
ಬೆಂಗಳೂರು (ಜೂ.12): ಶಕ್ತಿ ಯೋಜನೆಯು ಮುಂದಿನ ಹತ್ತು ವರ್ಷಗಳ ಕಾಲ ಜಾರಿಯಲ್ಲಿ ಇರಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಭಾನುವಾರ ವಿಧಾನಸೌಧದ ಆವರಣದಲ್ಲಿ ಶಕ್ತಿ ಯೋಜನೆ ಜಾರಿ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಅವರು, ಈ ಕಾರ್ಯಕ್ರಮ ಐದು ವರ್ಷ ಪೂರ್ತಿ ಇರುತ್ತದೆ. ಐದು ವರ್ಷದ ನಂತರ ಚುನಾವಣೆ ಆಗುತ್ತದೆ. ಮತ್ತೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಅಂದರೆ ಹತ್ತು ವರ್ಷ ಶಕ್ತಿ ಯೋಜನೆ ಜಾರಿಯಲ್ಲಿರುತ್ತದೆ ಎಂದು ಟೀಕಾಕಾರರಿಗೆ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ ಎಂದರು.
ನುಡಿದಂತೆ ನಡೆಯುವುದು ನಮಗೆ ಹೊಸದೇನು ಅಲ್ಲ. 2013ರಲ್ಲಿ ನಾವು ಕೊಟ್ಟಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ವರ್ಷಗಳಲ್ಲಿ ಈಡೇರಿಸಿದೆ. 2019ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಅವರು ಕೊಟ್ಟ600 ಆಶ್ವಾಸನೆಗಳಲ್ಲಿ ಶೇ.10ರಷ್ಟು ಭರವಸೆಗಳನ್ನು ಅವರು ಈಡೇರಿಸಿದರು. ಇದೇ ಬಿಜೆಪಿಗೂ ನಮಗೂ ಇರುವ ವ್ಯತ್ಯಾಸ. ನಾವು ಏನು ಹೇಳುತ್ತೇವೋ ಅದನ್ನು ಮಾಡೇ ಮಾಡುತ್ತೇವೆ ಎಂದು ಹೇಳಿದರು.
ಯುವಕರನ್ನು ಸೋಮಾರಿ ಮಾಡಲು ಸಿದ್ಧರಿಲ್ಲ: ಡಿ.ಕೆ.ಶಿವಕುಮಾರ್
ಶಕ್ತಿ ಯೋಜನೆಗೆ ಯಾವುದೇ ಎಪಿಎಲ್, ಬಿಪಿಎಲ್ ಎನ್ನುವ ಆಕ್ಷೇಪಣೆಯೂ ಇಲ್ಲ. ಎಲ್ಲ ಮಹಿಳೆಯರಿಗೂ ಇದು ಅನ್ವಯವಾಗಲಿದೆ. ಅಂತರರಾಜ್ಯ, ಎಸಿ, ವೋಲ್ವೋ ಬಸ್‌ಗಳನ್ನು ಹೊರತುಪಡಿಸಿ ಶೇ.90ಕ್ಕಿಂತ ಹೆಚ್ಚು ಬಸ್‌ಗಳಲ್ಲಿ ಮಹಿಳೆಯರು ರಾಜ್ಯದ ಯಾವುದೇ ಮೂಲೆಗೆ ಬೇಕಾದರು ಸಂಚರಿಸಬಹುದು. ವಿದ್ಯಾರ್ಥಿನಿಯರಿಗೂ ಇದು ಅನ್ವಯವಾಗುತ್ತದೆ. ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಸಾಧಿಸಲು ಶ್ರಮಿಸಬೇಕು ಎಂದರು.
ಕೆಎಸ್‌ಆರ್‌ಟಿಸಿಯ ನಾಲ್ಕು ನಿಗಮಗಳ ಬಸ್‌ಗಳನ್ನು ನಿಲ್ದಾಣಗಳಲ್ಲಿ ಕಡ್ಡಾಯವಾಗಿ ನಿಲ್ಲಿಸಬೇಕು. ಚಾಲಕರು, ನಿರ್ವಾಹಕರು ಇಲಾಖೆಗೆ ಒಳ್ಳೆಯ ಹೆಸರು ತರಬೇಕು. ಈ ಹಿಂದೆ ನಾನು ಸಾರಿಗೆ ಸಚಿವನಾಗಿದ್ದಾಗ 203 ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ನಮ್ಮ ಇಲಾಖೆಗೆ ಬಂದಿವೆ. ಆ ನಂತರ 5 ವರ್ಷ 08 ತಿಂಗಳಲ್ಲಿ ಬಂದಿರುವ ಪ್ರಶಸ್ತಿಗಳು ಕೇವಲ 50 ಅಷ್ಟೇ. ದೇಶದಲ್ಲೇ ಅತ್ಯಂತ ಹೆಮ್ಮೆಯ ಸಂಸ್ಥೆಗಳಲ್ಲಿ ನಮ್ಮ ನಾಲ್ಕು ನಿಗಮಗಳು ಹೆಸರು ಮಾಡಿವೆ. ಶಕ್ತಿ ಯೋಜನೆಯನ್ನು ನಿಗಮಗಳ ಅಧಿಕಾರಿ, ಸಿಬ್ಬಂದಿಗಳು ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.
ಬಿಟ್ಟಿ ಭಾಗ್ಯದ ಮೂಲಕ ಜನತೆಯನ್ನು ವಂಚಿಸಿದ ಕಾಂಗ್ರೆಸ್ ಸರ್ಕಾರ: ಸಚಿವ ರಾಜೀವ್ ಚಂದ್ರಶೇಖರ್
ಬಸ್‌ನಲ್ಲಿ ಸಿಎಂ ಪ್ರಯಾಣ: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಮತ್ತಿತರರು ಕೆ.ಎ.57 ಎಫ್ 5324 ನೋಂದಣಿ ಸಂಖ್ಯೆಯ ಬಿಎಂಟಿಸಿ ಬಸ್‌ನಲ್ಲಿ ವಿಧಾನಸೌಧದಿಂದ ಹೋಟಲ್ ಕ್ಯಾಪಿಟಲ್, ರಾಜಭವನ ರಸ್ತೆ, ಮಹಾರಾಣಿ ಕಾಲೇಜ್ ಬಳಿ ಇರುವ ಅಂಡರ್ ಪಾಸ್ ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ಕೆ.ಜಿ ರೋಡ್ ಮೂಲಕ ಕೆಂಪೇಗೌಡ (ಮೆಜೆಸ್ಟಿಕ್) ಬಸ್‌ನಿಲ್ದಾಣಕ್ಕೆ ತಲುಪಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಶೂನ್ಯ ಟಿಕೆಟ್ ನೀಡಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ಅವರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.