ಶಿಗ್ಗಾಂವಿ ಕಾಂಗ್ರೆಸ್‌ ಟಿಕೆಟ್‌ ರೇಸಲ್ಲಿ ವಿನಯ್‌ ಕುಲಕರ್ಣಿ ಪತ್ನಿ

By Kannadaprabha News  |  First Published Jun 22, 2024, 5:30 AM IST

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಶಿಗ್ಗಾಂವಿ-ಸವಣೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇಲ್ಲಿ ನಡೆಯಲಿರುವ ಉಪಚುನಾವಣೆ ಟಿಕೆಟ್‌ ಗಾಗಿ ಕಾಂಗ್ರೆಸ್‌ನಲ್ಲಿ ಭಾರೀ ಪೈಪೋಟಿ ಶುರುವಾಗಿದೆ.


ಶಿವಾನಂದ ಗೊಂಬಿ

ಹುಬ್ಬಳ್ಳಿ(ಜೂ.22):  ರಾಜ್ಯದ ಸಂಡೂರು, ಚನ್ನಪಟ್ಟಣ ಹಾಗೂ ಹಾವೇರಿಯ ಶಿಗ್ಗಾಂವಿ-ಸವಣೂರು ಕ್ಷೇತ್ರಗಳು ಉಪ ಚುನಾವಣೆಗೆ ಸಜ್ಜಾಗುತ್ತಿದ್ದು, ಈ ಪೈಕಿ ಶಿಗ್ಗಾಂವಿ-ಸವಣೂರು ಕ್ಷೇತ್ರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ಹಾಗೂ ಹಾಲಿ ಧಾರವಾಡ (ಗ್ರಾಮೀಣ) ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಹೆಸರು ಕೇಳಿ ಬರುತ್ತಿದೆ.

Tap to resize

Latest Videos

undefined

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಶಿಗ್ಗಾಂವಿ-ಸವಣೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇಲ್ಲಿ ನಡೆಯಲಿರುವ ಉಪಚುನಾವಣೆ ಟಿಕೆಟ್‌ ಗಾಗಿ ಕಾಂಗ್ರೆಸ್‌ನಲ್ಲಿ ಭಾರೀ ಪೈಪೋಟಿ ಶುರುವಾಗಿದೆ.

ಖಜಾನೆ ಖಾಲಿ ಆಗಿ ಸರ್ಕಾರಿ ಜಮೀನನ್ನು ರಾಜ್ಯ ಸರ್ಕಾರ ಮಾರುತ್ತಿದೆ: ಸಂಸದ ಬೊಮ್ಮಾಯಿ ಆರೋಪ

ಬೊಮ್ಮಾಯಿ ವಿರುದ್ಧ 3 ಬಾರಿ ಕಣಕ್ಕಿಳಿದು ಸೋತಿರುವ ಅಜ್ಜಂಪೀರ್‌ ಖಾದ್ರಿ ಅವರು ಟಿಕೆಟ್‌ಗಾಗಿ ಭಾರೀ ಲಾಬಿ ನಡೆಸುತ್ತಿದ್ದು, ಬೆಂಬಲಿಗರು ಕೂಡ ಇವರ ಪರ ಈಗಾಗಲೇ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಇನ್ನು ಹಿಂದೆ ಬೊಮ್ಮಾಯಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಈಗ ಕಾಂಗ್ರೆಸ್‌ನಲ್ಲಿದ್ದು, ಅವರು ಕೂಡ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಇದಲ್ಲದೆ, ಕಳೆದ ಬಾರಿ ಸೋತಿರುವ ಪಠಾಣ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಂಜೀವ ನೀರಲಗಿ ಸೇರಿ ಹಲವರು ಟಿಕೆಟ್‌ಗಾಗಿ ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಈ ಎಲ್ಲದರ ನಡುವೆ ಇದೀಗ ಶಿವಲೀಲಾ ಕುಲಕರ್ಣಿ ಹೆಸರು ಕೇಳಿ ಬಂದಿರುವುದು ಅಚ್ಚರಿ ಮೂಡಿಸಿದೆ.

ಪತಿ ಗೆಲ್ಲಿಸಿದ್ದ ಪತ್ನಿ:

ಜಿಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ವಿನಯ ಕುಲಕರ್ಣಿ ಅವರಿಗೆ ಧಾರವಾಡ ಜಿಲ್ಲೆ ಪ್ರವೇಶಕ್ಕೆ ನ್ಯಾಯಾಲಯ ಅನುಮತಿ ನೀಡಿರಲಿಲ್ಲ. ಆದರೂ ಧಾರವಾಡ ಹೊರಗಿದ್ದುಕೊಂಡೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದಕ್ಕೆ ಪತ್ನಿ ಶಿವಲೀಲಾ ಅವರ ಪ್ರಯತ್ನವೇ ಮುಖ್ಯಕಾರಣವಾಗಿತ್ತು. ಪಕ್ಷದಲ್ಲಿ ಯಾವುದೇ ಸ್ಥಾನವಿಲ್ಲದಿದ್ದರೂ ತಾವೇ ಚುನಾವಣೆ ಜವಾಬ್ದಾರಿ ತೆಗೆದುಕೊಂಡು ಪ್ರಚಾರ ನಡೆಸಿ ಶಿವಲೀಲಾ ಅವರು ಪತಿಯನ್ನು ಗೆಲ್ಲಿಸಿಕೊಂಡು ಬಂದಿದ್ದರು. ಹೀಗಾಗಿ ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್‌ ಶಿವಲೀಲಾ ಅವರಿಗೆ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಕೊನೆ ಕ್ಷಣದವರೆಗೂ ಇವರ ಹೆಸರು ಗಟ್ಟಿಯಾಗಿ ಕೇಳಿಬಂದಿತ್ತು. ಕೊನೆಗೆ ಅಹಿಂದಕ್ಕೆ ಮಣಿ ಹಾಕಿದ ಕಾಂಗ್ರೆಸ್‌ ವಿನೋದ್ ಅಸೂಟಿ ಅವರನ್ನು ಕಣಕ್ಕಿಳಿಸಿತ್ತು.

