
ಶಿವಮೊಗ್ಗ (ಸೆ.27): ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಪುತ್ರಿ ಹಾಗೂ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ, ಶಿವಮೊಗ್ಗದ ಕುತೂಹಲಕಾರಿ ರಾಜಕೀಯ ಅಧ್ಯಾಯವೊಂದಕ್ಕೆ ತೆರೆ ಎಳೆದಿದ್ದಾರೆ.
ಶಿವಮೊಗ್ಗ ನಗರದ ಬಂಜಾರ್ ಕನ್ವೆನ್ಷನ್ ಹಾಲ್‌ನಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಆಯೋಜಿಸಿದ್ದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಈ ನಿರ್ಧಾರವನ್ನು ಪ್ರಕಟಿಸಿದರು. 'ನಾನು ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ, ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ನೀಡಿದ ಮಾತ್ರಕ್ಕೆ ನಾನು ಪಕ್ಷದಿಂದ ದೂರ ಸರಿಯುವುದಿಲ್ಲ. ಪಕ್ಷದ ಸಂಘಟನೆಯಲ್ಲಿ, ನಿಮ್ಮೊಂದಿಗೆ ಸದಾ ಜೊತೆಗಿರುತ್ತೇನೆ, ಕೆಲಸ ಮಾಡುತ್ತೇನೆ. ಯಾವಾಗ ಕರೆದರೂ ನಾನು ಬರುತ್ತೇನೆ' ಎಂದು ಭರವಸೆ ನೀಡಿದರು.
ಸೋಲಿನ ಸರಣಿ: ಅಪ್ಪನ ಕ್ಷೇತ್ರ ಉಳಿಸಿಕೊಳ್ಳುವ ಪ್ರಯತ್ನ ವಿಫಲ:
ಗೀತಾ ಶಿವರಾಜ್‌ಕುಮಾರ್ ಅವರ ಈ ನಿವೃತ್ತಿ ನಿರ್ಧಾರವು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ದಿವಂಗತ ಬಂಗಾರಪ್ಪ ಕುಟುಂಬ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕುಟುಂಬಗಳ ನಡುವಿನ ದಶಕಗಳ ರಾಜಕೀಯ ಪೈಪೋಟಿಯ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ. ರಾಜಕೀಯ ಪ್ರವೇಶಿಸಿದ ನಂತರ ಗೀತಾ ಅವರು ಎರಡು ಪ್ರಮುಖ ಚುನಾವಣೆಗಳಲ್ಲಿ ಸೋಲು ಕಂಡಿದ್ದರು.
2014ರ ಲೋಕಸಭಾ ಚುನಾವಣೆ:
ಗೀತಾ ಶಿವರಾಜ್‌ಕುಮಾರ್ ಅವರು ಮೊದಲು ತಮ್ಮ ರಾಜಕೀಯ ಜೀವನವನ್ನು ಜೆಡಿಎಸ್ (JD(S)) ನಿಂದ ಪ್ರಾರಂಭಿಸಿದ್ದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅವರು, ಆಗ ಬಿ.ಎಸ್. ಯಡಿಯೂರಪ್ಪ ಅವರ ಎದುರು ದೊಡ್ಡ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಆ ಚುನಾವಣೆಯಲ್ಲಿ ಅವರು 3ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
2024ರ ಲೋಕಸಭಾ ಚುನಾವಣೆ:
ದೀರ್ಘ ವಿರಾಮದ ನಂತರ, 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮತ್ತೆ ಶಿವಮೊಗ್ಗದಿಂದ ಸ್ಪರ್ಧಿಸಿದ್ದರು. ಈ ಬಾರಿ ಅವರು ಹಾಲಿ ಸಂಸದರಾದ ಬಿ.ವೈ. ರಾಘವೇಂದ್ರ (ಬಿ.ಎಸ್.ವೈ ಪುತ್ರ) ಅವರ ಎದುರು ಕಣಕ್ಕಿಳಿದಿದ್ದರು. ಅವರ ಪರವಾಗಿ ಪತಿ ಶಿವರಾಜ್‌ಕುಮಾರ್ ಅವರು ವ್ಯಾಪಕ ಪ್ರಚಾರ ನಡೆಸಿದರೂ, ಯಡಿಯೂರಪ್ಪ ಕುಟುಂಬದ ಪ್ರಾಬಲ್ಯವನ್ನು ಮುರಿಯಲು ಸಾಧ್ಯವಾಗಲಿಲ್ಲ. ರಾಘವೇಂದ್ರ ಅವರ ಎದುರು ಗೀತಾ ಶಿವರಾಜ್‌ಕುಮಾರ್ ಅವರು ಸುಮಾರು 2.43 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಮತ್ತೊಮ್ಮೆ ಸೋಲು ಕಂಡರು.
ಕಳೆದ ದಶಕದಲ್ಲಿ, ಗೀತಾ ಶಿವರಾಜ್ ಕುಮಾರ್ ಸಹೋದರ ಮತ್ತು ಹಾಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕೂಡ ಇದೇ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ಎದುರು ಸೋಲುಂಡಿದ್ದರು. ಸತತ ಸೋಲುಗಳ ಹಿನ್ನೆಲೆಯಲ್ಲಿ, ಈಗ ಗೀತಾ ಶಿವರಾಜ್‌ಕುಮಾರ್ ಅವರು ಚುನಾವಣಾ ಸ್ಪರ್ಧೆಯಿಂದಲೇ ಹಿಂದೆ ಸರಿದಿದ್ದು, ಇನ್ನು ಮುಂದೆ ಪಕ್ಷ ಸಂಘಟನೆಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಮೂಲಕ ದೊಡ್ಮನೆ ಸೊಸೆಯ ಮುಂದಿನ ನಡೆ ಕೇವಲ ರಾಜಕೀಯ ಹೊರತಾದ ಸಾಮಾಜಿಕ ಮತ್ತು ಸಂಘಟನಾ ಕಾರ್ಯಗಳಿಗೆ ಮೀಸಲಾಗಿರಲಿದೆ ಎಂಬುದು ಸ್ಪಷ್ಟವಾಗಿದೆ. ಮುಖ್ಯವಾಗಿ ಸಿನಿಮಾದ ಕಡೆಗೆ ಗಮನ ಹರಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.