ಶಕ್ತಿ ಇಲ್ಲದ ಅಶಕ್ತ ಜನರಿಗೆ ಶಕ್ತಿ ಕೊಡಬೇಕು ಎನ್ನುವುದು ನಮ್ಮ ಧ್ಯೇಯ: ಸಿದ್ದರಾಮಯ್ಯ

By Kannadaprabha News  |  First Published Jun 12, 2023, 8:27 AM IST

ಶಕ್ತಿ ಇಲ್ಲದ ಅಶಕ್ತ ಜನರಿಗೆ ಶಕ್ತಿ ಕೊಡಬೇಕು ಎನ್ನುವುದು ನಮ್ಮ ಧ್ಯೇಯ. ಅವಕಾಶ ವಂಚಿತರಾಗಿರುವ ಮಹಿಳೆಯರ ಸಬಲೀಕರಣಗೊಳಿಸುವ ಉದ್ದೇಶದಿಂದ ಈ ಶಕ್ತಿ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಾದಿಸಿದ್ದಾರೆ. 


ಬೆಂಗಳೂರು (ಜೂ.12): ಶಕ್ತಿ ಇಲ್ಲದ ಅಶಕ್ತ ಜನರಿಗೆ ಶಕ್ತಿ ಕೊಡಬೇಕು ಎನ್ನುವುದು ನಮ್ಮ ಧ್ಯೇಯ. ಅವಕಾಶ ವಂಚಿತರಾಗಿರುವ ಮಹಿಳೆಯರ ಸಬಲೀಕರಣಗೊಳಿಸುವ ಉದ್ದೇಶದಿಂದ ಈ ಶಕ್ತಿ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಾದಿಸಿದ್ದಾರೆ. ಭಾನುವಾರ ವಿಧಾನಸೌಧದ ಪೂರ್ವದ್ವಾರದ(ಗ್ರ್ಯಾಂಡ್‌ಸ್ಟೆಫ್ಸ್‌) ಆವರಣದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ’ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಲು ಪುರುಷರಷ್ಟೇ ಮಹಿಳೆಯರು ಸಾರ್ವಜನಿಕ ಕ್ಷೇತ್ರಗಳಲ್ಲಿ ಪಾಲ್ಗೊಳ್ಳಬೇಕು. 

ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವುದರ ಮೂಲಕ ‘ಶಕ್ತಿ’ ತುಂಬುವ ಕೆಲಸವನ್ನು ಮಾಡುತ್ತಿದೆ ಎಂದರು. ಶಕ್ತಿ ಯೋಜನೆಯ ಸ್ಮಾರ್ಚ್‌ ಕಾರ್ಡ್‌ಗಳನ್ನು 3 ತಿಂಗಳೊಳಗೆ ಉಚಿತವಾಗಿ ಒದಗಿಸಲಾಗುವುದು. ಅಲ್ಲಿವರೆಗೆ ಸರ್ಕಾರದ ಯಾವುದಾದರೊಂದು ಗುರುತಿನ ಚೀಟಿ ತೋರಿಸಿ ಉಚಿತವಾಗಿ ರಾಜ್ಯಾದ್ಯಂತ ಪ್ರಯಾಣಿಸಬಹುದು. ಚುನಾವಣೆ ಸಂದರ್ಭದಲ್ಲಿ ನಾವು ಘೋಷಿಸಿದ ಐದು ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿಗಳು ಮಹಿಳೆಯರಿಗೆ ಮತ್ತು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದವಾಗಿವೆ. ಈ ಒಟ್ಟು 5 ಗ್ಯಾರಂಟಿಗಳ ಅನುಷ್ಠಾನಕ್ಕೆ ಒಟ್ಟು 59 ಸಾವಿರ ಕೋಟಿ ರು.ಗಳ ಅಗತ್ಯವಿದ್ದು, ಎಷ್ಟೇ ಕಷ್ಟಬರಲಿ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. 

