2009ರಲ್ಲಿ ಬಿ.ವೈ.ರಾಘವೇಂದ್ರ ಮೊದಲ ಬಾರಿಗೆ ಸ್ಪರ್ಧಿಸಿ ಬಿಜೆಪಿಗೆ ಗೆಲುವು ತಂದುಕೊಟ್ಟಿದ್ದರು. ನಂತರ 2014ರಲ್ಲಿ ಬಿ.ಎಸ್. ಯಡಿಯೂರಪ್ಪ ರಾಜ್ಯದಲ್ಲಿಯೇ ಅತ್ಯಧಿಕ ಬಹುಮತದ ಗೆಲುವು ದಾಖಲಿಸಿದರು. 2019ರಲ್ಲಿ ನಡೆದ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ಪುನಃ ಗೆಲುವು ಸಾಧಿಸಿ, ಸಂಸದರಾದರು. ಈ ಮೂರು ಅವಧಿಯಲ್ಲಿ ಬಿಜೆಪಿ ಇಲ್ಲಿ ಭದ್ರ ಬುನಾದಿಯನ್ನು ಹಾಕಿಕೊಂಡಿದೆ.
ಗೋಪಾಲ್ ಯಡಗೆರೆ
ಶಿವಮೊಗ್ಗ(ಜ.13): ಬಿಜೆಪಿಯ ಭದ್ರಕೋಟೆಯಾಗಿ ಪರಿವರ್ತಿತವಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಹೇಗಾದರೂ ಮಾಡಿ ಒಡೆದು, ಇಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಲು ಕಾಂಗ್ರೆಸ್ ಎಲ್ಲ ರೀತಿಯ ಪ್ರಯತ್ನ ನಡೆಸುವ ಸಾಧ್ಯತೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಪಕ್ಷ ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಆದರೆ, ಸಂಸದ, ಬಿಜೆಪಿಯ ಬಿ.ವೈ.ರಾಘವೇಂದ್ರ ಅವರಿಗೆ ಸವಾಲೊಡ್ಡುವಂಥ ಅಭ್ಯರ್ಥಿ ಯಾರೆಂಬ ಸ್ಪಷ್ಟ ಚಿತ್ರಣ ಈವರೆಗೂ ಕಾಂಗ್ರೆಸ್ ಪಾಳೆಯದಲ್ಲಿ ಕಂಡು ಬರುತ್ತಿಲ್ಲ.
ಒಂದು ಕಾಲದಲ್ಲಿ ಕಾಂಗ್ರೆಸ್‌ನ ಪ್ರಬಲ ಕೋಟೆಯಾಗಿದ್ದ ಶಿವಮೊಗ್ಗ, ಬಳಿಕ ಎಸ್.ಬಂಗಾರಪ್ಪ ವರ್ಚಸ್ಸಿನೊಳಗೆ ಸಿಲುಕಿತ್ತು. 2004ರಲ್ಲಿ ಎಸ್.ಬಂಗಾರಪ್ಪ ಬಿಜೆಪಿಗೆ ಸೇರ್ಪಡೆಗೊಂಡು, ಕ್ಷೇತ್ರವನ್ನು ಬಿಜೆಪಿಗೆ ಕೊಡುಗೆಯಾಗಿ ನೀಡಿದರು. ಈ ಮೊದಲು 1998ರಲ್ಲಿ ನಡೆದ ಚುನಾವಣೆಯಲ್ಲಿ ಆಯನೂರು ಮಂಜುನಾಥ್ ಬಿಜೆಪಿಗೆ ಮೊದಲ ಗೆಲುವು ತಂದು ಕೊಟ್ಟಿದ್ದರು. ಇದಕ್ಕೆ ಮೊದಲು 1996ರಲ್ಲಿ ಕೆಸಿಪಿಯಿಂದ ಮತ್ತು 1999ರಲ್ಲಿ ಕಾಂಗ್ರೆಸ್‌ನಿಂದ ಬಂಗಾರಪ್ಪ ಗೆಲುವು ಸಾಧಿಸಿದ್ದರು.
ಕಲಬುರಗಿ ಲೋಕ ಕದನ: ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸ್ತಾರಾ?, ಅಳಿಯ/ಪುತ್ರಗೆ ಬಿಟ್ಟುಕೊಡ್ತಾರಾ?
