಸದೆಯರ ಮುಂದೆಬಿಟ್ಟು ಪ್ರಧಾನಿ ಆಗಬೇಕೆ ? : ಮೋದಿ