ಚುನಾವಣೆ ಹಿನ್ನೆಲೆ : 18 ಜಿಲ್ಲೆಗಳಲ್ಲಿ ಸರ್ಕಾರಿ ರಜೆ

By Kannadaprabha NewsFirst Published Oct 28, 2020, 9:52 AM IST
Highlights

ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 18 ಜಿಲ್ಲೆಗಳಲ್ಲಿ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. 

ಬೆಂಗಳೂರು (ಅ.28):  ವಿಧಾನಪರಿಷತ್‌ನ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳಿಗೆ ಶಾಂತಿಯುತವಾಗಿ ಮತದಾನ ನಡೆಸಲು ಚುನಾವಣಾ ಆಯೋಗವು ಸಿದ್ಧತೆ ಮಾಡಿಕೊಂಡಿದ್ದು, ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.

ನಾಲ್ಕು ಕ್ಷೇತ್ರಗಳಲ್ಲಿ ಒಟ್ಟಾರೆ 549 ಮತಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 146 ಮತ ಕೇಂದ್ರಗಳು, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 187 ಮತಕೇಂದ್ರಗಳು, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 69 ಮತಕೇಂದ್ರಗಳು ಮತ್ತು ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 147 ಮತಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಆರ್‌ಆರ್‌ ನಗರ ಉಪಚುನಾವಣೆ: ಜನಸೇವೆಯಲ್ಲೇ ನೋವು ಮರೆಯುತ್ತೇನೆ, ಕುಸುಮಾ ..

ಚುನಾವಣಾ ಕಣದಲ್ಲಿ ಅಂತಿಮವಾಗಿ 40 ಅಭ್ಯರ್ಥಿಗಳು ಸೆಣಸಲಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 5 ಅಭ್ಯರ್ಥಿಗಳು, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಮತ್ತು ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ನಾಲ್ಕು ಕ್ಷೇತ್ರದಲ್ಲಿ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ತಲಾ 4 ಅಭ್ಯರ್ಥಿಗಳು, ನೋಂದಾಯಿತ ಪಕ್ಷದಿಂದ 6 ಅಭ್ಯರ್ಥಿಗಳು ಮತ್ತು 22 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಒಟ್ಟು 75781 ಮತದಾರರಿದ್ದು, 48584 ಪುರುಷರು, 27186 ಮಹಿಳೆಯರು ಮತ್ತು 11 ಇತರೆ ಮತದಾರರಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 1.09 ಲಕ್ಷ ಮತದಾರರಿದ್ದು, 68414 ಪುರುಷರು, 40711 ಮಹಿಳೆಯರು ಮತ್ತು 4 ಇತರೆ ಮತದಾರರಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 29330 ಮತದಾರರಿದ್ದು, 19002 ಪುರುಷರು, 10326 ಮಹಿಳೆಯರು ಮತ್ತು ಇಬ್ಬರು ಇತರೆ ಮತದಾರರಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 22261 ಮತದಾರರಿದ್ದು, 7992 ಪುರುಷರು, 14266 ಮಹಿಳೆಯರು ಮತ್ತು ಮೂವರು ಇತರೆ ಮತದಾರರು ಇದ್ದಾರೆ.

ಮತದಾನದ ದಿನದಂದು ಮತದಾರರಿಗೆ ಎಡಗೈನ ತೋರು ಬೆರಳಿಗೆ ಶಾಯಿ ಹಚ್ಚಲು ಆಯೋಗವು ಸೂಚನೆ ನೀಡಿದೆ. ಮತಕೇಂದ್ರ ಬರುವ ಮತದಾರರಿಗೆ ಮತದಾನ ಮಾಡಿರುವ ಗುರುತಿಗಾಗಿ ಹಾಕಲಾಗುವ ಶಾಹಿಯನ್ನು ಎಡಗೈನ ತೋರು ಬೆರಳಿಗೆ ಹಾಕಬೇಕು ಎಂದು ನಿರ್ದೇಶನ ನೀಡಲಾಗಿದೆ.