2009ರಲ್ಲಿ ಬಿ.ವೈ.ರಾಘವೇಂದ್ರ ಮೊದಲ ಬಾರಿಗೆ ಸ್ಪರ್ಧಿಸಿ ಬಿಜೆಪಿಗೆ ಗೆಲುವು ತಂದುಕೊಟ್ಟಿದ್ದರು. ನಂತರ 2014ರಲ್ಲಿ ಬಿ.ಎಸ್. ಯಡಿಯೂರಪ್ಪ ರಾಜ್ಯದಲ್ಲಿಯೇ ಅತ್ಯಧಿಕ ಬಹುಮತದ ಗೆಲುವು ದಾಖಲಿಸಿದರು. 2019ರಲ್ಲಿ ನಡೆದ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ಪುನಃ ಗೆಲುವು ಸಾಧಿಸಿ, ಸಂಸದರಾದರು. ಈ ಮೂರು ಅವಧಿಯಲ್ಲಿ ಬಿಜೆಪಿ ಇಲ್ಲಿ ಭದ್ರ ಬುನಾದಿಯನ್ನು ಹಾಕಿಕೊಂಡಿದೆ.
ಇದೀಗ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಬಿ.ವೈ.ರಾಘವೇಂದ್ರ ಅವರನ್ನೇ ಅಭ್ಯರ್ಥಿಯನ್ನಾಗಿಸುವುದು ಖಚಿತವಾಗಿದೆ. ಜೊತೆಗೆ ಜೆಡಿಎಸ್ ಜೊತೆಗಿನ ಹೊಂದಾಣಿಕೆಯಿಂದ ಇನ್ನಷ್ಟು ಬಲ ಬರಲಿದೆ. ರಾಘವೇಂದ್ರ ಅವರು ತಮ್ಮ ಅವಧಿಯಲ್ಲಿ ಲೋಕಸಭಾ ಕ್ಷೇತ್ರಕ್ಕೆ ತಂದ ಯೋಜನೆಗಳೇ ಅವರಿಗೆ ಶ್ರೀರಕ್ಷೆ. ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಜೊತೆಯಾಗಲಿದೆ.
ಬಾಗಲಕೋಟೆ ಲೋಕಸಭಾ ಟಿಕೆಟ್ ಫೈಟ್: ಬಿಜೆಪಿಯಿಂದ ಗದ್ದಿಗೌಡರೇ ಈಗಲೂ ಫೇವರಿಟ್..!
ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ಗೀತಾ ಶಿವರಾಜ್‌ಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೆಸರುಗಳು ಚಾಲ್ತಿಯಲ್ಲಿವೆ. ಈ ನಡುವೆ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತಾವೂ ಲೋಕಸಭೆಗೆ ಅಭ್ಯರ್ಥಿ ಆಕಾಂಕ್ಷಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ, ಪಕ್ಷ ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಇವರ ಹೊರತಾಗಿ ಇನ್ಯಾರೂ ತಾವು ಟಿಕೆಟ್ ಆಕಾಂಕ್ಷಿ ಎಂದು ಹೇಳುತ್ತಿಲ್ಲ.
ಜಾತಿ ಲೆಕ್ಕಾಚಾರದಲ್ಲಿ ಲಿಂಗಾಯತ ಅಥವಾ ಈಡಿಗ ಅಭ್ಯರ್ಥಿಗಳಿದ್ದರೆ ಮಾತ್ರ ಸವಾಲು ಒಡ್ಡಲು ಸಾಧ್ಯ ಎಂಬ ಮಾತುಗಳು ಚರ್ಚೆಯಲ್ಲಿವೆ. ಆದರೆ, ಕಾಂಗ್ರೆಸ್‌ನಲ್ಲಿ ಪ್ರಬಲ ಲಿಂಗಾಯತ ಅಭ್ಯರ್ಥಿಗಳಾರೂ ಇಲ್ಲದ ಕಾರಣ ಈಡಿಗ ಸಮುದಾಯದತ್ತ ಹೊರಳುವ ಸಾಧ್ಯತೆ ಇದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ತಮ್ಮ ಸೋದರಿ ಗೀತಾ ಶಿವರಾಜಕುಮಾರ್ ಅವರಿಗೇ ಟಿಕೆಟ್ ಕೊಡಿಸಲು ಪ್ರಯತ್ನ ಮುಂದುವರಿಸಿದ್ದು, ಪ್ರಬಲ ಒತ್ತಡ ಹಾಕುತ್ತಿದ್ದಾರೆ. ಮೂಲಗಳ ಪ್ರಕಾರ ಬಹುತೇಕ ಗೀತಾ ಶಿವರಾಜಕುಮಾರ್ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆಗಳು ಹೆಚ್ಚು ಇವೆ. ಇದಲ್ಲದೆ, ಮಧು ಬಂಗಾರಪ್ಪ ಅವರನ್ನೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದರೆ ಹೇಗೆ ಎಂಬ ಚಿಂತನೆಯೂ ಸ್ಥಳೀಯ ಮಟ್ಟದಲ್ಲಿದೆ ಎನ್ನಲಾಗುತ್ತಿದೆ.