ಗಣಿಗಾರಿಕೆ ನಿಯಮ ಸರಳೀಕರಣಕ್ಕೆ ಸರ್ಕಾರ ಚಿಂತನೆ: ಸಚಿವ ಮಹದೇವಪ್ಪ

By Kannadaprabha News  |  First Published Aug 13, 2023, 6:33 PM IST

ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವಂತೆ ಗಣಿಗಾರಿಕೆಗೆ ಸಂಬಂಧಿಸಿದ ನಿಯಮಗಳ ಸರಳೀಕರಣಗೊಳಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.


ಬೆಂಗಳೂರು (ಆ.13): ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವಂತೆ ಗಣಿಗಾರಿಕೆಗೆ ಸಂಬಂಧಿಸಿದ ನಿಯಮಗಳ ಸರಳೀಕರಣಗೊಳಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು. ದಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯ​ರ್‍ಸ್ (ಇಂಡಿಯಾ) ಸಂಸ್ಥೆ ಆಯೋಜಿಸಿದ್ದ 33ನೇ ರಾಷ್ಟ್ರೀಯ ಗಣಿ ಎಂಜಿನಿಯರ್‌ಗಳ ಸಮಾವೇಶ ಹಾಗೂ ತಿದ್ದುಪಡಿ ಮಾಡಿದ ಗಣಿ ನಿಯಮಗಳು ಮತ್ತು ಗಣಿಗಾರಿಕೆ ಉದ್ಯಮದ ಮೇಲಿನ ಪರಿಣಾಮ’ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗಣಿಗಾರಿಕೆ ದೇಶದ ಆರ್ಥಿಕತೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಅರಣ್ಯ ಪ್ರದೇಶ ಮತ್ತು ವಾತಾವರಣ ಎರಡಲ್ಲೂ ಸಮತೋಲನ ಕಾಪಾಡಿಕೊಳ್ಳುವ ಅವಶ್ಯಕತೆ ಇದೆ. ಈ ಮೂಲ ಉದ್ದೇಶದೊಂದಿಗೆ ಕೈಗಾರಿಕೆ, ಉದ್ಯೋಗ, ಮೂಲಸೌಕರ್ಯಗಳ ಪೂರೈಕೆಗೆ ಸಹಕಾರಿಯಾಗುವಂತೆ ಗಣಿಗಾರಿಕೆ ನಿಯಮಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ’ ಎಂದು ಹೇಳಿದರು.

Tap to resize

Latest Videos

ವಕೀಲನಾದಾಗ ಕುರುಬ ಜನಾಂಗದಿಂದ ನಾನೊಬ್ಬನೇ ಇದ್ದೆ: ಸಿದ್ದರಾಮಯ್ಯ

‘ಗಣಿಗಾರಿಕೆ ಉದ್ಯಮವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ರಾಜಸ್ಥಾನದಲ್ಲಿ ಉದ್ಯಮ ಸ್ನೇಹಿ ನಿಯಮಗಳು ಅಸ್ತಿತ್ವದಲ್ಲಿ ಇರುವುದನ್ನು ರಾಜ್ಯ ಸರ್ಕಾರ ಗಮನಿಸಿದ್ದು, ಅದನ್ನು ನಮ್ಮ ರಾಜ್ಯದಲ್ಲೂ ಕೆಲ ಬದಲಾವಣೆಗಳೊಂದಿಗೆ ಅಳವಡಿಸಿಕೊಳ್ಳಲು ಚಿಂತನೆ ನಡೆದಿದೆ. ಪ್ರಮುಖವಾಗಿ ಅರಣ್ಯ ಇಲಾಖೆ ಜೊತೆಗಿನ ತಿಕ್ಕಾಟ ಗಣಿಗಾರಿಕೆಯ ಪ್ರಮುಖ ಸಮಸ್ಯೆಯಾಗಿದ್ದು, ಈ ಕುರಿತು ಅರಣ್ಯ ಮತ್ತು ಗಣಿಗಾರಿಕೆ ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚಿಸಿ ನಿರ್ಣಯ ಕೈಗೊಳ್ಳಲಿದ್ದಾರೆ. ಹಾಗೆಯೇ ಗಣಿಗಾರಿಕೆ ಎಂಜಿನಿಯರ್‌ಗಳ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಆದ್ಯತೆ ಮೇರೆಗೆ ಬಗೆಹರಿಸಲಿದೆ’ ಎಂದು ಭರವಸೆ ನೀಡಿದರು.

ಕರ್ನಾಟಕ ಭ್ರಷ್ಟರಾಜ್ಯ ಆಗುತ್ತಿದೆ, ರಾಜಕೀಯ ವ್ಯವಸ್ಥೆ ಬೇಸರ ತಂದಿದೆ: ಶಾಸಕ ಬಸವರಾಜ ರಾಯರೆಡ್ಡಿ

ಪ್ರಶಸ್ತಿ ಪ್ರದಾನ: ಗಣಿ ನಿಯಂತ್ರಣಾಧಿಕಾರಿ ವಿ.ಜಯಕೃಷ್ಣ ಬಾಬು(ಬೆಂಗಳೂರು), ಗಣಿ ಅಭಿಯಂತರರ ಸಹಾಯಕ ಭಾರತದ ಅಧ್ಯಕ್ಷ ಕೆ.ಮಧುಸೂದನ (ಹೈದರಾಬಾದ್‌), ಗಣಿಸುರಕ್ಷತಾ ನಿರ್ದೇಶಕ ಮುರಳೀಧರ ಬಿದರಿ (ಬೆಂಗಳೂರು) ಅವರಿಗೆ ಅತ್ಯುತ್ತಮ ಎಂಜಿನಿಯರ್‌ ಪ್ರಶಸ್ತಿ ಮತ್ತು ಡಾ.ಅಶೋಕ ಕುಮಾರ್‌(ಧನಬಾದ್‌), ಡಾ.ಹೇಮಂತ್‌ ಅಗರವಾಲ್‌ (ರಾಂಚಿ) ಮತ್ತು ಡಾ.ಸತ್ಯಪ್ರಕಾಶ್‌ ಸಾಹು (ಒಡಿಶಾ) ಅವರಿಗೆ ಐಇಐ ಯುವ ಎಂಜಿನಿಯರ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಂ.ಎಸ್‌.ಆಲ್ಮೋರಾ ಮ್ಯಾಗ್ನೆಸೈಟ್‌ ಕಂಪನಿ ಮಾಜಿ ವ್ಯವಸ್ಥಾಪಕ ನಿರ್ದೇಶಕ ಡಿ.ವಿ. ಪಿಚೈಮುತ್ತು ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಐಇಐ-ಎಂಎನ್‌ಡಿಬಿ ಮುಖ್ಯಸ್ಥ ಪ್ರೊ.ನೇತಾಯಿ ಚಂದ್ರ, ಐಇಐ ಕೆಎಸ್‌ಸಿ ಮುಖ್ಯಸ್ಥ ಎಂ. ಲಕ್ಷ್ಮಣ, ಸಂಘಟನಾ ಕಾರ್ಯದರ್ಶಿ ಡಾ.ರಂಗಾರೆಡ್ಡಿ, ಡಾ.ವೇದಾ ವೆಂಕಟಯ್ಯ ಉಪಸ್ಥಿತರಿದ್ದರು.

click me!