ಬಿಜೆಪಿಯತ್ತ ಮುಖ ಮಾಡಿದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ

By Kannadaprabha NewsFirst Published Mar 18, 2023, 11:01 PM IST
Highlights

ಮಾಜಿ ಸಂಸದ ಜಿ.ಮಾದೇಗೌಡ ಅವರ ಬಗ್ಗೆ ಲಘುವಾಗಿ ಮಾತನಾಡಿ ಜೆಡಿಎಸ್‌ನಿಂದ ಉಚ್ಚಾಟನೆಗೊಂಡಿದ್ದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಇದೀಗ ಬಿಜೆಪಿಯತ್ತ ಮುಖ ಮಾಡಿದ್ದಾರೆ. 

ಮಂಡ್ಯ (ಮಾ.18): ಮಾಜಿ ಸಂಸದ ಜಿ.ಮಾದೇಗೌಡ ಅವರ ಬಗ್ಗೆ ಲಘುವಾಗಿ ಮಾತನಾಡಿ ಜೆಡಿಎಸ್‌ನಿಂದ ಉಚ್ಚಾಟನೆಗೊಂಡಿದ್ದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಇದೀಗ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಜೆಡಿಎಸ್‌ನಿಂದ ಉಚ್ಚಾಟನೆಗೊಂಡ ಒಂದು ವರ್ಷದ ಬಳಿಕ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದು, ಭಾನುವಾರ ಬೆಂಗಳೂರಿನಲ್ಲಿ ನೆಲೆಸಿರುವ ನಾಗಮಂಗಲ ವಿಧಾನಸಭಾ ಕ್ಷೇತ್ರದ ಮತದಾರರ ಸಭೆಗೆ ಬಿಜೆಪಿ ಪಕ್ಷದ ಸಚಿವರನ್ನು ಆಹ್ವಾನಿಸಿರುವುದು ಶಿವರಾಮೇಗೌಡರು ಕಮಲ ಹಿಡಿಯಲು ರೆಡಿಯಾಗಿರುವುದರ ಮುನ್ಸೂಚನೆ ಎಂಬಂತೆ ಕಂಡುಬರುತ್ತಿದೆ.

ಪಕ್ಷೇತರರಾಗಿ ಒಮ್ಮೆ ವಿಧಾನಸಭೆಗೆ ಆಯ್ಕೆಯಾಗಿದ್ದನ್ನು  ಹೊರತುಪಡಿಸಿದರೆ ರಾಜಕೀಯ ಪಕ್ಷಗಳಿಂದ ವಿಧಾನಸಭೆಗೆ ಆಯ್ಕೆಯಾಗುವ ಅದೃಷ್ಟ ಇದುವರೆಗೂ ಶಿವರಾಮೇಗೌಡರಿಗೆ ಒಲಿದು ಬಂದಿಲ್ಲ. 2018ರಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಶಿವರಾಮೇಗೌಡರು ಜೆಡಿಎಸ್- ಕಾಂಗ್ರೆಸ್ ಮಿತ್ರ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸುವುದರೊಂದಿಗೆ ಆರು ತಿಂಗಳ ಸಂಸದ ಎನಿಸಿಕೊಂಡರು. ಪಕ್ಷಾಂತರ ಶಿವರಾಮೇಗೌಡರಿಗೆ ಹೊಸದೇನು ಅಲ್ಲ. 1996 ರಲ್ಲಿ ಜನತಾ ದಳದಲ್ಲಿದ್ದ ಎಲ್ಲಾ ಶಿವರಾಮೇಗೌಡರು 1999ರ ವೇಳೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 

