ಸರ್ಕಾರದಿಂದ ನಿಜಲಿಂಗಪ್ಪ ಮನೆ ಖರೀದಿಸಿ ಸ್ಮಾರಕ: ಸಚಿವ ಈಶ್ವರ್‌ ಖಂಡ್ರೆ

By Kannadaprabha News  |  First Published Nov 15, 2024, 9:03 PM IST

ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರ ಚಿತ್ರದುರ್ಗದ ಮನೆಯನ್ನು ಸ್ಮಾರಕವನ್ನಾಗಿ ಮಾಡಲು ಸರ್ಕಾರ ಮುಂದಾಗಿದ್ದು, ಅದಕ್ಕಾಗಿ ಇನ್ನು ಒಂದು ತಿಂಗಳೊಳಗೆ ಮನೆ ಖರೀದಿಸಿ, ನೋಂದಣಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. 


ಬೆಂಗಳೂರು (ನ.15): ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರ ಚಿತ್ರದುರ್ಗದ ಮನೆಯನ್ನು ಸ್ಮಾರಕವನ್ನಾಗಿ ಮಾಡಲು ಸರ್ಕಾರ ಮುಂದಾಗಿದ್ದು, ಅದಕ್ಕಾಗಿ ಇನ್ನು ಒಂದು ತಿಂಗಳೊಳಗೆ ಮನೆ ಖರೀದಿಸಿ, ನೋಂದಣಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಈ ಕುರಿತಂತೆ ವಿಕಾಸಸೌಧದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಅವರು ಇಲಾಖೆ ಅಧಿಕಾರಿಗಳು ಮತ್ತು ಚಿತ್ರದುರ್ಗ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ, ನಿಜಲಿಂಗಪ್ಪ ಅವರು ಚಿತ್ರದುರ್ಗದಲ್ಲಿ ವಾಸವಿದ್ದ ಮನೆಯನ್ನು ಸರ್ಕಾರದಿಂದ ಸ್ಮಾರಕವನ್ನಾಗಿ ಮಾಡಲು ನಿರ್ಧರಿಸಲಾಗಿದೆ. ಅದಕ್ಕಾಗಿ ನಿಜಲಿಂಗಪ್ಪ ಅವರ ಕುಟುಂಬದವರಿಂದ ಮನೆಯನ್ನು ಖರೀದಿ, ಒಂದು ತಿಂಗಳಲ್ಲಿ ಅದನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮನೆ ಖರೀದಿ ಹಾಗೂ ಸಂರಕ್ಷಣೆಗಾಗಿ ಈಗಾಗಲೇ ಸರ್ಕಾರದಿಂದ 5 ಕೋಟಿ ರು. ಅನುದಾನ ಮೀಸಲಿಟ್ಟಿದೆ. ಈ ಹಿಂದೆಯೇ ಮನೆ ಖರೀದಿ ಸಂಬಂಧ ಚರ್ಚಿಸಲಾಗಿತ್ತಾದರೂ, ತಾಂತ್ರಿಕ ಕಾರಣಗಳಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಇದೀಗ ನಿಜಲಿಂಗಪ್ಪ ಅವರ ಪುತ್ರ ಮತ್ತು ಕುಟುಂಬದವರೊಂದಿಗೆ ಚರ್ಚೆ ನಡೆಸಲಾಗಿದ್ದು, ಮನೆ ಖರೀದಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಿವರಾಜ ತಂಗಡಗಿ, ಇನ್ನು 1 ತಿಂಗಳೊಳಗಾಗಿ ಎಲ್ಲ ಚರ್ಚೆಗಳು ಮುಗಿದು, ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಕಾನೂನಾತ್ಮಕವಾಗಿ ಎಲ್ಲ ರೀತಿ ವ್ಯವಹಾರವನ್ನು ಮುಗಿಸಿ, ಮುಂದೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.

