ದಾವಣಗೆರೆ ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡಲು ಮತದಾರರು, ಕಾರ್ಯಕರ್ತರ ಒಲವು ಯಾರ ಪರ ಇದೆಯೆಂಬುದು ಅರಿಯಲು ಕ್ಷೇತ್ರದಲ್ಲಿ ಸಮೀಕ್ಷೆ ಕೈಗೊಳ್ಳಲು ಬಿಜೆಪಿ ವರಿಷ್ಠರಿಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದ್ದಾರೆ.
ದಾವಣಗೆರೆ (ಡಿ.15): ದಾವಣಗೆರೆ ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡಲು ಮತದಾರರು, ಕಾರ್ಯಕರ್ತರ ಒಲವು ಯಾರ ಪರ ಇದೆಯೆಂಬುದು ಅರಿಯಲು ಕ್ಷೇತ್ರದಲ್ಲಿ ಸಮೀಕ್ಷೆ ಕೈಗೊಳ್ಳಲು ಬಿಜೆಪಿ ವರಿಷ್ಠರಿಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮೀಕ್ಷೆ, ಸರ್ವೇ ಆಧಾರದಲ್ಲಿ ಬಿಜೆಪಿ ಟಿಕೆಟ್ ನೀಡಲಿ. ರೇಣುಕಾಚಾರ್ಯಗೆ ಟಿಕೆಟ್ ನೀಡಲೇಬೇಕೆಂದು ನಾನು ಹೇಳಿಲ್ಲ. ಸರ್ವೇ ಆಧಾರದ ಮೇಲೆ ಟಿಕೆಟ್ ನೀಡಬೇಕೆಂಬ ಬೇಡಿಕೆ ನನ್ನದು. ಲೋಕಸಭೆ ಟಿಕೆಟ್ ವಿಚಾರವಾಗಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಳಿ ನಾನು ಇನ್ನೂ ಮಾತನಾಡಿಲ್ಲ.
ಆಕಾಂಕ್ಷಿಯೆಂದು ನಿತ್ಯ ಹೇಳುತ್ತಿದ್ದರೆ ತಪ್ಪು ಸಂದೇಶ ಹೋಗುತ್ತದೆ. ಹಾಗಾಗಿ ಸುಮ್ಮನಿದ್ದೇನೆ ಎಂದು ದಾವಣಗೆರೆ ಲೋಕಸಭೆ ಕ್ಷೇತ್ರಕ್ಕೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಪುನರಾಯ್ಕೆ ಬಯಸಿ, ಟಿಕೆಟ್ ಕೇಳುತ್ತಿರುವ ಕುರಿತ ಪ್ರಶ್ನೆಗೆ ರೇಣುಕಾಚಾರ್ಯ ಪ್ರತಿಕ್ರಿಯಿಸಿದರು. ಬಿಜೆಪಿಯಿಂದ ಉಚ್ಚಾಟಿತ ಮಾಜಿ ಶಾಸಕರಾದ ಟಿ.ಗುರುಸಿದ್ದನಗೌಡ, ಮಾಡಾಳು ವಿರೂಪಾಕ್ಷಪ್ಪ, ಮುಖಂಡರಿಂದ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿದ್ದು ನಿಜ. ರಾಜ್ಯದಿಂದ 28 ಕ್ಷೇತ್ರಗಳನ್ನೂ ಗೆಲ್ಲುವ ಗುರಿ ನಮ್ಮದು. ದಾವಣಗೆರೆಯೂ ಬಿಜೆಪಿಯ ಭದ್ರನೆಲೆ. ಈ ಹಿನ್ನೆಲೆಯಲ್ಲಿ ಒಟ್ಟಾಗಲು ಗುರುಸಿದ್ದನಗೌಡ, ಮಾಡಾಳು ವಿರೂಪಾಕ್ಷಪ್ಪ, ಡಾ.ಟಿ.ಜಿ.ರವಿಕುಮಾರ, ಮಾಡಾಳ ಮಲ್ಲಿಕಾರ್ಜುನರನ್ನು ಬಿಎಸ್‌ವೈ ಭೇಟಿ ಮಾಡಿಸಿದ್ದೇನೆ ಎಂದು ದೂರಿದರು.
ಸೋಮಣ್ಣರ ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಕಾರಣರಲ್ಲ: ಎಂ.ಪಿ.ರೇಣುಕಾಚಾರ್ಯ
ಯತ್ನಾಳ್, ಸೋಮಣ್ಣರಿಂದ ಮಾತ್ರ ಬಿಎಸ್‌ವೈ ಟೀಕೆ: ಸೋಮಣ್ಣಗೆ ವಿಧಾನಸಭೆ ಚುನಾವಣೆಯಲ್ಲಿ ಅಷ್ಟು ಮತಗಳು ಯಡಿಯೂರಪ್ಪನವರಿಂದಲೇ ಬಂದಿವೆ. ಚುನಾವಣೆಯಲ್ಲಿ ಸೋತಿದ್ದಕ್ಕೆ ಹತಾಶರಾಗಿ ಸೋಮಣ್ಣ ಮಾತನಾಡುತ್ತಿದ್ದಾರೆ. ಯತ್ನಾಳ್, ಸೋಮಣ್ಣ ಬಿಟ್ಟರೆ ಯಡಿಯೂರಪ್ಪನವರಿಗೆ ಯಾರೂ ಟೀಕಿಸುತ್ತಿಲ್ಲ. ಮುಂಬರುವ ಲೋಕಸಭೆ ಚುನಾವಣೆ ನಾವೆಲ್ಲರೂ ಒಟ್ಟಾಗಿ ಎದುರಿಸುತ್ತೇವೆ. 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಿ, ಕೇಂದ್ರದಲ್ಲಿ ಅಧಿಕಾರಕ್ಕೆ ತರುವ ಮೂಲಕ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುತ್ತೇವೆ ಎಂದು ರೇಣುಕಾಚಾರ್ಯ ತಿಳಿಸಿದರು.