ಕೋವಿಡ್‌ನಿಂದ ದುಡ್ಡು ಮಾಡುವ ದಾರಿದ್ರ್ಯ ಬಂದಿಲ್ಲ: ಸಿದ್ದರಾಮಯ್ಯಗೆ ತಿರುಗೇಟು

By Kannadaprabha NewsFirst Published Jul 4, 2020, 8:17 AM IST
Highlights

ಕೋವಿಡ್‌ನಿಂದ ದುಡ್ಡು ಮಾಡುವ ದಾರಿದ್ರ್ಯ ಬಂದಿಲ್ಲ: ವಿಶ್ವನಾಥ್‌| ವೈದ್ಯಕೀಯ ಸಲಕರಣೆಗಳ ದರ ಆರಂಭದಲ್ಲಿ ಹೆಚ್ಚಿತ್ತು, ಈಗ ಇಳಿಕೆಯಾಗಿದೆ: ಸಿದ್ದುಗೆ ತಿರುಗೇಟು

 ಬೆಂಗಳೂರು(ಜು.04): ಕೊರೋನಾದಿಂದ ದುಡ್ಡು ಮಾಡುವ ದರಿದ್ರ ಪರಿಸ್ಥಿತಿ ಸರ್ಕಾರಕ್ಕೆ ಬಂದಿಲ್ಲ. ವೈದ್ಯಕೀಯ ಸಲಕರಣೆಗಳ ದರ ಆರಂಭದಲ್ಲಿ ಹೆಚ್ಚಿತ್ತು. ಈಗ ಸಲಕರಣೆಗಳ ದರ ಇಳಿಕೆಯಾಗಿದೆ. ಮೊದಲಿನ ದರಗಳಿಗೆ ಹೋಲಿಸಿ ಆರೋಪ ಮಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌ ತಿರುಗೇಟು ನೀಡಿದ್ದಾರೆ.

2200 ಕೋಟಿ ಭ್ರಷ್ಟಾಚಾರ: ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಸಿದ್ದರಾಮಯ್ಯ

ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು,ಸಿದ್ದರಾಮಯ್ಯ ಬಳಿ ದಾಖಲೆಗಳಿದ್ದರೆ ಸಲ್ಲಿಸಬೇಕು. ಆಗ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ಕೊರೋನಾ ಸೋಂಕು ನಿಯಂತ್ರಿಸಲು ಬಹಳ ಶ್ರಮ ಪಡಲಾಗುತ್ತಿದೆ. ಸಿದ್ದರಾಮಯ್ಯ ಮನೆಯಲ್ಲಿ ಕುಳಿತು ಕೇವಲ ಆರೋಪ ಮಾಡುವ ಇಲ್ಲವೇ ಸಲಹೆ ಕೊಡುವುದಲ್ಲ. ಪ್ರತಿಪಕ್ಷಗಳು ಸರ್ಕಾರದ ಜತೆ ಕೈ ಜೋಡಿಸಬೇಕು. ನಮಗೂ ಒಂದು ಆಸ್ಪತ್ರೆಯ ಹೊಣೆ ನೀಡಿ, ನಿಭಾಯಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಲಿ. ಅದರ ಬದಲು ರಾಜಕೀಯ ಹೇಳಿಕೆ ನೀಡುವುದಲ್ಲ ಎಂದು ಟೀಕಿಸಿದರು.

ಕೊರೋನಾ ರೋಗಿಗಳಿಗೆ ಹೆಚ್ಚುವರಿ ಹಾಸಿಗೆ ವ್ಯವಸ್ಥೆ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಾಸಿಗೆಗಳ ವ್ಯವಸ್ಥೆ ಕುರಿತು ಶೀಘ್ರದಲ್ಲೇ ಖುದ್ದು ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಅಕ್ರಮ, ಅವ್ಯವಸ್ಥೆ ಕಂಡು ಬಂದರೆ ಸೂಕ್ತ ಕ್ರಮ ಜರುಗಿಸಲಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಆರೋಪಕ್ಕೆ ಯಾವ ತನಿಖೆಗೂ ಸಿದ್ಧ ಎಂದ ಮಾಜಿ ಶಿಷ್ಯ

ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ, ಜಿಕೆವಿಕೆಯಲ್ಲಿ ಹೆಚ್ಚುವರಿಯಾಗಿ ಹಾಸಿಗೆಗಳ ವ್ಯವಸ್ಥೆಯಾಗಿದೆ. ಆಸ್ಪತ್ರೆಗೆ ದಾಖಲಾತಿ ಮಾಡುವ ವಿಚಾರದಲ್ಲಿ ಸ್ವಲ್ಪ ವಿಳಂಬವಾಗುತ್ತಿರುವುದು ನಿಜ. ಆದರೆ ಇದಕ್ಕೂ ಕ್ರಮ ಕೈಗೊಳ್ಳಲಾಗಿದೆ. ಸೋಂಕುಗಳ ಪ್ರಮಾಣ ದಿಢೀರ್‌ ಏರಿಕೆಯಾದ ಹಿನ್ನೆಲೆಯಲ್ಲಿ ಸಣ್ಣಪುಟ್ಟಸಮಸ್ಯೆಗಳು ಆಗಿರಬಹುದು. ಹಾಸಿಗೆಗಳ ಕೊರತೆಯಂತೂ ಇಲ್ಲ ಎಂದು ಸ್ಪಷ್ಟಪಡಿಸಿದರು.

click me!