Tap to resize

Latest Videos

undefined

ಹಗರಣಗಳ ಮುಚ್ಚಿಕೊಳ್ಳಲು ಸಿಎಂ, ಡಿಸಿಎಂರಿಂದ ಆಪರೇಷನ್ ಕಮಲದ ಸುಳ್ಳು ಆರೋಪ: ಸಂಸದ ಯದುವೀರ್ ಒಡೆಯರ್

ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಿವರಾಜ ತಂಗಡಗಿ, ನಿಜಲಿಂಗಪ್ಪ ಅವರ ಮನೆ ಖರೀದಿಗೆ ಸಂಬಂಧಿಸಿದಂತೆ ಈಗಾಗಲೇ ಕಾನೂನು ಇಲಾಖೆಯಿಂದ ಅಭಿಪ್ರಾಯ ಪಡೆಯಲಾಗಿದೆ. ನಿಜಲಿಂಗಪ್ಪ ವಾಸವಿದ್ದ ಮನೆ ಈ ಹಿಂದೆ ಅವರ 3ನೇ ಪುತ್ರ ಎಸ್‌.ಎನ್. ಕಿರಣ್‌ಶಂಕರ್ ಹೆಸರಿನಲ್ಲಿತ್ತು. ಆದರೆ, ನಿಜಲಿಂಗಪ್ಪ ಅವರ ವಿಲ್‌ನಂತೆ ಮನೆಯು ಸದ್ಯ ಅವರ ಮೊಮ್ಮಗ ವಿನಯ್‌ ಹೆಸರಿನಲ್ಲಿದೆ. ಹೀಗಾಗಿ ಕಿರಣ್‌ ಹಾಗೂ ವಿನಯ್‌ ಜತೆಗೆ ಅಧಿಕಾರಿಗಳು ಚರ್ಚೆ ನಡೆಸಿದ್ದು, ತಿಂಗಳಲ್ಲಿ ಮನೆ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.

ಮನೆ ಖರೀದಿಸಿ ಸಂರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು 5 ಕೋಟಿ ರು. ಹಣ ಈಗಾಗಲೇ ಮೀಸಲಿಡಲಾಗಿದೆ. ಆ ಪೈಕಿ 4.18 ಕೋಟಿ ರು. ಮನೆ ಖರೀದಿಗೆ ಹಾಗೂ 81.50 ಲಕ್ಷ ರು.ಗಳನ್ನು ಮನೆ ಅಭಿವೃದ್ಧಿಗೆ ಬಳಸಲಾಗುವುದು ಎಂದು ಮಾಹಿತಿ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್‌. ಮಂಜುಳಾ, ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ, ಜಂಟಿ ನಿರ್ದೇಶಕ ಅಶೋಕ್‌ ಛಲವಾದಿ, ಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ್‌ ಇತರರಿದ್ದರು.

ರಾಜ್ಯವನ್ನೇ ಬೆಚ್ಚಿಬೀಳಿಸುವ ಕಹಾನಿ: ಗೋರಿಯಿಂದ ಹೊರ ಬಂದ 6 ತಿಂಗಳ ಹಿಂದೆ ಹೂತಿದ್ದ ಶವ!

ಸಿಎಂಗೆ ಖಂಡ್ರೆ ಅಭಿನಂದನೆ: ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರ ಚಿತ್ರದುರ್ಗದ ಮನೆಯನ್ನು ಖರೀದಿಸಿ ಸ್ಮಾರಕವಾಗಿ ಸಂರಕ್ಷಿಸಲು ಸಮ್ಮತಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅಭಿನಂದನೆ ತಿಳಿಸಿದ್ದಾರೆ. ನಿಜಲಿಂಗಪ್ಪ ಅವರು ಏಕೀಕರಣದ ಬಳಿಕ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಗಳಾಗಿದ್ದವರು. ಸರಳ, ಸಜ್ಜನಿಕೆಯಿಂದ ರಾಜ್ಯದ ಜನರ ಮನಸ್ಸನ್ನು ಗೆದ್ದಿದ್ದರು. ಅವರ ಮನೆಯನ್ನು ಸ್ಮಾರಕವನ್ನಾಗಿಸುವುದಾಗಿ ರಾಜ್ಯ ಸರ್ಕಾರ ಹಿಂದೆಯೇ ಘೋಷಿಸಿತ್ತು. ಈಗ ಆ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!