ಶಿವಲೀಲಾ ಏಕೆ?:

ವಿನಯ್‌ಗೆ ಧಾರವಾಡ ಜಿಲ್ಲೆಗೆ ಪ್ರವೇಶವಿಲ್ಲ. ಆದರೆ ಶಿಗ್ಗಾಂವಿ ಕ್ಷೇತ್ರಕ್ಕೆ ತೆರಳಲು ಸಮಸ್ಯೆಯಿಲ್ಲ. ಹೀಗಾಗಿ ಅಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿ ಪತ್ನಿಯನ್ನು ಗೆಲ್ಲಿಸಿಕೊಂಡು ಬರಬಹುದು. ಜತೆಗೆ ವಿನಯ್‌ ಕುಲಕರ್ಣಿ ಅವರು ಪ್ರಬಲ ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದು, ಶಿಗ್ಗಾಂವಿ ಕ್ಷೇತ್ರದಲ್ಲಿ ಮುಸ್ಲಿಂ, ಕುರುಬ, ಲಿಂಗಾಯತ ಮತಗಳೇ ನಿರ್ಣಾಯಕ. ಅದರಲ್ಲೂ ಪಂಚಮಸಾಲಿ ಸಮಾಜಕ್ಕೆ ಸೇರಿದ ಮತಗಳ ಸಂಖ್ಯೆ ಹೆಚ್ಚಿವೆ. ಮುಸ್ಲಿಂ, ಕುರುಬ ಸಮಾಜದವರು ಕಾಂಗ್ರೆಸ್‌ಗೆ ಪರ ಒಲವು ಹೊಂದಿದ್ದು, ಪಂಚಮಸಾಲಿ ಸಮುದಾಯದವರಿಗೆ ಟಿಕೆಟ್‌ ನೀಡಿದರೆ ಲಿಂಗಾಯತ ಸಮುದಾಯದ ಮತಗಳನ್ನೂ ಸೆಳೆಯಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ.

ಶಿಗ್ಗಾವಿ ಕ್ಷೇತ್ರದ ಟಿಕೆಟ್‌ನ್ನು ಪುತ್ರನಿಗೆ ಕೊಡಿಸಲು ಸಂಸದ ಬೊಮ್ಮಾಯಿ ಯತ್ನ

ಹೊರಗಿನವರೆಂಬ ಆಕ್ಷೇಪ:

ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಿಂದಿನಿಂದಲೂ ಮುಸ್ಲಿಂ ಸಮುದಾಯಕ್ಕೆ ಟಿಕೆಟ್‌ ನೀಡುತ್ತಾ ಬರುತ್ತಿದೆ. ಈ ಬಾರಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್‌ ನೀಡಿದರೆ ಮುಸ್ಲಿಂ ಸಮುದಾಯವನ್ನು ಹೇಗೆ ಸಮಾಧಾನ ಮಾಡಬೇಕೆಂಬ ಯೋಚನೆಯನ್ನೂ ಹೈಕಮಾಂಡ್‌ ಮಾಡುತ್ತಿದೆ. ಒಂದು ವೇಳೆ ಶಿವಲೀಲಾ ಕುಲಕರ್ಣಿಗೆ ಟಿಕೆಟ್‌ ನೀಡಿದರೆ ಹೊರಗಿನವರು ಎಂಬ ಕೂಗು ಕೇಳಿಬರಹುದು. ಹಾಗೊಂದು ವೇಳೆ ಲಿಂಗಾಯತ ಸಮುದಾಯಕ್ಕೇ ಟಿಕೆಟ್‌ ನೀಡುವುದಿದ್ದರೆ ಕ್ಷೇತ್ರದಲ್ಲಿರುವವರಿಗೇ ಕೊಡಿ ಎಂಬ ಬೇಡಿಕೆಯನ್ನು ಕಾರ್ಯಕರ್ತರು ಮುಂದಿಡುವ ಸಾಧ್ಯತೆಯೂ ಇಲ್ಲದಿಲ್ಲ.

ಎಂಪಿ ಚುನಾವಣೆಯಲ್ಲಿ ಹೆಚ್ಚು ಮತ

ಲೋಕಸಭೆ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಶಾಸಕರಿದ್ದರೂ ಬಿಜೆಪಿಯ ಪ್ರಹ್ಲಾದ್‌ ಜೋಶಿ ಅವರಿಗಿಂತ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿಗೆ 8598 ಮತಗಳು ಹೆಚ್ಚು ಬಂದಿವೆ. ಇದು ಕಾಂಗ್ರೆಸ್‌ನಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಉಪಚುನಾವಣೆಯಲ್ಲಿ ಹೇಗಾದರೂ ಗೆದ್ದು ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆಯಬೇಕೆಂಬ ಇರಾದೆ ಕಾಂಗ್ರೆಸ್‌ನದ್ದು. ಹೀಗಾಗಿ ಅಳೆದು ತೂಗಿ ಗೆಲ್ಲುವ ಕುದುರೆಗೆ ಟಿಕೆಟ್‌ ಪಕ್ಕಾ ಮಾಡಲಿದೆ ಎಂಬುದು ಪಕ್ಷದ ಮುಖಂಡರ ಅಂಬೋಣ.

click me!