
ಬೆಳಗಾವಿ(ಜ.21): ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಬೆಳಗಾವಿ ಸಜ್ಜುಗೊಂಡಿದೆ. ‘ಗಾಂಧೀ ಭಾರತ’ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೇಶದ ನಾನಾ ಭಾಗಗಳಿಂದ ಕಾಂಗ್ರೆಸ್ ನಾಯಕರ ದಂಡೆ ಹರಿದುಬಂದಿದೆ.
ಲೋಕಸಭೆಯ ವಿಪಕ್ಷ ನಾಯಕ, ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿ ದೊಡ್ಡ ನಾಯಕರೇ ದಂಡೇ ಮಂಗಳವಾರ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ, ಕಾಂಗ್ರೆಸ್ ನೆಲಸಮ ಮಾಡಲು ಹೋಗಬೇಡಿ: ಸುರ್ಜೇವಾಲಾ
ಬೆಳಗ್ಗೆ 10.30ಕ್ಕೆ ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಮಹಾತ್ಮಾ ಗಾಂಧೀಜಿ ಅವರ ಬೃಹತ್ ಪ್ರತಿಮೆ ಅನಾವರಣಗೊಳ್ಳಲಿದೆ. ಮಧ್ಯಾಹ್ನ 3ಕ್ಕೆ ನಗರದ ಸಿಪಿಎಡ್ ಮೈದಾನದಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ನಡೆಯಲಿದೆ. ಇದಕ್ಕಾಗಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಅಂದಾಜು ಒಂದೂವರೆ ಲಕ್ಷ ಕುರ್ಚಿಗಳನ್ನು ಹಾಕಲಾಗಿದೆ.
ಕಾಂಗ್ರೆಸ್ ಸಮಾವೇಶದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರ್ಗಗಳಲ್ಲಿ ಕಾಂಗ್ರೆಸ್ ನಾಯಕರ ಕಟೌಟ್, ಬ್ಯಾನರ್‌ಗಳು, ಪಕ್ಷದ ಬಾವುಟಗಳು ರಾರಾಜಿಸುತ್ತಿವೆ. ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕ್ಲಬ್ ರಸ್ತೆ, ಕಾಲೇಜು ರಸ್ತೆ ಸೇರಿದಂತೆ ನಗರದ ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಕಾಂಗ್ರೆಸ್ ನಾಯಕರನ್ನು ಸ್ವಾಗತಿಸುತ್ತಿರುವ ಕಟೌಟ್, ಬ್ಯಾನರ್ ಹಾಕಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿ ಸಚಿವರು, ಕಾಂಗ್ರೆಸ್ ನಾಯಕರು, ಎಐಸಿಸಿ ಪದಾಧಿಕಾರಿಗಳು ಬೆಳಗಾವಿಗೆ ಆಗಮಿಸಿದ್ದಾರೆ.
ಸಿಎಂ ಬದಲಾವಣೆ ಬಗ್ಗೆ ಬಾಯಿ ಬಿಟ್ರೆ ಹುಷಾರ್: ರಣದೀಪ್ ಸಿಂಗ್ ಸುರ್ಜೇವಾಲಾ
ಸೋಮವಾರ ಸಂಜೆ ಸುವರ್ಣ ವಿಧಾನಸೌಧದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಅನಾವರಣ ಸಮಾರಂಭದ ಸಿದ್ಧತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರಿಶಿಲೀಸಿದರು.
ಕಳೆದ ಡಿಸೆಂಬರ್ 27 ರಂದು ಕಾಂಗ್ರೆಸ್ ಸಮಾವೇಶ, ಸುವರ್ಣಸೌಧದ ಆವರಣದಲ್ಲಿನ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ, ಮಾಜಿ ಪ್ರದಾನಮಂತ್ರಿ ಮನಮೋಹನ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.
ಗಾಂಧಿ ಪ್ರತಿಮೆ ಅನಾವರಣ ಇಂದು:
ಮಂಗಳವಾರ ಬೆಳಗ್ಗೆ 10.30ಕ್ಕೆ ಬೆಳಗಾವಿ ಸುವರ್ಣ ವಿಧಾನಸೌಧದ ಉತ್ತರ ಪ್ರವೇಶ ದ್ವಾರದ ಬಳಿ ನಿರ್ಮಿಸಲಾದ ಮಹಾತ್ಮ ಗಾಂಧೀಜಿಯವರ 25 ಅಡಿ ಎತ್ತರ ಮತ್ತು 20 ಟನ್ ತೂಕ ಹೊಂದಿರುವ ಬೃಹತ್ ಪ್ರತಿಮೆ ಅನಾವರಣಗೊಳ್ಳಲಿದೆ. ಒಟ್ಟು ₹4.83 ಕೋಟಿ ವೆಚ್ಚದಲ್ಲಿ ಪಂಚಲೋಹದಿಂದ ನಿರ್ಮಾಣಗೊಂಡಿದೆ. ಮೈಸೂರಿನ ಕಲಾವಿದ ಅರುಣ ಯೋಗಿರಾಜ ಪ್ರತಿಮೆ ನಿರ್ಮಿಸಿದ್ದಾರೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅನಾವರಣಗೊಳಿಸಲಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿ ಮತ್ತಿತರರು ಭಾಗವಹಿಸುವರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.