ರಮೇಶ್‌ ಕುಮಾರ್‌ ಹೇಳಿಕೆ ಬಾಯ್ತಪ್ಪಿನಿಂದ ಬಂದಿರಬೇಕು: ಕೋಳಿವಾಡ

By Kannadaprabha NewsFirst Published Jul 23, 2022, 10:11 PM IST
Highlights

ಡಿಕೆಶಿಯವರ ಮೂಲ ಉದ್ದೇಶ ಜೆಡಿಎಸ್‌ ಅನ್ನು ಬಿಟ್ಟು ಒಕ್ಕಲಿಗರೆಲ್ಲ ಕಾಂಗ್ರೆಸ್‌ಗೆ ಬನ್ನಿ ಎಂಬುದುದಾಗಿದೆ: ಕೋಳಿವಾಡ

ರಾಣಿಬೆನ್ನೂರು(ಜು.23):  ಬೆಂಗಳೂರಿನಲ್ಲಿ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ನೀಡಿರುವ ಹೇಳಿಕೆ ಬಾಯ್ತಪ್ಪಿನಿಂದ ಬಂದಿರಬೇಕು ಎಂದು ವಿಧಾನಸಭೆ ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ಹೇಳಿದರು.  ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಮೇಶ್‌ ಕುಮಾರ್‌ ಕಾಂಗ್ರೆಸ್‌ನ ಹಿರಿಯರು, ಅನುಭವಿಗಳು, ಸಾಕಷ್ಟು ಓದಿಕೊಂಡವರು.ಅವರು ಯಾಕೆ ಬಾಯಿ ತಪ್ಪಿ ಹೇಳಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಮೂರ್ನಾಲ್ಕು ತಲೆಮಾರು ಕಾಂಗ್ರೆಸ್‌ನವರು ಸಾಕಷ್ಟು ಅಧಿಕಾರ ಪಡೆದುಕೊಂಡಿದ್ದರು ಎಂದು ಹೇಳುವ ಬದಲು ಬಾಯತಪ್ಪಿ ಆ ರೀತಿ ಹೇಳಿರಬಹುದು ಎಂಬುದು ನನ್ನ ಅಭಿಪ್ರಾಯ ಅಂತ ತಿಳಿಸಿದ್ದಾರೆ. 

ಆದರೂ ಅವರ ಹೇಳಿಕೆ ಬಹಳ ಎಕ್ಸಪೋಸ್‌ ಆಯಿತು. ಕಾಂಗ್ರೆಸ್‌ನ ಯಾವುದೇ ಎಂತಹ ದೊಡ್ಡ ವ್ಯಕ್ತಿನೇ ಆಗಿರಲಿ ಪಕ್ಷದ ಹಿತಕ್ಕೆ ಮಾರಕ ಆಗುವ ಹೇಳಿಕೆಗಳನ್ನು ನೀಡಬಾರದು.ರಮೇಶಕುಮಾರ ಅವರ ಹೇಳಿಕೆ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ. ಅದನ್ನೆ ಬಿಜೆಪಿಯವರು ಬಂಡವಾಳ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ.ಇಂಥ ಅವಕಾಶವನ್ನು ಯಾರೆ ಆಗಲಿ ಅವಕಾಶ ಮಾಡಿಕೊಡಬಾರದು. ಪಕ್ಷಕ್ಕೆ ಮುಜುಗುರ ಆಗುವ ಹೇಳಿಕೆಯನ್ನು ಯಾರೂ ಕೊಡಬಾರದು ಎಂದರು.

ಗಾಂಧಿಗಳಿಂದಾಗಿ 4 ತಲೆಮಾರಿಗೆ ಸಂಪತ್ತು ಮಾಡಿದ್ದೇವೆ: ರಮೇಶ್‌ ಕುಮಾರ್

ನಾವು ನಮ್ಮ ನಮ್ಮೊಳಗಿನ ಬಿನ್ನಾಭಿಪ್ರಾಯ ಮರೆತು ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು.ಪಕ್ಷಕ್ಕೆ ಬಹುಮತ ಬಂದ ಮೇಲೆ ಪಕ್ಷದ ಪದ್ಧತಿಯ ಪ್ರಕಾರ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್‌ ಸಿಎಂ ಯಾರಾಗಬೇಕು ಅನ್ನುವುದನ್ನು ತೀರ್ಮಾನ ಮಾಡುತ್ತದೆ. ಇದನ್ನು ಪಕ್ಷದವರು ತಿಳಿದುಕೊಂಡು ನಾನು, ನಾನು ಅಂತಾ ಒಬ್ಬರಿಗೊಬ್ಬರು ಕಚ್ಚಾಡುವ ವಿಚಾರ ಕೈಬೀಡಬೇಕು ಎಂದರು.