ಮಹಿಳಾ ಸಬಲೀಕರಣಕ್ಕೆ ಬಿಜೆಪಿ ಸರ್ಕಾರ ಬದ್ಧ: ಶೋಭಾ ಕರಂದ್ಲಾಜೆ

ಮತ್ತೆ 2009ರ ವೇಳೆಗೆ ಬಿಜೆಪಿ ಪಕ್ಷವನ್ನು ಸೇರಿದ ಶಿವರಾಮೇಗೌಡರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ 1,60,000 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಇದಾದ ಒಂದೇ ವರ್ಷದಲ್ಲಿ ಮತ್ತೆ ಕಾಂಗ್ರೆಸ್ ಕೈ ಹಿಡಿದ ಶಿವರಾಮೇಗೌಡರು 2014ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜೆಡಿಎಸ್ ಅಭ್ಯರ್ಥಿ ಎನ್ ಅಪ್ಪಾಜಿಗೌಡರ ವಿರುದ್ಧ ಸೋಲನುಭವಿಸಿದ್ದರು. 2018ರ ಚುನಾವಣೆ ವೇಳೆಗೆ ಜೆಡಿಎಸ್ ನಲ್ಲಿದ್ದ ಎನ್ ಚೆಲುವರಾಯಸ್ವಾಮಿ ಕಾಂಗ್ರೆಸ್ ಸೇರ್ಪಡೆಗೊಂಡ ಬೆನ್ನೆ ಹಿಂದೆಯೇ ಶಿವರಾಮೇಗೌಡರು ಮತ್ತೆ ಜೆಡಿಎಸ್ ತೆನೆ ಹೊತ್ತರು.

ಆ ಸಮಯದಲ್ಲಿ ಸಂಸದರಾಗಿದ್ದ ಸಿ ಎಸ್ ಪುಟ್ಟರಾಜು ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜಯಿಯಾದರು. ಆನಂತರದಲ್ಲಿ ಜೆಡಿಎಸ್ ನಲ್ಲೇ ನೆಲ ಕಂಡುಕೊಂಡಿದ್ದ ಶಿವರಾಮೇಗೌಡರು ಚುನಾವಣೆಗೆ ಒಂದು ವರ್ಷವಿರುವಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸುತ್ತಾ 2023ರ ಚುನಾವಣೆಗೆ ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಇದರ ನಡುವೆಯೇ ಮಾಜಿ ಸಂಸದ ಜಿ ಮಾದೇಗೌಡರ ವಿರುದ್ಧ ಲಘುವಾಗಿ ಮಾತನಾಡಿದರೆಂಬ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಪಕ್ಷದಿಂದ ಉಚ್ಚಾಟನೆಗೊಳಿಸಿದ್ದರು.

ಒಂದು ವರ್ಷ ಕಾಲ ಅಜ್ಞಾತವಾಸದಲ್ಲಿದ್ದ ಶಿವರಾಮೇಗೌಡರು ಇದೀಗ ಬಿಜೆಪಿ ಸೇರ್ಪಡೆಯಾಗುವ ಮನಸ್ಸು ಮಾಡಿದ್ದಾರೆ. ಸಮಾಜಸೇವೆ ಮೂಲಕ ನಾಗಮಂಗಲ ಕ್ಷೇತ್ರದಲ್ಲಿ ಗುರುತಿಸಿಕೊಂಡು ಶಿವರಾಮೇಗೌಡರಿಗಿಂತ ಮೊದಲೇ ಬಿಜೆಪಿ ಸೇರ್ಪಡೆಯಾಗಿದ್ದ ಫೈಟರ್ ರವಿ ಅವರೇ ಬಿಜೆಪಿ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು. ಆದರೆ ಫೈಟರ್ ರವಿ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರುವ ಆರೋಪಕ್ಕೆ ಗುರಿಯಾಗಿದ್ದು ವಿಪಕ್ಷಗಳು ಇವರನ್ನು ಗುರಿಯಾಗಿಸಿಕೊಂಡು ಪಕ್ಷದ ವಿರುದ್ಧ ಸಿಡಿದು ಬಿದ್ದಿದ್ದವು.