Tap to resize

Latest Videos

ಬಿಟ್ಟಿ ಭಾಗ್ಯದ ಮೂಲಕ ಜನತೆಯನ್ನು ವಂಚಿಸಿದ ಕಾಂಗ್ರೆಸ್‌ ಸರ್ಕಾರ: ಸಚಿವ ರಾಜೀವ್‌ ಚಂದ್ರಶೇಖರ್‌

ಈ ಯೋಜನೆಗಳಲ್ಲಿ ಯಾವ ಮಧ್ಯವರ್ತಿಗಳಿಲ್ಲ. ನೇರವಾಗಿ ಫಲಾನುಭವಿಗಳಿಗೆ ತಲುಪುತ್ತವೆ ಎಂದು ಹೇಳಿದರು. 2022ರ ವಿಶ್ವಬ್ಯಾಂಕ್‌ನ ಅಂಕಿ ಅಂಶಗಳಂತೆ ಅಮೆರಿಕಾದಲ್ಲಿ ಶೇ.57ರಷ್ಟು, ಚೀನಾದಲ್ಲಿ ಶೇ.54ರಷ್ಟು, ಆಸ್ಟೇಲಿಯಾದಲ್ಲಿ ಶೇ.65, ಇಂಡೋನೇಷಿಯಾ ಶೇ.53ರಷ್ಟುಹಾಗೂ ಭಾರತದ ಪಕ್ಕದ ಬಾಂಗ್ಲಾದೇಶದಲ್ಲಿ ಶೇ.38ರಷ್ಟುಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿಯಾಗುತ್ತಿದ್ದಾರೆ. ಆದರೆ, ಭಾರತದಲ್ಲಿ 2014ರ ಅವಧಿಯಲ್ಲಿ ಶೇ.30ರಷ್ಟುಇದ್ದಂತ ಸಂಖ್ಯೆ ಇದೀಗ ಶೇ.24ಕ್ಕೆ ಇಳಿಕೆಯಾಗಿದೆ, ಈ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಮಹಿಳೆಯರ ಸಬಲೀಕರಣಗೊಳಿಸುವ ಉದ್ದೇಶದಿಂದ ಈ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ ಎಂದರು.

ಯೋಜನೆಗಳಿಗೆ ಎಷ್ಟು ಹಣ ಖರ್ಚು ಮಾಡುತ್ತಾ ಇದ್ದೀವಿ ಎನ್ನುವುದು ಮುಖ್ಯವಲ್ಲ, ಯಾರಿಗೆ ಕೊಡುತ್ತಾ ಇದ್ದೇವೆ ಎನ್ನುವುದು ಮುಖ್ಯ. ಗೃಹಜ್ಯೋತಿ ಯೋಜನೆ, ಅನ್ನಭಾಗ್ಯ ಯೋಜನೆ ಜುಲೈ 1ರಿಂದ ಜಾರಿಗೊಳಿಸಲಾಗುತ್ತದೆ. ಗೃಹಲಕ್ಷ್ಮಿ ಯೋಜನೆ ಆಗಸ್ಟ್‌ 16ರಂದು ಜಾರಿಗೆ ಬರಲಿದೆ. ಯುವನಿಧಿಗೆ ಅರ್ಜಿ ಆಹ್ವಾನಿಸಲಾಗುತ್ತದೆ. 10 ಕೆ.ಜಿ ಆಹಾರಧಾನ್ಯವನ್ನು ಬಿಪಿಎಲ್‌ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ನೀಡುತ್ತೇವೆ. ಇದಕ್ಕೆ ರಾಜ್ಯದಲ್ಲಿ 10,100 ಕೋಟಿ ರು. ಖರ್ಚಾಗಲಿದೆ. ಯಾರು ಕೂಡ ಹಸಿವಿನಿಂದ ಬಳಲಬಾರದು. ಹಸಿವು ಮುಕ್ತ ರಾಜ್ಯ ನಮ್ಮದಾಗಬೇಕು ಎಂಬ ಸದಾಶಯ ಇದರ ಹಿಂದಿದೆ ಎಂದು ಹೇಳಿದರು.

ಬಿಎಂಟಿಸಿಯಲ್ಲಿ ಉಚಿತ ಪ್ರಯಾಣದ ಖುಷಿ: ಮೆಜೆಸ್ಟಿಕ್‌ನಲ್ಲಿ ಮಹಿಳೆಯರ ಸಂಭ್ರಮೋ ಸಂಭ್ರಮ

ಕುಹಕವಾಡುವವರಿಗೆ ಡೊಂಟ್‌ ಕೇರ್‌: ರೈತರ ಸಾಲಮನ್ನಾ ಮಾಡದೇ ಬಂಡವಾಳಶಾಹಿಗಳ ಸಾಲಮನ್ನಾ ಮಾಡುವವರಿಗೆ ಸರ್ಕಾರ ಯಾವ ರೀತಿ ಕಾರ್ಯನಿರ್ವಹಿಸುತ್ತದೇ ಎಂಬುದರ ಕುರಿತು ಪರಿಜ್ಞಾನವಿಲ್ಲ. ತರ್ಕರಹಿತವಾಗಿ ಎಡಬಿಡಂಗಿತನದ ರೂಪದಲ್ಲಿ ವಿರೋಧಪಕ್ಷಗಳು ಮಾತನಾಡುತ್ತಿದ್ದು, ಅವುಗಳಿಗೆ ಸೊಪ್ಪು ಹಾಕುವುದಿಲ್ಲ. ಅವರ ಗೇಲಿ, ಕುಹಕಗಳಿಗೆ ವಿಚಲಿತರಾಗದೇ ಎಲ್ಲ ಜಾತಿಯಲ್ಲಿರುವ, ಎಲ್ಲ ಧರ್ಮದಲ್ಲಿರುವ ಬಡವರಿಗೆ, ಸಾಮಾಜಿಕವಾಗಿ, ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್‌ ಸರ್ಕಾರ ಮಾಡುತ್ತದೆ ಎಂದರು.

click me!