
ಮೈಸೂರು (ಸೆ.27): ಈ ಸರ್ಕಾರಕ್ಕೆ ತಲೆ ಇಲ್ಲ, ಬುಡ ಇಲ್ಲ, ಮಿದುಳು ಸಹಾ ಇಲ್ಲ. ಇದೊಂದು ನಿಷ್ಕ್ರಿಯ ಸರ್ಕಾರ ಎಂದು ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಸಮೀಕ್ಷೆ ವಿಚಾರವಾಗಿ ಕೇಂದ್ರ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದರು. ನಂತರ ಮಾತನಾಡಿದ ಅವರು, ತಮ್ಮ ತಪ್ಪು ಮುಚ್ಚಿಕೊಳ್ಳಲು ಇದನ್ನು ಮಾಡುತ್ತಿದ್ದಾರೆ. ದೇಶದಲ್ಲಿ ಅವ್ಯವಸ್ಥೆಯ ಡಾಕ್ಟರೇಟ್ ಇದ್ದರೆ ಅದನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಕೊಡಬೇಕು. ನಾಚಿಕೆ ಆಗುತ್ತೇ ಇದನ್ನೆಲ್ಲಾ ಹೇಳಿಕೊಳ್ಳಲು. ಈ ಗೊಂದಲಕ್ಕೆ ಸಿದ್ದರಾಮಯ್ಯ ಅವರೇ ಕಾರಣ. ಯಾವುದನ್ನು ಮಾಡಬಾರದು ಅದನ್ನು ಮಾಡಲು ಸಿದ್ದರಾಮಯ್ಯ ನಿಸ್ಸೀಮರು. ಖಜಾನೆ ಖಾಲಿ ಆಗಿದೆ ಸವಲತ್ತು ಕೊಡಲು ಆಗುತ್ತಿಲ್ಲ.
ಜನರನ್ನು ಹುಚ್ಚರನ್ನಾಗಿ ಮಾಡಲು ಒಂದೂವರೆ ವರ್ಷದಿಂದ ಷಡ್ಯಂತ್ರ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಜಾತಿ ಗಣತಿ ಮಾಡಲು ಸಿದ್ದತೆ ಮಾಡಿದೆ. ಅದಾದ ನಂತರ ಇವರು ಪಾಪದ ಕೆಲಸ ಮಾಡಲು ಮುಂದಾಗಿದ್ದಾರೆ. ಕಾಂತರಾಜು ವರದಿ ಯಾವ ತಿಪ್ಪೆಗೆ ಎಸೆದಿದ್ದೀರಾ ? ಯಾವ ಸಮುದ್ರಕ್ಕೆ ಹಾಕಿದ್ದೀರಾ ? ಇದನ್ನು ಮಾಡಿ ನಂತರ ಎಲ್ಲಿ ಹಾಕುತ್ತೀರಾ ? ನ್ಯಾಯಾಲಯದ ತೀರ್ಪು ಪೂರ್ಣ ಓದಿ. ಈ ಸಮೀಕ್ಷೆಗೆ ಮೂರು ಕಾಸಿನ ಗೌರವ ಇಲ್ಲ. ಸಮೀಕ್ಷೆ ಬಲವಂತವಾಗಿ ಮಾಡುವಂತಿಲ್ಲ. ಸಮೀಕ್ಷೆ ವರದಿ ಬಹಿರಂಗಪಡಿಸುವಂತಿಲ್ಲ. ಹೀಗಿದ್ದ ಮೇಲೆ ಸಮೀಕ್ಷೆ ಏಕೆ ? ಸಿದ್ದರಾಮಯ್ಯ ಅವರಿಗೆ ವಿನಂತಿ. ಅಂತ್ಯ ಕಾಲದಲ್ಲಿ ಇದ್ದೇವೆ ಇದೆಲ್ಲಾ ಗೊಂದಲ ಬೇಡ.