ಸಿಎಂ ಸ್ಥಾನದ ಕುರಿತ ಡಿ.ಕೆ. ಶಿವಕುಮಾರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಬಿ.ಕೋಳಿವಾಡ, ಮುಖ್ಯಮಂತ್ರಿ ಆಗಬೇಕು ಅನ್ನುವ ಆಸೆ ಎಲ್ಲರಿಗೂ ಇದೆ. ಒಕ್ಕಲಿಗರ ಮತಗಳನ್ನು ಸೆಳೆಯಲು ಡಿ.ಕೆ. ಶಿವಕುಮಾರ ಹೇಳಿದ್ದಾರೆ. ನನಗೂ ಅವಕಾಶವಿದೆ. ಒಕ್ಕಲಿಗರೆಲ್ಲ ಕಾಂಗ್ರೆಸ್‌ಗೆ ಬನ್ನಿ ಎನ್ನುವ ವಿಚಾರವಿಟ್ಟುಕೊಂಡು ಕರೆ ಕೊಟ್ಟಿದ್ದಾರೆ. ಡಿಕೆಶಿಯವರ ಮೂಲ ಉದ್ದೇಶ ಜೆಡಿಎಸ್‌ ಅನ್ನು ಬಿಟ್ಟು ಒಕ್ಕಲಿಗರೆಲ್ಲ ಕಾಂಗ್ರೆಸ್‌ಗೆ ಬನ್ನಿ ಎಂಬುದುದಾಗಿದೆ. ಸಿಎಂ ಆಗಬೇಕು ಎನ್ನುವ ಆಸೆ ಶಿವಕುಮಾರ, ಸಿದ್ದರಾಮಯ್ಯ, ಪರಮೇಶ್ವರಗೆ ಇದ್ದರೆ ತಪ್ಪಿಲ್ಲ ಎಂದರು.

ಮಗನಿಗಾಗಿ ಬಿಎಸ್‌ವೈ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟ ವಿಚಾರ ಕುರಿತು ಮಾತನಾಡಿದ ಅವರು, ಬಿಎಸ್‌ವೈ ಮಗನಿಗೆ ಎಂಎಲ್ಸಿ ಚುನಾವಣೆಯ ಟಿಕೆಟ್‌ ಕೊಡಬೇಕು ಎಂದು ಹೈಕಮಾಂಡ್‌ಗೆ ಶಿಫಾರಸ್ಸು ಮಾಡಿದ್ದರು. ಹೈಕಮಾಂಡ್‌ ಅದನ್ನು ತಿರಸ್ಕಾರ ಮಾಡಿತ್ತು. ಇದರಿಂದ ಅವರು ಪುತ್ರನಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ರಾಣೆಬೆನ್ನೂರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರವಾದ ವಾತಾವರಣವಿದೆ. ನಾನು ರಾಜ್ಯದಲ್ಲಿನ ಚುನಾವಣೆಗೆ ನಿಲ್ಲುವುದಿಲ್ಲ. ನನ್ನ ಮಗ ಪ್ರಕಾಶ ಕೋಳಿವಾಡಗೆ ಟಿಕೆಟ್‌ ಕೊಡುವಂತೆ ಹೈಕಮಾಂಡ್‌ಗೆ ಕೇಳಿದ್ದೇನೆ. ಅವರು ಕೊಟ್ಟರೆ ಖಂಡಿತ ಪ್ರಕಾಶ ಗೆಲ್ಲುತ್ತಾರೆ.ಅಲ್ಲದೆ ಹೈಕಮಾಂಡ್‌ನವರು ನನ್ನ ಮಗನನ್ನು ನಿಲ್ಲಿಸುವಂತೆ ಹೇಳಿದ್ದಾರೆ. ಆದ್ದರಿಂದ ರಾಜ್ಯದ ಚುನಾವಣಾ ಕ್ಷೇತ್ರದಿಂದ ಹಿಂದಕ್ಕೆ ಸರಿದು ನನ್ನ ಮಗನನ್ನು ಮುಂದಕ್ಕೆ ತರಲು ಪ್ರಯತ್ನ ಮಾಡುತ್ತಿದ್ದೇನೆ. ಲೋಕಸಭೆ, ರಾಜ್ಯಸಭೆ ಚುನಾವಣೆ ಬಂದರೂ ಪಕ್ಷ ಹೇಳಿದರೆ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ. ಪಕ್ಷ ಟಿಕೆಟ್‌ ಕೊಟ್ಟರೆ ನಾನು ನಿಲ್ಲುತ್ತೇನೆ. ಅವಕಾಶ ಬಂದರೆ ನಾನೂ ಕೇಳುತ್ತೇನೆ,ಅವರು ಕೊಟ್ಟರೆ ನಿಲ್ಲುತ್ತೇನೆ. ರಾಜ್ಯ ರಾಜಕಾರಣದಿಂದ ನಾನು ನಿವೃತ್ತಿ ಆಗಿದ್ದೇನೆ. ಹೈಕಮಾಂಡ್‌ನವರು ಟಿಕೆಟ್‌ ಕೊಟ್ಟರೆ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದರು.
 

click me!