ಪರ್ಯಾಯ ದಾಖಲೆಗಳು:

ವಿಧಾನಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತದಾರರು ಮತ ಚಲಾಯಿಸಲು ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿ ಹಾಜರುಪಡಿಸಲು ಸಾಧ್ಯವಾಗದಿದ್ದಲ್ಲಿ ಪರ್ಯಾಯ ದಾಖಲೆ ಸಲ್ಲಿಸಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಮತ ಚಲಾಯಿಸಲು ಪರ್ಯಾಯ ದಾಖಲಾತಿಯಾದ ಆಧಾರ್‌ ಕಾರ್ಡ್‌, ವಾಹನ ಚಾಲನಾ ಪರವಾನಗಿ, ಪಾನ್‌ಕಾರ್ಡ್‌, ಪಾಸ್‌ಪೋರ್ಟ್‌, ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರಾದರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಕೆಲಸ ಮಾಡುವ ಗುರುತಿನ ಚೀಟಿಗಳನ್ನು ತೋರಿಸಿ ಮತದಾನ ಮಾಡಬಹುದಾಗಿದೆ. ಸಂಸದರು, ಶಾಸಕರು ನೀಡಿದ ಅಧಿಕೃತ ಗುರುತಿನ ಚೀಟಿ, ಪದವಿಪ್ರಮಾಣ ಪತ್ರ, ಅಂಗವಿಕಲರ ಪ್ರಮಾಣ ಪತ್ರವನ್ನು ಸಹ ಹಾಜರು ಪಡಿಸಿ ಮತದಾನ ಚಲಾಯಿಸಬಹುದಾಗಿದೆ.

ಕ್ಷೇತ್ರದ ವ್ಯಾಪ್ತಿಗೆ ಬರುವ ಜಿಲ್ಲೆಗಳು

ಆಗ್ನೇಯ ಪದವೀಧರ ಕ್ಷೇತ್ರ: ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ( ಚನ್ನಗಿರಿ ಮತ್ತು ಹೊನ್ನಾಳಿ ತಾಲೂಕು ಹೊರತು ಪಡಿಸಿ).

ಪಶ್ಚಿಮ ಪದವೀಧರ ಕ್ಷೇತ್ರ: ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ

ಈಶಾನ್ಯ ಶಿಕ್ಷಕರ ಕ್ಷೇತ್ರ: ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ

ಬೆಂಗಳೂರು ಶಿಕ್ಷಕರ ಕ್ಷೇತ್ರ: ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ

 ಇಂದು ವಿಶೇಷ ಸಾಂದರ್ಭಿಕ ರಜೆ

ವಿಧಾನ ಪರಿಷತ್‌ನ 4 ಮತ ಕ್ಷೇತ್ರಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ, ಅನುದಾನ ರಹಿತ ವಿದ್ಯಾಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಮತ್ತು ಇತರ ಬ್ಯಾಂಕ್‌ಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಖಾನೆಗಳು, ಕೈಗಾರಿಕೆ ಸಂಸ್ಥೆಗಳು, ಸಹಕಾರಿ ರಂಗದ ಸಂಘ-ಸಂಸ್ಥೆಗಳು ಸೇರಿದಂತೆ ಇತರೆ ಸಂಸ್ಥೆಯಲ್ಲಿ ಕಾಯಂ ಹಾಗೂ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ಪದವೀಧರರು ಮತ್ತು ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಬುಧವಾರ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲು ಸರ್ಕಾರ ಆದೇಶಿಸಿದೆ.

4 ಮತ ಎಣಿಕೆ ಕೇಂದ್ರಗಳು

ವಿಧಾನಪರಿಷತ್‌ನ ನಾಲ್ಕು ಕ್ಷೇತ್ರಗಳಿಗೆ ನ.2ರಂದು ಮತ ಎಣಿಕೆ ನಡೆಯಲಿದೆ. ಪದವೀಧರ ಕ್ಷೇತ್ರದ ಮತ ಎಣಿಕೆಯು ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ಒಂದು ಹಾಲ್‌ನಲ್ಲಿ ಏಳು ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆಯು ಗುಲ್ಬರ್ಗ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ನಡೆಯಲಿದ್ದು, ಒಂದು ಹಾಲ್‌ನಲ್ಲಿ ಏಳು ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. ಆಗ್ನೇಯ ಪದವೀಧರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಮತ ಕ್ಷೇತ್ರದ ಮತ ಎಣಿಕೆಯು ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯಲಿದ್ದು, ಪ್ರತ್ಯೇಕವಾಗಿ ಎರಡು ಹಾಲ್‌ನಲ್ಲಿ ತಲಾ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ.

click me!