ಕಾಂಗ್ರೆಸ್ ಜೀವಂತ ಇದೆ ಅಂತಾ ತೋರಿಸಲು ಸಮೀಕ್ಷೆ ಮಾಡುತ್ತಿದ್ದು, ಪಾಪದ ಕೃತ್ಯ ಮುಚ್ಚಿಕೊಳ್ಳಲು ಇದನ್ನು ಮಾಡುತ್ತಿದ್ದಾರೆ. ರಾಜ್ಯದ ಜನರು ಪ್ರಜ್ಞಾವಂತರಿದ್ದಾರೆ. ಜಾತಿ ಗಣತಿಯಿಂದ ಜನರಿಗೆ ಅನುಕೂಲ ಆಗಲ್ಲ. ಅಧಿಕಾರಿಗಳು ಹಾಗೂ ಸಿದ್ದರಾಮಯ್ಯ ಪಟಾಲಂಗೆ ಅನುಕೂಲವಾಗಲಿದೆ. ಜಾತಿ ಗಣತಿ ಅನುಷ್ಠಾನಕ್ಕೆ ತರಲು ಇವರಿಗೆ ಬದ್ದತೆ ಇಲ್ಲ ಕಾಂತರಾಜು ವರದಿ ಗತಿಯೇ ಇದಕ್ಕೆ ಬರುತ್ತದೆ. ರಾಜ್ಯ ಸರ್ಕಾರ ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿದೆ. ಕೆಲಸ ಕಲಿಯಲು ಸಿಎಂ ಸಿದ್ದರಾಮಯ್ಯ ಡೆಲ್ಲಿಗೆ ಬನ್ನಿ. ಸಿಎಂ ಸಿದ್ದರಾಮಯ್ಯ ಅವರನ್ನು ನನ್ನ ಮನೆಯಲ್ಲೇ ಇಟ್ಟುಕೊಳ್ಳುತ್ತೇನೆ ಎಂದು ಸೋಮಣ್ಣ ಆಹ್ವಾನ ಕೊಟ್ಟರು.
ಮೋದಿ 24 ×7 ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಸಿದ್ದರಾಮಯ್ಯ ಸರ್ಕಾರ ಮಜಾ ಮಾಡುತ್ತಿದ್ದಾರೆ. ನನಗೆ ಏನು ಗೊತ್ತಿಲ್ಲದವನಿಗೆ ಮೋದಿ ಎಲ್ಲಾ ಕಲಿಸಿದ್ದಾರೆ. ಸಿದ್ದರಾಮಯ್ಯ ನಿಮಗೂ ಕಲಿಸುತ್ತಾರೆ ದಯಮಾಡಿ ಬಂದು ಕೆಲಸ ಕಲಿಯಿರಿ. ನಿಮ್ಮ ಕೆಲಸದಿಂದ ತಾಯಿ ಚಾಮುಂಡಿ ಸಹಾ ಬೇಜರಾಗಿದ್ದಾರೆ. ದಸರಾ ಆದ ಮೇಲೆ ಅವರ ಪಾಪದ ಹೊಂಡದಲ್ಲಿ ಅವರೇ ಬೀಳುತ್ತಾರೆ. ರಾಜ್ಯದಲ್ಲಿ ನಾಯಕತ್ವನೇ ಇಲ್ಲ. ಇವರೆಲ್ಲಾ ರಾಹುಲ್ ಗಾಂಧಿ ಬಾಲ ಅಷ್ಟೇ. ಸಿದ್ದರಾಮಯ್ಯ ಇದ್ದಷ್ಟು ದಿನ ನಮಗೆ ಒಳ್ಳೆಯದು. ಸಿದ್ದರಾಮಯ್ಯ ಅವರೇ ವ್ಯವಸ್ಥೆ ಬುಡಮೇಲು ಮಾಡುವ ಕೆಲಸ ಮಾಡಬೇಡಿ. ಇನ್ನು ಮುಂದೆ ಆದರೂ ಇರೋ ಅಷ್ಟು ದಿನ ಗೌರವಯುತವಾಗಿರಿ. ಸತ್ಯವನ್ನೇ ಹೇಳುತ್ತೇನೆ ಅಂತಾ ಹೇಳಿ ಸತ್ಯ ಬಿಟ್ಟು ಬೇರೆ ಎಲ್ಲಾ ಹೇಳುತ್ತಾ ಇದ್ದೀರಾ. ಇದರಿಂದ ನಿಮಗೆ ವಿಪತ್ತು ಕಾದಿದೆ ಎಂದು ಸೋಮಣ್ಣ ಎಚ್ಚರಿಕೆಯನ್ನು ಕೊಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.