ಫೈಟರ್ ರವಿಗೆ 2023 ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಟಿಕೆಟ್ ನೀಡಿದರೆ ಪಕ್ಷ ಮುಜುಗರ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಅವರಿಗೆ ಟಿಕೆಟ್ ನೀಡದಿರಲು ಪಕ್ಷದ ವಲಯದಲ್ಲಿ ಚಿಂತನೆ ನಡೆಸಲಾಗುತ್ತಿದೆ. ಫೈಟರ್ ರವಿ ಬಳಿಕ ನಾಗಮಂಗಲ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿ ಎಂಬಂತೆ ಶಿವರಾಮೇಗೌಡರು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಅವರಿಗೆ ಮಣೆ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದಕ್ಕಾಗಿ ಶಿವರಾಮೇಗೌಡರ ಪ್ರಾಯೋಜಿತ ಬೆಂಗಳೂರಿನಲ್ಲಿ ನೆಲೆಸಿರುವ ನಾಗಮಂಗಲ ವಿಧಾನಸಭಾ ಕ್ಷೇತ್ರದ ಮತದಾರರ ಸಭೆಗೆ ಸಚಿವ ಎಸ್ ಟಿ ಸೋಮಶೇಖರ್ ಸೇರಿದಂತೆ ಕೆಲವು ಸಚಿವರು ತೆರಳುತ್ತಿದ್ದಾರೆ. ಎಸ್ ಟಿ ಸೋಮಶೇಖರ್ ಅವರಿಗೆ ಸ್ವಾಗತ ಕೋರುವ ಬ್ಯಾನರ್ ಗಳಲ್ಲಿ ಶಿವರಾಮೇಗೌಡರು ಮತ್ತು ಅವರ ಮಗ ಚೇತನ್ ಗೌಡ ಅವರ ಫೋಟೋ ಇದ್ದು ಅವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಒಟ್ಟಿನಲ್ಲಿ ಶಿವರಾಮೇಗೌಡರು ಚುನಾವಣೆ ಬಂದಾಗಲೆಲ್ಲ ಒಂದೊಂದು ಪಕ್ಷಕ್ಕೆ ಪಕ್ಷಾಂತರ ಮಾಡುತ್ತಲೇ ರಾಜಕೀಯ ಜೀವನವನ್ನು ಕಳೆದಿದ್ದಾರೆ. ಅವರೇ ಹೇಳಿಕೊಂಡಿರುವಂತೆ ಅವರ ಜೀವನದ ಕೊನೆಯ ಚುನಾವಣೆ ಇದಾಗಿದ್ದು ಬಿಜೆಪಿ ಮೂಲಕ ರಾಜಕೀಯ ಭವಿಷ್ಯ ಅರಳುವುದೇ ಕಾದು ನೋಡಬೇಕಿದೆ.

ಕಾಂಗ್ರೆಸ್‌ನಿಂದ ಸುಳ್ಳು ಗ್ಯಾರಂಟಿ ಕಾರ್ಡ್‌ ವಿತರಣೆ: ನಳಿನ್‌ ಕುಮಾರ್‌ ಕಟೀಲ್‌

ನಾನು ಬಿಜೆಪಿ ಪಕ್ಷ ಸೇರುವ ಪ್ರಕ್ರಿಯೆಗಳು ನಡೆಯುತ್ತಿವೆ. ಅದು ಅಂತಿಮಗೊಳ್ಳದೆ ನಾನು ಬಿಜೆಪಿ ಸೇರಿದ್ದೇನೆ ಎಂದು ಹೇಳಲಾಗುವುದಿಲ್ಲ. ಬಹುತೇಕ ನಾನು ಬಿಜೆಪಿ ಸೇರುವುದಕ್ಕೆ ನಿರ್ಧರಿಸಿದ್ದೇನೆ. ಯಾವಾಗ ಎನ್ನುವುದು ನಿರ್ಧಾರವಾಗಬೇಕಾಗಿದೆ.
- ಎಲ್ ಆರ್ ಶಿವರಾಮೇಗೌಡ ಮಾಜಿ ಸಂಸದ

click me!