ವಿಶಿಷ್ಟ ಸಂಸ್ಕೃತಿಯ ಲಂಬಾಣಿ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜ, ದೇಶದ ಆಸ್ತಿಯಾಗಿ ಮಕ್ಕಳನ್ನು ಬೆಳೆಸಬೇಕು ಎಂದು ಶಾಲಾ ಶಿಕ್ಷಣ, ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಕರೆ ನೀಡಿದರು.
ದಾವಣಗೆರೆ (ಫೆ.15): ವಿಶಿಷ್ಟ ಸಂಸ್ಕೃತಿಯ ಲಂಬಾಣಿ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜ, ದೇಶದ ಆಸ್ತಿಯಾಗಿ ಮಕ್ಕಳನ್ನು ಬೆಳೆಸಬೇಕು ಎಂದು ಶಾಲಾ ಶಿಕ್ಷಣ, ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಕರೆ ನೀಡಿದರು.
ಜಿಲ್ಲೆಯ ನ್ಯಾಮತಿ ತಾ. ಭಾಯಘಡ್-ಸೂರಗೊಂಡನಕೊಪ್ಪದಲ್ಲಿ ಬುಧವಾರ ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ತಾಂಡಾ ಅಭಿವೃದ್ದಿ ನಿಗಮ, ಸಂತ ಸೇವಾಲಾಲ್‌ರ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಹಣಾ ಪ್ರತಿಷ್ಟಾನ, ಸಂತ ಸೇವಾ ಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿ ಸಮಾರಂಭ ಉದ್ಘಾಟಿಸಿ, ಸಂತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಲಂಬಾಣಿ ಸಮುದಾಯ ಕಲೆ, ಸಂಸ್ಕೃತಿ, ಜೀವನ ಪದ್ಧತಿ, ಆಚರಣೆಗಳನ್ನು ಇಂದಿಗೂ ಉಳಿಸಿಕೊಂಡು ಬಂದ ಶ್ರೀಮಂತ ಸಮಾಜ ಎಂದರು.
ಅರಣ್ಯ ವ್ಯಾಪ್ತಿಯಲ್ಲಿ ಇಲ್ಲದ ವಸತಿ ಪ್ರದೇಶ ಕಂದಾಯ ಗ್ರಾಮಗಳಾಗಿ ಪರಿವರ್ತನೆ: ಕೃಷ್ಣ ಬೈರೇಗೌಡ
ಸಂತ ಸೇವಾಲಾಲರು 17, 18ನೇ ಶತಮಾನದಲ್ಲಿ ಅಹಿಂಸಾ ತತ್ವ, ಶಾಂತಿ ಸಂಕೇತ ಪ್ರತಿಪಾದಿಸಿದವರು. ಅಲೆಮಾರಿ ಜನ ನೆಲೆಗೊಂಡು ಸಾಂಸ್ಕೃತಿಕತೆ, ಆರ್ಥಿಕ ಮುನ್ನಡೆಯಲ್ಲಿ ಸೇವಾಲಾಲ್‌ರ ಪಾತ್ರ ದೊಡ್ಡದು. ಬಂಜಾರ ಸಾಂಪ್ರದಾಯಿಕತೆ, ಮೌಖಿಕ ಸಾಹಿತ್ಯ, ವೇಷಭೂಷಣ, ಕಲೆ ಸಂರಕ್ಷಣೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಜನಾಂಗದ ಸಂಘಟನೆಯಲ್ಲಿ ಪ್ರಮುಖರಾದ ಶ್ರೀ ಸೇವಾಲಾಲರು ಸೂರಗೊಂಡನಕೊಪ್ಪದಲ್ಲಿ ಹುಟ್ಟಿದ್ದು, ಇದೊಂದು ಪುಣ್ಯಭೂಮಿಯಾಗಿದೆ ಎಂದು ಅವರು ತಿಳಿಸಿದರು.
ಸೂರಗೊಂಡನಕೊಪ್ಪ ಅಭಿವೃದ್ಧಿಯಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯನವರು ಭಾಗವಹಿಸಬೇಕಿತ್ತು, ಕಾರಣಾಂತರದಿಂದ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ತಮ್ಮ ಸಂದೇಶದಲ್ಲಿ ರಾಜ್ಯ ಸರ್ಕಾರ ಲಂಬಾಣಿ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲಾ ಕ್ರಮ ಕೈಗೊಳ್ಳಲಿದೆ. ನಮ್ಮ ಸರ್ಕಾರ ನಿಮ್ಮ ಜೊತೆಗಿದೆಯೆಂಬ ಭರವಸೆ ನೀಡಿದ್ದಾರೆ. ಸೂರಗೊಂಡನಕೊಪ್ಪದಲ್ಲಿ ಶಾಲೆ, ಕಾಲೇಜು ಸ್ಥಾಪನೆ, ಇಲ್ಲಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ನಿಮ್ಮ ಪರ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತುವೆ. ತಮ್ಮ ತಂದೆ, ಮಾಜಿ ಸಿಎಂ ಬಂಗಾರಪ್ಪನವರಿಗೆ ಲಂಬಾಣಿ ಜನಾಂಗದೊಂದಿಗೆ ನಿಕಟ ಸಂಪರ್ಕವಿತ್ತು. ಈ ಜನರ ಅಭಿವೃದ್ಧಿಗೆ, ಬಡತನ ನಿವಾರಣೆಗೆ ಅವರಲ್ಲಿ ತುಡಿತವಿತ್ತು ಎಂದು ಅವರು ಸ್ಮರಿಸಿದರು.
ವಿಧಾನಸಭೆ ಉಪ ಸಭಾಪತಿ, ಮಹಾಮಠ ಸಮಿತಿ ಅಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಮಾತನಾಡಿ, 1985ರಲ್ಲಿ ಸಮಾಜದ ಗಣ್ಯರು ಸೇರಿ ಕ್ಷೇತ್ರದ ಅಭಿವೃದ್ದಿಗೆ ಅಡಿಗಲ್ಲು ಹಾಕಿದ್ದು, ಸರ್ಕಾರ ಮೊಟ್ಟ ಮೊದಲು ₹1 ಕೋಟಿ ಅನುದಾನ ನೀಡಿತ್ತು. 2013ರ ನಂತರ ಸರ್ಕಾರ ಕ್ಷೇತ್ರದ ಅಭಿವೃದ್ದಿಗೆ 60 ಕೋಟಿಗೂ ಹೆಚ್ಚಿನ ಅನುದಾನ ನೀಡಿತು. ಸಮಾಜದ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು 50 ಕೋಟಿ ವೆಚ್ಚದ ವಸತಿ ಶಾಲೆ ಯೋಜನೆ ಇದೆ. ಇದಕ್ಕಾಗಿ 15 ಎಕರೆ ಜಾಗ ಮಂಜೂರಾಗಿದೆ. ಧಾರ್ಮಿಕ ಸಂಸ್ಥೆ ಜೊತೆಗೆ ಕೌಶಲ್ಯಾಭಿವೃದ್ಧಿ, ಸರ್ಕಾರಿ ಐಟಿಐ ಕಾಲೇಜು ಆರಂಭಿಸಲಾಗುವುದು. 10 ಕೋಟಿ ವೆಚ್ಚದಲ್ಲಿ ಗೋಶಾಲೆ, ಸೌರ ವಿದ್ಯುತ್ ಉತ್ಪಾದನೆ ಕೆಲಸ ನಡೆಯುತ್ತಿದೆ. ಇಲ್ಲಿ ಸಪ್ತ ಮಾತಕಿಯರ ಕೊಳದ ನಿರ್ಮಾಣ, ಹಳೇ ಜೋಗದಿಂದ ಚಿನ್ನಿಕಟ್ಟೆವರೆಗೆ ದ್ವಿಪಥ ರಸ್ತೆ ನಿರ್ಮಾಣಕ್ಕೆ ಸರ್ಕಾರಕ್ಕೆ ಒತ್ತಾಯಿಸಿದರು.
ಆಡಳಿತ ಸುಧಾರಣೆಗೆ ಗ್ರಾಪಂಗಳಿಗೆ ರೇಟಿಂಗ್ ವ್ಯವಸ್ಥೆ: ಸಚಿವ ಪ್ರಿಯಾಂಕ್ ಖರ್ಗೆ
ಧರ್ಮ ಗುರುಗಳಾದ ಬಾಬು ಸಿಂಗ್, ಸಾಲೂರು ಮಠದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹೊನ್ನಾಳಿ ಶಾಸಕ ಡಿ.ಜಿ.ಶಾಂತಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಸದರಾದ ಕಲಬುರಗಿ ಡಾ.ಉಮೇಶ ಜಾಧವ್, ಶಿವಮೊಗ್ಗದ ಬಿ.ವೈ.ರಾಘವೇಂದ್ರ, ವಿಪ ಸದಸ್ಯ ಪ್ರಕಾಶ ಕೆ.ರಾಥೋಡ್, ಕೆ.ಎಂ.ಎಫ್ ಅಧ್ಯಕ್ಷ ಭೀಮಾನಾಯ್ಕ, ಮಾಜಿ ಸಚಿವರಾದ ಪಿ.ಟಿ.ಪರಮೇಶ್ವರನಾಯ್ಕ, ಶಿವಮೂರ್ತಿನಾಯ್ಕ್, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಎಂ.ವಿ, ಮಹಾಮಠ ನಿರ್ವಹಣಾ ಸಮಿತಿ ಅಧ್ಯಕ್ಷ ಎನ್.ಹನುಮಂತನಾಯ್ಕ, ಪ್ರಧಾನ ಧರ್ಮದರ್ಶಿ ಹೀರಾನಾಯ್ಕ್, ಕಾರ್ಯದರ್ಶಿ ಅರುಣಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಸಂವಿಧಾನ ಪೀಠಿಕೆ ಓದುವ ಮೂಲಕ ಪ್ರತಿಜ್ಞೆ ಸ್ವೀಕರಿಸಲಾಯಿತು.